ಕನ್ನಡದಲ್ಲಿದ್ದ ದಾಖಲೆ ವಾಪಸ್‌ ಕಳಿಸಿದ ರಾಜ್ಯಪಾಲರ ಕನ್ನಡ ವಿರೋಧಿ ನಡೆಗೆ ಎಎಪಿ ಖಂಡನೆ

ಬೆಂಗಳೂರು: ಹೆಚ್‌.ಡಿ. ಕುಮಾರಸ್ವಾಮಿ ಮತ್ತು ಗಾಲಿ ಜನಾರ್ಧನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವಂತೆ ರಾಜ್ಯ ಸರ್ಕಾರ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಕಡತಗಳನ್ನು ಕಳುಹಿಸಿತ್ತು, ಆದರೆ ರಾಜ್ಯಪಾಲರು ಆಗಸ್ಟ್ 28 ರಂದು ಎರಡೂ ಕಡತಗಳನ್ನು ವಾಪಸ್ ಕಳಿಸಿದ್ದಾರೆ. ದಾಖಲೆಗಳು ಕನ್ನಡದಲ್ಲಿದೆ, ಇಂಗ್ಲೀಷ್‌ಗೆ ಅನುವಾದ ಮಾಡಿ ಕಳಿಸಿ ಎಂದು ಕಾರಣ ಕೊಟ್ಟು ವಾಪಸ್ ಕಳಿಸುವ ಮೂಲಕ ಕನ್ನಡ ವಿರೋಧಿ ಧೋರಣೆ ತೋರಿಸಿದ್ದಾರೆ ಎಂದು ರಾಜ್ಯ ಆಮ್ ಆದ್ಮಿ ಪಾರ್ಟಿ ಉಪಾಧ್ಯಕ್ಷ ಡಾ. ರಮೇಶ್ ಬೆಳ್ಳಂಕೊಂಡ ಹೇಳಿದ್ದಾರೆ.

ನಗರದಲ್ಲಿರು ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ರಮೇಶ್ ಬೆಳ್ಳಂಕೊಂಡ, 2023ರ ನವೆಂಬರ್ ತಿಂಗಳಿನಲ್ಲಿ ಹೆಚ್‌.ಡಿ. ಕುಮಾರಸ್ವಾಮಿ ಅವರ ವಿರುದ್ಧ ದಾಖಲೆಗಳನ್ನು ನೀಡಿ, ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಲಾಗಿತ್ತು. ಆದರೆ 9 ತಿಂಗಳು ಸುಮ್ಮನೆ ಇದ್ದ ರಾಜ್ಯಪಾಲರು ಆಗಸ್ಟ್ 28 ರಂದು ಇಂಗ್ಲಿಷ್‌ಗೆ ಅನುವಾದ ಮಾಡಿ ಕಳಿಸಿ ಎಂದು ವಾಪಸ್ ಕಳಿಸಿದ್ದಾರೆ. ಕನ್ನಡ ಅರ್ಥವಾಗದೇ ಇದ್ದರೆ ಇಂಗ್ಲಿಷ್‌ಗೆ ಅನುವಾದ ಮಾಡಿ ಕೊಡಿ ಎಂದು ಕೇಳಲು 9 ತಿಂಗಳು ಕಾಯಬೇಕಿತ್ತಾ ಎಂದು ಪ್ರಶ್ನೆ ಮಾಡಿದರು.

ಇದನ್ನು ಓದಿ : ತಿಂಗಳಿಗೆ ಕನಿಷ್ಠ ₹31 ಸಾವಿರ ವೇತನ ನಿಗದಿಪಡಿಸಿ; ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಪ್ರತಿಭಟನೆ

