ಪಿ. ಸಾಯಿನಾಥ್
ಬೆಂಗಳೂರು: ಕೃಷಿ ಕಾರ್ಪೋರೇಟಿಕರಣಕ್ಕೆ ಪೂರಕವಾದ ವಾತವರಣವನ್ನು ಸರ್ಕಾರ ಸೃಷ್ಟಿಮಾಡುತ್ತಿದೆ. ಪರ್ಯಾಯ ಕೃಷಿ ಧೋರಣೆಗಾಗಿ ಚಳುವಳಿಗಳು ಬಲಗೊಳ್ಳಬೇಕು ಎಂದು ಮ್ಯಾಗ್ಸಸ್ಸೆ ಪುರಸ್ಕೃತ ಹಿರಿಯ ಪತ್ರಕರ್ತ ಪಿ. ಸಾಯಿನಾಥ್ ಗುರುವಾರ ಕರೆ ನೀಡಿದರು. ಕರ್ನಾಟಕ ಪ್ರಾಂತ ರೈತ ಸಂಘ ಆಯೋಜಿಸಿದ್ದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ “ಪರ್ಯಾಯ ಕೃಷಿ ಧೋರಣೆಗಳು” ಎಂಬ ವಿಷಯದ ಮೇಲೆ ಅವರು ಮಾತನಾಡಿದರು.
ಬೆಂಗಳೂರಿನ ಭಾರತ ಸ್ಕೌಟ್ ಆಂಡ್ ಗೈಡ್ಸ್ ಸಂಸ್ಥೆಯ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪಿ. ಸಾಯಿನಾಥ್, “ಕೃಷಿ ಕಾನೂನು ವಿರುದ್ದ ರೈತರ ಆಂದೋಲನದ ನಂತರ ಕೇಂದ್ರ ಸರ್ಕಾರ ಹಲವು ಕ್ರಮಗಳನ್ನು ತೆಗೆದುಕೊಂಡಿತು. ಅದರಲ್ಲಿ ದಳವಾಯಿ ಸಮಿತಿ ಪ್ರಮುಖವಾದದ್ದು. ಈ ಸಮಿತಿಯು ಅಮೇಜಾನ್ ಮೂಲಕ ಮಾರುಕಟ್ಟೆಗೆ ಶಿಫಾರಸ್ಸು ನೀಡಿದೆ. ಈ ಶಿಫಾರಸ್ಸು ಕೃಷಿಯನ್ನು ಕಾರ್ಪೋರೇಟಿಕರಣಕ್ಕೆ ತಳ್ಳುತ್ತಿದೆ. ಮೂರು ಕೃಷಿ ಕಾಯ್ದೆಗಳು ಕೇವಲ ರೈತರಿಗಷ್ಟೆ ಸಂಬಂಧಿಸಿಲ್ಲ. ಇವು ಜನರ ಜೀವನಕ್ಕೆ ಸಂಬಂಧ ಪಟ್ಟವು. ಸಂವಿಧಾನದ ಕಲಂ 31 ರ ಆಶಯಗಳನ್ನು ಧಿಕ್ಕರಿಸಿ ಈ ಕಾಯ್ದೆಗಳನ್ನು ತರುವ ಪ್ರಯತ್ನ ಮಾಡಿದ್ದು ಈ ದೇಶದ ದುರಂತಗಳಲ್ಲಿ ಒಂದಾಗಿದೆ. ಕೃಷಿಯನ್ನು ಕಾರ್ಪೋರೇಟ್ ಕೈಗೆ ನೀಡುವ ಹುನ್ನಾರಗಳು ಇದರಲ್ಲಿವೆ” ಎಂದು ಹೇಳಿದರು.
