ಎನ್‍ಸಿ ಡಬ್ಲ್ಯು ಅಧ್ಯಕ್ಷೆಯ ರಾಜೀನಾಮೆಗೆ ಮಹಿಳಾ ಸಂಘಟನೆಗಳ ಆಗ್ರಹ

ಮಣಿಪುರದಲ್ಲಿ ಮೂವರು ಮಹಿಳೆಯರನ್ನು ಸಾರ್ವಜನಿಕವಾಗಿ ವಿವಸ್ತ್ರಗೊಳಿಸಿ ಅತ್ಯಾಚಾರವೆಸಗಿದ ಹೇಯ ಘಟನೆಯ ಬಗ್ಗೆ 2023ರ ಜೂನ್ 12ರಂದು ಎನ್‌ಸಿಡಬ್ಲ್ಯುಗೆ ದೂರು ನೀಡಲಾಗಿದ್ದರೂ ರಾಷ್ಟ್ರೀಯ ಮಹಿಳಾ ಆಯೋಗ(ಎನ್‍ಸಿ ಡಬ್ಲ್ಯು) ಒಂದು ತಿಂಗಳಿಗೂ ಹೆಚ್ಚು ಕಾಲ ಸಂಪೂರ್ಣವಾಗಿ ನಿಷ್ಕ್ರಿಯವಾಗಿತ್ತು ಎಂದು ತಿಳಿದು ತಮಗೆ  ಆಘಾತವಾಗಿದೆ ಎಂದು ದೇಶದ ಐದು ಪ್ರಮುಖ ಮಹಿಳಾ ಸಂಘಟನೆಗಳು ಆಯೋಗದ ಅಧ್ಯಕ್ಷೆ ರೇಖಾ ಶರ್ಮಾರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿವೆ. ಅವರು ಮಣಿಪುರ ಸರ್ಕಾರಕ್ಕೆ ಪತ್ರಗಳನ್ನು ಬರೆದು ಅವರ ಉತ್ತರಕ್ಕೆ ಕಾಯುತ್ತಾ ಕುಳಿತಿದ್ದರು. ಮಣಿಪುರದಲ್ಲಿ ಲೈಂಗಿಕ ದೌರ್ಜನ್ಯದ ಇತರ ಪ್ರಕರಣಗಳಿವೆ ಎಂದೂ ವರದಿಯಾಗಿದೆ.

“ರಾಜ್ಯದಲ್ಲಿ ನಡೆಯುತ್ತಿರುವ ಜನಾಂಗೀಯ ಹಿಂಸಾಚಾರಕ್ಕೆ ಮಹಿಳೆಯರು ನೇರ ಬಲಿಪಶುಗಳಾಗುತ್ತಿದ್ದಾರೆ ಎಂಬುದು ನಿಮಗೆ ತಿಳಿದಿಲ್ಲವೇ?” ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ( ಎಐಡಿಡಬ್ಲ್ಯುಎ) ), ಭಾರತೀಯ ಮಹಿಳೆಯರ ರಾಷ್ಟ್ರೀಯ ಒಕ್ಕೂಟ (ಎನ್‌ಎಫ್‌ಐಡಬ್ಲ್ಯು) ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘ (ಎಐಪಿಡಬ್ಲ್ಯುಎ),  ಅಖಿಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ (ಎಐಎಂಎಸ್‍ಎಸ್‍) ಮತ್ತು ಅಖಿಲ ಭಾರತ ಅಗ್ರಗಾಮಿ ಮಹಿಳಾ ಸಮಿತಿ (ಎಐಎಎಂಎಸ್),  ಖಾರವಾಗಿ ಪ್ರಶ್ನಿಸಿವೆ, ತಮಗೆ ನೀಡಿರುವ ಹುದ್ದೆಗೆ ಅನರ್ಹರೆಂದು ಸಾಬೀತು ಪಡಿಸಿರುವ ಅವರು ಎನ್‍ಸಿಡಬ್ಲ್ಯು ಹುದ್ದೆಗೆ ರಾಜೀನಾಮೆ ನೀಡಬೇಕು ಎಂದೂ ಆಗ್ರಹಿಸಿವೆ.

