ಕಣಿವೆಯ ಹಾಡು – ಒಂದು ಹೃದಯಸ್ಪರ್ಶಿ ಪ್ರಯೋಗ

ನಾ ದಿವಾಕರ

ಮನುಜ ಸಂಬಂಧಗಳು ಎಷ್ಟೇ ದೂರವಾದರೂ, ಸಂಪರ್ಕಗಳು ವಿಚ್ಚೇದನ ಎದುರಿಸಿದರೂ  ಭೂಮಿ ಮನುಷ್ಯನಿಗೆ ಸಾಂತ್ವನ ನೀಡುತ್ತದೆ. ಈ ಸಾಂತ್ವನ ಶಾಶ್ವತವಾಗಿರುತ್ತದೆ. ಭೂಮಿಯೊಡಗಿನ ಮನುಜ ಸಂಬಂಧ ಚಿರಕಾಲ ಉಳಿಯುತ್ತದೆ ಎಂಬ ಸಂದೇಶವನ್ನು ನೀಡುತ್ತಲೇ ನಾಟಕಕಾರ ಫ್ಯೂಗಾರ್ಡ್‌  ಹೊಸ ಬದುಕಿನ ರೆಕ್ಕೆಗಳನ್ನು ಬಿಚ್ಚಿ ಸ್ವತಂತ್ರವಾಗಿ ಹಾರಾಡಬಯಸುವ ಯುವ ಮನಸುಗಳನ್ನು ಅದೇ ಭೂಮಿಕೆ ಕಟ್ಟಿಹಾಕಲೂ ಆಗುವುದಿಲ್ಲ, ಆ ಯುವ ಹೃದಯ ಕಟ್ಟಿಕೊಳ್ಳುವ ಕನಸುಗಳನ್ನು ಭಂಗಗೊಳಿಸಲೂ ಆಗುವುದಿಲ್ಲ ಎಂಬ ಆಧುನಿಕ ಬದುಕಿನ ಸಂದೇಶವನ್ನೂ ನೀಡುತ್ತಾನೆ. ಕಣಿವೆ

ಭಾವಾಭಿನಯದೊಂದಿಗೆ ನೃತ್ಯ-ಗಾಯನವನ್ನೂ ಉಣಬಡಿಸುವ ಒಂದು ಅಪೂರ್ವ ಪ್ರಯೋಗ 

ಯಾವುದೇ ಸಮಾಜ ಮತ್ತು ಅದರೊಳಗಿನ ಮನುಷ್ಯ ಲೋಕ ದಿನನಿತ್ಯ ಎದುರಿಸುವ ಸಿಕ್ಕು ಸವಾಲುಗಳನ್ನು ಸಮಕಾಲೀನ ವಾಸ್ತವಗಳೊಂದಿಗೆ ಸಮೀಕರಿಸುತ್ತಲೇ ಗತ ಚರಿತ್ರೆಯ ಹೆಜ್ಜೆಗೊಳೊಡನೆ ಗುರುತಿಸುವಂತೆ ಮಾಡುವಲ್ಲಿ ಹಾಗೂ  ಭವಿಷ್ಯದ ಹಾದಿಗಳ ಕಾಣ್ಕೆಯನ್ನು, ವಿಶಾಲ ಸಮಾಜದ ಮುಂದಿರಿಸಲು ಇರುವ ಹಲವಾರು ಅಭಿವ್ಯಕ್ತಿ ಮಾಧ್ಯಮಗಳ ಪೈಕಿ ರಂಗಭೂಮಿ ಅಗ್ರಶ್ರೇಣಿಯಲ್ಲಿ ನಿಲ್ಲುತ್ತದೆ. ಸಾಮಾನ್ಯ ಜನರನ್ನು ಎಲ್ಲ ಸ್ತರಗಳಲ್ಲೂ ತಲುಪುವ ಒಂದು ದೃಶ್ಯ ಸಂವಹನ ಸಾಧನವಾಗಿ ರಂಗಭೂಮಿ ತನ್ನ ಹಲವು ಆಯಾಮಗಳಲ್ಲಿ ಸಮಾಜದ ಒಂದು ಅಭಿವ್ಯಕ್ತಿ ಮಾಧ್ಯಮವಾಗಿ ರೂಪುಗೊಳ್ಳುತ್ತಾ ಬಂದಿದೆ. ರಂಗ ನಿರೂಪಕರಿಗೆ ಹಾಗೂ ನಿರ್ದೇಶಕರಿಗೆ ಇರುವ ಬೌದ್ಧಿಕ ಸ್ವಾಯತ್ತತೆಯ ಹಾಗೂ ತಾತ್ವಿಕ ಸ್ವಾತಂತ್ರ್ಯವು ಯಾವುದೇ ಪಠ್ಯವನ್ನು ವರ್ತಮಾನದ ಸಮಾಜಕ್ಕೆ ಅರ್ಥವಾಗುವಂತೆ ತಲುಪಿಸುವ ಸಾಧ್ಯತೆಗಳನ್ನು ತೆರೆದಿಡುತ್ತದೆ.