ಇದನ್ನೂ ಓದಿ: ರೈತರ ಶ್ರೀಮಂತಿಕೆಯೂ, ಜಾಗತಿಕ ಪಿತೂರಿಗಳೂ ಮತ್ತು ಸ್ಥಳೀಯ ಮೂರ್ಖತನವೂ
“ಕೇಂದ್ರ ಸರ್ಕಾರದ ಮೂರು ಕೃಷಿಕಾಯ್ದೆಗಳು ಜಾರಿಗೆ ಬಂದ ನಂತರ ಬೆಂಗಳೂರಿನಲ್ಲಿ ಒಂದು ಕಾರ್ಯಕ್ರಮ ನಡೆಯುವಾಗ, ‘ಈ ಕಾಯ್ದೆ ಜಾರಿಯಾದರೆ ಮೊದಲಿಗೆ ಹೊಡೆತ ಬೀಳುವುದು ವಕೀಲರಿಗೆ, ಕೃಷಿ ಸಂಬಂಧಿತ ಪ್ರಶ್ನೆಗಳನ್ನು ಎಲ್ಲೂ ಕೂಡ ಪ್ರಶ್ನಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ಕೋರ್ಟ್ಗಳಲ್ಲಿ ವ್ಯಾಜ್ಯ ಹೂಡಲು ಸಾಧ್ಯವಿಲ್ಲ. ಹಾಗಾಗಿ ವಕೀಲ ವೃತ್ತಿಯನ್ನೆ ಈ ಕಾಯ್ದೆಗಳು ನಾಶಪಡಿಸುತ್ತವೆ’ ಎಂದು ಹೇಳಿದ್ದೆ” ಎಂದ ಅವರು, ವರ್ಷಗಳ ಕಾಲ ರೈತರ ನಡೆಸಿದ ಸುಸಂಘಟಿತ ಹೋರಾಟಕ್ಕೆ ಸರ್ಕಾರ ತಲೆಬಾಗಬೇಕಾಯಿತು. ರೈತರ ಈ ಹೋರಾಟ ಜಗತ್ತಿಗೆ ಮಾದರಿಯಾಯಿತು, ಸ್ವಾತಂತ್ರ್ಯ ಹೋರಾಟವನ್ನು ನೆನಪಿಸಿತು ಎಂದರು.
“ಬ್ರಿಟಿಷ್ ವಸಾಹತು ಕಾನೂನುಗಳಿಗೆ ಜೀವ ನೀಡುವ ಮೂಲಕ ಮತ್ತೆ ಜನರನ್ನು ಶಿಕ್ಷಿಸುವ ಕೆಲಸಕ್ಕೆ ಮುಂದಾಗಿದ್ದಾರೆ. ಸರ್ಕಾರವನ್ನು ಪ್ರಶ್ನಿಸಿದರೆ, ನೀತಿಗಳ ವಿರುದ್ಧ ಹೋರಾಡಿದರೆ ಕಾನೂನಿನ ಮೂಲಕ ಕಟ್ಟಿಹಾಕುವ ಹುನ್ನಾರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ. ಉತ್ತರ ಪ್ರದೇಶದಲ್ಲಿ ಗೋಹತ್ಯೆ ನಿಷೇಧದ ಮೂಲಕ ಮುಸ್ಲಿಂ ಸಮುದಾಯವನ್ನು ಇಲ್ಲವಾಗಿಸುವ ಪ್ರಯತ್ನ ಮಾಡಿದ್ದರು. ಯುಪಿಯ ಪ್ರಾಣಿ ಸಂಗ್ರಹಾಲಯದಲ್ಲಿ ಹುಲಿಗಳಿಗೆ ಆಹಾರವಾಗಿ ಕೋಳಿಮಾಂಸ ಕೊಡಲು ಆರಂಭಿಸಿದರು. ಆ ಹುಲಿಗಳು ಸಂಪೂರ್ಣವಾಗಿ ತೂಕ ಕಳೆದುಕೊಂಡು ಬಡಕಲು ದೇಹ ಹೊಂದಿದದವು”
“ಯುಪಿಯ ಅನೇಕ ಕಡೆಗಳಲ್ಲಿ ಗೋ ತಳಿ ನಾಶವಾಗುತ್ತಿವೆ. ಬಹಳಷ್ಟು ಜನ ರೈತರು ಜಾನುವಾರು ಸಾಕಲು ಹಿಂದೇಟು ಹಾಕುತ್ತಿದ್ದಾರೆ. ಗೋಹತ್ಯೆ ಮೂಲಕ ಗ್ರಾಮೀಣ ರೈತರ ಬದುಕನ್ನು ಸರ್ಕಾರ ಬೀದಿಗೆ ತಂದಿದೆ ಎಂದು ಆರೋಪಿಸಿದರು. ಗೋಹತ್ಯೆ ನಿಷೇಧದಿಂದಾಗಿ ಮಹಾರಾಷ್ಟ್ರದ ಜನಪ್ರಿಯ ಕೊಲ್ಹಾಪುರ ಚಪ್ಪಲಿ ನಾಶವಾಗುತ್ತಿದೆ. ಕರ್ನಾಟಕದಲ್ಲಿ ಕೃಷಿ ಆದಾಯ ಕಡಿಮೆ ಆಗಿದೆ. ಕೂಲಿಯ ಆದಾಯ ಹಾಗೂ ಪಶುಸಂಗೋಪನೆಯಿಂದ ಆದಾಯ ಬರುತ್ತಿದೆ. ಈ ಬಗ್ಗೆ ಯೋಚಿಸಿ ಪರಿಹಾರ ಕಂಡುಕೊಳ್ಳಬೇಕು” ಎಂದು ಸಾಯಿನಾಥ್ ಹೇಳಿದರು.
