ಕೋಲಾರ: ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ್ದಕ್ಕಾಗಿ ದಲಿತ ವ್ಯಕ್ತಿಯೊಬ್ಬನ ಮೇಲೆ ಮೇಲ್ಜಾತಿ ಸಮುದಾಯದ 15ಕ್ಕೂ ಹೆಚ್ಚು ಮಂದಿ ಸೇರಿ ಥಳಿಸಿದ ಘಟನೆ ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ದೊಡ್ಡೂರು ಗ್ರಾಮದಲ್ಲಿ ನಡೆದಿದೆ. ಬೂದಿಕೋಟೆ ಪೊಲೀಸರು ಹಲ್ಲೆ ಮತ್ತು ದೌರ್ಜನ್ಯ ಪ್ರಕರಣ ದಾಖಲಿಸಿಕೊಂಡು ಇಬ್ಬರನ್ನು ಬಂಧಿಸಿದ್ದಾರೆ.
ತಲೆಮರೆಸಿಕೊಂಡಿರುವ ಇತರರಿಗಾಗಿ ಶೋಧ ನಡೆಯುತ್ತಿದೆ. ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ಎಸ್ಪಿ ಧರಣಿದೇವಿ ಅವರು ಉನ್ನತ ಪೊಲೀಸ್ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.
ಸಂತ್ರಸ್ತ ಮುನಿರಾಜು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ‘ಅಕ್ಟೋಬರ್ 6ರಂದು ಆಕಸ್ಮಿಕವಾಗಿ ಸಿದ್ದಯ್ಯಗೆ ಕರೆ ಮಾಡಿದ್ದೆ, ಬಳಿಕ ಗೊತ್ತಲೂರು ಗ್ರಾಮದಲ್ಲಿ ಅಂತ್ಯಕ್ರಿಯೆ ವೇಳೆ ಕರೆ ಮಾಡಿದ್ದಕ್ಕೆ ನಮ್ಮ ನಡುವೆ ಜಗಳವಾಗಿತ್ತು. ಮರುದಿನ ದೊಡ್ಡಾಪುರ ಗ್ರಾಮದ ಗಂಗಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಸಿದ್ದಯ್ಯ, ಚಂದ್ರಪ್ಪ ಹಾಗೂ ಸಿದ್ದಯ್ಯನ ನಾಲ್ವರು ಸಂಬಂಧಿಕರು ನನ್ನ ಮೇಲೆ ಕತ್ತಿ, ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಇನ್ನು ಸಿದ್ದಯ್ಯ ಮತ್ತಿತರರು ಜಾತಿ ನಿಂದನೆ ಮಾಡಿದ್ದಾರೆ ಎಂದರು. “ಇಲ್ಲೇ ಇದ್ದೀಯಾ ಎಂದು ನನ್ನನ್ನು ಗದರಿದರು. ನಮ್ಮ ದೇವಸ್ಥಾನದಲ್ಲಿ ನಿನಗೆ ಏನು ಕೆಲಸವಿದೆ? ಎನ್ನುತ್ತಾ ಹಲ್ಲೆ ಮಾಡಿದರು. ಗ್ರಾಮಸ್ಥರು ನನ್ನನ್ನು ಕಂಡು ಆಸ್ಪತ್ರೆಗೆ ಸೇರಿಸಿದಾಗ ನಾನು ಪ್ರಜ್ಞಾಹೀನ ಸ್ಥಿತಿಯಲ್ಲಿದೆ” ಎಂದು ಅವರು ವಿವರಿಸಿದ್ದಾರೆ.
ಮುನಿರಾಜು ತಲೆಗೆ ಗಾಯಗಳಾಗಿದ್ದು ರಕ್ತಸ್ರಾವವಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಕೋಲಾರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೂರಿನ ಮೇರೆಗೆ ಕೆಜಿಎಫ್ ಪೊಲೀಸ್ ವರಿಷ್ಠಾಧಿಕಾರಿ ಧರಣಿ ದೇವಿ ಹಾಗೂ ಇತರ ಉನ್ನತ ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಜೊತೆಗೆ ಘಟನಾ ಸ್ಥಳಕ್ಕೆ ತೆರಳಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.
ಭಾರತೀಯ ದಂಡ ಸಂಹಿತೆ ಸೆಕ್ಷನ್ 143, 144, 147, 148, 504, 324, 323 ಮತ್ತು 149 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ವರದಿಯಾದ ಜಾತಿ ಆಧಾರಿತ ದೌರ್ಜನ್ಯದ ಮೂರನೇ ಘಟನೆ ಇದಾಗಿದೆ.
ಕೋಲಾರ ಜಿಲ್ಲೆಯ ದಲಿತ ಬಾಲಕನೊಬ್ಬ ಸೆ.29ರಂದು ಗ್ರಾಮ ದೇವತೆ ಹಬ್ಬದ ವೇಳೆ ದೇವರ ಗುಜ್ಜುಗೋಲು ಮುಟ್ಟಿದನೆಂದು ಆರೋಪಿಸಿ ಜಾತಿ ದೌರ್ಜನ್ಯ ನಡೆಸಲಾಗಿತ್ತು. ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಉಳ್ಳೇರಹಳ್ಳಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ ಕುಟುಂಬಕ್ಕೆ ಅರವತ್ತು ಸಾವಿರ ರೂ. ದಂಡ ವಿಧಿಸಲಾಗಿತ್ತು. ಇಲ್ಲವಾದರೆ ಊರು ತೊರೆಯುವಂತೆ ದಲಿತ ಕುಟುಂಬಕ್ಕೆ ಬೆದರಿಕೆ ಹಾಕಲಾಗಿತ್ತು. ಮತ್ತೊಂದು ಘಟನೆಯು ಚಿಕ್ಕಬಳ್ಳಾಪುರ ಜಿಲ್ಲೆಯ ಕೆಂಪದೇನಹಳ್ಳಿ ಗ್ರಾಮದಲ್ಲಿ ಅಕ್ಟೋಬರ್ 2ರಂದು ನಡೆದಿತ್ತು. 14 ವರ್ಷದ ದಲಿತ ಬಾಲಕನನ್ನು ಗ್ರಾಮಸ್ಥರು ಕಂಬಕ್ಕೆ ಕಟ್ಟಿ ಅಮಾನುಷವಾಗಿ ಥಳಿಸಿದ್ದರು. ಕೋಲಾರ ಜಿಲ್ಲೆಯಲ್ಲಿ ಒಂದು ತಿಂಗಳ ನಡುವೆ ದಲಿತರ ಮೇಲೆ ನಡೆದ ಮೂರನೇ ಪ್ರಕರಣ ಇದಾಗಿದೆ.