ಬೆಂಗಳೂರು: ಸೋಮವಾದಿಂದ (ಆಗಸ್ಟ್ 23ರಂದು) 9ರಿಂದ 12ನೇ ತರಗತಿಯವರೆಗೆ ಶಾಲಾ-ಕಾಲೇಜುಗಳು ಪ್ರಾರಂಭವಾಗತ್ತಿವೆ. ‘ಶಾಲೆಗಳನ್ನು ಆರಂಭಿಸಲು ಸರ್ಕಾರ ಎಲ್ಲ ಸಿದ್ಧತೆ ಮಾಡಿಕೊಂಡಿದೆ. ವಿದ್ಯಾರ್ಥಿಗಳು ಯಾವ ಆತಂಕವಿಲ್ಲದೆ ಶಾಲೆಗೆ ಬನ್ನಿʼ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಶಾಲೆಗಳ ಆರಂಭಕ್ಕೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈಗಾಗಲೇ ಶಿಕ್ಷಕರಿಗೆ ಲಸಿಕೆ ನೀಡಲಾಗಿದೆ. ಶಾಲಾ ಕೊಠಡಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಜ್ ಮಾಡಲಾಗಿದೆ. ದಿನ ಬಿಟ್ಟು ದಿನದಂತೆ ಬ್ಯಾಚ್ಗಳನ್ನು ಮಾಡಿ ಶಾಲೆ ನಡೆಸಲಾಗುತ್ತದೆ. ಮಕ್ಕಳನ್ನು ಅಂತರಕಾಯ್ದಿರಿಸಿ ಕೂರಿಸಲಾಗುತ್ತದೆ. ಪೋಷಕರ ಸಮ್ಮತಿ ಪಡೆದೇ ಮಕ್ಕಳು ಶಾಲೆಗೆ ಬರಬೇಕು. ಎಲ್ಲ ಪೋಷಕರು ಕೂಡ ಲಸಿಕೆ ಹಾಕಿಸಿಕೊಳ್ಳಬೇಕುʼ ಎಂದು ತಿಳಿಸಿದರು.
ಇದನ್ನು ಓದಿ: ಸದ್ಯಕ್ಕೆ ಲಾಕ್ಡೌನ್ ಇಲ್ಲ-ಜಿಲ್ಲಾವಾರು ಕೋವಿಡ್ ತಡೆಗೆ ಕ್ರಮ ಹಾಗೂ ಶಾಲೆಗಳು ಆರಂಭ: ಸಿಎಂ ಬೊಮ್ಮಾಯಿ
ಸೋಮವಾರದಿಂದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ನಾಗೇಶ್ ಅವರೊಂದಿಗೆ ಬೆಂಗಳೂರು ಮತ್ತು ಕೆಲವು ಜಿಲ್ಲೆಗಳಲ್ಲಿರುವ ಶಾಲೆಗಳಿಗೆ ಭೇಟಿ ನೀಡಲಿದ್ದೇನೆ. ಒಂದೂವರೆ ವರ್ಷದಿಂದ ಮಕ್ಕಳು ಶಾಲೆಗೆ ಹೋಗಿಲ್ಲ, ನಿಧಾನವಾಗಿ ಅವರು ಕಲಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬ ಸದುದ್ದೇಶದಿಂದ ಶಾಲೆ ಆರಂಭಿಸಲಾಗುತ್ತಿದೆ ಎಂದರು.
ಪೋಷಕರು ನಿರ್ಲಕ್ಷ್ಯ ತೋರದೆ ಲಸಿಕೆಯನ್ನು ಹಾಕಿಸಿಕೊಳ್ಳಿ. ಮಕ್ಕಳ ಆರೋಗ್ಯದ ಬಗ್ಗೆಯೂ ಗಮನ ಇರಲಿ. ಶಾಲೆಗೆ ಹೋಗಿ ಬಂದ ಮೇಲೆ ಮಕ್ಕಳನ್ನು ಮುತುವರ್ಜಿವಹಿಸಿ ಎಂದು ಮುಖ್ಯಮಂತ್ರಿ ಕಿವಿಮಾತು ಹೇಳಿದರು.