ಇದನ್ನೂ ಓದಿ: ಹಲವು ಬಗೆಯಲ್ಲಿ ಗೆದ್ದ ರೈತರು ಮತ್ತು ಎಲ್ಲ ವಿಧದಲ್ಲೂ ಸೋತ ಮಾಧ್ಯಮ : ಪಿ. ಸಾಯಿನಾಥ್
“ಕೃಷಿ ನಿಯಂತ್ರಿಸುವ ಕೆಲಸ ನಡೆಯುವ ಇಂತಹ ಸಂದರ್ಭದಲ್ಲಿ ನಾವು ಮಾಡಬೇಕಾದ ಕೆಲಸ ಮಹತ್ವವಾಗಿದೆ. ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಆ ಕೃಷಿಕಾಯ್ದೆಗಳನ್ನು ರಾಜ್ಯದಲ್ಲಿ ರದ್ದು ಮಾಡುವುದಾಗಿ ಹೇಳಿದೆ. ಆ ಬದ್ದತೆಯನ್ನು ಜಾರಿ ಮಾಡುವಂತೆ ರೈತರು ಮತ್ತು ರೈತ ಸಂಘಟಗಳು ಸರ್ಕಾರಕ್ಕೆ ಒತ್ತಡವನ್ನು ಹಾಕಬೇಕಿದೆ. ನಾವು ಈಗ ವಿಭಿನ್ನ ಸನ್ನಿವೇಶದಲ್ಲಿ ಇದ್ದೇವೆ. ಸ್ವಾಮಿನಾಥನ್ ಆಯೋಗದ ಶಿಫಾರಸುಗಳಲ್ಲಿ ಒಂದಿಷ್ಟು ಅಂಶಗಳು ಪ್ರಗತಿಪರವಾಗಿವೆ. ಯುಪಿಎ ಸರ್ಕಾರ ಹಾಗೂ ಎನ್ಡಿಎ ಸರ್ಕಾರಗಳು ಈ ಅಂಶಗಳನ್ನು ಕೊಲೆ ಮಾಡುತ್ತಿವೆ”
“ಯುಪಿಎ ಅವಧಿಯಲ್ಲಿ ಸಚಿವರಾಗಿದ್ದ ಶರದ್ ಪವಾರ್ ಸಂಸತ್ತಿನಲ್ಲಿ ಆಯೋಗದ ವಿಚಾರಗಳನ್ನು ಚರ್ಚೆ ಮಾಡಲಿಲ್ಲ. 2014ರ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ, ಸ್ವಾಮಿನಾಥನ್ ವರದಿಯನ್ನು ಜಾರಿ ಮಾಡುವುದಾಗಿ ಹೇಳಿ, ರೈತರಿಂದ ಮತ ಪಡೆದು ಜಾರಿ ಮಾಡದೆ ರೈತರಿಗೆ ಮೋಸ ಮಾಡಿತು” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ”
“ರೈತರ ಚಳುವಳಿ ಉತ್ತುಂಗದಲ್ಲಿರುವಾಗ ಸುಪ್ರಿಂ ಮಧ್ಯಪ್ರವೇಶಿಸಿ ನಾಲ್ಕಾರು ತಿಂಗಳಲ್ಲಿ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಹೇಳಿತು. ಆಗ ಕೇಂದ್ರ ಸರ್ಕಾರ ಸಮಿತಿಯನ್ನು ರಚಿಸಿತು. ಅದರಲ್ಲಿ ರೈತರಿಗಿಂತ, ಕಾರ್ಪರೇಟ್ ಕಂಪನಿಗೆ ಸೇರಿದವರೆ ಹೆಚ್ಚಿದ್ದರು. ಬಹಳಷ್ಟ ಜನ ರೈತರು ಆ ಸಮಿತಿ ಸಭೆಗೆ ಮೊದಲೆ ರಾಜೀನಾಮೆ ನೀಡದರು. ಆ ಸಮಿತಿ ಸ್ವಯಂ ಬರ್ಕಾಸ್ತಾಯಿತು. ಇದರರ್ಥ ರೈತರ ಸಮಸ್ಯೆಗಳನ್ನು ಅರಿಯಲು ಸಮಿತಿಗಳನ್ನು ರಚಿಸಿ ಕಾಲಹರಣ ಮಾಡಿ ರೈತರನ್ನು ಸಾಯಿಸುವುದೇ ಆಗಿದೆ. ಹಾಗಾಗಿ ಸ್ವಾಮಿನಾಥನ್ ಆಯೋಗದ ಸಲಹೆಗಳ ಮುಂದೆ ಯಾವ ಆಯೋಗವು ಬೇಕಿಲ್ಲ ಅದನ್ನು ಜಾರಿ ಮಾಡಬೇಕು” ಎಂದರು.