ಇದಕ್ಕೆ ಮೊದಲು ಎಐಡಿಡಬ್ಲ್ಯುಎ ಪ್ರತ್ಯೇಕವಾಗಿ ರೇಖಾ ಶರ್ಮರವರಿಗೆ ಬರೆದ ಪತ್ರದಲ್ಲಿಯೂ ರಾಷ್ಟ್ರೀಯ ಮಹಿಳಾ ಆಯೋಗವು ಪ್ರಸ್ತುತ ಸರ್ಕಾರದ ನೀತಿಯನ್ನು ಮಾತ್ರ ಮುಂದುವರಿಸುವ ಮತ್ತು ದೇಶಾದ್ಯಂತ ಮಹಿಳೆಯರು ಎದುರಿಸುತ್ತಿರುವ ಇತರ ಸಮಸ್ಯೆಗಳ ನಡುವೆ ಹಿಂಸಾಚಾರದ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳದ ಸಂಸ್ಥೆಯಾಗಿ ತೋರುತ್ತಿದೆ ಎಂದು  ಹೇಳಿತ್ತು.  ಉದಾಹರಣೆಗೆ, ಕೇಂದ್ರ ಸರಕಾರ ಹರಿಯ ಬಿಟ್ಟಿರುವ ಏಕರೂಪ ನಾಗರಿಕ ಸಂಹಿತೆಯ ವಿಷಯಕ್ಕೆ ಸಂಬಂಧಪಟ್ಟಂತೆ  ಆಯೋಗ ಕೇವಲ ಮುಸ್ಲಿಂ ವೈಯಕ್ತಿಕ ಕಾನೂನುಗಳ ಬಗ್ಗೆಯಷ್ಟೇ ಸಮಾಲೋಚನೆಗಳು ಏರ್ಪಡಿಸಿದೆ ಮತ್ತು ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಕುಸ್ತಿಪಟುಗಳು ನಡೆಸಿದ ಹೋರಾಟ ಮತ್ತು ಅಭಿಯಾನದ ಉದ್ದಕ್ಕೂ, ಮತ್ತು ಮಣಿಪುರದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯದ ಸಂದರ್ಭದಲ್ಲಿ, ರಾಷ್ಟ್ರೀಯ ಮಹಿಳಾ ಆಯೋಗವು ಮೂಕ ಪ್ರೇಕ್ಷಕವಾಗಿತ್ತು ಎಂಬ ಸಂಗತಿಯತ್ತ ಅದು ಗಮನ ಸೆಳೆದಿತ್ತು.

ಮಣಿಪುರದಲ್ಲಿ ಮಹಿಳೆಯರಿಗೆ ಕ್ರೂರ ಚಿತ್ರಹಂಸೆ

ಇಡೀ ದೇಶದಲ್ಲಿ ಆತಂಕ ಮೂಡಿಸಿದ ಮಣಿಪುರದ ಕ್ರೂರ ಚಿತ್ರಹಿಂಸೆಯನ್ನು ಪ್ರಸ್ತಾಪಿಸುತ್ತ “ಎನ್‍ಸಿ ಡಬ್ಯು ತನ್ನ ಕರ್ತವ್ಯಕ್ಕೆ ದ್ರೋಹ ಮಾಡಿದೆ ಮತ್ತು ಉದ್ದೇಶಪೂರ್ವಕವಾಗಿ ಈ ಘಟನೆಯನ್ನು ಮುಚ್ಚಿಹಾಕಲು ಪ್ರಯತ್ನಿಸಿದೆ ಎಂದು ನಾವು ಬಲವಾಗಿ ಅಭಿಪ್ರಾಯಪಟ್ಟಿದ್ದೇವೆ. ಏನಿಲ್ಲೆಂದರೂ ಇದು ದೇಶದ ಮಹಿಳೆಯರನ್ನು ರಕ್ಷಿಸುವ ಮತ್ತು ವರ್ಗ, ಜಾತಿ, ಧರ್ಮ, ಭಾಷೆ ಅಥವಾ ಜನಾಂಗೀಯ ಮೂಲವನ್ನು ಲೆಕ್ಕಿಸದೆ ಅವರ ಹಕ್ಕುಗಳನ್ನು ಎತ್ತಿಹಿಡಿಯಲು ಕರ್ತವ್ಯಬದ್ಧವಾಗಿರುವ ಎನ್‍ಸಿ ಡಬ್ಲ್ಯು ನಂತಹ ಗೌರವಾನ್ವಿತ ಸಾರ್ವಜನಿಕ ಸಂಸ್ಥೆಯ ಕಡೆಯಿಂದ ಘೋರ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ” ಎಂದು ರಾಷ್ಟ್ರೀಯ ಮಹಿಳಾ ಸಂಘಟನೆಗಳು ಹೇಳಿವೆ.

ಇದನ್ನೂ ಓದಿ:ಮಣಿಪುರ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣ : ಪ್ರತಿರೋಧವಾಗಿ ಹೊರ ಹೊಮ್ಮಿದ ಕವಿತೆಗಳು

