ಭಾನುವಾರ (ಅ.29) ಸಮುದಾಯದ “ರಂಗಚಿಂತನ”ಪುಸ್ತಕ ಬಿಡುಗಡೆ

– ಡಾ. ಶ್ರೀಪಾದ ಭಟ್

ಸಮುದಾಯ ಬೆಂಗಳೂರು” ಸಂಯೋಜಿಸಿ “ಚಿಂತನ ಪುಸ್ತಕ” ಪ್ರಕಟಿಸುತ್ತಿರುವ “ರಂಗಚಿಂತನ” ಅಕ್ಟೋಬರ್ 29 ಭಾನುವಾರ ಮಧ್ಯಾಹ್ನ 3 ಗಂಟೆಗೆ ರವೀಂದ್ರ ಕಲಾ ಕ್ಷೇತ್ರದಲ್ಲಿ ಬಿಡುಗಡೆಯಾಗಲಿದೆ. ಇದು  ಅಕ್ಟೋಬರ್ 28-29 ರಂದು ನಡೆಯಲಿರುವ “ಕಾರ್ನಾಡರ ನೆನಪ :: ತುಘಲಕ್ 100ರ ಸಂಭ್ರಮ” ಎಂಬ ಎರಡು ದಿನಗಳ ರಂಗೋತ್ಸವದ ಭಾಗವಾಗಿರುತ್ತದೆ. ಈ ಸಂದರ್ಭದಲ್ಲಿ ಈ ಪುಸ್ತಕದ ಆಯ್ದ ಭಾಗಗಳು ರಂಗಚಿಂತನ

ರಂಗಭೂಮಿ ಹೊಸದೇನಲ್ಲ, ಹಳೆಯದೇ. ಆದರೆ ನಾವು ಹೊಸದಾಗಿ ಅದನ್ನು ನೋಡಬೇಕಾಗಿದೆ ಅಷ್ಟೆ

ರಂಗಭೂಮಿಯ ಸಾಮಾಜಿಕ ಅಸ್ತಿತ್ವವನ್ನು ಉಸಿರಾಗಿಸಿಕೊಂಡು ಬಾಳಲೆಂದು ಹುಟ್ಟಿಕೊಂಡ ಸಮುದಾಯ ಸಂಘಟನೆ ಕೊರೋನಾ ಕಾಲಘಟ್ಟದಲ್ಲಿ ನಡೆಸಿದ ಚಿಂತನೆಯ ಫಲವಿದು. ಹಿಂದಣ ಹೆಜ್ಜೆಯನರಿಯದೆ ಮುಂದಣ ಹಾದಿ ಸ್ಪಷ್ಟವಾಗದೆಂಬ ತಿಳುವಳಿಕೆಯಿಂದ ಹುಟ್ಟಿಕೊಂಡ ಈ ಸಂವಾದ ರಾಜ್ಯ, ಹೊರರಾಜ್ಯದ 60 ಜನ ಚಿಂತಕರನ್ನು ಆಹ್ವಾನಿಸಿತ್ತು. ಇಲ್ಲಿ ನಟರಿದ್ದರು, ನಿರ್ದೇಶಕರಿದ್ದರು, ಸಂಘಟಕರಿದ್ದರು, ಪ್ರೇಕ್ಷಕರಿದ್ದರು, ಸಾಂಸ್ಕೃತಿಕ ಚಿಂತಕರಿದ್ದರು. ಪ್ರತಿವಿಭಾಗದವರಿಗೂ ಪ್ರತ್ಯೇಕ ಪ್ರಶ್ನೆಗಳನ್ನು ಕೇಳಿ ಅವರಿಂದ ಉತ್ತರರೂಪವಾಗಿ ಈ ಸಂವಾದ ಆರಂಭಿಸಿದೆವು. ಎಲ್ಲರೂ ಈ ಇತಿವೃತ್ತದ ಆಧಾರದಲ್ಲಿ ಮಾತನಾಡಿದ್ದಾರೆ. ಅವರ ಮಾತುಗಳನ್ನೇ ಇಲ್ಲಿ ಅಕ್ಷರ ರೂಪಕ್ಕಿಳಿಸಿದ್ದೇವೆ. ಮೊದಲ ಮೂವತ್ತು ಜನರ ಮಾತುಗಳು ಈ ಪುಸ್ತಕದಲ್ಲಿ ದಾಖಲಾಗಿವೆ. ಈ ಹಿನ್ನೆಲೆಯಲ್ಲಿ ಮೊದಲ ನುಡಿಯ ರೂಪದಲ್ಲಿ ಕೆಲವು ಟಿಪ್ಪಣಿಗಳನ್ನು ಇಲ್ಲಿ ದಾಖಲಿಸುತ್ತಿರುವೆ. ಈ ಟಿಪ್ಪಣಿಗಳು ಇಲ್ಲಿ ಮಾತನಾಡಿದ ತಜ್ಞರ ಮಾತುಗಳಿಗೆ ನೀಡುತ್ತಿರುವ ವ್ಯಾಖ್ಯಾನಗಳಲ್ಲ, ಬದಲಿಗೆ ಈ ನೆವದಲ್ಲಿ ನಾನು ಆಡಿಕೊಳ್ಳಬಯಸಿದ ಮಾತುಗಳಿವು.

