ಸರ್ಕಾರಿ ಕಾಲೇಜುಗಳಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯ ಕ್ಯಾಂಟೀನ್‌ಗಳನ್ನು ಆರಂಭಿಸಿ – ಪ್ರಣೇಶ್ ನೆಲ್ಯಾಡಿ

ಬೆಂಗಳೂರು: ಸರ್ಕಾರಿ ಕಾಲೇಜುಗಳಲ್ಲಿ ಇಂದಿರಾ ಕ್ಯಾಂಟೀನ್ ಮಾದರಿಯ ಕ್ಯಾಂಟೀನ್‌ಗಳನ್ನು ಆರಂಭಿಸಬೇಕು ಎಂದು  ಸಂವಾದ ಸಂಸ್ಥೆಯ ಒಡನಾಡಿ ಪ್ರಣೇಶ್‌ ನೆಲ್ಯಾಡಿ ಅವರು ಮನವಿ ಮಾಡಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳಿಗೆ ಮನವಿ ನೀಡಿದ ನಂತರ ಜನಶಕ್ತಿ ಮೀಡಿಯ ಜೊತೆ ಮಾತನಾಡಿ, ಕರ್ನಾಟಕದಲ್ಲಿ ಯುವಜನರ ಸಮಸ್ಯೆಗಳನ್ನು ಅರಿತು ಯುಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಬೇಕಾಗಿದೆ. ಆದರಿಂದ ನಾವು ಕಳೆದ 3 ತಿಂಗಳಿಂದ ಕಾಲೇಜ್/ ಯೂನಿವರ್ಸಿಟಿಯಲ್ಲಿ ಬಿಸಿ ಊಟ ಅಥವಾ ಇಂದಿರಾ ಕ್ಯಾಂಟೀನ್ ಮಾದರಿಯ “ಕ್ಯಾಂಟೀನ್‌ಗಳನ್ನು” ಕ್ಯಾಂಪಸ್‌ ಒಳಗಡೆ ಮಾಡುವಂತೆ ಅಭಿಯಾನ ಮಾಡುತ್ತಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ:ಬಿಬಿಎಂಪಿ ಇಂದಿರಾ ಕ್ಯಾಂಟೀನ್‌: ಆಹಾರ ನೀಡಲೂ ನಿರ್ಧಾರ

ಸರ್ಕಾರಿ ಶಾಲಾ ಕಾಲೇಜಿನಲ್ಲಿನ ವಿದ್ಯಾರ್ಥಿಗಳು ತಮ್ಮ ಹಣಕಾಸಿನ ವಿಚಾರ, ವೈಯಕ್ತಿಕ ಹಾಗೂ ದೂರದ ಊರಿನಿಂದ ಬರುವ ಕಾರಣಕ್ಕೆ ತಮ್ಮ ಶೈಕ್ಷಣಿಕ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಹಲವಾರು ಸವಾಲುಗಳನ್ನು ಎದುರಿಸುತ್ತಾರೆ. ಹೆಚ್ಚಾಗಿ ಸರ್ಕಾರಿ ವಿದ್ಯಾಸಂಸ್ಥೆಗಳಲ್ಲಿ ವ್ಯಾಸಂಗ ಮಾಡುವವರು ಆರ್ಥಿಕವಾಗಿ ಹಿಂದುಳಿದಿರುವ ಹಿನ್ನಲೆಯಿಂದ ಬಂದವರಾಗಿರುತ್ತಾರೆ‌ ಹಾಗೂ ಸರಿಯಾದ ಕ್ಯಾಂಟೀನ್ ವ್ಯವಸ್ಥೆಯು ಇಲ್ಲದೆ ಮದ್ಯಾಹ್ನದ ಆಹಾರವನ್ನು ಸಹ ಪಡೆಯಲು ಸಾದ್ಯವಾಗುತ್ತಿಲ್ಲ.

