Cauvery Protest| ಕಾವೇರಿ ನೀರಿಗಾಗಿ ನಾಳೆ ಬೆಂಗಳೂರು ಬಂದ್‌!

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹೋರಾಟದ ಕಾವು ದಿನದಿಂದ ದಿನಕ್ಕೆ ತೀವ್ರತೆ ಪಡೆದುಕೊಳ್ಳುತ್ತಿದೆ. ಕರ್ನಾಟಕ ಜಲ ಸಂರಕ್ಷಣಾ ಸಮತಿ ನಾಳೆ ಸೆ-26 ಮಂಗಳವಾರ ಬೆಂಗಳೂರು ಬಂದ್‌ಗೆ ಕರೆ ನೀಡಿದ್ದು 90ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ಘೋಷಿಸಿವೆ. ಅಂದೇ ರಾಮನಗರ  ಜಿಲ್ಲೆ ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು, ಮಳವಳ್ಳಿ ತಾಲ್ಲೂಕಿನಲ್ಲೂ ಬಂದ್‌ ನಡೆಸಲು ಸ್ಥಳೀಯ ಸಂಘಟನೆಗಳು ನಿರ್ಧರಿಸಿವೆ.ಕಾವೇರಿ

ಇದನ್ನೂ ಓದಿ:‘ಕಾವೇರಿ’ ನೀರು ಬಿಡುಗಡೆ : ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ತುರ್ತು ಸಭೆ

ಬೆಂಗಳೂರಿನಲ್ಲಿ ಬೆಳಿಗ್ಗೆ 6ರಿಂದ ಸಂಜೆ 6ರ ತನಕ ಬಂದ್‌ ನಡೆಸಲು ಭಾನುವಾರ ನಡೆದ ಸಭೆಯಲ್ಲಿ ಒಮ್ಮತದ ತೀರ್ಮಾನಕ್ಕೆ ಬರಲಾಗಿದೆ. ಕೆಲವು ಸಂಘಟನೆಗಳು ಸೆ-16 ರಂದು ಬಂದ್‌ ವಾಪಸ್‌ ಪಡೆಯುವಂತೆ ಕೋರಿದ್ದವು. ನಾಡಿನ ಜನರು, ರೈತರ ಹಿತದೃಷ್ಟಿಯಿಂದ ಬಂದ್‌ಗೆ ಕರೆ ನೀಡಲಾಗಿದ್ದು ಬಂದ್‌ ವಾಪಸ್‌ ಪಡೆಯುವ ಪ್ರಶ್ನೆಯೇ ಇಲ್ಲ. ಬಂದ್‌ ಯಶಸ್ವಿಗೊಳಿಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ರೈತರು ನೋವು ತಿಳಿಸುತ್ತೇವೆ ಎಂದು ಹೋರಾಟಗಾರರು ಹೇಳಿದ್ದಾರೆ.

ಬೆಳಿಗ್ಗೆ 11ಕ್ಕೆ ಬೆಂಗಳೂರಿನ ಪುರಭವನದಿಂದ ಪ್ರತಭಟನಾ ಮೆರವಣಿಗೆ ಆರಂಭವಾಗಲಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಸದಸ್ಯರು, ಕನ್ನಡ ಸಂಘಟನೆಗಳ ಮುಖಂಡರು, ರೈತರು, ಆಮ್‌ ಆದ್ಮಿ ಪಕ್ಷದ ಕಾರ್ಯಕರ್ತರು, ಬಿಬಿಎಂಪಿ ಕಾರ್ಮಿಕರು, ಕೆಎಸ್‌ಆರ್‌ಟಿಸಿ ಕನ್ನಡ ಕಾರ್ಮಿಕರ ಸಂಘ,ಓಲಾ-ಊಬರ್‌ ಚಾಲಕರ ಸಂಘ, ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ, ಕರ್ನಾಟಕ ಮರಾಠ ಮಂಡಳಿ, ರಾಜ್ಯ ಕಾರ್ಮಿಕ ಪರಿಷತ್‌ನ ಸದಸ್ಯರಯ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ತಮಿಳುನಾಡಿಗೆ ಕಾವೇರಿ ನೀರು ಬಿಡುಗಡೆ ವಿರೋಧಿಸಿ ಪ್ರತಿಭಟನೆ: ರೈತರ ಬಂಧನ