ರಂಗಚಿಂತನಯಾವುದೇ ಬಗೆಯ ಚಿಂತನೆಯಿರಲಿ ಅದು ನಾವಿರುವ ವರ್ತಮಾನವನ್ನು ನಮಗೆ ನಿರ್ವಚಿಸಿಕೊಳ್ಳೋಕೆ ಸಾಲುತ್ತಿಲ್ಲ, ಅಸಮಗ್ರ ಅನಿಸಿದರೆ ಅದರ ಕುರಿತ ಮರುಚಿಂತನೆ ಅವಶ್ಯಕವಾಗುತ್ತದೆ. ಕಾಲದ ಅಗತ್ಯಕ್ಕೆ ತಕ್ಕಂತೆ ಅವು ನಡೆಯುತ್ತಲೇ ಬಂದಿದೆ. ಸಧ್ಯದ ಕಾಲವೂ ಹಾಗೆ.ಬದುಕನ್ನು ಹೊಸ ಹೊಸ ವ್ಯಾಖ್ಯಾನಕ್ಕೆ ಈಡು ಮಾಡಲು, ಹೊಸ ದೃಷ್ಟಿಕೋನದಿಂದ ನೋಡಲು ಹೇಳಿಕೊಟ್ಟ ರಂಗಭೂಮಿಯಲ್ಲಿಯ ನಮ್ಮ ನಡೆಯ ಕುರಿತ ಪುನರ್‌ಮಥನವೂ ಈ ಕಾಲದ ಅಗತ್ಯವೇ ಆಗಿದೆ. ಕೊರೋನಾ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ರಂಗಭೂಮಿಯಲ್ಲಿ ಚಟುವಟಿಕೆಗಳೇ ನಿಂತಾಗ ಮತ್ತು ಅದು ನಿಂತಿತು ಎಂಬುದರ ಬಗ್ಗೆ ಸಮಾಜಕ್ಕೆ ವಿಷಾದವೂ ಆಗದೇ ಇದ್ದಾಗ ಒಂದು ತರಹದ ಗಾಬರಿ ಉಂಟಾಗಿದ್ದು ಸಹಜ. ರಂಗಚಟುವಟಿಕೆಗಳು ನಿಂತಾಗ ರಂಗಕರ್ಮಿಗಳನ್ನು ಬಿಟ್ಟು ಬೇರೆ ಯಾವುದೇ ಸಾಮಾಜಿಕ ಘಟಕಗಳೂ ಈ ಕುರಿತು ಚಿಂತಿಸದಿರುವ ಹೊತ್ತಿನಲ್ಲಿ ನಮ್ಮ ಕುರಿತು ನಾವು ‘ಸ್ವಾಭಿಮುಖಿ ಚಿಂತನೆ’ಯನ್ನು ನಡೆಸಿಕೊಳ್ಳುವ ತುರ್ತು ಹುಟ್ಟಿತು.

