“ಮುಸ್ಲಿಂ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಸತತ ಕರೆ” ಗಳ ವಿರುದ್ಧ ಸುಪ್ರಿಂ ಕೋರ್ಟಿಗೆ ಬೃಂದಾ ಕಾರಟ್‍ ಅರ್ಜಿ

ನವದೆಹಲಿ : ದ್ವೇಷ ಭಾಷಣಗಳ ವಿರುದ್ಧ ಸುಪ್ರಿಂ ಕೋರ್ಟಿನಲ್ಲಿ ನಡೆಯುತ್ತಿರುವ ಒಂದು  ವಿಚಾರಣೆಯಲ್ಲಿ ತಮ್ಮನ್ನೂ ಕಕ್ಷಿದಾರರಾಗಿ ಸೇರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಸದಸ್ಯರೂ ಮತ್ತು ಮಾಜಿ ರಾಜ್ಯಸಭಾ ಸದಸ್ಯರೂ ಆದ ಬೃಂದಾ ಕಾರಟ್‍ ಮತ್ತು ದಿಲ್ಲಿ ಸಿಪಿಐ(ಎಂ) ರಾಜ್ಯ ಕಾರ್ಯದರ್ಶಿ ಕೆ ಎಂ ತಿವಾರಿ ಆಗಸ್ಟ್ 17ರಂದು ಅರ್ಜಿ ಸಲ್ಲಿಸಿದ್ದಾರೆ. ಈಗಾಗಲೇ ಪತ್ರಕರ್ತೆ ಶಾಹೀನ್‍ ಅಬ್ದುಲ್ಲ ದೇಶದಲ್ಲಿ ಹೆಚ್ಚುತ್ತಿರುವ ದ್ವೇಷ/ದ್ವೇಷಭಾಷಣಗಳನ್ನು ನಿಲ್ಲಿಸುವಂತೆ ನಿರ್ದೇಶನಗಳನ್ನು ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಒಂದು ರಿಟ್‍ ಅರ್ಜಿಯನ್ನು ಸಲ್ಲಿಸಿದ್ದರು.

ವಿಶ್ವ ಹಿಂದೂ ಪರಿಷದ್‍ ಮತ್ತು ಅದರ ಯುವ ವಿಭಾಗ ಹರ್ಯಾಣದ ನೂಹ್‍ ಜಿಲ್ಲೆಯಲ್ಲಿನ ಕೋಮು ಘಗಲಭೆಗಳನ್ನು ಕುರಿತಂತೆ ರಾಷ್ಟ್ರದ ರಾಜಧಾನಿಯಲ್ಲಿ ಮತಪ್ರದರ್ಶನಗಳನ್ನು ನಡೆಸುತ್ತಿರುವ ಹಿನ್ನೆಲೆಯಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿದೆ. ದಿಲ್ಲಿಯ ನಂಗ್ಲೊಯಿ, ಗೋಂಡಾ ಚೌಕ್ ಮುಂತಾದ 23 ಕಡೆಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ಹಿಂದೂ ಧರ್ಮದ ಹೆಸರಿನಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಜನರನ್ನು ಪ್ರಚೋದಿಸಲಾಗಿದೆ. ರಾಷ್ಟ್ರೀಯ ರಾಜಧಾನಿಯ ವಿವಿಧ ಭಾಗಗಳಲ್ಲಿ ನಡೆಯುತ್ತಿರುವ ಇಂತಹ ಸಭೆಗಳಲ್ಲಿ ಮುಸ್ಲಿಂ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರಕ್ಕೆ ಕರೆ ನೀಡಲಾಗುತ್ತಿದೆ. ಈ ಭಾಷಣಗಳು ಸ್ಪಷ್ಟವಾಗಿಯೂ ಭಾರತೀಯ ದಂಡ ಸಂಹಿತೆಯ ಹಲವು ವಿಭಾಗ 153ಎ, 153ಬಿ, 295ಎ, 505(1) ಮುಂತಾದವುಗಳ ಅಡಿಯಲ್ಲಿ  ಅಪರಾಧಗಳು. ಆದರೆ, ದುರದೃಷ್ಟವಶಾತ್, ಪೋಲೀಸರಾಗಲೀ, ಆಡಳಿತವಾಗಲೀ ಇಂತಹ ಜನಗಳ ವಿರುದ್ಧ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ, ಅಂತಹ ಸಭೆಗಳನ್ನು ನಿಲ್ಲಿಸುತ್ತಲೂ ಇಲ್ಲ ಎಂದು ಈ ಅರ್ಜಿಯಲ್ಲಿ ತಿಳಿಸಲಾಗಿದೆ.

