ವಿದ್ಯಾರ್ಥಿಗಳ ಶಾಲಾ ಬಸ್- ಕಂಟೈನರ್ ಮುಖಾಮುಖಿ ಡಿಕ್ಕಿ: ಇಬ್ಬರು ಚಾಲಕರು ಸ್ಥಳದಲ್ಲೇ ಸಾವು

ಅಥಣಿ: 8 ರಿಂದ 16 ವರ್ಷದೊಳಗಿನ  60ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದ ಬೆಳಗಾವಿ ಜಿಲ್ಲೆಯ ಅಥಣಿಯ ಬಾಣಜವಾಡ ಆಂಗ್ಲ ಮಾಧ್ಯಮ ಶಾಲಾ ಬಸ್ಸಿಗೆ ಕಂಟೈನರ್‌ ಒಂದು ಡಿಕ್ಕಿ ಹೊಡೆದ ಘಟನೆ ಅಥಣಿ ಹೊರವಲಯದಲ್ಲಿ ಭೀಕರ ರಸ್ತೆ ಅಪಘಾತ ಇಂದು (ಆಗಸ್ಟ್‌ 20) ಬೆಳಗ್ಗೆ 8 ಗಂಟೆ ಸಮಯದಲ್ಲಿ ನಡೆದಿದೆ. ಈ ಘಟನೆಯಿಂದ ಎರಡು ವಾಹನದ ಚಾಲಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಶಾಲಾ ವಾಹನ ಅಥಣಿಯಿಂದ  ಶೇಡಬಾಳ ರಸ್ತೆ ಕಡೆಗೆ ಹೊರಟಿತ್ತು. ಆದರೆ, ಶೇಡಬಾಳ ರಸ್ತೆಯಿಂದ ಅಥಣಿ ಕಡೆಗೆ ಹೋಗುತ್ತಿದ್ದ ಕಂಟೈನರ್ ವಾಹನ ಡಿಕ್ಕಿ ಹೊಡೆದಿದೆ. ಭೀಕರ ಅಪಘಾತದಲ್ಲಿ ಬಸ್ ಮತ್ತು ಕಂಟೈನರ್‌ನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

ಶಾಲಾ ಬಸ್ಸು ಪಟ್ಟಣದಿಂದ ಹೊರವಲಯದ ಕಡೆಗೆ ಹೋಗುತ್ತಿದ್ದ ವೇಳೆ, ತಿರುವಿನಲ್ಲಿ ಬಂದ ಕ್ಯಾಂಟರ್ ವಾಹನ ನೇರವಾಗಿ ಬಸ್ಸಿಗೆ ಗುದ್ದಿದೆ. ಎರಡೂ ವಾಹನಗಳ ಮುಂಭಾಗ ನಜ್ಜುಗುಜ್ಜಾಗಿದ್ದು, ಚಾಲಕರು ಸ್ಥಳದಲ್ಲೇ ಪ್ರಾಣಬಿಟ್ಟರು.

ಅಪಘಾತವಾದ ಕೂಡಲೇ ಸ್ಥಳಕ್ಕೆ ಧಾವಿಸಿದ ಜನರು ಮಕ್ಕಳನ್ನು ಹೊರಗೆಳೆದು ಆಸ್ಪತ್ರೆಗೆ ದಾಖಲಿಸಿದರು. ಅದೃಷ್ಟವಶಾತ್ ವಿದ್ಯಾರ್ಥಿಗಳು ಸಣ್ಣ ಪುಟ್ಟ ಗಾಯಗಳಿಂದ ಪ್ರಾಣಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಬೆಚ್ಚಿಬಿದ್ದ  ವಿದ್ಯಾರ್ಥಿಗಳ ರೋದನ,  ಗಾಯಗೊಂಡು ಒದ್ದಾಡುತ್ತಿದ್ದವರ ಸಂಕಟ ಹೇಳತೀರದಾಗಿತ್ತು‌.

ಭಯಾನಕ ಅಪಘಾತದಿಂದಾಗಿ ಇಡೀ ಅಥಣಿ ಪಟ್ಟಣ ಆತಂಕಗೊಂಡಿದೆ. ಕ್ಯಾಂಟರ್ ಚಾಲಕ ರಾತ್ರಿಯಿಡೀ ಸಂಚರಿಸಿದ್ದು ನಿದ್ರೆಯ ಮಂಪರಿನಲ್ಲಿದ್ದ. ಅತಿಯಾದ ವೇಗವೇ ಅಪಘಾತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಚಾಲಕರಿಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮಹಿಳಾ ಶಿಕ್ಷಕಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಬೆಳಗಾವಿಯ ಕೆಎಲ್ ಇ ಆಸ್ಪ್ರೆಗೆ ಕರೆದೊಯ್ಯಲಾಗಿದೆ. ಸುಮಾರು 30 ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಉಳಿದ 30 ವಿದ್ಯಾರ್ಥಿಗಳಿಗೆ ಯಾವುದೇ ಗಾಯವಾಗಿಲ್ಲ ಆದರೆ, ಘಟನೆ ನಂತರ ಭೀತಿಗೊಂಡಿದ್ದು, ತಮ್ಮ ಪೋಷಕರೊಂದಿಗೆ ಮನೆಗೆ ತೆರಳಿದರು.

ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸ್ ಅಧಿಕಾರಿಗಳು, ರಕ್ಷಣಾ ತಂಡ, ತಾಲೂಕ್ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಈ ಮಧ್ಯೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಂಜೀವ್ ಪಾಟೀಲ್, ಹೆಚ್ಚುವರಿ ಎಸ್ ಪಿ ಮಹಾನಿಂಗ್ ನಂದಗವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *