ಕೆರೆ ಕೆಂಪವ್ವ: ಜಾತಿ, ಲಿಂಗ ಮತ್ತು ಮನುಷ್ಯತ್ವದ ಕಹಿ ಸತ್ಯಗಳ ಕಥೆ

ಕನ್ನಡದ ಸುಪ್ರಸಿದ್ದ ಕಥೆಗಾರರಲ್ಲಿ ಒಬ್ಬರಾದ ದಿವಂಗತ ಮೊಗಳ್ಳಿ ಗಣೇಶ್ ಅವರ “ಕನ್ನೆಮಳೆ” ಕಥಾ ಸಂಕಲನದಲ್ಲಿರುವ “ಕೆರೆ ಕೆಂಪವ್ವ ” ಕಥೆಯು ಒಂದು ವಿಶಿಷ್ಟವಾದ ಕಥಾ ಹಂದರವನ್ನು ಹೊಂದಿದೆ. ಕಥೆಯ ಶೀರ್ಷಿಕೆಯೇ ಕೆರೆಯ ಜೊತೆ ಕೆಂಪವ್ವನನ್ನು ಸಮೀಕರಿಸಿದೇ ಮತ್ತು ಜಾನಪದದ ಜೊತೆಗೆ ಸಮಕಾಲೀನ ಸಮಾಜವನ್ನು ಬೆಸೆಯುವಂತಿದೆ.

– ಪ್ರಸನ್ನ ಕುಮಾರ್

ಶ್ರೇಣಿಕೃತ ಸಮಾಜದ ಎರಡು ಧ್ರುವಗಳೆಂದೆ ಹೇಳಬಹುದಾದ, ಅದೇ ಊರಿನೊಳಗಿನ ಒಂದು ಸಮುದಾಯವಾದರೆ ಮತ್ತೊಂದು ಊರಿನಾಚೆಯ ಸಮುದಾಯ ಹೀಗೆ ಕ್ರಮವಾಗಿ ಎರಡನ್ನೂ ಪ್ರತಿನಿಧಿಸುವ ಕೆಂಪವ್ವ ಮತ್ತು ಹೊಲಗೇರಿಯ ಜನ ಅದರಲ್ಲೂ ಈರವ್ವ ಇಬ್ಬರೂ ಪ್ರತಿನಿಧಿಸುವ ಅಪರಿಮಿತ ಪ್ರೀತಿ ಮತ್ತು ಕಕ್ಕುಲಾತಿ ಮನ ತಟ್ಟುತ್ತದೆ. ಕಲ್ಲೋ ಮಣ್ಣೋ ಆಟವನ್ನು ಆಡುವ ಒಬ್ಬ ಸಣ್ಣ ಹುಡುಗನ ದೃಷ್ಟಿಯಲ್ಲಿ ಕಥೆಯನ್ನು ಮೆಲುಕು ಹಾಕುವಂತಿದೆ.

ಜೀವರಸವಿಲ್ಲದ ಜವರಾಯನ ಹೆಂಡತಿಯಾಗಿ ಗಂಡನ ಮನೆ ಹೊಕ್ಕ ಕೆಂಪವ್ವ ಮಕ್ಕಳಾಗದೆ ಬಂಜೆಯಾಗಿಯೇ ಉಳಿಯುವುದು ಅವಳ ತಪ್ಪಲ್ಲದಿದ್ದರೂ ಪುರುಷ ಪ್ರಧಾನ ಸಮಾಜದ ಪ್ರಕಾರ ಗಂಡಿನ ದೋಷವಿದ್ದರೂ ತನ್ನದಲ್ಲದ ದೋಷಕ್ಕೆ ಹೆಣ್ಣನ್ನೇ ಗುರಿಮಾಡುವುದು ಆದಿಯಿಂದಲೂ ನಡೆದು ಬಂದಿರುವುದು ಸರ್ವವಿದಿತ.

