ನಾ ದಿವಾಕರ
ಯುದ್ಧವೆಂದರೆ ಸಾವಲ್ಲ
ಯುದ್ಧ ಯಾರನ್ನೂ ಕೊಲ್ಲುವುದಿಲ್ಲ
ಅಚ್ಚರಿಯಾಯಿತೇ ?
ಹೌದು, ಅಲ್ಲಿ ಉದುರುವ ಹೆಣಗಳು
ಕೊಳೆಯುವ ಅಂಗಗಳು
ರಣಹದ್ದುಗಳ ಎಲೆಯ ತುಣುಕುಗಳು
ನಮ್ಮದೇ ಬಿಂಬಗಳು
ಉಸಿರಾಡುತ್ತಿವೆ ನಮಗೆ ಕೇಳುತ್ತಿಲ್ಲ
ಏಕೆ ಗೊತ್ತೇ ?
ನಾವು ಕಿವುಡಾಗಿದ್ದೇವೆ ;
ಹಲೋ,,, ಧ್ವನಿ ಕೇಳಿಸುತ್ತಿದೆಯೇ ?
ರಣಬಯಲಲ್ಲಿ ಸಾವು ಸತ್ತಿಲ್ಲ
ರಮಿಸಿ ನರ್ತಿಸುತ್ತಿದೆ
ಜೀವ ನಿರ್ಜೀವದ ಬಯಲಾಟದಲಿ
ಹಸುಳೆಯ ಕಣ್ಣು ಮಣ್ಣಾಗಿದೆ
ಮಣ್ಣು ಕರುಳ ವೇದನೆಗೆ ಕಣ್ಣಾಗಿದೆ
ಕ್ಷಿಪಣಿ ಡ್ರೋನುಗಳ ಸಿಡಿಲ ಸದ್ದಿಗೆ
ನಾವು ಕಿವುಡಾಗಿದ್ದೇವೆ
ಹೆಣಗಳಿಗೆ ಕುರುಡಾಗಿದ್ದೇವೆ ;
ಮಣಿಪುರದ ಕೂಸು ಉಕ್ರೇನಿನ ಅಜ್ಜ
ಪ್ಯಾಲೆಸ್ಟೀನಿನ ಅವ್ವ ,,,,,
ಹೃದಯ ವೇದನೆಗೆ ಗಡಿರೇಖೆಗಳೆಲ್ಲಿಯದು ?
ಸತ್ತವರ ರೋದನ ಕೇಳುತ್ತಿದೆಯೇ
ಇಲ್ಲ,,, ಅಲ್ಲವೇ ?
ಅದು ಮಸಣದ ಮೂಲ ಮಂತ್ರ
ಯುದ್ಧ ತಂತ್ರ ;
ಪಕ್ಕದ ಮನೆಯ ಸಲ್ಮಾ ಹಿತ್ತಲಿನ ಪದ್ಮ
ಕರೆಯುತ್ತಲೇ ಇದ್ದಾರೆ
ನಾವು ಕಿವುಡಾಗಿದ್ದೇವೆ ;
ಅರ್ಥವಾಗಲಿಲ್ಲವೇ ?
ಯುದ್ಧ ಎಂದರೆ ಸಾವಲ್ಲ
ಯುದ್ಧ ಯಾರನ್ನೂ ಕೊಲ್ಲುವುದೂ ಇಲ್ಲ
ಮನುಕುಲದ ಪ್ರಜ್ಞೆಯ ಹಿಸುಕುತ್ತದೆ ;
ರಣಮಸಣದ ಕೊನೆಯುಸಿರು
ಮನುಜ ಸೂಕ್ಷ್ಮತೆಯ ತಂತುಗಳಲ್ಲಿ
ಇವ ನಮ್ಮವ ಅವ ನಮ್ಮವನಲ್ಲ
ಹುಡುಕಾಡುವ ಶವಗಳು ಉಸಿರಾಡುತ್ತವೆ
ಅವರು ನಮ್ಮೊಡನೆಯೇ ಇದ್ದಾರೆ
ನಾವು ಕುರುಡಾಗಿದ್ದೇವೆ ;
ನಿಜ ಅಲ್ಲವೇ ?
ಯುದ್ಧ ಯಾರನ್ನೂ ಕೊಲ್ಲುವುದಿಲ್ಲ
ನಾವು ಕೊಲ್ಲುತ್ತೇವೆ,,,, ಪ್ರತಿ ಕ್ಷಣ
ಸೂಕ್ಷ್ಮ ಸಂವೇದನೆಯನ್ನು
ಜೀವಪರತೆಯನ್ನು ಮಾನವತೆಯನ್ನು
ಸಹಮಾನವನ ಸುಪ್ರಜ್ಞೆಯನ್ನು ;
ಬಾಂಬುಗಳು ಕೊಲ್ಲುವುದು ದೇಹಗಳನ್ನು
ವಿಷಚಿತ್ತದ ಬೀಜಗಳು ಕೊಲ್ಲುವುದು ಮಾನವತೆಯನ್ನು ನಾಗರಿಕತೆಯನ್ನು ;
ಈಗ ಹೇಳಿ ,,,,
ಯುದ್ಧವೆಂದರೆ ಸಾವಲ್ಲ
ಯುದ್ಧ ಯಾರನ್ನೂ ಕೊಲ್ಲುವುದಿಲ್ಲ
ಹಂತಕರು ನಾವೇ
ಕಿವುಡಾಗಿದ್ದೇವೆ ಕುರುಡಾಗಿದ್ದೇವೆ
ಅಂಧಯುಗದ ವಾರಸುದಾರರಾಗಿದ್ದೇವೆ
ನಾಳೆಗೆ ಋಣಿಗಳಾಗಿ !