ಈ ಸಾಧ್ಯತೆಗಳನ್ನು ಬಳಸಿಕೊಂಡು ಸಾಕಾರಗೊಳಿಸುವ ಬದ್ಧತೆ, ಮುಂಗಾಣ್ಕೆ ಮತ್ತು ಸಾಮಾಜಿಕ ಕಳಕಳಿ ರಂಗಕರ್ಮಿಗಳಿಗೆ ಇದ್ದೆಡೆ ಅತ್ಯುತ್ತಮ ನಾಟಕಗಳು ಹೊರಬರುತ್ತಲೇ ಇರುತ್ತವೆ. ರಂಗನಿರೂಪಕರ, ನಿರ್ದೇಶಕರ ಹಾಗೂ ರಂಗತಂಡಗಳ ಸಾಂಸ್ಕೃತಿಕ ಸೂಕ್ಷ್ಮತೆ ಮತ್ತು ಮನುಜ ಸಂವೇದನೆಗಳು ಸಮಕಾಲೀನ ಸಮಾಜದೊಳಗಿನ ಅಪಸವ್ಯಗಳನ್ನು ಗುರುತಿಸುತ್ತಲೇ, ದೇಶಭಾಷೆಗಳ ಗಡಿಗಳನ್ನೂ ದಾಟಿ ಜನಸಂವೇದನೆಯ ಸಾಹಿತ್ಯವನ್ನು ಆಯ್ಕೆ ಮಾಡಿಕೊಳ್ಳುತ್ತಾ ಹೊಸ ರಂಗಪ್ರಯೋಗಗಳಿಗೆ ತೆರೆದುಕೊಳ್ಳಲು ನೆರವಾಗುತ್ತವೆ. ಕನ್ನಡ ರಂಗಭೂಮಿ ಅಂತಹ ನೂರಾರು ನಾಟಕಗಳಿಗೆ ಸಾಕ್ಷಿಯಾಗಿದೆ. ವಿಶೇಷವಾಗಿ ಸಾಂಸ್ಕೃತಿಕ ನಗರಿ ಮೈಸೂರು ರಂಗಭೂಮಿಯನ್ನು ಮತ್ತಷ್ಟು ಶ್ರೀಮಂತಗೊಳಿಸುತ್ತಾ ಬಂದಿದೆ. ಈ ಶ್ರೀಮಂತಿಕೆಯ ಹಾದಿಯಲ್ಲೇ ಮತ್ತೊಂದು ಅಪೂರ್ವ ಪ್ರಯತ್ನವನ್ನು ಮೈಸೂರಿನ ಮಂಡ್ಯ ರಮೇಶ್‌ ಅವರ ನಟನ ಪಯಣ ರೆಪರ್ಟರಿ ತಂಡ “ ಕಣಿವೆಯ ಹಾಡು ” ನಾಟಕದ ಮೂಲಕ ಮಾಡಿದೆ.

ಮೂಲ ನಾಟಕದ ಕಥಾವಸ್ತು

ದಕ್ಷಿಣ ಆಫ್ರಿಕಾದ ಪ್ರಸಿದ್ಧ ನಾಟಕಕಾರ ಅತೊಲ್ ಫ್ಯೂಗಾರ್ಡ್‌ ಅವರ “ ದ ವ್ಯಾಲಿ ಸಾಂಗ್‌ ” ಎಂಬ ಅಪೂರ್ವ ಕೃತಿಯನ್ನು ಡಾ. ಮೀರಾ ಮೂರ್ತಿ ಅವರು “ಕಣಿವೆಯ ಹಾಡು” ಎಂದು ಕನ್ನಡೀಕರಿಸಿದ್ದಾರೆ. ಸಮಕಾಲೀನ ಜನಜೀವನದಲ್ಲಿ ಸಾಮಾನ್ಯವಾಗಿ ಕಾಣಬಹುದಾದ ಎರಡು ತಲೆಮಾರುಗಳ ನಡುವಿನ ಆಲೋಚನಾ ವಿಧಾನದ ಅಂತರ ಹಾಗೂ ಅಲ್ಲಿ ಸಂಭವಿಸುವ ತಿಕ್ಕಾಟಗಳನ್ನು ಕಟ್ಟಿಕೊಡುವ “ಕಣಿವೆಯ ಹಾಡು” ಇಂದಿಗೂ ಜಗತ್ತು ಎದುರಿಸುತ್ತಿರುವ ನಗರೀಕರಣ ಮತ್ತು ಗ್ರಾಮೀಣ ಬದುಕಿನ ಮೇಲೆ ಅದರ ಪರಿಣಾಮವನ್ನು ಕೇವಲ ಮೂರು  ಪಾತ್ರಗಳ ಮೂಲಕ ಕಟ್ಟಿಕೊಡುತ್ತದೆ. ನಾಟಕಕಾರನೇ ಒಂದು ಪಾತ್ರವಾಗುವ ಮೂಲಕ, ಇನ್ನೆರಡು ಪಾತ್ರಗಳನ್ನು ಸೃಷ್ಟಿಸುವ ಈ ಕಥಾ ಹಂದರದ ವ್ಯಾಪ್ತಿ ಚಿಕ್ಕದಾಗಿ ಕಂಡರೂ, ಈ ಪಾತ್ರಗಳ ಮೂಲಕ ಫ್ಯುಗಾರ್ಡ್‌ ನೀಡುವ ಸಂದೇಶ ದೇಶಭಾಷೆಗಳ ಗಡಿಯನ್ನು ದಾಟಿ ವಿಶ್ವವ್ಯಾಪಿಯಾಗಿ ಕಂಡುಬರುತ್ತದೆ. ಹಿರಿಯ-ಕಿರಿಯ ತಲೆಮಾರಿನ ನಡುವೆ ಏರ್ಪಡುವ ತಾತ್ವಿಕ ಸಂಘರ್ಷ ಹಾಗೂ ಬದುಕಿನ ಸಂಕೀರ್ಣತೆಯ ವಿಭಿನ್ನ ಆಯಾಮಗಳನ್ನು ಹಿಡಿದಿಡುವ “ ಕಣಿವೆಯ ಹಾಡು ” ಭಾರತ ಇಂದಿಗೂ ಎದುರಿಸುತ್ತಿರುವ ಗ್ರಾಮ-ನಗರ ಸಂಘರ್ಷದ ಒಂದು ಎಳೆಯನ್ನೂ ಸಹ ಬಿಚ್ಚಿಡುತ್ತದೆ.