ಹನಿ ನೀರನ್ನು ಕಾಣದೆ ಬರಗಾಲದತ್ತ ಮುಖ ಮಾಡಿದ್ದು ಊರನ್ನು ಆಮೇಲೆ ಕಾಡುವ ಮಳೆ ಧಾರಕಾರವಾಗಿ ಸುರಿದು ಕೆರೆ ಕಟ್ಟೆಯನ್ನೆಲ್ಲ ತುಂಬಿ ಇನ್ನೇನು ಒಡೆದು ಊರಿಗೆ ಊರೇ ಮುಳುಗಿ ಹೋಗುವ ಕಾಲ ಸನ್ನಿಹಿತವಾಯಿ ತೆಂದು ಭಯಭೀತರಾಗುವುದು ಒಂದೆಡೆಯಾದರೆ ಮತ್ತೊಂದೆಡೆ ಇದೆ ಸಂದರ್ಭವನ್ನು ಉಪಯೋಗಿಸಿಕೊಂಡು ಊರ ಪ್ರಮುಖ ತಾನು ಬಯಸಿದ ಕೆಂಪವ್ವ ತನಗೆ ಸಿಗದ ದ್ವೇಷದಿಂದ ಇವಳ ಬಂಜೆತನವೇ ಊರಿನ ಸಂಕಷ್ಟಕ್ಕೆ ಕಾರಣ, ಅದಕ್ಕೆ ಊರಿನ ಉಳಿವಿಗಾಗಿ ಕೆಂಪವ್ವ ಕೆರೆಗೆ ಹಾರವಾಗಬೇಕು, ಇದರಿಂದ ಊರು ಉಳಿಯುವುದೆಂದು ಎಂದು ತಾನು ಭಾವಿಸಿದಲ್ಲದೆ ಅದನ್ನು ಸಮರ್ಥಿಸುವಂತೆ ಕೆಂಪವ್ವನ ಗಂಡ, ಮಾವನ ಜೊತೆಗೆ ಇಡೀ ಊರಿನವರನ್ನು ಎತ್ತಿ ಕಟ್ಟುವ ದುಷ್ಟತನ, ಕೆಂಪವ್ವನ ಬಗ್ಗೆ ತವರಿನವರೂ ಕೂಡ ಮಗಳು ಕೆರೆಗೆ ಹಾರವಾಗುವ ಬಗ್ಗೆ ಕೊಟ್ಟ ಹೆಣ್ಣು ಕುಲಕ್ಕೆ ಹೊರಗು ಎಂಬ ಸವಕಲು ಧೋರಣೆಗೆ ಕಟ್ಟುಬಿದ್ದು ಮನೆಯ ಮಗಳೆಂದು ಕಿಂಚಿತ್ತೂ ಆತುಕೊಳ್ಳದ ನಿರ್ಭವುಕ ಮನಸ್ಥಿತಿ ಮನಸ್ಸನ್ನು ಕದಡುತ್ತದೆ.

ಇದನ್ನೂ ಓದಿ: ಹವಾಮಾನ ವೈಪರಿತ್ಯ: 3 ಗಂಟೆ ಬಾನಲ್ಲಿ ಹಾರಾಟ; ಪ್ರಯಾಣಿಕರಲ್ಲಿ ಆತಂಕ

ಆದರೆ ಕೆಂಪಮ್ಮನ ಬಗ್ಗೆ ಅತುಲ ಪ್ರೀತಿಯನ್ನು ಹೊಂದಿರುವ ಹೊಲೆಗೇರಿಯವರು ಮಾತ್ರ ಅವಳಿಗೆ ಒದಗಿರುವ ಸಂಕಷ್ಟಕ್ಕೆ ಮರುಗುವ ಜನರ ಪ್ರೀತಿಯೇ ಅವಳ ಪಾಲಿಗಿರುವುದು. ಕೆರೆ ತುಂಬಿರುವ ಜಲರಾಶಿಯಲ್ಲಿ ತಾನು ಉಳಿಯಲಾರೆ, ಬೇರೆ ಕಡೆ ತಪ್ಪಿಸಿಕೊಂಡು ಹೋಗುವ ಅವಳ ಪ್ರಯತ್ನಕ್ಕೆ ಒತ್ತು ಕೊಡುವವಳು ಅದೇ ಹಟ್ಟಿಯ ಈರಜ್ಜಿ. ಆದರೆ ಕೆಂಪವ್ವನ ತಪ್ಪಿಸಿಕೊಳ್ಳುವ ಪ್ರಯತ್ನ ವಿಫಲವಾಗಿ ಕೊನೆಗೆ ಪಂಚಾಯ್ತಿ ತೀರ್ಮಾನವಾದಂತೆ ಕೆಂಪವ್ವ ಕೆರೆಗೆ ಹಾರವಾಗುವ ಅನಿವಾರ್ಯ ಪರಿಸ್ಥಿತಿ ಬಂದೊದಗಿದಾಗ ಈ ದುರಂತವನ್ನು ನೆನೆದು ಮರುಗುವವರು ಹಟ್ಟಿಯ ಜನರೇ ಹೊರತು ಊರಿನ ಉಳಿದವರಲ್ಲ.