ಕಳೆದೆರಡು ವರ್ಷ ಕೋವಿಡ್ ರೋಗ ರಂಗಭೂಮಿಯನ್ನು ಇನ್ನಿಲ್ಲದಂತೆ ಕಾಡಿದೆ. ಜಗನ್ನಾಟಕದ ವಿರಾಟ್ ಸ್ವರೂಪವನ್ನು ನಮ್ಮೆದುರು ಕಾಣಿಸಿದೆ. ಲಕ್ಷಾಂತರ ಜನರು ಗುಳೆ ಎದ್ದು ನಡೆದದ್ದನ್ನು ಇಂದಿಗೂ ಅರಗಿಸಿಕೊಳ್ಳಲಾಗುತ್ತಿಲ್ಲ. ರಂಗಭೂಮಿಯ ಕೌಶಲ ಸಿದ್ಧಿಸಿಕೊಂಡ ಅನೇಕ ಸ್ನೇಹಿತರು ಬದುಕಿನ ಬವಣೆಯಲ್ಲಿ ಮರೆಯಾಗಿ ಹೋಗಿದ್ದಾರೆ. ಅವರನ್ನೆಲ್ಲ ಮರಳಿಗಳಿಸಿಕೊಳ್ಳುವ ಬಗೆಗಳೂ ತಿಳಿಯುತ್ತಿಲ್ಲ. ಈ ವಾಸ್ತವವನ್ನು ಹಿಡಿದಿಡುವ ರೂಪಕ ರಂಗಭೂಮಿಗೆ ದಕ್ಕಬೇಕು. ಏಕೆಂದರೆ ಮನುಷ್ಯ ಮನುಷ್ಯರ ನಡುವೆ ಅದು ಹೊಸ ಸಂವಾದಕ್ಕೆ ಸಿದ್ಧವಾಗಬೇಕು.

ರಂಗಭೂಮಿಯ ಭವಿಷ್ಯದ ನಡೆಯ ಕುರಿತು ಒಂದು ಮಾತು. ಆರ್ಥರ್ ಕೋಸ್ಲರ್ ಅವರು `ದೌರ್ಜನ್ಯವನ್ನು ನಂಬದಿರುವದುʼ ಎಂಬ ಲೇಖನದಲ್ಲಿ ಹೇಳುತ್ತಾರೆ :

ಇದನ್ನೂ ಓದಿ: ರಾಯಚೂರಿನಲ್ಲಿ ಬೆಳೆಗೆ ನೀರಿಲ್ಲದೆ ಹಾಹಾಕಾರ| ಒಣಗಿ ನಿಂತ ಭತ್ತದ ಬೆಳೆ

“ದೌರ್ಜನ್ಯ ಯಾರನ್ನು ಇನ್ನೂ ಮುಟ್ಟಿಲ್ಲವೋ ಅವರು ಅವರ ಪಕ್ಕದಲ್ಲಿಯೇ ನಗುತ್ತ ನಡೆಯಬಲ್ಲರು. ನೀವು ದೌರ್ಜನ್ಯದ ಪಕ್ಕದಲ್ಲೇ ನಗುತ್ತಾ ನಡೆಯದೇ ಇದ್ದಿದ್ದರೆ ಈ ಯುದ್ಧವನ್ನು ನಿಲ್ಲಿಸಬಹುದಾಗಿತ್ತು. ಹಗಲುಗನಸು ಕಾಣುತ್ತಿರುವ ನಿಮ್ಮ ಕಣ್ಣುಗಳ ಎದುರೇ ಕೊಲೆಯಾದವರನ್ನು ಜೀವಂತ ಉಳಿಸಿ ಕೊಳ್ಳಬಹುದಾಗಿತ್ತು.” ಎಂದು. ಈ ಮಾತು ನಮ್ಮನ್ನು ಮತ್ತೆ ಮತ್ತೆ ಎಚ್ಚರಿಸುತ್ತಿರಲಿ. (ಮುನ್ನುಡಿಯಿಂದ)