ಗ್ರಾಮೀಣ ಬದುಕಿನಲ್ಲಿ ಭೂಮಿಯನ್ನೇ ಅವಲಂಬಿಸಿ ಬದುಕುವ ಮನುಷ್ಯ ತನ್ನ ಎಲ್ಲ ಕನಸುಗಳನ್ನೂ  ನಿಶ್ಚಿತ ನಾಲ್ಕು ಗೋಡೆಗಳ ನಡುವೆಯೇ ಕಟ್ಟಿಕೊಂಡು ಬದುಕುವುದನ್ನು “ಕಣಿವೆಯ ಹಾಡು” ಅಬ್ರಾಮ್‌ ಜೋಂಕರ್ಸ್‌ ಎಂಬ ರೈತನ ಮೂಲಕ ಬಿಂಬಿಸುತ್ತದೆ. ಬೆಟ್ಟಗಳ ನಡುವಿನ ಒಂದು ಕಣಿವೆಯಲ್ಲಿ ತನ್ನ ಹರೆಯದ ಮೊಮ್ಮಗಳು, ವೆರೋನಿಕಾಳೊಡನೆ ಜೀವನ ಸಾಗಿಸುವ ಜೋಂಕರ್ಸ್‌ ತನ್ನ ವಂಶದ ಕುಡಿಯ ಭವಿಷ್ಯವನ್ನೂ ಆ ಕಣಿವೆಯ ನಿಸರ್ಗದತ್ತ ಸೌಂದರ್ಯದ ನಡುವೆಯೇ, ತಾನು ನಂಬಿ ಬದುಕುವ ಭೂಮಿಯಲ್ಲೇ ಕಾಣಲೆತ್ನಿಸುತ್ತಾನೆ. ಎರಡನೆ ಮಹಾಯುದ್ಧದಲ್ಲಿ ಬ್ರಿಟೀಷ್‌ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತನಾಗಿರುವ ಜೋಂಕರ್ಸ್‌, ಮಾಲೀಕರಿಲ್ಲದ ಸಣ್ಣ ಜಮೀನಿನಲ್ಲಿ, ಒಬ್ಬ ಗೇಣಿ ರೈತನಾಗಿ ದುಡಿದು, ತಂದೆ-ತಾಯಿಯನ್ನು ಕಳೆದುಕೊಂಡಿರುವ ವೆರೋನಿಕಾಳನ್ನು ಸಲಹುತ್ತಿರುತ್ತಾನೆ.

 ಒಂದು ಬೀಜವನ್ನು ಬಿತ್ತಿದರೆ ಯಥೇಚ್ಚವಾಗಿ ಫಸಲು ಕೊಡುವ ಕುಂಬಳವನ್ನು ಬದುಕಿನ ಸಮೃದ್ಧಿ ಹಾಗೂ ಜೀವನದ ಸಾರ್ಥಕತೆಯ ರೂಪಕವಾಗಿ ಬಳಸಿಕೊಳ್ಳುವ ಕತೆಯಲ್ಲಿ ಜೋಂಕರ್ಸ್‌ ಸೈನಿಕನಾಗಿ ಹೆಮ್ಮೆ ಪಡುವಷ್ಟೇ ಒಬ್ಬ ರೈತನಾಗಿಯೂ ಅಭಿಮಾನ ಹೊಂದಿರುತ್ತಾನೆ. ತನ್ನ ಉಳುಮೆ ಮತ್ತು ಕಾಯಕವೇ ಜೀವನ ಸಾಕ್ಷಾತ್ಕಾರದ ಹಾದಿಯನ್ನಾಗಿ ಕಾಣುವ ಜೋಂಕರ್ಸ್‌ಗೆ ಭೂಮಿ ಕೇವಲ ಅನ್ನ ನೀಡುವ ಸ್ಥಾವರವಾಗಿರದೆ, ಬದುಕು ಕಟ್ಟಿಕೊಳ್ಳುವ ಲೌಕಿಕ ನೆಲೆಯೂ ಆಗಿರುತ್ತದೆ. ಬಿಳಿಯನೊಬ್ಬ ತನ್ನ ಭೂಮಿಯನ್ನು ಎಲ್ಲಿ ಖರೀದಿಸಿ ತನ್ನದಾಗಿಸಿಕೊಳ್ಳುತ್ತಾನೋ ಎಂಬ ಭೀತಿಯಲ್ಲೇ ದಿನ ಕಳೆಯುವ ಜೋಂಕರ್ಸ್‌ಗೆ ಎಳೆಯ ವೆರೋನಿಕಾ ಧೈರ್ಯ ತುಂಬುತ್ತಾಳೆ. ತನ್ನ ಒಡೆತನವಿಲ್ಲದ ಭೂಮಿ ತನ್ನದಲ್ಲವೆಂಬ ಅರಿವು ಜೋಂಕರ್ಸ್‌ಗೆ ಇದ್ದರೂ ಅದನ್ನು ಬಿಟ್ಟು ಬದುಕುವ ಇಚ್ಚೆಯೂ ಇರುವುದಿಲ್ಲ. ಬದಲಾಗುತ್ತಿರುವ ಜಾಗತಿಕ ಆರ್ಥಿಕತೆಯಲ್ಲಿ ರೈತಾಪಿಯು ಎದುರಿಸುವ, ಭೂಮಿ ಕಳೆದುಕೊಳ್ಳುವ ಸಹಜ ಅತಂಕಗಳನ್ನು, “ಕಣಿವೆಯ ಹಾಡು” ಸೂಕ್ಷ್ಮವಾಗಿ ಬಿಂಬಿಸುತ್ತದೆ.