ಕೆಂಪವ್ವನ ವಿದಾಯದ ಕ್ಷಣದಲ್ಲಿ ಅವಳೊಂದಿಗೆ ಹೆತ್ತು, ಹೊತ್ತವರು, ಬಂಧು ಬಳಗದವರಾರು ಇರದೇ, ಹೊಲಗೇರಿಯ ಜನರು ಮರುಗಿ ವಿಷಾದದಿಂದ ಅವಳ ಗುಣಗಾನ ಮಾಡುವ ಪದಗಳನ್ನು ಹಾಡುತ್ತಾರೆ. ಊರಿನ ಹಿರಿಯರಿಗೆ ಕೆಂಪವ್ವನ ಕೈಯಿಂದ ವೀಳ್ಯ ಕೊಡಿಸುವ ಊರಿನ ಜನ ಕೆಂಪವ್ವ ತಾನಾಗಿ ಈರವ್ವನಿಗೆ ವೀಳ್ಯ ಕೊಟ್ಟು ಬರುವುದಾಗಿ ಹೇಳಿದಾಗ ಹೊಲೆಯರ ಹಟ್ಟಿಗೆ ಯಾರೂ ಬಾರದೇ ಇವಳೋಬ್ಬಳನ್ನೇ ಕಳಿಸಿ, ಅವಳು ಈರವ್ವನಿಗೆ ವೀಳ್ಯ ಕೊಟ್ಟು ” ತಾನಿನ್ನು ಹೋಗುವುದಾಗಿ ತನ್ನ ಜೊತೆ ಬಂದು ಕಳಿಸಿಕೊಡಲು ಹೆತ್ತಜ್ಜಿಗೆ ಕೇಳಿ ಅವಳೂ ಕೆಂಪವ್ವನ ಜೊತೆ ತಾನು ಹಾರವಾಗಲು ಬಯಸಿದಾಗ ಮುದುಕಿಯನ್ನು ತಡೆಯುವ ಪೂಜಾರಿ, ಕೆಂಪವ್ವನ ಮುತ್ತೈದೆ ಭಾಗ್ಯದ ವೀಳ್ಯವೆಂದು ಅಫೀಮು ತುಂಬಿದ ವೀಳ್ಯ ತಿನ್ನಿಸುವ ಹೆಂಗಸರು ಹೀಗೆ ಊರಿನ ಸಮಸ್ತರೂ ಕೆಂಪವ್ವನ ಬಲಿದಾನದ ಫಲಾನುಭವಿಗಳಾಗುತ್ತಾರೆ.