ಕೆಲವು ವಿದ್ಯಾರ್ಥಿಗಳು ವೈಯಕ್ತಿಕ ಕಾರಣದಿಂದ ಮನೆಯಿಂದ ಬುತ್ತಿ ಕಟ್ಟಿಕೊಂಡು ಊಟವನ್ನು ತರಲಾಗುವುದಿಲ್ಲ. ಬಹು ದೂರದಿಂದ ಬರುವ ಎಷ್ಟೋ ವಿದ್ಯಾರ್ಥಿಗಳು ಬೆಳಿಗ್ಗಿನ ಉಪಹಾರ ಸೇವಿಸದೇ ಬರುತ್ತಾರೆ.  ಮದ್ಯಾಹ್ನ ಹೋಟೇಲ್‌ಗಳಲ್ಲಿ ಊಟ ಮಾಡಬೇಕಾದರೆ, ದಿನಾಲೂ ಹಣ ಕೊಟ್ಟು ಊಟ ಮಾಡಲು ಹೆಚ್ಚಿನವರಿಗೆ ಸಾಧ್ಯವಾಗುವುದಿಲ್ಲ. ಹಣ ಇದ್ದರೂ ಕೆಲವು ಕಾಲೇಜುಗಳಲ್ಲಿ ಕ್ಯಾಂಟೀನ್‌ಗಳೇ ಇರುವುದಿಲ್ಲ. ಸರ್ಕಾರಿ ಕಾಲೇಜುಗಳ ಕಟ್ಟಡಗಳಿಗೆ ಪೇಟೆಯಿಂದ ಬಹುದೂರ ಜಮೀನು ನೀಡಿರುವುದರಿಂದ ಕಾಲೇಜಿನ ಅಕ್ಕ-ಪಕ್ಕ ಅಂಗಡಿಗಳೂ, ಹೋಟೇಲ್‌ ಗಳು ಇರುವುದಿಲ್ಲ. ಊಟ ಇಲ್ಲದೆ ಕಲಿಯುವುದು ಕಷ್ಟ, ಇದು ವಿದ್ಯಾರ್ಥಿಗಳ ಆರೋಗ್ಯದ ಮೇಲೆ, ಶೈಕ್ಷಣಿಕ ವಾತಾವರಣದ ಮೇಲೆ ಪರಿಣಾಮ ಬೀರುತ್ತದೆ ಎಂದರು.

ರಾಜ್ಯದಲ್ಲಿ ಸುಮಾರು 24ಕ್ಕೂ ಹೆಚ್ಚು ವಿವಿಗಳು, 3800ಕ್ಕೂ ಹೆಚ್ಚು ಸರಕಾರಿ ಕಾಲೇಜುಗಳಿವೆ. ಇವುಗಳಲ್ಲಿ ಅಂದಾಜು20 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಧ್ಯನ ನಡೆಸುತ್ತಿದ್ದಾರೆ. ಇಂತಹ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್‌ಗಳನ್ನು ತೆರೆದರೆ ಅದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಹೀಗಾಗಿ ಸರ್ಕಾರಿ ಕಾಲೇಜು, ವಿಶ್ವವಿದ್ಯಾಲಯಗಳಲ್ಲೇ ಇಂದಿರಾ ಕ್ಯಾಂಟೀನ್ ಮಾದರಿಯ ವ್ಯವಸ್ಥೆ ಆರಂಭವಾಗಲಿ. ಇದರಿಂದ ಅನೇಕ ಬಡ ವಿದ್ಯಾರ್ಥಿಗಳಿಗೆ ಕನಿಷ್ಟ ಆಹಾರ ದೊರಕುವ ಜತೆಗೆ  ಪೌಷ್ಟಿಕ ಆಹಾರ ದೊರಕುವುದರಿಂದ ವಿದ್ಯಾರ್ಥಿಗಳು ಆರೋಗ್ಯಕರವಾಗಿ‌ ಇರಲು ಸಾಧ್ಯ. ಅಷ್ಟೆ ಅಲ್ಲದೆ ಸರ್ಕಾರಿ ಕಾಲೇಜುಗಳ ಶಿಕ್ಷಣ ಪ್ರವೇಶವನ್ನು ಉತ್ತೇಜಿಸಲು ಸಾಧ್ಯವಾಗುತ್ತದೆ ಎಂದು  ವಿವರಿಸಿದರು.

ಇದು ತುರ್ತಾಗಿ ನಡೆಯಬೇಕಾಗಿರುವ ಕೆಲಸವಾಗಿದ್ದು, ಆ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕಾಲೇಜು ಮತ್ತು ವಿವಿಗಳಲ್ಲಿ ಇಂದಿರಾ ಕ್ಯಾಂಟೀನ್‌ ಇಲ್ಲವೆ ಇಂದಿರಾ ಕ್ಯಾಂಟೀನ್‌ ಮಾದರಿಯ ಕಡಿಮೆ ದರದಲ್ಲಿ ಊಟ ನೀಡುವ ಯೋಜನೆಯನ್ನು ಜಾರಿಗೊಲಿಸಲು ಮುಂದಾಗಬೇಕಿದೆ.

 

 

Donate Janashakthi Media

Leave a Reply

Your email address will not be published. Required fields are marked *