ಏತನ್ಮಧ್ಯೆ ಹರೆಯದ ಮೊಮ್ಮಗಳು ವೆರೋನಿಕಾ ವಯಸ್ಕಳಾಗುತ್ತಿದ್ದಂತೆ ಜೋಂಕರ್ಸ್‌ಗೆ ಮತ್ತೊಂದು ಆತಂಕವೂ ಕಾಡತೊಡಗುತ್ತದೆ. ವೆರೋನಿಕಾ ಉತ್ತಮ ಹಾಡುಗಾರ್ತಿಯಾಗಿರುತ್ತಾಳೆ. ಅವಳಿಗೆ ತನ್ನ ಪ್ರತಿಭೆಯನ್ನು ಪ್ರಪಂಚದ ಮುಂದೆ ಸಾದರಪಡಿಸುವ ಹಂಬಲ, ಆಕಾಂಕ್ಷೆ ಸಹಜವಾಗಿಯೇ ಮೂಡುತ್ತದೆ. ಮುಕ್ತ ಅವಕಾಶಗಳೇ ಇಲ್ಲದ ಕಣಿವೆಯ ಗ್ರಾಮಗಳಿಂದ ನಗರಕ್ಕೆ ಹಾರಿ ಅಲ್ಲಿ ಪ್ರಸಿದ್ಧ ಗಾಯಕಿಯಾಗಿ ಜನಪ್ರಿಯತೆ ಪಡೆಯುವ ವೆರೋನಿಕಾಳ ಮಹತ್ವಾಕಾಂಕ್ಷೆ ಜೋಂಕರ್ಸ್‌ಗೆ ಆಘಾತಕಾರಿಯಾಗಿ ಕಾಣುತ್ತದೆ. ಇದಕ್ಕೆ ಕಾರಣ ವೆರೋನಿಕಾಳ ತಾಯಿ ಕೆರೋಲಿನಾ ಇದೇ ರೀತಿ ನಗರದ ಕನಸಿನ ಬೆನ್ನಟ್ಟುತ್ತಾ ಪ್ರಿಯಕರನೊಂದಿಗೆ ಓಡಿಹೋಗಿ ಕೊನೆಗೆ ಮಗುವನ್ನೂ  ತನ್ನ ತಾಯಿಯ ಕೈಯ್ಯಲ್ಲಿಟ್ಟು ಹೋಗಿರುತ್ತಾಳೆ. ರೈಲು ಬಂಡಿಯ ಬಗ್ಗೆ ವೆರೋನಿಕಾ ಹಾಡುವ ಒಂದು ಗೀತೆಯೇ ಜೋಂಕರ್ಸ್‌ನನ್ನು ವಿಚಲಿತಗೊಳಿಸಿಬಿಡುತ್ತದೆ. ಆ ರೈಲು ಇದ್ದುದರಿಂದಲೇ ನಿನ್ನ ಅಮ್ಮ ಎಲ್ಲರನ್ನೂ ಅಗಲಿ ಓಡಿಹೋಗಿದ್ದಳು ಎಂದು ವೆರೋನಿಕಾಳಿಗೆ ಹೇಳುವ ಮೂಲಕ ಜೋಂಕರ್ಸ್‌ ತನ್ನ ಒಡಲ ತಳಮಳವನ್ನು ವ್ಯಕ್ತಪಡಿಸುತ್ತಾನೆ.

ವೆರೋನಿಕಾಳ ನಗರದ ಕನಸು ಜೋಂಕರ್ಸ್‌ಗೆ ಮತ್ತೊಂದು ಅಗಲಿಕೆಯ ನೋವನ್ನು ತಂದೊಡ್ಡುತ್ತದೆ. ತನ್ನ ಮಗಳ ಹಾಗೇ ಮೊಮ್ಮಗಳೂ ನಗರದ ಕನಸು ಹೊತ್ತು ತನ್ನಿಂದ ದೂರವಾಗುತ್ತಾಳೆ ಎಂಬ ಮನದಾಳದ ನೋವನ್ನು ಅಗಲಿದ ಪತ್ನಿಯೊಡನೆ ಭಾವನಾತ್ಮಕವಾಗಿ ತೋಡಿಕೊಳ್ಳುತ್ತಾನೆ. ಆದರೆ ಆಧುನಿಕತೆಯತ್ತ ಹೊರಳಲು ಉತ್ಸುಕವಾಗಿರುವ ವೆರೋನಿಕಾ ನೆರೆಮನೆಯಾಕೆಯೊಬ್ಬಳು ಸದಾ ನೋಡುವ ಟಿವಿಯಲ್ಲಿ ಬರುವ ಸಂಗೀತವನ್ನು ಕಿಟಕಿಯಿಂದಾಚೆ ನಿಂತು ನೋಡುವ ಮೂಲಕ ತನ್ನ ಕನಸಿಗೆ ಗರಿ ಮೂಡಿಸಿಕೊಳ್ಳುತ್ತಾಳೆ. ತಾನು ಸಾವಿರಾರು ಜನರ ಚಪ್ಪಾಳೆ ಗಿಟ್ಟಿಸುವ ಗಾಯಕಿಯಾಗುವ ಭ್ರಮೆಯಲ್ಲಿ ತೇಲುತ್ತಾಳೆ. ಮತ್ತೋರ್ವ ಪಾತ್ರಧಾರಿಯಾಗಿಯೇ ಬರುವ ನಾಟಕಕಾರ ವೆರೋನಿಕಾಳಿಗೆ ನೆರೆಮನೆಯಾಕೆ ಕಾಲವಾದ ವಿಚಾರ ತಿಳಿಸುವುದೇ ಅಲ್ಲದೆ, ಕನಸು ಕಾಣುವುದನ್ನು ಬಿಡುವಂತೆ ವಿನಂತಿಸುತ್ತಾನೆ. ಆದರೂ ತಾನು ಹಾಡುವುದು, ಬಿಳಿಯರು ಹಣ ನೀಡುವುದು ಹೀಗೆ ಕನಸುತ್ತಲೇ ಮುಂದುವರೆಯುವ ವೆರೋನಿಕಾ ಅಜ್ಜನೊಡನೆ ನಿಷ್ಠುರವಾಗಿ ಮಾತನಾಡಿ ತಾನು ನಗರಕ್ಕೆ ಹೋಗಿಯೇ ತೀರುವುದಾಗಿ ಹಟ ಹಿಡಿಯುತ್ತಾಳೆ.