ಎರಡು ವಾರಗಳ ಹಿಂದೆ ಸಪ್ರಿಂ ಕೋರ್ಟ್‍ ರಾಷ್ಟ್ರೀಯ ರಾಜಧಾನಿಯಲ್ಲಿ ವಿಹೆಚ್‍ಪಿ -ಭಜರಂಗ ದಳ ನಡೆಸುತ್ತಿರುವ ರ್ಯಾಲಿಗಳಲ್ಲಿ ದ್ವೇಷ ಭಾಷಣ ಅಥವ ಹಿಂಸಾಚಾರ ನಡೆಯದಂತೆ ಖಚಿತ ಪಡಿಸಬೇಕು ಎಂದು ಪೋಲೀಸ್‍ ಅಧಿಕಾರಿಗಳಿಗೆ ನಿರ್ದೇಶನ ನೀಡಿತ್ತು.

ಇದನ್ನೂ ಓದಿಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಮೇಲೆ ಸರಕಾರದ ದಾಳಿ – ಗ್ರಾಮೀಣ ಬಡವರ ಮೇಲೆ ಅಘೋಷಿತ ಯುದ್ಧ-ಬೃಂದಾ ಕಾರಟ್

ಎರಡು ವಾರಗಳ ಹಿಂದೆ, ಮೂಲ ಅರ್ಜಿದಾರರಾದ ಶಾಹೀನ್‍ ಅಬ್ದುಲ್ಲ ಕೆಲವು ಗುಂಪುಗಳು ಮುಸ್ಲಿಂ ಸಮುದಾಯದ ಆರ್ಥಿಕ ಮತ್ತು ಸಾಮಾಜಿಕ ಬಹಿಷ್ಕಾರದ ಕರೆಗಳನ್ನು ನೀಡುತ್ತಿರುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೇಳಿ ಇನ್ನೊಂದು ಅರ್ಜಿಯನ್ನು ಸಲ್ಲಿಸಿದ್ದರು. ದಿಲ್ಲಿ ಹೈಕೋರ್ಟ್‍ ಮಹಿಳಾ ವಕೀಲರುಗಳ ವೇದಿಕೆ ಕೂಡ ಈ ವಿಷಯದ ಮೇಲೆ ಭಾರತದ ಮುಖ್ಯ ನ್ಯಾಯಾಧೀಶರಿಗೆ ಪತ್ರ ಅರ್ಜಿಯನ್ನು ಕಳಿಸಿದೆ.

ಆಗಸ್ಟ್ 11ರಂದು ನ್ಯಾಯಮೂರ್ತಿ ಸಂಜೀವ ಖನ್ನ ನೇತೃತ್ವದ ಪೀಠ ದ್ವೇಷ ಭಾಷಣಗಳ ಸಮಸ್ಯೆಗೆ ಒಂದು ಪರಿಹಾರವನ್ನು ಕಂಡು ಹಿಡಿಯಲೇ ಬೇಕು ಎಂದು ಹೇಳಿತ್ತು. ದ್ವೇಷ ಭಾಷಣಗಳ ದೂರುಗಳನ್ನು ಪರಿಶೀಲಿಸಲು ಹಿರಿಯ ಅಧಿಕಾರಿಗಳ ಸಮಿತಿಗಳನ್ನು ರಚಿಸುವಂತೆ ಡಿಜಿಪಿ ಗಳಿಗೆ ನಿರ್ದೇಶನ ನೀಡುವ ಬಗ್ಗೆ ಯೋಚಿಸಿತ್ತು.

