₹31 ಸಾವಿರ ಕನಿಷ್ಠ ವೇತನಕ್ಕಾಗಿ ಗ್ರಾ. ಪಂಚಾಯಿತಿ ನೌಕರರ ಪ್ರತಿಭಟನೆ

ಬೆಂಗಳೂರು: ಮಂಗಳವಾರ, ಜುಲೈ 23 ರಂದು ರಾಜ್ಯ ಗ್ರಾಮ ಪಂಚಾಯತ್‌ ನೌಕರರ ಸಂಘದ ಸದಸ್ಯರು ಸ್ವಾತಂತ್ರ್ಯ ಉದ್ಯಾನದಲ್ಲಿ ‘ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕರವಸೂಲಿಗಾರ, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್‌, ನೀರುಗಂಟಿ, ಜವಾನ, ಸ್ವಚ್ಛತಾಗಾರರನ್ನು ಏಕಕಾಲಕ್ಕೆ ನೌಕರರೆಂದು ಘೋಷಿಸಿ, ₹31 ಸಾವಿರ ಕನಿಷ್ಠ ವೇತನ ನಿಗದಿಪಡಿಸಬೇಕು’ ಎಂದು ಆಗ್ರಹಿಸಿ, ಅನಿರ್ದಿಷ್ಟಾವಧಿ ನಡೆಸುತ್ತಿರುವ ಧರಣಿ 2ನೇ ದಿನಕ್ಕೆ ತಲುಪಿದೆ.

ಪ್ರತಿಭಟನಕಾರರು ‘ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ನಿವೃತ್ತಿ ಅಥವಾ ಮರಣ ಹೊಂದಿದವರಿಗೆ ಪ್ರತಿ ತಿಂಗಳು ಕನಿಷ್ಠ ₹6 ಸಾವಿರ ಪಿಂಚಣಿ ನೀಡಬೇಕು. ಇಲ್ಲಿನ ಸಿಬ್ಬಂದಿಗೆ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು. ನೀರುಗಂಟಿಗಳಿಗೆ ನಿರ್ದಿಷ್ಟ ಕೆಲಸಗಳನ್ನು ಮಾತ್ರ ನಿಗದಿಗೊಳಿಸಬೇಕು. ಆದಾಯಕ್ಕೆ ಅನುಗುಣವಾಗಿ ಕರವಸೂಲಿಗಾರರ ಹುದ್ದೆಗಳನ್ನು ನಿಗದಿಪಡಿಸಬೇಕು. ಎಲ್ಲ ಗ್ರಾಮ ಪಂಚಾಯಿತಿಗಳಿಗೆ ಲೆಕ್ಕ ಸಹಾಯಕರ ಹುದ್ದೆ ಸೃಷ್ಟಿಸಬೇಕು’ ಎಂದು ಆಗ್ರಹಿಸಿದರು.

ಇದನ್ನೂ ಓದಿ: ನಿರಂಜನ100 | ನಿರಂಜನ ಮರು ಓದು ಆರಂಭವಾಗಲಿದೆ

‘ಗ್ರೇಡ್‌–1 ಕಾರ್ಯದರ್ಶಿ ಹುದ್ದೆಗಳಿಗೆ ಶೇಕಡ 100ರಷ್ಟು ಸ್ಥಾನಗಳನ್ನು, ಗ್ರೇಡ್‌–2 ಕಾರ್ಯದರ್ಶಿಗಳಿಗೆ ಶೇ 50ರಷ್ಟು, ದ್ವಿತೀಯ ದರ್ಜೆ ಲೆಕ್ಕ ಸಹಾಯಕರ ಹುದ್ದೆಗೆ ಶೇ 50ರಷ್ಟು ಸ್ಥಾನಗಳಿಗೆ ಬಡ್ತಿ ನೀಡಬೇಕು. ಜನಸಂಖ್ಯೆ ಆಧರಿಸಿ ಗ್ರಾಮ ಪಂಚಾಯಿತಿಗಳನ್ನು ಮೇಲ್ದರ್ಜೆಗೆ ಏರಿಸಬೇಕು. ಪಂಚಾಯತ್‌ ಅಭಿವೃದ್ಧಿ ಅಧಿಕಾರಿಗಳ ಹುದ್ದೆಗೆ ಶೇ 60ರಷ್ಟು ಸ್ಥಾನಗಳನ್ನು ಗ್ರೇಡ್‌–1 ಕಾರ್ಯದರ್ಶಿಗಳಿಗೆ ಮೀಸಲಿಡಬೇಕು. ಐಪಿಡಿ ಸಾಲಪ್ಪ ವರದಿಯಂತೆ ಪೌರ ಕಾರ್ಮಿಕರನ್ನು ನೇಮಿಸಿಕೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಸೇವಾ ಹಿರಿತನದ ಆಧಾರದ ಮೇಲೆ ವೇತನ ಹೆಚ್ಚಳ ಮಾಡಬೇಕು. ನೌಕರರು ಅನಾರೋಗ್ಯದ ಸಂದರ್ಭದಲ್ಲಿ ಆಸ್ಪತ್ರೆ ವೆಚ್ಚವನ್ನು ಭರಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಎಲ್ಲ ವಿಭಾಗದ ಹುದ್ದೆಗಳನ್ನು ಭರ್ತಿ ಮಾಡಬೇಕು’ ಎಂದರು. ಸಂಘದ ಅಧ್ಯಕ್ಷ ಎಂ.ಬಿ. ನಾಡಗೌಡ, ಪ್ರಧಾನ ಕಾರ್ಯದರ್ಶಿ ಜಿ. ರಾಮಕೃಷ್ಣ,  ಆರ್‌ಎಸ್‌ ಬಸವರಾಜ, ಸೇರಿದಂತೆ ರಾಜ್ಯ ವಿವಿಧ ಜಿಲ್ಲೆಗಳಿಂದ ನೂರಾರು ಪಂಚಾಯಿತಿ ನೌಕರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಇದನ್ನೂ ನೋಡಿ: ರಾಜ್ಯದಲ್ಲಿ ಹದಿನಾಲ್ಕೂವರೆ ಲಕ್ಷ ಸರ್ಕಾರಿ ಜಮೀನು, ಗೋಮಾಳ ಜಮೀನು ಕುರಿತು ಕಂದಾಯ ಸಚಿವ ಸ್ಪಷ್ಟನೆJanashakthi Media

Donate Janashakthi Media

Leave a Reply

Your email address will not be published. Required fields are marked *