ಇದನ್ನೂ ಓದಿ: ಕತ್ತಲಲ್ಲಿರುವ ಸಮಾಜದ ಕಣ್ತೆರೆಸುವ “ಅಂಧಯುಗ”

ತನ್ನೆಲ್ಲವನ್ನೂ ತ್ಯಾಗ ಮಾಡಿ ವೆರೋನಿಕಾಳನ್ನು ಬೆಳಸಿರುವ ಜೋಂಕರ್ಸ್‌ ಒಂದು ವೇಳೆ ಬಿಳಿಯನಿಗೆ ಭೂಮಿ ಕಳೆದುಕೊಂಡರೂ ಅವನ ಹೊಲದಲ್ಲೇ ತಾನೂ ಗೈಯ್ಯುವ, ವೆರೋನಿಕಾ ಅವನ ಮನೆಯಲ್ಲೇ ಕೆಲಸ ಮಾಡುವ ಕನಸು ಕಾಣುತ್ತಾನೆ. ಆದರೆ ವೆರೋನಿಕಾ ನಗರಕ್ಕೆ ಹೋಗಿಯೇ ತೀರುವುದಾಗಿ ಹಟ ಮಾಡುತ್ತಾಳೆ. ಕುಂಬಳಕಾಯಿಯ ಬೀಜ ಮೊಳೆತು ಅರಳಿ ಕಾಯಾಗಿ ತನ್ನ ಕೊನೆಯ ಸ್ವರೂಪ ಪಡೆಯುವುದು ಹೇಗೆ ನಿಸರ್ಗ ನಿಯಮವೋ ಹಾಗೆಯೇ ತನ್ನ ಬದುಕೂ ಸಹ ಮೊಳೆತು, ಹಣ್ಣಾಗಿ ಅಂತ್ಯ ತಲುಪುವುದು ಪ್ರಕೃತಿ ನಿಯಮವೇ ಎಂದು ಹೇಳುವ ಮೂಲಕ, ಅಜ್ಜನ ನಂಬಿಕೆಯನ್ನೇ ತನಗೂ ಅನ್ವಯಿಸಿಕೊಳ್ಳುವ ವೆರೋನಿಕಾ ಕೊನೆಗೂ ಅಜ್ಜನಿಗೆ ವಿದಾಯ ಹೇಳುತ್ತಾ ತನ್ನ ಕನಸಿನ ಬೆನ್ನಟ್ಟಿ ನಗರಕ್ಕೆ ಹೊರಡುತ್ತಾಳೆ. ತೀವ್ರ ದುಃಖದಿಂದ ಮೊಮ್ಮಗಳ ಅಗಲಿಕೆಯನ್ನು ಸಹಿಸಿಕೊಳ್ಳುವ ಜೋಂಕರ್ಸ್‌ ತನ್ನ ಸ್ವಾರ್ಥಕ್ಕಾಗಿ ಮೊಮ್ಮಗಳ ನಗರದ ಕನಸನ್ನು ಭಂಗಗೊಳಿಸದಿರಲು ನಿರ್ಧರಿಸಿ ಬೀಳ್ಕೊಡುತ್ತಾನೆ. ಪುನಃ ತನ್ನ ಕೃಷಿಯತ್ತ ಹೊರಳಿ ಭೂಮಿಯೊಡನೆ ಬದುಕು ಸಾಗಿಸುತ್ತಾನೆ.

ಮನುಜ ಸಂಬಂಧಗಳು ಎಷ್ಟೇ ದೂರವಾದರೂ, ಸಂಪರ್ಕಗಳು ವಿಚ್ಚೇದನ ಎದುರಿಸಿದರೂ  ಭೂಮಿ ಮನುಷ್ಯನಿಗೆ ಸಾಂತ್ವನ ನೀಡುತ್ತದೆ. ಈ ಸಾಂತ್ವನ ಶಾಶ್ವತವಾಗಿರುತ್ತದೆ. ಭೂಮಿಯೊಡಗಿನ ಮನುಜ ಸಂಬಂಧ ಚಿರಕಾಲ ಉಳಿಯುತ್ತದೆ ಎಂಬ ಸಂದೇಶವನ್ನು ನೀಡುತ್ತಲೇ ನಾಟಕಕಾರ ಫ್ಯೂಗಾರ್ಡ್‌  ಹೊಸ ಬದುಕಿನ ರೆಕ್ಕೆಗಳನ್ನು ಬಿಚ್ಚಿ ಸ್ವತಂತ್ರವಾಗಿ ಹಾರಾಡಬಯಸುವ ಯುವ ಮನಸುಗಳನ್ನು ಅದೇ ಭೂಮಿಕೆ ಕಟ್ಟಿಹಾಕಲೂ ಆಗುವುದಿಲ್ಲ, ಆ ಯುವ ಹೃದಯ ಕಟ್ಟಿಕೊಳ್ಳುವ ಕನಸುಗಳನ್ನು ಭಂಗಗೊಳಿಸಲೂ ಆಗುವುದಿಲ್ಲ ಎಂಬ ಆಧುನಿಕ ಬದುಕಿನ ಸಂದೇಶವನ್ನೂ ನೀಡುತ್ತಾನೆ. ಎರಡು ತಲೆಮಾರುಗಳನ್ನು ಭೌತಿಕವಾಗಿ ದೂರ ಇರಿಸುವ ಆಧುನಿಕ ಜಗತ್ತಿನ ಬದುಕು ಮನುಜ ಸಂಬಂಧಗಳನ್ನು ಎಂದಿಗೂ ಭಗ್ನಗೊಳಿಸುವುದಿಲ್ಲ, ಭಗ್ನಗೊಳಿಸಕೂಡದು ಎಂಬ ಸಂದೇಶವನ್ನೂ “ ಕಣಿವೆಯ ಹಾಡು ” ನೀಡುತ್ತದೆ.

