ಈ ಹಿಂದೆ ದೆಹಲಿ ಸರ್ಕಾರ 68 ಲಕ್ಷ ರೂ. ಗಳ ಯೋಜನೆಯ ಜಾಹೀರಾತಿಗಾಗಿ 23 ಕೋಟಿ ರೂ. ಖರ್ಚು ಮಾಡಿತ್ತು
ದೆಹಲಿ: ಕಳೆದ ಮೂರು ವರ್ಷಗಳಲ್ಲಿ ಜಾಹೀರಾತಿಗಾಗಿ 1,073 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿರುವುದನ್ನು ಆಮ್ ಆದ್ಮಿ ನೇತೃತ್ವದ ದೆಹಲಿ ಸರ್ಕಾರ ಒಪ್ಪಿಕೊಂಡಿದೆ. ಸರ್ಕಾರವು ಜಾಹೀರಾತುಗಳಿಗಾಗಿ 1,100 ಕೋಟಿ ರೂಪಾಯಿಗಳನ್ನು ಖರ್ಚು ಮಾಡುವುದಾದರೆ, “ಮೂಲಸೌಕರ್ಯ ಯೋಜನೆಗಳಿಗೆ ಖಂಡಿತವಾಗಿಯೂ ಕೊಡುಗೆಗಳನ್ನು ನೀಡಬಹುದು” ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ದೆಹಲಿ, ಮೀರತ್ ಮತ್ತು ಗಾಜಿಯಾಬಾದ್ಗೆ ಸಂಪರ್ಕ ಕಲ್ಪಿಸುವ ಕ್ಷಿಪ್ರ ರೈಲು ಸಾರಿಗೆ ವ್ಯವಸ್ಥೆ (RRTS project) ಜಾರಿ ವಿಳಂಬದ ಕುರಿತ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸುತ್ತಿದೆ. ಜುಲೈ 3 ರಂದು ದೆಹಲಿ ಸರ್ಕಾರವು ಈ ಯೋಜನೆಗೆ ವಿನಿಯೋಗಿಸಲು ಸಾಕಷ್ಟು ಹಣವಿಲ್ಲ ಎಂದು ಸುಪ್ರೀಂ ಕೋರ್ಟ್ಗೆ ತಿಳಿಸಿತ್ತು.
ಇದನ್ನೂ ಓದಿ: ವಿಜ್ಞಾನಕ್ಕೆ ಅಂಟಿದ ಮೌಢ್ಯವನ್ನು ಪ್ರಶ್ನಿಸುವುದು ಅಪರಾಧವೆ? ಶಿಕ್ಷಕ ಮಾಡಿದ ತಪ್ಪಾದರೂ ಏನು!
ಇದಕ್ಕೆ ಪ್ರತಿಕ್ರಿಯಿಸಿರುವ ಸುಪ್ರೀಂಕೋರ್ಟ್, “ನಿಮ್ಮ ಬಳಿ ಜಾಹೀರಾತುಗಳಿಗಾಗಿ ಹಣವಿದೆ. ಆದರೆ ಸುಗಮ ಸಾರಿಗೆಯನ್ನು ಖಚಿತಪಡಿಸುವ ಯೋಜನೆಗೆ ನಿಮ್ಮ ಬಳಿ ಹಣವಿಲ್ಲ ಯಾಕೆ?” ಎಂದು ನ್ಯಾಯಾಲಯ ಹೇಳಿದೆ. ಅಷ್ಟೆ ಅಲ್ಲದೆ, ಕಳೆದ ಮೂರು ವರ್ಷಗಳ ಜಾಹೀರಾತು ವೆಚ್ಚದ ಅಫಿಡವಿಟ್ ಸಲ್ಲಿಸುವಂತೆ ದೆಹಲಿ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದೀಗ ಸರ್ಕಾರ ಅಫಿಡವಿಟ್ ಸಲ್ಲಿಸಿದ್ದು, ಒಟ್ಟು 1,073 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿದುಬಂದಿದೆ.
ನ್ಯಾಯಮೂರ್ತಿ ಎಸ್.ಕೆ. ಕೌಲ್ ಅವರು ಇಂದು ದೆಹಲಿ ಸರ್ಕಾರಕ್ಕೆ ಯೋಜನೆಗೆ ಪಾವತಿ ಮಾಡುವಂತೆ ಹೇಳಿದೆ. ಎಎಪಿ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ, ಆರ್ಆರ್ಟಿಎಸ್ ಯೋಜನೆಗೆ ಪಾವತಿಸಲಾಗುವುದು ಎಂದು ಹೇಳಿದ್ದಾರೆ. ನ್ಯಾಯಾಲಯವು ವಿಳಂಬವಾದ ಮೊತ್ತವನ್ನು ಪಾವತಿಸಲು ನಿರ್ದೇಶನವನ್ನು ನೀಡಿದೆ.
2021-22ಕ್ಕೆ ಕೊನೆಗೊಳ್ಳುವ 10 ವರ್ಷಗಳಲ್ಲಿ ಜಾಹೀರಾತುಗಳ ಮೇಲಿನ ದೆಹಲಿ ಸರ್ಕಾರದ ವೆಚ್ಚವು 4,273% ದಷ್ಟು ಹೆಚ್ಚಾಗಿವೆ ಎಂದು ವರದಿಯಾಗಿದೆ. ಎಎಪಿ ಸರ್ಕಾರವು 2020-22ರಲ್ಲಿ 68 ಲಕ್ಷ ರೂಪಾಯಿಗಳನ್ನು ಕೊಳೆ ಸುಡುವ ಸಮಸ್ಯೆಯನ್ನು ನಿಭಾಯಿಸಲು ಖರ್ಚು ಮಾಡಿತ್ತು. ಆದರೆ, ಯೋಜನೆಯ ಜಾಹೀರಾತಿಗಾಗಿಯೇ 23 ಕೋಟಿ ರೂ. ಖರ್ಚು ಮಾಡಲಾಗಿತ್ತು.
ವಿಡಿಯೊ ನೋಡಿ: ಶವ ಹೂಳಲು ಜಾಗವಿಲ್ಲದೆ ಮನೆಯ ಮುಂದೆಯೇ ಶವಸಂಸ್ಕಾರಕ್ಕೆ ಯತ್ನ