ಬೆಂಗಳೂರು: ಎಸಿಬಿ ಕಲೆಕ್ಷನ್ ಸೆಂಟರ್ ಆಗಿದೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದವರಿಗೂ ಬಿ ರಿಪೋರ್ಟ್ ನೀಡುತ್ತಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ತರಾಟೆಗೆ ತೆಗೆದುಕೊಂಡಿದ್ದೆ ತಡ, ಎಸಿಬಿಯ ವಾಸ್ತವತೆ ಒಂದೊಂದಾಗಿ ಕಳಚಿಕೊಳ್ಳುತ್ತಿದೆ.
ಹೌದು, ನ್ಯಾಯಾದೀಶರ ಹೇಳಿಕೆಯ ನಂತರ ಎಸಿಬಿಯ ಮೇಲೆ ಜನರಿಗಿದ್ದ ನಂಬಿಕೆ ಹೊರಟು ಹೋಗುತ್ತಿದೆ. ಎಸಿಬಿಯಲ್ಲೂ ಅಕ್ರಮಗಳಲ್ಲಿ ಪಾಲನ್ನು ಹೊಂದಿರುವುದು ಮತ್ತು ಅಪರಾಧಿಗಳಿಗೆ ಶಿಕ್ಷೆ ನೀಡುವ ಬದಲು ಬಿ ರಿಪೋರ್ಟ್ ಹಾಕುವ ಮೂಲಕ ರಕ್ಷಣೆ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಭ್ರಷ್ಟರ ಹೆಡೆಮುರಿ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಲೋಕಾಯುಕ್ತವನ್ನು ತೆಗೆದು ಹಾಕಿ ಅದಕ್ಕೆ ಪರ್ಯಾಯವಾಗಿ ಅಸ್ತಿತ್ವಕ್ಕೆ ಬಂದ ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) 2016 ರಲ್ಲಿ ಆರಂಭಿಸಲಾಯಿತು. ಪ್ರಾರಂಭವಾದ ಬಳಿಕ ಇದುವರೆಗೆ 2,121 ಎಫ್‌ಐಆರ್ ದಾಖಲಾದರೂ ಶಿಕ್ಷೆಯಾಗಿರುವುದು ಕೇವಲ 22 ಮಂದಿಗೆ ಮಾತ್ರ! ಎಂಬ ಸತ್ಯಾಂಶ ಈಗ ಬಯಲಾಗಿದೆ.
ಎಸಿಬಿಯು ದಾಳಿಗಷ್ಟೇ ಸೀಮಿತವಾಗಿದ್ದು, ಸಣ್ಣಪುಟ್ಟ ಟ್ರ್ಯಾಪ್ ಕೇಸ್‌ಗಳಲ್ಲಿ ಚಾರ್ಜ್ ಶೀಟ್ ಸಲ್ಲಿಸಿದೆ. ಆದಾಯಕ್ಕಿಂತ ಅಧಿಕ ಆಸ್ತಿಪಾಸ್ತಿ ಗಳಿಕೆ ಪ್ರಕರಣಗಳಲ್ಲಿ ದೊಡ್ಡ ಭ್ರಷ್ಟರ ಕೋಟೆಗೆ ಲಗ್ಗೆ ಇರಿಸಿದರೂ ಇದುವರೆಗೆ ಒಂದೇ ಒಂದು ಪ್ರಕರಣದಲ್ಲೂ ಚಾರ್ಜ್‌ಶೀಟ್ ಸಲ್ಲಿಸಿಲ್ಲ.
ಎಸಿಬಿ ಸ್ಥಾಪನೆಯಾದ ಬಳಿಕ ಇದುವರೆಗೆ 2,121 ಪ್ರಕರಣಗಳ ತನಿಖೆ ನಡೆಸಲಾಗಿದೆ. ಈ ಪೈಕಿ 105 ಪ್ರಕರಣಗಳಲ್ಲಿ ಸಾಕ್ಷೀಗಳಿಲ್ಲದೆ ಕೋರ್ಟ್‌ಗೆ “ಬಿ’ ವರದಿ ಸಲ್ಲಿಸಲಾಗಿದೆ. 70 ಪ್ರಕರಣಗಳ ವಿಚಾರಣೆ ನ್ಯಾಯಾಲಯದಲ್ಲಿ ಮುಕ್ತಾಯಗೊಂಡಿದ್ದು, ಶೇ. 3ರಷ್ಟು ಆರೋಪಿಗಳಿಗೆ ಶಿಕ್ಷೆಯಾಗಿದೆ. ಇದರಲ್ಲೂ 9 ಮಂದಿ ಆರೋಪದಿಂದ ಮುಕ್ತಿ ಹೊಂದಿದ್ದಾರೆ. ಸೂಕ್ತ ತನಿಖೆ ನಡೆಸದ್ದರಿಂದ 39 ಪ್ರಕರಣಗಳು ನ್ಯಾಯಾಲಯದಲ್ಲಿ ಖುಲಾಸೆ ಗೊಂಡಿವೆ ಎಂಬ ಮಾಹಿತಿ ಲಭ್ಯವಾಗಿದೆ.