ಇದನ್ನೂ ಓದಿ: ವಾಕ್ ಸ್ವಾತಂತ್ರ್ಯಕ್ಕೆ ಬೆಲೆ ಕೊಡದವರಿಂದ ಜೈಲುಪಾಲಾಗುತ್ತಿದ್ದೆವೆ: ಪಿ.ಸಾಯಿನಾಥ್
AIKS ನ ಜಂಟಿ ಕಾರ್ಯದರ್ಶಿ ಡಿ. ರವೀಂದ್ರನ್ ಮಾತನಾಡಿ, ಮೋದಿ ಸರ್ಕಾರದ 9 ವರ್ಷದ ಅವಧಿಯಲ್ಲಿ ಒಂದು ಲಕ್ಷಜನ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಪಿ. ಸಾಯಿನಾಥ್ ರವರು ವ್ಯಕ್ತಪಡಿಸಿರುವ ಕಳವಳನ್ನು ರೈತರು, ರೈತ ಸಂಘಗಳು ಗಂಭೀರವಾಗಿ ಯೋಚಿಸಬೇಕಿದೆ. ಭಾರತದಲ್ಲಿ ಕೃಷಿಯ ಸಮಸ್ಯೆ ಏನಿದೆ ಅನ್ನುವುದನ್ನು ಅರಿಯಬೇಕಿದೆ. ಸಕ್ಕರೆ, ಹಾಲು ಎಲ್ಲವನ್ನೂ ಭಾರತ ಉತ್ಪಾದನೆ ಮಾಡುತ್ತಿದೆ. ಇಷ್ಟೊಂದು ಸಾಧನೆಯ ಹಿಂದೆ ರೈತರ ಶ್ರಮ ಇದೆ. ಆದರೆ ಲಾಭ ರೈತರ ಬದಲು ಕಾರ್ಪೋರೇಟ್ ಕಂಪನಿಗಳಿಗೆ ಆಗುತ್ತಿದೆ. ಕೋವಿಡ್ ಸಮಯದಲ್ಲಿ ಸರ್ಕಾರಿ ಕಚೇರಿಗಳು, ಸಾರಿಗೆ, ಶಾಲೆ ಎಲ್ಲವೂ ಬಂದ್ ಆಗಿತ್ತು, ಆದರೆ ಕೃಷಿ ಚಟುವಟಿಕೆಗಳು ನಿಂತಿರಲಿಲ್ಲ. ದೇಶದ ಜನರಿಗೆ ಆಹಾರ ಉತ್ಪಾದನೆಯಲ್ಲಿ ರೈತರು ತೊಡಗಿಕೊಂಡಿದ್ದರು” ಎಂದು ರವೀಂದ್ರನ್ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂತ ರೈತ ಸಂಘದ ರಾಜ್ಯಾಧ್ಯಕ್ಷ ಜಿ.ಸಿ. ಬಯ್ಯಾರೆಡ್ಡಿ ವಹಿಸಿದ್ದರು. ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಟಿ. ಯಶವಂತ ಪ್ರಾಸ್ಥಾವಿಕವಾಗಿ ಮಾತನಾಡಿದರು. ರಾಜ್ಯ ಹಣಕಾಸು ಕಾರ್ಯದರ್ಶಿ ಎಚ್. ಆರ್. ನವೀನ್ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ಯು. ಬಸವರಾಜ, ಬಿ. ಎಸ್. ಸೊಪ್ಪಿನ್, ವೆಂಕಟಾಚಲಯ್ಯ, ಪಿ. ಆರ್. ಸೂರ್ಯನಾರಾಯಣ, ಶರಣ ಬಸ್ಸಪ್ಪ ಮಮಶೆಟ್ಟಿ, ರಾಜ್ಯ ಸಹಕಾರ್ಯದರ್ಶಿ ಜಿ. ನಾಗರಾಜ, ಡಾ.ಸಾಯಬಣ್ಣ ಗುಡಬಾ, ಎನ್ಎಲ್ ಭರತ್ರಾಜ್ ಇದ್ದರು. ಕಾರ್ಯಕ್ರಮದ ನಿರ್ವಣೆಯನ್ನು ರಾಜ್ಯ ಉಪಾಧ್ಯಕ್ಷ ಶಾಂತಾರಂ ನಾಯಕ ನಿರ್ವಹಿಸಿದರು.
ವಿಡಿಯೊ ನೋಡಿ: ಧರ್ಮಸ್ಥಳ ಪದ್ಮಲತಾ ಕೊಲೆಯಾದದ್ದು ಹೇಗೆ? ದೇವಾನಂದರಿಗೆ ಬೆದರಿಕೆ ಹಾಕಿದ್ದು ಯಾರು??