ಇತ್ತೀಚೆಗೆ ಎಪ್ರಿಲ್‍ನಲ್ಲಿ ನ್ಯಾಯ ಮೂರ್ತಿಗಳಾದ ಕೆ ಎಂ ಜೊಸೆಫ್‍ ಮತ್ತು ಬಿ ವಿ ನಾಗರತ್ನ ಅವರಿದ್ದ ಸುಪ್ರಿಂ ಕೋರ್ಟ್‍ ಪೀಠ ಮೇಲೆ ಉಲ್ಲೇಖಿಸಿದ ರಿಟ್‍ ಅರ್ಜಿಯ ವಿಚಾರಣೆಯ ವೇಳೆಯಲ್ಲಿ , ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದ್ವೇಷ ಭಾಷಣಗಳನ್ನು ತಾವಾಗಿಯೇ ಗಮನಿಸಿ ಅವುಗಳ ವಿರುದ್ದ  ಕ್ರಮ ಕೈಗೊಳ್ಳಬೇಕು ಮತ್ತು “ ಯಾವುದೇ ದೂರುಗಳು ಬರದಿದ್ದರೂ” ಕೇಸುಗಳನ್ನು ದಾಖಲಿಸಬೇಕು ಎಂದು ನಿರ್ದೇಶನ ನೀಡಿತ್ತು. ಅಲ್ಲದೆ ದೋಷಿಗಳ ವಿರುದ್ಧ ಕಾನೂನಿನ ಅಡಿಯಲ್ಲಿ ತಕ್ಷಣವೇ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದೂ ನಿರ್ದೇಶನ ನೀಡಿತ್ತು. ನಮ್ಮ ದೇಶದ ಜಾತ್ಯತೀತ ಸ್ವರೂಪವನ್ನು ಕಾಯ್ದುಕೊಳ್ಳಲು ದೋಷಿ ಯಾವ ಧರ್ಮಕ್ಕೆ  ಸೇರಿದ್ದದವರೆಂಬುದನ್ನು ಪರಿಗಣಿಸದೆಯೇ ಕ್ರಮ ಕೈಗೊಳ್ಳಬೇಕು  ಎಂಬುದನ್ನೂ ಆದೇಶ ಸ್ಪಷ್ಟಮಾಡಿತ್ತು ಎಂಬುದನ್ನು ಗಮನಿಸಬೇಕು.

ಇದು “ಭಾರತದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಗುರಿಯಿಡುವ, ಬೆದರಿಸುವ ಪಿಡುಗು ಹೆಚ್ಚುತ್ತಿರುವುದರ” ವಿರುದ್ಧ ಅರ್ಜಿಯ ವಿಚಾರಣೆಯ ವೇಳೆಯಲ್ಲಿ ಕಳೆದ ಅಕ್ಟೋಬರಿನಲ್ಲಿ ನೀಡಿದ್ದ ಆದೇಶದ ಮುಂದುವರಿಕೆಯಾಗಿ  ಬಂದಿತ್ತು ಎಂಬುದನ್ನು ಗಮನಿಸಬೇಕು. ಆ ಆದೇಶವನ್ನು  ದಿಲ್ಲಿ, ಉತ್ತರಪ್ರದೇಶ ಮತ್ತು ಉತ್ತರಾಖಂಡದ ರಾಜ್ಯಗಳಿಗೆ ನೀಡಲಾಗಿತ್ತು.

ಅದರಲ್ಲಿ “ ಭಾರತದ ಸಂವಿಧಾನ ಭಾರತ ಒಂದು ಜಾತ್ಯತೀತ ದೇಶ ಮತ್ತು ಬಳಗ ಎಂದು ಕಂಡರಿಸುತ್ತದೆ, ವ್ಯಕ್ತಿಯ ಘನತೆ ಮತ್ತು ದೇಶದ ಐಕ್ಯತೆ ಮತ್ತು ಸಮಗ್ರತೆ ಪೀಠಿಕೆಯಲ್ಲಿ ಪ್ರತಿಷ್ಠಾಪಿಸಿರುವ ಮಾರ್ಗದರ್ಶಕ ಸೂತ್ರಗಳು. ವಿಭಿನ್ನ ಧರ್ಮಗಳು ಅಥವ ಜಾತಿಗಳಿಂದ ಬರುವ ಸಮುದಾಯದ ಸದಸ್ಯರು ಸಾಮರಸ್ಯದಿಂದ ಬದುಕಲು ಆಗದಿದ್ದರೆ ಬಳಗ ಎಂಬುದು ಸಾಧ್ಯವಿಲ್ಲ” ಎಂದು ನ್ಯಾಯಾಲಯ ಆ ಆದೇಶದಲ್ಲಿ ಹೇಳಿತ್ತು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

Donate Janashakthi Media

Leave a Reply

Your email address will not be published. Required fields are marked *