ಗಾಲಿ ಜನಾರ್ಧನ ರೆಡ್ಡಿ ವಿರುದ್ಧ ಕೂಡ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲು 2024ರ ಮೇ ತಿಂಗಳಿನಲ್ಲಿ ರಾಜ್ಯ ಸರ್ಕಾರ ದಾಖಲೆಗಳನ್ನು ನೀಡಿದ್ದರೂ, ಇಷ್ಟು ದಿನ ಸುಮ್ಮನಿದ್ದು, ಈಗ ವಾಪಸ್ ಕಳಿಸಿದ್ದಾರೆ. ಗೆಹ್ಲೋಟ್ ಕಳೆದ ಮೂರು ವರ್ಷದಿಂದ ಕರ್ನಾಟಕದ ರಾಜ್ಯಪಾಲರಾಗಿದ್ದಾರೆ, ಅವರಿಗೆ ಕನ್ನಡ ಬರದೇ ಇದ್ದರೆ, ಒಬ್ಬರು ತರ್ಜುಮೆ ಮಾಡಲು ಕೂಡ ಅವರ ಕಚೇರಿಯಲ್ಲಿ ಸಿಬ್ಬಂದಿಯನ್ನು ಇಟ್ಟುಕೊಂಡಿಲ್ಲವಾ, ಕರ್ನಾಟಕದಲ್ಲಿದ್ದರೂ ಕನ್ನಡದ ಬಗ್ಗೆ ಇಷ್ಟೊಂದು ನಿರ್ಲಕ್ಷ್ಯ ಎಂದರು.

ಬೇರೆ ರಾಜ್ಯದವರು ಕರ್ನಾಟಕದ ರಾಜ್ಯಪಾಲರಾದಾಗ ಕನ್ನಡ-ಇಂಗ್ಲೀಷ್ ತರ್ಜುಮೆ ಮಾಡುವ ಸಿಬ್ಬಂದಿ ಇರಬೇಕಲ್ಲವಾ, ಕನ್ನಡಿಗರು ಏನಾದರೂ ರಾಜ್ಯಪಾಲರಿಗೆ ದೂರು ಕೊಡಬೇಕೆಂದರೆ, ಇಂಗ್ಲಿಷ್‌ನಲ್ಲೇ ಕೊಡಬೇಕಾ, ಕನ್ನಡದಲ್ಲಿ ಕೊಟ್ಟರೆ ಅದನ್ನು ರಾಜ್ಯಪಾಲರು ಅರ್ಥ ಮಾಡಿಕೊಳ್ಳಲು ಯಾಕೆ ವ್ಯವಸ್ಥೆ ಮಾಡಿಕೊಂಡಿಲ್ಲ ಎಂದು ಕೇಳಿದರು.

ಆಮ್ ಆದ್ಮಿ ಪಾರ್ಟಿ ಹಿರಿಯ ನಾಯಕ ಗುರುಮೂರ್ತಿಯವರು ಮಾತನಾಡಿ, ರಾಜ್ಯಪಾಲರ ವರ್ತನೆಯನ್ನು ನೋಡಿದರೆ ಅವರು ಈಗ ಒಂದು ಪಕ್ಷದ ಪರ ಇದ್ದಾರೆ ಎನ್ನುವ ಅನುಮಾನ ಮೂಡುತ್ತಿದೆ. ಗಂಭೀರ ಭ್ರಷ್ಟಾಚಾರ ಆರೋಪಗಳಿದ್ದರೂ, ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿದಾಗ ಹಲವು ತಿಂಗಳು ಕಾಯಿಸುವುದು ಸರಿಯಾದ ನಡೆಯಾ ಎಂದರು, ರಾಜ್ಯಪಾಲರು ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕು, ಕನ್ನಡಿಗರಿಗೆ ಅವರು ಇದಕ್ಕೆ ಉತ್ತರ ಕೊಡಬೇಕು ಎಂದರು.

ಇದನ್ನು ನೋಡಿ : ನಮಗೆ ಬೇಕಿರುವುದು ಸ್ಪರ್ಧೆಯಲ್ಲ; ಪರಸ್ಪರ ಸಹಕಾರ – ಸಸಿಕಾಂತ್ ಸೆಂಥಿಲ್Janashakthi Media

Donate Janashakthi Media

Leave a Reply

Your email address will not be published. Required fields are marked *