ನೃತ್-ಗಾಯನ-ಭಾವಾಭಿನಯದ ಹೂರಣ

ಮೂರು ಪಾತ್ರಗಳಿಂದ ಕೂಡಿದ ಕಥಾಹಂದರವನ್ನು ಇಬ್ಬರು ನಟರ ಮೂಲಕ ಸಾದರ ಪಡಿಸುವ ಮೂಲ ನಾಟಕದ ಸವಾಲನ್ನು ಸಮರ್ಪಕವಾಗಿ ನಿಭಾಯಿಸಿರುವ ನಿರ್ದೇಶಕ ಡಾ. ಶ್ರೀಪಾದ್‌ ಭಟ್‌ ಇಬ್ಬರು ಕಲಾವಿದರೊಳಗಿನ ಕಲಾ ಪ್ರತಿಭೆಯನ್ನು ಸಂಪೂರ್ಣವಾಗಿ ಬೆಳಕಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಜೋಂಕರ್ಸ್‌ ಪಾತ್ರದಲ್ಲಿ ವೃದ್ಧನಾಗಿ, ಮತ್ತೊಂದು ಪಾತ್ರದಲ್ಲಿ ವಯಸ್ಕನಾಗಿ ಮೇಘ ಸಮೀರ್‌ ಅವರ ನಟನೆ ನಿಜಕ್ಕೂ ಮನಮುಟ್ಟುವಂತಿದೆ. ದೇಹಭಾಷೆಯೊಂದಿಗೆ ಆಂಗಿಕ ಅಭಿನಯ, ಭಾವಾಭಿವ್ಯಕ್ತಿ ಹಾಗೂ ತನ್ನ ಮೃತಪತ್ನಿಯೊಡನೆ ಸಂಭಾಷಿಸುವಾಗಿನ ಸ್ವಗತದ ಸನ್ನಿವೇಶಗಳಲ್ಲಿ ಸಮೀರ್‌ ತಮ್ಮ ಕಲಾ ಪ್ರತಿಭೆಗೆ ಮೆರುಗು ನೀಡುತ್ತಾರೆ. ಮೊಮ್ಮಗಳೊಡಗಿನ ಹುಡುಗಾಟಗಳಲ್ಲಿ, ತಮಾಷೆಯ ಪ್ರಸಂಗಗಳಲ್ಲಿ ತೋರುವ ತನ್ಮಯತೆಯನ್ನೇ ಸಮೀರ್‌, ಜೋಂಕರ್ಸ್‌ ವೆರೋನಿಕಾಳ ನಿರ್ಧಾರದಿಂದ ಆಕ್ರೋಶ ವ್ಯಕ್ತಪಡಿಸುವ ಪ್ರಸಂಗಗಳಲ್ಲೂ ತೋರುವ ಮೂಲಕ ತಮ್ಮ ಕಲಾಪ್ರೌಢಿಮೆಯನ್ನು ಮೆರೆದಿದ್ದಾರೆ.

ಒಂದು ಕಥಾವಸ್ತು ಎಷ್ಟೇ ಗಂಭೀರವಾಗಿದ್ದರೂ, ಕಥಾ ಹಂದರ ತೆಳುವಾಗಿದ್ದಾಗ ಅದನ್ನು ಸಾದರಪಡಿಸುವ ಕಲಾವಿದರ ನಟನಾ ಪ್ರತಿಭೆ ಎಲ್ಲವನ್ನೂ ಆವರಿಸುವ ಮೂಲಕ ಹೊಸ ಹೊಳಹು ನೀಡುವುದನ್ನು ಅನೇಕ ನಾಟಕ/ಸಿನಿಮಾಗಳಲ್ಲಿ ಕಾಣಬಹುದು ( ಡಾ. ರಾಜ್‌ ಅವರ ಕಸ್ತೂರಿ ನಿವಾಸ ಒಂದು ಅತ್ಯುತ್ತಮ ನಿದರ್ಶನ). “ಕಣಿವೆಯ ಹಾಡು” ನಾಟಕವೂ ಸಹ ಬಹಳವೇ ಗಂಭೀರ ಕಥಾವಸ್ತುವಿನೊಂದಿಗೆ ರಂಗರೂಪ ಪಡೆದಿದ್ದರೂ, ಕತೆಯ ಹಂದರ ಮತ್ತು ವಿಸ್ತಾರ ತೆಳುವಾದದ್ದು. ಅದರೆ ಪರಿಣಾಮಕಾರಿಯೂ ಹೌದು. ಈ ಕತೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ವೆರೋನಿಕಾಳ ಪಾತ್ರ ವೈವಿಧ್ಯ ಮತ್ತು ಸಹಜ ಭಾವಾಭಿನಯದ ದೃಶ್ಯಗಳು ಪ್ರೇಕ್ಷಕರ ಮನಸೂರೆಗೊಳ್ಳುತ್ತದೆ. ಇಡೀ ನಾಟಕವನ್ನು ವೆರೋನಿಕಾ ( ದಿಶಾ ರಮೇಶ್)‌ ಆವರಿಸಿಕೊಳ್ಳುತ್ತಾಳೆ.