ಕೋವಿಡ್ ಕಾಲದಲ್ಲಿ ವೈಯಕ್ತಿಕವಾಗಿ ಒಬ್ಬರಿಂದೊಬ್ಬರು ದೂರವಿರಬೇಕಾಗಿ ಬಂದ ತಲ್ಲಣದ ಸಂದರ್ಭದಲ್ಲಿ ನೇರ ಮುಖಾಮುಖಿಯ ಮೂಲಕ ಸಂವಾದಿಸುವುದು ಸಂವಹಿಸುವುದೇ ಪ್ರಧಾನವಾದ ರಂಗ ಚಟುವಟಿಕೆ ಅನಿವಾರ್ಯವಾಗಿ ಸ್ಥಗಿತವಾಗಬೇಕಾಯಿತು. ಇಂತಹ ಚಟುವಟಿಕೆಯಿಲ್ಲದೇ ಇರಬೇಕಾದ ಅನಿವಾರ್ಯ ಮತ್ತು ಬಲವಂತದ ಬಿಡುವಿನ ಸಂದರ್ಭದಲ್ಲಿ, ರಂಗಭೂಮಿಯ ಸ್ವರೂಪದ ಬಗ್ಗೆ, ಅದರ ಪಾತ್ರದ ಬಗ್ಗೆ ಸಮಾಜದ ಆಗುಹೋಗಿಗೆ ಕನ್ನಡಿಯಾಗುತ್ತಿದ್ದ ರಂಗಕರ್ಮಿಗಳ ಚಿಂತನೆಯನ್ನು ಕ್ರೋಢೀಕರಿಸುವ ಕೆಲಸವನ್ನು ಸಮುದಾಯ ಬೆಂಗಳೂರು ತನ್ನ ಕೈಗೆತ್ತಿಕೊಂಡಿತು. ಅದು ನಾಡಿನ ಖ್ಯಾತ ರಂಗತಜ್ಞರನ್ನು, ರಂಗಕರ್ಮಿಗಳನ್ನು ಸಂಪರ್ಕಿಸಿ ಸಮಕಾಲೀನ ರಂಗ ಚಿಂತನೆಗಳನ್ನು ಹಂಚಿಕೊಳ್ಳುವಂತೆ ಕೇಳಿ, ಆ ಚಿಂತನೆಗಳನ್ನು ಯೂಟ್ಯೂಬ್ ಮೂಲಕ ಜನರಿಗೆ ತಲುಪಿಸುವ ಮಹದ್ಕಾರ್ಯವನ್ನು ನಡೆಸಿಕೊಟ್ಟಿತು. ಅದರ 30 ಯೂ ಟ್ಯೂಬ್ ವಿಡಿಯೊಗಳ ಪಠ್ಯ ರೂಪ ಈ ಪುಸ್ತಕ. (ಪ್ರಕಾಶಕರ ಮಾತಿನಿಂದ)

“ರಂಗಚಿಂತನ” ಸರಣಿಯನ್ನು  ಸಮುದಾಯ ಬೆಂಗಳೂರು ಯೂಟ್ಯೂಬ್  ಮತ್ತು ಜನಶಕ್ತಿ ಮೀಡಿಯಾದ ಫೇಸ್ ಬುಕ್ ಪುಟದಲ್ಲಿ ಪ್ರತಿ ವಾರ ಪ್ರಸಾರ ಮಾಡಲಾಯಿತು. ಸಮುದಾಯ ಬೆಂಗಳೂರು ಯೂಟ್ಯೂಬ್‌ನ ರಂಗ ಚಿಂತನ ಪ್ಲೇ ಲಿಸ್ಟ್‌ನಲ್ಲಿ ಇದು ಲಭ್ಯವಿದೆ.

ವಿಡಿಯೋ ನೋಡಿ: “ರಂಗಚಿಂತನ” ಸರಣಿಯ ವಿಡಿಯೋ ನೋಡಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *