ಹಿರಿಯ ಸಿಪಿಐ(ಎಂ) ನಾಯಕ, ಸ್ವಾತಂತ್ಯ್ರ ಹೋರಾಟಗಾರ ಎನ್. ಶಂಕರಯ್ಯ (102) ನಿಧನ

ಚೆನ್ನೈ: ಸಿಪಿಐ(ಎಂ) ಹಿರಿಯ ನಾಯಕ, ಸ್ವಾತಂತ್ಯ್ರ ಹೋರಾಟಗಾರ ಎನ್. ಶಂಕರಯ್ಯ ಅವರು ಅನಾರೋಗ್ಯದಿಂದ ಬುಧವಾರ ಇಲ್ಲಿ ನಿಧನರಾದರು. ಅವರಿಗೆ 102 ವರ್ಷ ವಯಸ್ಸಾಗಿತ್ತು. ಅವರನ್ನು ಜ್ವರ ಮತ್ತು ನೆಗಡಿ ಕಾರಣಕ್ಕೆ ಸೋಮವಾರ ಅಪೋಲೋ ಚೆನ್ನೈ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿತ್ತು. ನಂತರ ಅವರ ಆಮ್ಲಜನಕದ ಸ್ಯಾಚುರೇಶನ್ ಮಟ್ಟವೂ ಕುಸಿದಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

1964 ರಂದು ನಡೆದ ಅವಿಭಜಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಪಿಐ)ದ  ರಾಷ್ಟ್ರೀಯ ಕೌನ್ಸಿಲ್ ಸಭೆಯಿಂದ ಬೇರ್ಪಟ್ಟು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ-ಮಾರ್ಕ್ಸ್‌ವಾದಿ (ಸಿಪಿಐ-ಎಂ) ಸ್ಥಾಪಿಸಿದ 32 ಸದಸ್ಯರಲ್ಲಿ ಶಂಕರಯ್ಯ ಅವರು ಒಬ್ಬರಾಗಿದ್ದಾರೆ. ಅವರು ತಮಿಳುನಾಡು ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿಯಾಗಿ ಪಕ್ಷವನ್ನು ಮುನ್ನಡೆಸಿದ್ದರು. ರೈತ ಚಳವಳಿಯನ್ನು ಬೆಳೆಸುವಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದ ಅವರು ಅಖಿಲ ಭಾರತ ಕಿಸಾನ್ ಸಭಾದ ಪ್ರಧಾನ ಕಾರ್ಯದರ್ಶಿ ಮತ್ತು ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಉತ್ತರ ಪ್ರದೇಶ | ಜನರು ನೋಡ ನೋಡುತ್ತಿದ್ದಂತೆ ಎಳೆದುಕೊಂಡು ಹೋಗಿ ಯುವತಿಯ ಸಾಮೂಹಿಕ ಅತ್ಯಾಚಾರ; ಅಘಾತಕಾರಿ ವಿಡಿಯೊ

1922 ಜುಲೈ 15ರಂದು ತಮಿಳುನಾಡಿನ ತೂತುಕುಡಿ ಜಿಲ್ಲೆಯ ಕೋವಿಲ್‌ಪಟ್ಟಿಯಲ್ಲಿ ಹುಟ್ಟಿದ ಶಂಕರಯ್ಯ ಅವರು, ಅಲ್ಲಿಯೆ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ನಂತರ, ಇತಿಹಾಸದಲ್ಲಿ ಪದವಿ ಪಡೆಯಲು ಅವರು ಮಧುರೈ ಅಮೇರಿಕನ್ ಕಾಲೇಜಿಗೆ ಸೇರಿದರು. ಆದರೆ ಹಲವಾರು ಸ್ವಾತಂತ್ರ್ಯ ಹೋರಾಟಗಳಲ್ಲಿ ಭಾಗವಹಿಸುತ್ತಿದ್ದ ಅವರನ್ನು ಬ್ರಿಟಿಷರು ಬಂಧನಕ್ಕೊಳಪಡಿಸಿದ ಕಾರಣ, ಅವರು ತಮ್ಮ ಪದವಿಯನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಸ್ವಾತಂತ್ರ್ಯದ ಮುನ್ನಾದಿನದವರೆಗೆ ಎಂಟು ವರ್ಷಗಳ ಕಾಲ ಅವರು ಜೈಲಿನಲ್ಲಿ ಕಳೆದಿದ್ದರು.