ಕೆಂಪವ್ವ ನೀರಿಗೆ ಬೀಳುವ ಮುನ್ನ ಕೊನೆಯ ಬಾರಿ ಎಂಬಂತೆ “ಈರವ್ವ ಬರ್ತಿನವ್ವ ‘ ಅಂತ ಹೇಳಿ, ಹೆಬ್ಬಾಲೆಗಳಿಗೆ ಬಲಿಯಾಗುವ ಕೆಂಪಮ್ಮನಿಗೆ ಹೊಲೆಗೆರಿಯವರೇ ಸ್ವಂತದವರೆಂಬಂತೆ ತಿಥಿ ಗತಿ ಮಾಡುವುದರ ಜೊತೆಗೆ ಕೆಂಪವ್ವನ ಮೂರ್ತಿಯನ್ನು ಸ್ಥಾಪಿಸುವುದು ಹೊಲೆಗೇರಿ ಮತ್ತು ಕೆಂಪವ್ವನ ನಡುವಿನ ನಿರ್ವಯಾಜ ಪ್ರೀತಿಯನ್ನು ತೋರುತ್ತದೆ. ಪರಸ್ಪರ ಒಂದೇ ಜಾತಿಯಲ್ಲ, ಕೋಮು ಅಲ್ಲ, ಆದರೂ ಅದನ್ನೆಲ್ಲ ತೊಡೆದು ಹಾಕಿ ಕೇವಲ ಮನುಷ್ಯ ಪ್ರೀತಿ ಮಾತ್ರವನ್ನೇ ಎದೆ ತುಂಬಾ ತುಂಬಿಕೊಂಡಿರುವುದು ಒಂದು ಮಾದರಿಯಾಗಿದೆ.

ಮುಂದೆ ಈರವ್ವನ ಶಾಪ ತಟ್ಟಿ ಜವರಾಯ, ಅವನಪ್ಪ ಮತ್ತು ಕೆಂಪವ್ವ ಕೆರೆಗೆ ಹಾರವಾಗಲು ಮೂಲನಾದ ಸಿದ್ದೇಗೌಡ ಇವರೆಲ್ಲ ಅನುಭವಿಸುವ ಸಂಕಷ್ಟಗಳು ಹೆಣ್ಣಿನ ಶಾಪ ತಟ್ಟುತ್ತದೆ ಎಂಬ ಜನಜನಿತ ಅನಿಸಿಕೆಗೆ ಪುಷ್ಟಿ ಕೊಡುವಂತಿದೆ. ಅನಿಷ್ಟಕ್ಕೆಲ್ಲ ಹೆಣ್ಣೇ ಕಾರಣ ಎನ್ನುವ ಅಂದಿನ ಮನಸ್ಥಿತಿ ಇಂದಿಗೂ ಮುಂದುವರೆದುಕೊಂಡು ಬಂದಿರುವುದು ವಿಪರ್ಯಾಸ, ಈ ರೀತಿಯ ಅಪಸವ್ಯಗಳನ್ನು ತೊಡೆದು ಹಾಕಬೇಕಾಗಿರುವುದು ಸಮಕಾಲೀನ ಸಮಾಜದ ಆದ್ಯ ಕರ್ತವ್ಯವಾಗಬೇಕು.

ಸಮಕಾಲೀನ ಸಮಾಜವು ಜನಪದರಿಂದ ತಿಳಿಯಬೇಕಾದ, ಕಲಿಯಬೇಕಾದ ಮತ್ತು ಅಳವಡಿಸಿಕೊಳ್ಳಬೇಕಾದ ಅಂಶಗಳು ಬೇಕಾದಷ್ಟಿದೆ ಎಂಬುದನ್ನು ಈ ಕಥೆ ವ್ಯಕ್ತಪಡಿಸುತ್ತದೆ.

ಇಂಥದೊಂದು ಕಥೆಯನ್ನು ಕನ್ನಡ ಸಾರಸ್ವತ ಲೋಕಕ್ಕೆ ನೀಡಿದ ದಿವಂಗತ ಮೊಗಳ್ಳಿ ಗಣೇಶ್ ಅವರಿಗೆ ಒಬ್ಬ ಓದುಗನಾಗಿ ನನ್ನ ಗೌರವಯುತ ನಮನಗಳು.

ಇದನ್ನೂ ನೋಡಿ: ನಾಡ ನಡುವಿನಿಂದ ಸಿಡಿದ ನೋವಿನ ಕೂಗೆ | ಡಾ ಸಿದ್ದಲಿಗಯ್ಯ | ಪಿಚ್ಚಳ್ಳಿ ಶ್ರೀನಿವಾಸ Janashakthi Media

Donate Janashakthi Media

Leave a Reply

Your email address will not be published. Required fields are marked *