“ನಮ್ಮ ಸಂಘಟನೆಗಳು ರಾಷ್ಟ್ರೀಯ ಮಹಿಳಾ ಆಯೋಗವನ್ನು ಅಸ್ತಿತ್ವಕ್ಕೆ ತರುವ ಹೋರಾಟದಲ್ಲಿ ನಾಯಕತ್ವವನ್ನು ನೀಡಿವೆ.  ಆಯೋಗ ತನ್ನ ಉನ್ನತ ಉದ್ದೇಶವನ್ನು ಈಡೇರಿಸುವಲ್ಲಿ ಸ್ವಾಯತ್ತತೆ ಮತ್ತು ಘನತೆಯನ್ನು ಉಳಿಸಿಕೊಳ್ಳುತ್ತದೆ,  ಆಳುವ ಪಕ್ಷದ ಅಂಗವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ನಿರೀಕ್ಷಿಸಲಾಗುತ್ತದೆ. ಎನ್‌ಸಿಡಬ್ಲ್ಯು ತನ್ನ ಉನ್ನತ ಗುರಿಸಾಧನೆಯಲ್ಲಿ  ಮುಗ್ಗರಿಸದಂತೆ ನೋಡಿಕೊಳ್ಳಲು ನಾವು ಆಗಾಗ್ಗೆ ಧ್ವನಿ ಎತ್ತಿದ್ದೇವೆ. ಇದು ಮಹಿಳೆಯರಿಗೆ ಸಂಬಂಧಿಸಿದ ಅಸಂಖ್ಯಾತ ಸಮಸ್ಯೆಗಳಲ್ಲಿ ಪೂರ್ವಭಾವಿ ಮಧ್ಯಪ್ರವೇಶ ನಡೆಸಿರುವ ಇತಿಹಾಸವನ್ನು ಹೊಂದಿದೆ. ಆದರೆ ನಿಮ್ಮ ಉಸ್ತುವಾರಿಯಲ್ಲಿ, ಈ ಸಂಸ್ಥೆಯು ಆಳುವ ಮಂದಿಗೆ ಪಕ್ಷಪಾತಿಯಾಗುವ ಮಟ್ಟಕ್ಕೆ  ಅವನತಿ ಹೊಂದುವುದನ್ನು ನಾವು ನೋಡಿದ್ದೇವೆ.

ಮಣಿಪುರದ ಅಧಿಕಾರಿಗಳಿಗೆ ತಿಳಿಸಿದ್ದೆವು ಎಂಬ ನಿಮ್ಮ ದಾವೆ ಬಹಳ ತಡವಾದ ಮತ್ತು ಏನೇನೂ ಸಾಲದ ಕ್ರಮ.  ಈ ಸಂಸ್ಥೆಯು ತನಗಿರುವ ಆದೇಶವನ್ನು ಇಷ್ಟೊಂದು ನಾಚಿಕೆಗೇಡಿನ ರೀತಿಯಲ್ಲಿ ದುರ್ಬಲಗೊಳಿಸುವುದನ್ನು ನಾವು ಹಿಂದೆಂದೂ ನೋಡಿಲ್ಲ. ಇಬ್ಬರು ಬುಡಕಟ್ಟು ಮಹಿಳೆಯರ ಮೇಲಿನ ಈ ಕ್ರೂರ ದಾಳಿಯನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸುವ ಮತ್ತು ಮರೆಮಾಚುವ ಮೂಲಕ  ಎನ್‍ಸಿಡಬ್ಲ್ಯು ತನ್ನ ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದೆ, ತನ್ನದೇ ಸ್ಥಾನಕ್ಕೆ ಮಸಿ ಬಳೆದುಕೊಂಡಿದೆ ಮತ್ತು ದೇಶದಲ್ಲಿ ಮಹಿಳಾ ಚಳವಳಿಯು ತನ್ನ ಮೇಲೆ ಇಟ್ಟಿದ್ದ ನಂಬಿಕೆಗೆ ದ್ರೋಹ ಮಾಡಿದೆ ಎಂದು ನಾವು ಭಾವಿಸುತ್ತೇವೆ. ಎನ್‍ಸಿಡಬ್ಲ್ಯು  ಅಧ್ಯಕ್ಷರಾಗಿ, ಈ ನಾಚಿಕೆಗೇಡಿನ ಪರಿಸ್ಥಿತಿಗೆ ನಾವು ನಿಮ್ಮನ್ನು ಹೊಣೆಗಾರರನ್ನಾಗಿ ಮಾಡುತ್ತೇವೆ ಮತ್ತು ನೀವು ಅನರ್ಹರೆಂದು ಸಾಬೀತುಪಡಿಸಿರುವ ಈ ಹುದ್ದೆಗೆ ನಿಮ್ಮ ರಾಜೀನಾಮೆಯನ್ನು ತಕ್ಷಣವೇ ಸಲ್ಲಿಸಬೇಕೆಂದು ನಾವು ಆಗ್ರಹಿಸುತ್ತೇವೆ” ಎಂದು ಈ ರಾಷ್ಟ್ರೀಯ ಮಹಿಳಾ ಸಂಘಟನೆಗಳು ರೇಖಾ ಶರ್ಮರಿಗೆ ಕಳಿಸಿರುವ ಪತ್ರದಲ್ಲಿ ಬರೆದಿವೆ.

Donate Janashakthi Media

Leave a Reply

Your email address will not be published. Required fields are marked *