ಶಂಕರಯ್ಯ 1940 ರಲ್ಲಿ ಕಮ್ಯುನಿಸ್ಟ್ ಪಕ್ಷವನ್ನು ಸೇರಿದ ಶಂಕರಯ್ಯ ಅವರು ಮತ್ತು ತಮಿಳುನಾಡಿನಲ್ಲಿ ಅವಿಭಜಿತ ಕಮ್ಯುನಿಸ್ಟ್ ಪಕ್ಷದ ಪ್ರಮುಖ ಸಂಘಟಕರಲ್ಲಿ ಒಬ್ಬರಾದರು. 1964ರಲ್ಲಿ ಅವಿಭಜಿತ ಕಮ್ಯುನಿಸ್ಟ್ ಪಕ್ಷದಿಂದ ಹೊರನಡೆದು, ಮುಂದೆ ಸಿಪಿಐ(ಎಂ) ರಚಿಸಿದ 32 ರಾಷ್ಟ್ರೀಯ ಮಂಡಳಿ ಸದಸ್ಯರಲ್ಲಿ ಅವರು ಒಬ್ಬರು. ತಮಿಳುನಾಡಿನಲ್ಲಿ ಕಮ್ಯುನಿಸ್ಟ್ ಚಳುವಳಿಯನ್ನು ಕಟ್ಟುವಲ್ಲಿ ಪ್ರಮುಖ ಕೊಡುಗೆಯನ್ನು ನೀಡಿರುವ ಅವರು 1995 ರಿಂದ 2002 ರವರೆಗೆ ರಾಜ್ಯ ಸಮಿತಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.

ಸ್ವಾತಂತ್ರ್ಯದ ನಂತರ, ಅವರು ಚುನಾವಣಾ ರಾಜಕೀಯದಲ್ಲಿ ಭಾಗವಹಿಸಿದರು. ತಮಿಳುನಾಡು ರಾಜ್ಯ ವಿಧಾನಸಭೆಗೆ ಮೂರು ಬಾರಿ 1967, 1977 ಮತ್ತು 1980 ರಲ್ಲಿ ಆಯ್ಕೆಯಾದರು; 1977 ಮತ್ತು 1980 ರಲ್ಲಿ ವಿಧಾನಸಭೆಯಲ್ಲಿ ಸಿಪಿಐ(ಎಂ) ಗುಂಪಿನ ನಾಯಕರಾಗಿದ್ದರು. ಅವರು ಒಟ್ಟು 11 ವರ್ಷಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು (ಸಿಪಿಐ(ಎಂ) ತಮಿಳುನಾಡು ಘಟಕದ ಹಲವು ಪ್ರಮುಖ ಹುದ್ದೆಗಳನ್ನು ಹೊಂದಿದ್ದ ಅವರು, ಅವರು ಪಕ್ಷದ ಕಾರ್ಯದರ್ಶಿಯಾಗಿಯು ಕಾರ್ಯ ನಿರ್ವಹಿಸಿದ್ದಾರೆ. ವಿದ್ಯಾರ್ಥಿ ನಾಯಕರಾಗಿ ಬೆಳೆದ ಶಂಕರಯ್ಯ ಅವರು ತನ್ನ ಇಡೀ ಬದುಕನ್ನು ದುಡಿಯುವ ವರ್ಗಕ್ಕಾಗಿ ಮೀಸಲಿಟ್ಟಿದ್ದರು.

ಇದನ್ನೂ ಓದಿ: ಬಿ ವೈ ವಿಜಯೇಂದ್ರ ಅಧಿಕಾರ ಸ್ವೀಕಾರ ಸಮಾರಂಭ| ಕಮಲ ಪಾಳಯದಲ್ಲಿ ಸಂಭ್ರಮ, ಹಲವು ನಾಯಕರಿಗೆ ಆಹ್ವಾನ

2021 ರಲ್ಲಿ 100 ವರ್ಷ ತುಂಬಿದಾಗ ಶಂಕರಯ್ಯ ಅವರಿಗೆ ತಮಿಳುನಾಡಿನ ಅತ್ಯುನ್ನತ ಪ್ರಶಸ್ತಿಯಾದ ‘ತಗೈಸಲ್ ತಮಿಳ್’ ಪ್ರಶಸ್ತಿಯನ್ನು ನೀಡಲಾಯಿತು. ಪ್ರಶಸ್ತಿಯು ಸ್ಮರಣಿಕೆ ಮತ್ತು 10 ಲಕ್ಷ ರೂಪಾಯಿಗಳನ್ನು ಒಳಗೊಂಡಿತ್ತು, ಇದನ್ನು ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ದೇಣಿಗೆ ನೀಡಿದ್ದರು. ಈ ವರ್ಷದ ಜುಲೈನಲ್ಲಿ ಮಧುರೈ ಕಾಮರಾಜ್ ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್ ನೀಡಲು ಮುಂದಾಯಿತು. ಆದರೆ ತಮಿಳುನಾಡಿನ ರಾಜ್ಯಪಾಲರು ಅದಕ್ಕೆ ಸಹಿ ಹಾಕಲು ನಿರಾಕರಿಸಿದ್ದರು. ಅದನ್ನು ಪ್ರತಿಭಟಿಸಿ ಅಲ್ಲಿಯ ಉನ್ನತ ಶಿಕ್ಷಣ ಸಚಿವ ಕೆ ಪೊನ್ಮುಡಿ ಆ ವಿಶ್ವವಿದ್ಯಾಲಯದ ಪದವೀದಾನ ಸಮಾರಂಭವನ್ನು ಬಹಿಷ್ಕರಿಸಿದ್ದರು.

ಮೃತರ ಪಾರ್ಥಿವ ಶರೀರವನ್ನು ಕ್ರೋಮ್‌ಪೇಟೆಯಲ್ಲಿರುವ ಅವರ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕಾಗಿ ಇಡಲಾಗಿದ್ದು, ಮಧ್ಯಾಹ್ನ 2 ಗಂಟೆಯಿಂದ ತ್ಯಾಗರಾಯನಗರದ ವೈತಿಯರಾಮನ್ ಸ್ಟ್ರೀಟ್‌ನಲ್ಲಿರುವ ಸಿಪಿಐ(ಎಂ) ರಾಜ್ಯ ಸಮಿತಿ ಕಚೇರಿಯಲ್ಲಿ ಇರಿಸಲಾಗುತ್ತದೆ ಎಂದು ಸಿಪಿಐ(ಎಂ) ತಮಿಳುನಾಡು ಸಮಿತಿ ಹೇಳಿದೆ.

ನವೆಂಬರ್ 16ರಂದು ಬೆಳಗ್ಗೆ 10 ಗಂಟೆಗೆ ಅಂತಿಮ ಕಾರ್ಯಕ್ರಮ ನಡೆಯಲಿದ್ದು, ಸಿಪಿಐ(ಎಂ)ನ ಅಖಿಲ ಭಾರತ ನಾಯಕರು ಭಾಗವಹಿಸಲಿದ್ದಾರೆ. ಪಕ್ಷದ ಎಲ್ಲಾ ಶಾಖೆಗಳಿಗೆ ಧ್ವಜಗಳನ್ನು ಅರ್ಧಕ್ಕೆ ಹಾರಿಸಲು ಮತ್ತು ಕಾರ್ಯಕ್ರಮಗಳನ್ನು ರದ್ದುಗೊಳಿಸುವ ಮೂಲಕ ಒಂದು ವಾರ ಶೋಕಾಚರಣೆಯನ್ನು ಆಚರಿಸಲು ಸೂಚಿಸಲಾಗಿದೆ.

ಇದನ್ನೂ ಓದಿ: ಉಡುಪಿ|ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ: ಆರೋಪಿ ಪ್ರವೀಣ್​​​​ ಅರುಣ್​​​ ಚೌಗಲೆ ಬಂಧನ

ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಎನ್. ಶಂಕರಯ್ಯ ಅವರ ಅಂತಿಮ ದರ್ಶನ ಪಡೆದು ಶ್ರದ್ದಾಂಜಲಿ ಸಲ್ಲಿಸಿದ್ದಾರೆ. ಈ ವೇಳೆ ಸಿಪಿಐ(ಎಂ) ತಮಿಳುನಾಡು ರಾಜ್ಯ ಕಾರ್ಯದರ್ಶಿ ಕೆ.ಬಾಲಕೃಷ್ಣನ್ ಅವರು ಇದ್ದರು. “ತಮಿಳುನಾಡಿಗೆ ಎನ್. ಶಂಕರಯ್ಯ ಅವರ ಕೊಡುಗೆಯನ್ನು ಗುರುತಿಸಿ, ಸರ್ಕಾರಿ ಗೌರವಗಳೊಂದಿಗೆ ಅವರನ್ನು ಬೀಳ್ಕೊಡುತ್ತೇವೆ” ಎಂದು ಸಿಎಂ ಸ್ಟಾಲಿನ್ ಹೇಳಿದ್ದಾರೆ.

ಪಕ್ಷದ ಸಂಸ್ಥಾಪಕ ಸದಸ್ಯ ಎನ್. ಶಂಕರಯ್ಯ ಅವರಿಗೆ ಸಿಪಿಐ(ಎಂ) ಶ್ರದ್ದಾಂಜಲಿ ಸಲ್ಲಿಸಿದ್ದು, “ನಮ್ಮ ಪ್ರೀತಿಯ ಒಡನಾಡಿ ಶಂಕರಯ್ಯ ಇಂದು ಬೆಳಿಗ್ಗೆ ನಿಧನರಾದರು. ಹಿರಿಯ ನಾಯಕ, ಸ್ವಾತಂತ್ರ್ಯ ಹೋರಾಟಗಾರ ಮತ್ತು ಸಿಪಿಐ(ಎಂ) ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ಕಾಮ್ರೇಡ್ ಶಂಕರಯ್ಯ 102 ನೇ ವಯಸ್ಸಿನಲ್ಲಿ ನಿಧನರಾದರು. ನಾವು ತೀವ್ರ ದುಃಖವನ್ನು ಅನುಭವಿಸುತ್ತಿದ್ದೇವೆ. ಕಾಮ್ರೇಡ್ ಎನ್.ಶಂಕರಯ್ಯ ಅಮರ್ ರಹೇ!” ಎಂದು ಟ್ವಿಟರ್‌ನಲ್ಲಿ ಹೇಳಿದೆ.

ವಿಡಿಯೊ ನೋಡಿ: ದೀಪಾವಳಿ ಹಬ್ಬದ ವಿಶೇಷ ಕವಿತೆ : ನನ್ನ ಹಣತೆ – ಡಾ. ಜಿ.ಎಸ್.‌ ಶಿವರುದ್ರಪ್ಪ Janashakthi Media

Donate Janashakthi Media

Leave a Reply

Your email address will not be published. Required fields are marked *