ಬಿಎಂಟಿಸಿ ಬಸ್‌ಗಳನ್ನು ರಸ್ತೆಗಿಳಿಸದಂತೆ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌ ಕರೆ ನೀಡಿದ್ದು ಬಸ್‌ ಸಂಚಾರದಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಆಟೋ, ಕ್ಯಾಬ್‌ ಸಂಚಾರ ಇರುವುದಿಲ್ಲ. ಕರ್ನಾಟಕ ಟೆಲಿವಿಷನ್‌ ಕಲಾವಿದರ ಸಂಘ ಚಿತ್ರೀಕರಣ ಬಂದ್‌ ಮಾಡಲು ತೀರ್ಮಾನಿಸಿದೆ.

ಖಾಸಗಿ ಶಾಲೆಗಳ ಒಕ್ಕೂಟ ಸಹ ಬಂದ್‌ಗೆ ನೈತಿಕ ಬೆಂಬಲ ಸೂಚಿಸಿದ್ದು, ರಜೆ ಘೋಷಿಸುವ ವಿಚಾರವನ್ನು ಆಯಾ ಶಾಲೆಗಳಿಗೆ ಬಿಟ್ಟಿದೆ. ಖಾಸಗಿ ಸಾರಿಗೆ ಸಂಘಟನೆಗಳು, ಕರ್ನಾಟಕ ಜ್ಯುವೆಲ್ಲರಿ ಅಸೋಸಿಯೇಶನ್‌, ಹೋಟೆಲ್‌ ಮಾಲೀಕರ ಸಂಘ ಸಹ ಬಂದ್‌ಗೆ ನೈತಿಕ ಬೆಂಬಲ ವ್ಯಕ್ತಪಡಿಸಿವೆ. ಬಂದ್‌ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬಸ್‌, ಆಟೊ, ಕ್ಯಾಬ್‌, ಮಾರುಕಟ್ಟೆ ಸೇರಿದಂತೆ ಅಗತ್ಯ ಸೇವೆಗಳಲ್ಲಿ ವ್ಯತ್ಯಯವಾಗುವ ಸಾಧ್ಯತೆಯಿದೆ. ಬಂದ್‌ನ ಭಾಗವಾಗಿ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಳ್ಳಲಿವೆ.