ವೆರೋನಿಕಾ ಹಾಡುತ್ತಾಳೆ, ಕುಣಿಯುತ್ತಾಳೆ, ಪಶ್ಚಿಮ ಸಂಗೀತಕ್ಕೆ ಹೆಜ್ಜೆ ಹಾಕುತ್ತಾಳೆ, ನರ್ತಿಸುತ್ತಾಳೆ ಹಾಗೆಯೇ ತನ್ನ ಗಾಯನ-ನೃತ್ಯದ ಮೂಲಕವೇ ತನ್ನೊಳಗೆ ಚಿಗುರುತ್ತಲೇ ಇರುವ ಭವಿಷ್ಯದ ಕನಸನ್ನು ಸಾಕಾರಗೊಳಿಸುವ ಮಹತ್ವಾಕಾಂಕ್ಷೆಯನ್ನು ವ್ಯಕ್ತಪಡಿಸುತ್ತಾಳೆ. ದಿಶಾ ರಮೇಶ್‌ ವೆರೋನಿಕಾ ಪಾತ್ರವನ್ನು ಮತ್ತಷ್ಟು ಶ್ರೀಮಂತಗೊಳಿಸುವ ರೀತಿಯಲ್ಲಿ ತಮ್ಮ ಗಾಯನ-ನೃತ್ಯ-ಸಂಭಾಷಣೆ ಹಾಗೂ ಅಭಿವ್ಯಕ್ತಿಗಳನ್ನು ಪ್ರೇಕ್ಷಕರ ಮುಂದಿರಿಸುತ್ತಾರೆ. ದಿಶಾ ರಮೇಶ್‌ ಅವರ ನೃತ್ಯ ಪ್ರತಿಭೆ ಮತ್ತು ಗಾನ ಪ್ರತಿಭೆ ಎರಡೂ ಸಹ “ ಕಣಿವೆಯ ಹಾಡು ” ನಾಟಕದಲ್ಲಿ ಹೃದಯಸ್ಪರ್ಶಿಯಾಗಿ ಮೂಡಿಬಂದಿದೆ. ಉಚ್ಛ ಸ್ಥಾಯಿಯಲ್ಲಿ ಹಾಡುವುದರೊಂದಿಗೆ ಪ್ರೇಕ್ಷಕರನ್ನು ಸ್ತಂಭಿಭೂತವಾಗಿಸುವ ದಿಶಾ ರಮೇಶ್‌ ವೆರೋನಿಕಾಳ ಪಾತ್ರವನ್ನು ನೋಡುವವರ ನಡುವೆ ತಂದು ನಿಲ್ಲಿಸುವುದು ಇಡೀ ನಾಟಕದ ವೈಶಿಷ್ಟ್ಯ ಮತ್ತು ಹಿರಿಮೆ. ಹಾಗೆಯೇ ಅಜ್ಜನೊಡನೆ ಮಾಡುವ ವಾಗ್ವಾದಗಳು, ಹೂಡುವ ಜಗಳ, ಮರುಕ್ಷಣವೇ ಪ್ರೀತಿಯಿಂದ ಲಲ್ಲೆಗರೆವ ಮುದ್ದಿನ ಮೊಮ್ಮಗಳ ಚೇಷ್ಟೆ, ಹೀಗೆ ಹಲವು ಆಯಾಮಗಳಲ್ಲಿ ದಿಶಾ ರಮೇಶ್‌ ತಮ್ಮ ಭಾವಾಭಿನಯದ ಶ್ರೇಷ್ಠತೆಯನ್ನು ಮೆರೆದಿದ್ದಾರೆ. ಈ ಮಾತುಗಳನ್ನು ಪ್ರಶಂಸೆ ಎಂದು ಕ್ಲೀಷೆಗೊಳಿಸುವುದರ ಬದಲು,  ಅಭಿಮಾನಪೂರ್ವಕವಾದ ಮನದಾಳದ ಮೆಚ್ಚುಗೆಯ ಅಭಿವ್ಯಕ್ತಿ ಎನ್ನಬಹುದು

ರವೀಂದ್ರನಾಥ ಠಾಗೋರ್‌ ಮತ್ತು ವೋಲೆ ಸೊಯೆಂಕಾ ಅವರ ಹಾಡುಗಳನ್ನು ಕನ್ನಡೀಕರಿಸುವ ಮೂಲಕ ಸ್ಥಳೀಯ ಸಾಂಸ್ಕೃತಿಕ ಸೂಕ್ಷ್ಮಗಳಿಗೆ ಸ್ಪಂದಿಸುವುದರಲ್ಲಿ ನಿರ್ದೇಶಕ ಡಾ. ಶ್ರೀಪಾದ್‌ಭಟ್‌ ಹಾಗೂ ಇಡೀ ತಂಡ ಯಶಸ್ವಿಯಾಗಿದೆ. ಈ ಹಾಡುಗಳು ಒಂದೆಡೆ ವೆರೋನಿಕಾಳ ಕನಸಿಗೆ ಗರಿ ಮೂಡಿಸಿದರೆ ಮತ್ತೊಂದೆಡೆ ಜೋಂಕರ್ಸ್‌ನ ಆತಂಕಗಳನ್ನು ಹೆಚ್ಚಿಸುತ್ತದೆ. ಎರಡು ತಲೆಮಾರುಗಳ ನಡುವೆ ಸಹಜವಾಗಿ ಮೂಡಬಹುದಾದ ಬಿರುಕುಗಳು ಹೇಗೆ ಹಿರಿಯ ತಲೆಮಾರನ್ನು ಕಂಗೆಡಿಸುತ್ತದೆ, ಕಿರಿಯರಲ್ಲಿ ಗೊಂದಲ ಮೂಡಿಸುತ್ತದೆ ಎನ್ನುವುದನ್ನು ಸಮರ್ಪಕವಾಗಿ ಬಿಂಬಿಸುವ “ಕಣಿವೆಯ ಹಾಡು” ಈ ಜಟಿಲ ಸವಾಲನ್ನು ಗೆಲ್ಲಲೇ ಬೇಕಾದ ಯುವ ಪೀಳಿಗೆಯ ಅನಿವಾರ್ಯತೆಗಳನ್ನೂ ಸಹಜವಾಗಿ ಕಟ್ಟಿಕೊಡುತ್ತದೆ.

ಇದನ್ನೂಓದಿ: ಮೈಸೂರಿನಲ್ಲಿ ಧ್ವನಿಸಿದ ಮಂಗಳ ಹಕ್ಕಿಯ ಇಂಚರ

ವರ್ತಮಾನದ ಸಂದರ್ಭದಲ್ಲೂ ತಮ್ಮ ನೆಲದಲ್ಲಿ ತಾವೇ ಪರಕೀಯರಾಗಿಬಿಡುವ ಮಣ್ಣಿನ ಮಕ್ಕಳ, ಮೂಲ ನಿವಾಸಿಗಳ ತಳಮಳ ಹಾಗೂ ತೊಳಲಾಟಗಳನ್ನು ಜೋಂಕರ್ಸ್‌ ಮೂಲಕ ಪ್ರಸ್ತುತ ಪಡಿಸುವ “ಕಣಿವೆಯ ಹಾಡು”, ಎಷ್ಟೇ ಆತಂಕ-ಅಪಾಯಗಳನ್ನು ಎದುರಿಸಿದರೂ ನಗರದ ಬದುಕಿಗೆ ಅನಿವಾರ್ಯವಾಗಿ ತೆರೆದುಕೊಳ್ಳುವ ಹೊಸ ಪೀಳೀಗೆಯ ತುಡಿತ-ಆಕಾಂಕ್ಷೆ ಹಾಗೂ ಮನೋಭಾವನೆಗಳನ್ನು ಸಹ ಪರಿಣಾಮಕಾರಿಯಾಗಿ ನಮ್ಮ ಮುಂದಿಡುತ್ತದೆ. ಈ ಸಂಘರ್ಷದ ನಡುವೆಯೇ ಅಜ್ಜ-ಮೊಮ್ಮಗಳ ಮಧುರ ಬಾಂಧವ್ಯವು ಅರಳಿ, ವಿಕಸಿಸಿ, ಹಲವು ಸವಾಲುಗಳನ್ನು ಎದುರಿಸಿ ಕೊನೆಗೆ ಪರಸ್ಪರ ಅಪ್ಪಿಕೊಂಡು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುತ್ತದೆ. ವೆರೋನಿಕಾ ಮತ್ತು ಜೋಂಕರ್ಸ್‌ ಇದಕ್ಕೆ ಸಾಕ್ಷಿಯಾಗುತ್ತಾರೆ.

ಪ್ರೇಕ್ಷಕರನ್ನು ನೂರು ನಿಮಿಷಗಳ ಕಾಲ ಹಿಡಿದಿಡುವ “ಕಣಿವೆಯ ಹಾಡು” ದೀರ್ಘ ಕಾಲ ಮನಸ್ಸಿನಲ್ಲಿ ಉಳಿಯುವಂತಹ ಒಂದು ರಂಗಪ್ರಯೋಗ. ಇದಕ್ಕೆ ಕಾರಣ ದಿಶಾ ರಮೇಶ್‌ ಮತ್ತು ಮೇಘ ಸಮೀರ್‌ ಅವರ ತನ್ಮಯತೆ-ತಲ್ಲೀನತೆ,  ಸಹಜಾಭಿನಯ ಮತ್ತು ಭಾವಾಭಿವ್ಯಕ್ತಿಯ ನಟನೆ. ನಾಟಕದ ವಿನ್ಯಾಸ ಹಾಗೂ ನಿರ್ದೇಶನವನ್ನು ತನ್ಮಯತೆಯಿಂದ ನಿಭಾಯಿಸಿರುವ ಶ್ರೀಪಾದ್‌ ಭಟ್‌ ಅವರ ದಕ್ಷತೆಗೆ ಮೆರುಗು ನೀಡುವಂತೆ ಇಬ್ಬರು ಕಲಾವಿದರ ಅಭಿನಯವೂ ಮೇಳೈಸಿರುವುದು ಇಡೀ ನಾಟಕದ ವೈಶಿಷ್ಟ್ಯ. “ಕಣಿವೆಯ ಹಾಡು” ಪ್ರೇಕ್ಷಕರ ಹೃದಯದ ಹಾಡಿನಂತೆ ನೆನಪುಗಳಲ್ಲಿ ಉಳಿಯುವಂತಹ ಒಂದು ಅಪೂರ್ವ ಪ್ರಯೋಗ. ದಕ್ಷಿಣ ಆಫ್ರಿಕಾದ ಕತೆಯೊಂದನ್ನು ಕನ್ನಡಕ್ಕೆ ಅಳವಡಿಸಿ ಸ್ಥಳೀಯ ಸ್ಪರ್ಶ ನೀಡುವುದೇ ಅಲ್ಲದೆ ಸಂವೇದನಾಶೀಲತೆಯೊಂದಿಗೆ ಪ್ರಸ್ತುತಪಡಿಸಿರುವ ಮಂಡ್ಯ ರಮೇಶ್‌ ಅವರ ನಟನ ಪಯಣ ರೆಪರ್ಟರಿಗೆ ಅಭಿನಂದನೆ ಸಲ್ಲಲೇಬೇಕು.

-0-0-0-0-

ವಿಡಿಯೋ ನೋಡಿ: ʻಬದುಕಿನ ಬೀಗದ ಕೀ ನಮ್ಮ ಕೈಲೇ ಇದೆʻ ಹಿರಿಯ ರಂಗಕರ್ಮಿ ಜೇವರ್ಗಿ ರಾಜಣ್ಣ ಜೊತೆ ಮಾತುಕತೆ Janashakthi Media

Donate Janashakthi Media

Leave a Reply

Your email address will not be published. Required fields are marked *