ರಾಯಚೂರು : ಪೆಟ್ರೋಲ್, ಡೀಸೆಲ್, ಗ್ಯಾಸ್ ಮತ್ತು ಆಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಹಾಗೂ ಕೇಂದ್ರ ಸರ್ಕಾರದ ಜನ ವಿರೊಧಿ ನೀತಿಗಳನ್ನು ಕೈ ಬಿಡಲು ಆಗ್ರಹಿಸಿ ರಾಯಚೂರಿನ ಜಿಲ್ಲಾಧಿಕಾರಿ ಕಛೇರಿಯ ಮುಂಭಾಗ CPI (M) ಪಕ್ಷದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಸಮಯದಲ್ಲಿ ಮೋದಿ ಮತ್ತು ಅಮಿತ್ ಷಾ ರ ಪ್ರತಿಕೃತಿ ದಹನ ಮಾಡಲು ಮುಂದಾದಾಗ ದಹನ ಮಾಡದಂತೆ ತಡೆಯಲು ಪೋಲಿಸರು ಪ್ರಯತ್ನಿಸಿದರು. ಈ ಸಂದರ್ಭದಲ್ಲಿ ಹೋರಾಟಗಾರರು ಮತ್ತು ಪೋಲಿಸರ ಮಧ್ಯೆ ರಸ್ತೆಯಲ್ಲೆ ಕೆಲ ಹೊತ್ತು ತೀವ್ರ ಘರ್ಷಣೆ ನಡೆಯಿತು ನಂತರ ಪಟ್ಟು ಬಿಡದ ಹೋರಾಟಗಾರರು ಪೋಲಿಸರ ಕಣ್ಣು ತಪ್ಪಿಸಿ ಅಮೀತ್ ಷಾ ಮತ್ತು ಮೋದಿಯವರ ಭಾವಚಿತ್ರ ವನ್ನು ಸುಟ್ಟು ಆಕ್ರೋಶವನ್ನು ವ್ಯಕ್ತಪಡಿಸಿದರು.
ಪ್ರತಿಭಟನೆ ಉದ್ದೇಶಿಸಿ ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಕೆ. ಜಿ. ವಿರೇಶ್ ಮಾತನಾಡಿ, ಮೋದಿ ಸರ್ಕಾರ 2014 ರಲ್ಲಿ ಅಧಿಕಾರಕ್ಕೆ ಬಂದಾಗ ಪೆಟ್ರೋಲ್ ಬೆಲೆ ರೂ.72 ರ ಆಸುಪಾಸಿನಲ್ಲಿತ್ತು, ಆಗ ಅಂತರಾಷ್ಟ್ರೀಯ ಕಚ್ಛಾತೈಲದ ಬೆಲೆ ಒಂದು ಬ್ಯಾರೆಲ್ಲಿಗೆ 110 ಡಾಲರುಗಳ ಆಸುಪಾಸಿನಲ್ಲಿತ್ತು. ಈಗ ಅಂತರಾಷ್ಟ್ರೀಯ ಕಚ್ಛಾತೈಲದ ಬೆಲೆ 56 ಡಾಲರ್ ಗೆ ಇಳಿದಿದೆ. 2014ರ ತೈಲ ಬೆಲೆಗೆ ಹೋಲಿಸಿದರೆ ಈಗ ಅದು ಸರಿ ಸುಮಾರು ಅರ್ಧಕ್ಕೆ ಇಳಿದಿದೆ. ಅಂದರೆ ಪೆಟ್ರೋಲ್ ಬೆಲೆ ರೂ.36 ಕ್ಕೆ ಇರಬೇಕಿತ್ತು. ಆದರೆ ಅದು ಬೆಂಗಳೂರು ನಗರದಲ್ಲಿ ರೂ.90 ನ್ನುದಾಟಿ ರೂ. 100 ರತ್ತ ವೇಗದಿಂದ ಧಾವಿಸುತ್ತಿದೆ. ಹೆಚ್ಚುವರಿ ರೂ.೫೪ ಎಲ್ಲಿಗೆ ಹೋಯಿತು? ಎಂದು ಪ್ರಶ್ನಿಸಿದರು.
ಈ ಸಂಧರ್ಭದಲ್ಲಿ ಮುಖಂಡರಾದ ಕರಿಯಪ್ಪ ಅಚ್ಚೋಳ್ಳಿ ಎಚ್, ಪದ್ಮಾ, ಹಾಗೂ ಶಿವಕುಮಾರ ಮ್ಯಾಗಳಮನಿ, ಲಿಂಗರಾಜ ಕಂದಗಲ್, ಬಸವರಾಜ ದೀನಸಮುದ್ರ, ಜಿಲಾನಿ ಸೇರಿ ಇತರರಿದ್ದರು.
ಇದನ್ನೂ ಓದಿ : ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರೋಧಿಸಿ ಸಿಪಿಐ(ಎಂ) ಪ್ರತಿಭಟನೆ
ಸಿಂಧನೂರಿನಲ್ಲೂ ಸಿಪಿಐಎಂ ಕಾರ್ಯಕರ್ತರು ತಹಶೀಲ್ದಾರ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು. ಅಗತ್ಯ ವಸ್ತುಗಳ ಬೆಲೆ ಹೆಚ್ಚಳ ಮಾಡಿರುವುದು ಸರಿಯಲ್ಲ ಕೂಡಲೆ ದರಗಳನ್ನು ಕಡಿತ ಮಾಡಬೇಕು ಎಂದು ಪ್ರತಿಭಟನೆಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಿಪಿಐಎಂ ಮುಖಂಡ ಶೇಕ್ಷಾಖಾದ್ರಿ ಸೇರಿದಂತೆ ನೂರಕ್ಕು ಹೆಚ್ಚುಮಂದಿ ಭಾಗವಹಿಸಿದ್ದರು.