ಏನಿರುತ್ತೆ?:
  • ಆಸ್ಪತ್ರೆ, ಮೆಡಿಕಲ್ ಸ್ಟೋರ್‌, ಹಾಲಿನ ಬೂತ್‌, ಅಗತ್ಯ ವಸ್ತುಗಳು, ಮೆಟ್ರೋ, ಆಂಬುಲೆನ್ಸ್,ಅಂಚೆ ಕಚೇರಿ,
ಏನಿರಲ್ಲ:
  • ಆಟೋ, ಕ್ಯಾಬ್, ಗೂಡ್ಸ್ ವಾಹನಗಳು, ಖಾಸಗಿ ಬಸ್‌ಗಳು, ಥಿಯೇಟರ್‌, ಸೂಪರ್ ಮಾರ್ಕೆಟ್‌, ಪೆಟ್ರೋಲ್ ಬಂಕ್‌, ಶಾಲಾ -ಕಾಲೇಜ್‌ಗಳು, ಅಂಗಡಿಗಳು, ಬೀದಿಬದಿ ಅಂಗಡಿಗಳು, ಜ್ಯುವೆಲ್ಲರಿ ಶಾಪ್‌ಗಳು, ಕೈಗಾರಿಕೆಗಳು ಹೋಟೆಲ್‌ಗಳು, ಮಾಲ್‌ಗಳು
ಮಂಗಳವಾರದ ಬಂದ್ ಹೇಗಿರಲಿದೆ?
  • ಬೆಂಗಳೂರಿನ ಬಹುತೇಕ ಕನ್ನಡ ಸಂಘಟನೆಗಳು ಬೆಂಬಲ ನೀಡಿರುವುದರಿಂದ ಸ್ಥಳೀಯವಾಗಿ ಬಂದ್‌ನ್ನು ಯಶಸ್ವಿಗೊಳಿಸುವ ಪ್ರಯತ್ನಗಳನ್ನು ಕಾರ್ಯಕರ್ತರು ನಡೆಸುವ ಸಾಧ್ಯತೆಗಳಿವೆ.
  • ಕರ್ನಾಟಕ ವಿದ್ಯಾರ್ಥಿ ವೇದಿಕೆ ರಾಜ್ಯಾಧ್ಯಕ್ಷರಾದ ಡಾ.ಶಿವಶಂಕರ್ ಅವರು ಶಾಲೆ ಕಾಲೇಜುಗಳನ್ನು ಬಂದ್ ಮಾಡುವಂತೆ ಮನವಿ ಮಾಡಿದ್ದಾರೆ. ಕಾವೇರಿ ವಿಚಾರವಾಗಿರುವುದರಿಂದ ಬಂದ್‌ಗೆ ಬೆಂಬಲ ಕೊಡುವ ಸಾಧ್ಯತೆಗಳಿವೆ. ಇನ್ನೂ ಅಧಿಕೃತವಾಗಿ ಶಾಲೆ ಕಾಲೇಜುಗಳ ಬಂದ್‌ ಘೋಷಣೆಯಾಗಿಲ್ಲ.
  • ರಾಷ್ಟ್ರೀಯ ಚಾಲಕರ ಒಕ್ಕೂಟದ ಅಧ್ಯಕ್ಷ ಗಂಡಸಿ ಸದಾನಂದಸ್ವಾಮಿ ಅವರು ಬಂದ್ ಗೆ ಸಂಪೂರ್ಣ ಬೆಂಬಲ ಘೋಷಿಸಿದ್ದಾರೆ. ಅಂದು ಎಲ್ಲಾ ವಾಹನಗಳು ಸಂಚಾರ ನಿಲ್ಲಿಸಲಾಗುತ್ತದೆ ಎಂದಿದ್ದಾರೆ.
  • ಬೆಂಗಳೂರು ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ ನೀಡುವುದಾಗಿ ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ. ರಾವ್ ಮಾಹಿತಿ ನೀಡಿದ್ದಾರೆ.
  • ಓಲಾ, ಉಬರ್‌ ಇರುವುದಿಲ್ಲ: ಬೆಂಗಳೂರಿನಾದ್ಯಂತ ಮಂಗಳವಾರ ಓಲಾ, ಉಬರ್ ಓಡಿಸದಿರಲು ನಿರ್ಧರಿಸಲಾಗಿದೆ ಎಂದು ಓಲಾ, ಉಬರ್ ಸಂಘದ ಅಧ್ಯಕ್ಷ ತನ್ವೀರ್ ಪಾಷಾ ತಿಳಿಸಿದ್ದಾರೆ.
  • ಆಟೋ, ಟ್ಯಾಕ್ಸಿಗಳು ಇರುವುದು ಡೌಟ್‌: ಹಲವಾರು ಆಟೋ ಸಂಘಟನೆಗಳು ಬೆಂಬಲ ಘೋಷಿಸಿವೆ. ಅಂತಿಮವಾಗಿ ಸಮಗ್ರ ಬೆಂಬಲ ದೊರೆಯುವ ನಿರೀಕ್ಷೆ ಇದೆ.
  • ಅಂಗಡಿ ಮುಂಗಟ್ಟುಗಳು ಬಂದ್‌ ಆಗುವ ಸಾಧ್ಯತೆ ಇದೆ. ಜನರು ಸ್ವಯಂಪ್ರೇರಿತವಾಗಿ ಬಂದ್‌ ಮಾಡಬಹುದು.
  • ಎಲ್ಲ ರೀತಿಯ ಸಂಚಾರ ವ್ಯವಸ್ಥೆ ಸ್ಥಗಿತವಾಗುವ ಸಾಧ್ಯತೆ ಇದೆ.
  • ಬೆಂಗಳೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಂದ್ ಮಾಡುವುದಾಗಿ ಪ್ರಕಟಿಸಲಾಗಿದೆ.
  • ಬಿಬಿಎಂಪಿ ನೌಕರರ ಸಂಘ ಬೆಂಬಲ ನೀಡಿದೆ. ಹೀಗಾಗಿ ಕಾರ್ಮಿಕರು, ನೌಕರರು ಕೆಲಸಕ್ಕೆ ಹಾಜರಾಗುವುದಿಲ್ಲ.
  • ಸರ್ಕಾರಿ ನೌಕರರ ಸಂಘಟನೆ ಇನ್ನೂ ತೀರ್ಮಾನ ಮಾಡಿಲ್ಲ. ಆದರೆ, ಹಾಜರಾತಿ ವಿರಳ ಆಗಬಹುದು.
  • ಸಿನಿಮಾ ರಂಗ ಬಂದ್‌ನ್ನು ಬೆಂಬಲಿಸುವುದರಿಂದ ಸಿನಿಮಾ ಮಂದಿರಗಳು ಬಂದ್‌ ಇರಲಿವೆ.

