ಲಖ್ನೋ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಉತ್ತರ ಪ್ರದೇಶದ ಬಿಜೆಪಿ ಶಾಸಕ ರಾಮ್ದುಲರ್ ಗೊಂಡ್ಗೆ ಸ್ಥಳೀಯ ನ್ಯಾಯಾಲಯ 25 ವರ್ಷಗಳ ಶಿಕ್ಷೆ ಮತ್ತು 10.5 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾಗಿರುವುದರಿಂದ ತನ್ನ ಶಾಸಕ ಸ್ಥಾನವನ್ನು ಕಳೆದುಕೊಳ್ಳಲಿರುವ ದುಷ್ಕರ್ಮಿ, ರಾಜ್ಯದ ಸೋನ್ಬದ್ರಾ ಜಿಲ್ಲೆಯ ದುದ್ದಿ ಕ್ಷೇತ್ರದಿಂದ ಶಾಸಕನಾಗಿದ್ದನು.
ಅತ್ಯಾಚಾರ ಪ್ರಕರಣದಲ್ಲಿ ಶಾಸಕ ರಾಮ್ದುಲರ್ ಗೊಂಡ್ನನ್ನು ತಪ್ಪಿತಸ್ಥರೆಂದು ಪರಿಗಣಿಸಿ ಈ ಹಿಂದೆಯೆ ತೀರ್ಪು ನೀಡಿತ್ತು, ಅದಾಗಿ ಎರಡು ದಿನಗಳ ನಂತರ ಸೋನಭದ್ರದ ಸ್ಥಳೀಯ ನ್ಯಾಯಾಲಯ ಶುಕ್ರವಾರ ತೀರ್ಪು ಪ್ರಕಟಿಸಿದೆ. ಅಪರಾಧಿಯನ್ನು ಶುಕ್ರವಾರ ಬಿಗಿ ಪೊಲೀಸ್ ಭದ್ರತೆಯ ನಡುವೆ ನ್ಯಾಯಾಲಯಕ್ಕೆ ಕರೆತರಲಾಯಿತು ಎಂದು ವರದಿಯಾಗಿದೆ.
ಇದನ್ನೂ ಓದಿ: ಪತ್ರಿಕಾ ಹೇಳಿಕೆ, ಫ್ಯಾಕ್ಟ್ಚೆಕ್ ಮತ್ತು ಪೊಲೀಸ್ ದೂರಿನ ನಡುವೆಯು ಎಸ್ಎಫ್ಐ ಬಗ್ಗೆ ಸುಳ್ಳು ಪ್ರಕಟಿಸಿದ ಹೊಸದಿಗಂತ ಪತ್ರಿಕೆ!
“ನ್ಯಾಯಾಲಯ ಆತನಿಗೆ 25 ವರ್ಷಗಳ ಶಿಕ್ಷೆ ಮತ್ತು 10.5 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ದಂಡದ ಸಂಪೂರ್ಣ ಹಣವನ್ನು ಸಂತ್ರಸ್ತರಿಗೆ ನೀಡುವಂತೆ ನ್ಯಾಯಾಲಯ ಸೂಚಿಸಿದೆ” ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ (ಸೋನಭದ್ರ) ಸತ್ಯ ಪ್ರಕಾಶ್ ತ್ರಿಪಾಠಿ ಹೇಳಿದ್ದಾರೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 376 (ಅತ್ಯಾಚಾರ) ಮತ್ತು 506 (ಸಾಕ್ಷ್ಯಗಳ ನಾಶ ಮತ್ತು ತಪ್ಪು ಮಾಹಿತಿ ನೀಡುವಿಕೆ) ಮತ್ತು POCSO ಕಾಯ್ದೆಯ ಕೆಲವು ಸೆಕ್ಷನ್ಗಳ ಅಡಿಯಲ್ಲಿ ನ್ಯಾಯಾಲಯವು ಶಾಸಕನನ್ನು ತಪ್ಪಿತಸ್ಥರೆಂದು ಪರಿಗಣಿಸಿದೆ.
ಪ್ರಾಸಿಕ್ಯೂಷನ್ ಪ್ರಕಾರ, 2014ರ ನವೆಂಬರ್ 4ರ ಸಂಜೆ ಶೌಚಕ್ಕೆಂದು ಹತ್ತಿರದ ಹೊಲಕ್ಕೆ ತೆರಳಿದ್ದ ಅಪ್ರಾಪ್ತ ಬಾಲಕಿ ಮೇಲೆ ಬಿಜೆಪಿ ಶಾಸಕ ರಾಮ್ದುಲರ್ ಗೊಂಡ್ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸಿದ್ದನು. ಮನೆಗೆ ಹಿಂದಿರುಗಿದ ನಂತರ, ಬಾಲಕಿ ತನ್ನ ಅಣ್ಣನಿಗೆ ಈ ಬಗ್ಗೆ ತಿಳಿಸಿದ್ದರು. “ಕಳೆದ ಒಂದು ವರ್ಷದಲ್ಲಿ ರಾಮ್ದುಲರ್ ಗೊಂಡ್ ತನಗೆ ಬೆದರಿಕೆ ಹಾಕುವ ಮೂಲಕ ಹಲವಾರು ಬಾರಿ ತನ್ನ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ತನ್ನ ಸಹೋದರನಿಗೆ ತಿಳಿಸಿದ್ದಾರೆ” ಎಂದು ಸಂತ್ರಸ್ತೆಯ ವಕೀಲ ವಿಕಾಸ್ ಶಕ್ಯಾ ಹೇಳಿದ್ದಾರೆ.
ಸಂತ್ರಸ್ತೆ ಬಾಲಕಿಯು 1998 ರಲ್ಲಿ ಜನಿಸಿದ್ದರು ಎಂದು ಪ್ರಾಸಿಕ್ಯೂಷನ್ ವಿಚಾರಣೆಯ ಸಂದರ್ಭದಲ್ಲಿ ಹೇಳಿಕೊಂಡಿತ್ತು. ಆದರೆ ಶಾಸಕ ಗೊಂಡ್ ಬಾಲಕಿಯು 1994 ರಲ್ಲಿ ಜನಿಸಿದ್ದರು ಎಂದು ಶಾಲೆಯ ದಾಖಲೆಗಳನ್ನು ಸಲ್ಲಿಸಿದ್ದನು ಎಂದು ತ್ರಿಪಾಠಿ ಹೇಳಿದ್ದಾರೆ. ತನ್ನ ವಿರುದ್ಧ ಬಂದಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವುದಾಗಿ ಶಾಸಕನ ಪರ ವಕೀಲ ರಾಮ್ ಬ್ರಿಕ್ಷ್ ತಿವಾರಿ ಹೇಳಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ರಾಮ್ದುಲರ್ ಗೊಂಡ್ ತನ್ನ ಸಮೀಪದ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷದ ಅಭ್ಯರ್ಥಿ ವಿಜಯ್ ಸಿಂಗ್ ಅವರನ್ನು ಸೋಲಿಸಿದ್ದನು.
ವಿಡಿಯೊ ನೋಡಿ: ಪಿಚ್ಚರ್ ಪಯಣ – 144ಸಿನೆಮಾ : ಈ ಬಂಧನನಿರ್ದೇಶನ : ವಿಜಯಲಕ್ಷ್ಮಿ ಸಿಂಗ್ಕಥೆ ಹೇಳುವವರು: ಭಾವನಾ ಮರಾಠೆ