ಕ್ರಿಶ್ಚಿಯನ್ ಮತ್ತು ಮುಸ್ಲಿಮರ ವಿರುದ್ಧ ದ್ವೇಷ ಹರಡಿದ ಚೆನ್ನೈ ಪೊಲೀಸ್ ಇನ್ಸ್ಪೆಕ್ಟರ್ | ಅಮಾನತು
ತಮಿಳುನಾಡು: ಮುಸ್ಲಿಂ ಮತ್ತು ಕ್ರಿಶ್ಚಿಯನ್ ಸಮುದಾಯಗಳ ವಿರುದ್ಧ ದ್ವೇಷ ಭಾಷಣ ಮಾಡಿ ಅದರ ರೆಕಾರ್ಡ್ ಅನ್ನು ವಾಟ್ಸಾಪ್ ಗ್ರೂಪ್ಗೆ ಕಳುಹಿಸಿದ ಆರೋಪ ಮೇಲೆ ಚೈನ್ನೈ ಪೊಲೀಸ್ ಇನ್ಸ್ಪೆಕ್ಟರ್ ಒಬ್ಬರು ಸೋಮವಾರ ಅಮಾನತುಗೊಂಡಿದ್ದಾರೆ. ಗ್ರೇಟರ್ ಚೆನ್ನೈ ಪೊಲೀಸ್ ಕಮಿಷನರ್ ಸಂದೀಪ್ ರೈ ರಾಥೋಡ್ ಈ ಅಮಾನತು ಆದೇಶವನ್ನು ಹೊರಡಿಸಿದ್ದು, ವಾಟ್ಸಪ್ ಗ್ರೂಪ್ನಲ್ಲಿ ಆಡಿಯೊ ಹಂಚಿಕೊಂಡಿದ್ದು ಕಂಡುಬಂದಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಆರೋಪಿಯನ್ನು ಪುಲಿಯಂತೋಪೆ ಸಂಚಾರ ತನಿಖಾ ವಿಭಾಗದ ಇನ್ಸ್ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಪಿ. ರಾಜೇಂದ್ರನ್ ಎಂದು ಗುರುತಿಸಲಾಗಿದೆ. ವೈರಲ್ ಆಡಿಯೊದಲ್ಲಿ ಕೋಮು ವಿಭಜನೆ ಮಾಡುವಂತಹ ಹೇಳಿಕೆಗಳನ್ನು ಪೋಸ್ಟ್ ಮಾಡಬೇಡಿ ಜನರಿಗೆ ಹೇಳಿ, ನಂತರ ಬಲಪಂಥೀಯರ ಪರ ಹೇಳಿಕೆಗಳನ್ನು ನೀಡಿದ್ದು ದಾಖಲಾಗಿದೆ.
ಇದನ್ನೂ ಓದಿ: ಮಣಿಪುರ ಹಿಂಸಾಚಾರ:ತನಿಖೆ ಮೇಲ್ವಿಚಾರಣೆಗೆ ತ್ರಿಸದಸ್ಯ ಸಮಿತಿ ರಚಿಸಿದ ಸುಪ್ರೀಂ ಕೋರ್ಟ್
ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಧಾರ್ಮಿಕ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಕ್ಕಾಗಿ ರಾಜೇಂದ್ರನ್ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಗ್ರೇಟರ್ ಚೆನ್ನೈ ಪೊಲೀಸ್ ಸೋಮವಾರ ಟ್ವೀಟ್ ಮಾಡಿದೆ. ಘಟನೆಯ ವಿಚಾರಣೆ ನಡೆಸಿದ ಅಧಿಕಾರಿಗಳು ಇಲಾಖಾ ವಿಚಾರಣೆಗಾಗಿ ರಾಜೇಂದ್ರನ್ ಅವರನ್ನು ಅಮಾನತುಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
Inspector of Police, placed under suspension for sharing objectionable religious opinion on social media.
மதரீதியாக சமூக வலைதளத்தில் கருத்து தெரிவித்த காவல் ஆய்வாளர் தற்காலிக பணி நீக்கம்.
— GREATER CHENNAI POLICE -GCP (@chennaipolice_) August 7, 2023
“ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡುವ ವೇಳೆ, ಸೂಕ್ಷ್ಮ ಸಮಸ್ಯೆಗಳನ್ನು ನಿಭಾಯಿಸುವಾಗ ಹೇಗೆ ವರ್ತಿಸಬೇಕು ಎಂಬುದರ ಕುರಿತು ಮಾರ್ಗದರ್ಶನ ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ಕೂಡಾ ಸಹಿಷ್ಣುತೆ ಮತ್ತು ಅವರ ವೈಯಕ್ತಿಕ ನಂಬಿಕೆಗಳು ಕರ್ತವ್ಯದಲ್ಲಿ ಪ್ರತಿಬಿಂಬಿಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಅವರಿಗೆ ಹೇಳಲಾಗುತ್ತದೆ. ಅಂತಹ ಯಾವುದೇ ಘಟನೆಗಳು ಸಂಭವಿಸಿದಲ್ಲಿ, ಈ ಪ್ರಕರಣದಲ್ಲಿ ಪ್ರಾರಂಭಿಸಿದಂತೆ ಕಠಿಣ ಕ್ರಮವನ್ನು ತೆಗೆದುಕೊಳ್ಳುತ್ತೇವೆ” ಎಂದು ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಕಪಿಲ್ ಕುಮಾರ್ ಸರತ್ಕರ್ ಹೇಳಿದ್ದಾರೆ.
“ಇಷ್ಟೆ ಅಲ್ಲದೆ, ನಿಯತಕಾಲಿಕವಾಗಿ ಲಿಂಗ ಸಂವೇದನೆ, ಅಲ್ಪಸಂಖ್ಯಾತರು ವಿಚಾರದಲ್ಲಿ ಹೇಗೆ ವರ್ತಿಸಬೇಕು ಎಂಬ ಸಲಹೆಗಳನ್ನು ಅಧಿಕಾರಿಗಳಿಗೆ ನೀಡುತ್ತಿದ್ದೇವೆ. ದುರ್ಬಲ ವರ್ಗಗಳ ಬಗ್ಗೆ ಅವರ ಮನೋಭಾವ ಹೇಗಿದೆ ಎಂಬ ಮೇಲ್ವಿಚಾರಣೆ ಮಾಡಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.
ವಿಡಿಯೊ ನೋಡಿ: ಬಾಕಿ ಬಿಲ್ ಪಾವತಿಗೆ ವಿಳಂಬ : “ಬೆಂಗಳೂರಿನ ಎಲ್ಲಾ ಕಾಮಗಾರಿಗಳು ಬಂದ್”– ಸರ್ಕಾರಕ್ಕೆ ಖಡಕ್ ಎಚ್ಚರಿಕೆ