ಎಸಿಬಿ ಘಟಕಗಳ ಅವಲೋಕನ : ಎಫ್‌ಐಆರ್ ದಾಖಲು, ಆರೋಪಪಟ್ಟಿ ಸಲ್ಲಿಕೆ, ‘ಬಿ’ ವರದಿ ಸಲ್ಲಿಕೆ ಕುರಿತು ಖಚಿತ ಮಾಹಿತಿಯೊಂದಿಗೆ ಸಮಗ್ರ ವರದಿ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆ ಬಳಿಕ ಎಲ್ಲ ಪ್ರಕರಣಗಳ ಸ್ಥಿತಿಗತಿ ಕುರಿತು ಪರಿಶೀಲನೆ ಆರಂಭಿಸಲಾಗಿದೆ. ಈ ಪ್ರಕ್ರಿಯೆ ಮುಂದುವರಿದಿದ್ದು, ಜಿಲ್ಲಾವಾರು ಅವಲೋಕನ ನಡೆಸಲು ಮುಂದಾಗಿದೆ.
‘ಪ್ರತಿ ಜಿಲ್ಲೆಯಲ್ಲೂ ಎಸಿಬಿ ಘಟಕಗಳಿವೆ. ಆಯಾ ಜಿಲ್ಲೆಯಲ್ಲಿ ದಾಖಲಾದ ಪ್ರಕರಣಗಳ ಕುರಿತು ಪ್ರತ್ಯೇಕವಾಗಿ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಆಯಾ ವಲಯದ ಎಸ್‌ಪಿಗಳು ಮತ್ತು ಜಿಲ್ಲಾ ಘಟಕದ ಮುಖ್ಯಸ್ಥರ ಜತೆ ಚರ್ಚಿಸಿ, ತನಿಖಾ ಪ್ರಗತಿ ಪರಿಶೀಲಿಸಲಾಗುತ್ತಿದೆ. ‘ಬಿ’ ವರದಿ ಸಲ್ಲಿಸಿರುವ ಪ್ರಕರಣಗಳಲ್ಲಿ ತನಿಖಾಧಿಕಾರಿಗಳಿಂದಲೇ ವಿವರಣೆ ಪಡೆಯಲಾಗುತ್ತಿದೆ’ ಎಂದು ಮೂಲಗಳು ತಿಳಿಸಿವೆ.
‘ಹಲವು ಪ್ರಕರಣಗಳಲ್ಲಿ ಆರೋಪಿತ ಸರ್ಕಾರಿ ನೌಕರರ ವಿರುದ್ಧ ಆರೋಪಪಟ್ಟಿ ಸಲ್ಲಿಸಲು ಸರ್ಕಾರದ ವಿವಿಧ ಇಲಾಖೆಗಳಿಂದ ಅನುಮತಿ ದೊರಕಬೇಕಿದೆ. ಅಂತಹ ಪ್ರಕರಣಗಳನ್ನೂ ಪಟ್ಟಿ ಮಾಡುತ್ತಿದ್ದು, ಆರೋಪಪಟ್ಟಿ ಸಲ್ಲಿಸಲು ತ್ವರಿತವಾಗಿ ಅನುಮತಿ ನೀಡುವಂತೆ ಸಕ್ಷಮ ಪ್ರಾಧಿಕಾರಗಳಿಗೆ ಪತ್ರ ಬರೆಯಲು ಎಸಿಬಿ ಅಧಿಕಾರಿಗಳು ಸಿದ್ಧತೆ ನಡೆಸಿದ್ದಾರೆ’ ಎಂದು ಮೂಲಗಳು ಹೇಳಿವೆ.