ಇದನ್ನೂ ಓದಿ:ಕಾವೇರಿ ನೀರು ಹಂಚಿಕೆ:ಇಂದು ಮಂಡ್ಯ ಮದ್ದೂರು ಬಂದ್‌

ಹಾಗಿದ್ದರೆ ಏನೇನು ಇರಬಹುದು?

  • ಹಾಲು, ತರಕಾರಿ, ಪತ್ರಿಕೆ, ಆಸ್ಪತ್ರೆ, ಮೆಡಿಕಲ್‌ ಸೇರಿದಂತೆ ಅಗತ್ಯ ವಸ್ತುಗಳು ಇರುತ್ತವೆ.
  • ಬಿಎಂಟಿಸಿ ಮತ್ತು ಕೆಎಸ್‌ಆರ್‌ಟಿಸಿ ಬಸ್‌ಗಳು ವಿರಳವಾಗಿ ಸಂಚರಿಸುವ ಸಾಧ್ಯತೆ ಇದೆ.
  • ತುರ್ತು ಅಗತ್ಯದ ಸೇವೆಗಳಿಗೆ, ಅದಕ್ಕೆ ಹೋಗುವವರಿಗೆ ಯಾವುದೇ ತೊಂದರೆ ಇರಲಾರದು. ಆದರೆ, ಅಧಿಕೃತ ಗುರುತು ಚೀಟಿ ಬೇಕಾದೀತು.
  • ಮೆಟ್ರೋ ಸಂಚಾರ ಇರಬಹುದು.

ಸಮಗ್ರ ಕರ್ನಾಟಕ ಬಂದ್‌ಗೆ ವಾಟಾಳ್‌ ಚಿಂತನೆ:

ಇತ್ತ ಬೆಂಗಳೂರು ಬಂದ್‌ಗೆ ಕರೆ ನೀಡಿದ ಬೆನ್ನಿಗೇ ಕನ್ನಡ ಚಳುವಳಿ ವಾಟಾಳ್‌ ಪಕ್ಷದ ನಾಯಕ ವಾಟಾಳ ನಾಗರಾಜ್‌ ಅವರು ಸಮಗ್ರ ಕರ್ನಾಟಕ ಬಂದ್‌ಗೆ ಕರೆ ನೀಡಬೇಕು ಎಂಬ ಬೇಡಿಕೆ ಮುಂದಿಟ್ಟಿದ್ದಾರೆ. ಸೋಮವಾರ ಸಮಗ್ರ ಕರ್ನಾಟಕ ಬಂದ್‌ ಕರೆಯ ಬಗ್ಗೆ ಚರ್ಚೆ ನಡೆಯಲಿದೆ ವಾಟಾಳ್ ನಾಗರಾಜ್ ಜೊತೆ ಮಾತುಕತೆ ಬಳಿಕ ರೈತ ಮುಂದಾಳು ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

ವಿಡಿಯೋ ನೋಡಿ:ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಆಗ್ರಹಿಸಿ ಮಾ.20ರಂದು ಆಟೋ ಚಾಲಕರಿಂದ ಮುಖ್ಯಮಂತ್ರಿ ಮನೆ ಮುತ್ತಿಗೆ.

Donate Janashakthi Media

Leave a Reply

Your email address will not be published. Required fields are marked *