ಬೆಂಗಳೂರು: ಬರ ಪೀಡಿತ ಪ್ರದೇಶ ಘೋಷಿಸುವ ಉದ್ದೇಶದಿಂದ ಸಿದ್ಧಪಡಿಸಿರುವ “ಬರ ಘೋಷಣೆ ಕೈಪಿಡಿ”ಯಲ್ಲಿನ ಮಾನದಂಡಗಳು ವಾಸ್ತವತೆಯ ಆಧಾರದ ಮೇಲೆ ಬದಲಾವಣೆ ಮಾಡುವಂತೆ ಶೀಘ್ರದಲ್ಲೇ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ವಿಧಾನಸಭೆಗೆ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ನಡೆದ ಚರ್ಚೆಗೆ ಶುಕ್ರವಾರ ಉತ್ತರ ನೀಡಿದ ಅವರು, 2016ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಬರ ಘೋಷಣೆ ಕೈಪಿಡಿ ಪ್ರಕಾರ ರಾಜ್ಯಕ್ಕೆ ಹೆಚ್ಚು ಅಧಿಕಾರಗಳಿಲ್ಲ. ಶೇಕಡ 60ಕ್ಕಿಂತ ಹೆಚ್ಚಿನ ಮಳೆ ಕೊರತೆ ಇರುವ, ಮೂರು ವಾರಗಳಿಂದ ಸತತವಾಗಿ ಮಳೆಯಾಗದ ತಾಲ್ಲೂಕುಗಳನ್ನು ಮಾತ್ರವೇ ಬರಪೀಡಿತ ಎಂದು ಘೋಷಿಸಲು ಅವಕಾಶವಿದೆ ಎಂದರು. ಮಾರ್ಗಸೂಚಿಗಳನ್ನು ಪರಿಷ್ಕರಿಸುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲು ಮುಖ್ಯಮಂತ್ರಿಯವರು ನಿರ್ಧರಿಸಿದ್ದಾರೆ. ಪತ್ರದ ಕರಡು ಕೂಡ ಸಿದ್ಧವಾಗಿದೆ. ಒಂದೆರಡು ದಿನಗಳಲ್ಲಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಕರ್ನಾಟಕದಲ್ಲಿ ಮಳೆಗೆ 20 ಜನರ ಸಾವು, 40ಕ್ಕೂ ಹೆಚ್ಚು ಜಾನುವಾರುಗಳು ಮೃತ
ಬರ ಘೋಷಣೆ ಮಾಡಲು ಕೇಂದ್ರ ಸರ್ಕಾರ “ಬರ ಘೋಷಣೆ” ಕೈಪಿಡಿ ಹೊಂದಿದ್ದು, ಈ ಕೈಪಿಡಿಯನ್ನು 2016ರಲ್ಲೇ ಬಿಡುಗಡೆ ಮಾಡಲಾಗಿತ್ತು. ಅದನ್ನು 2020ರಲ್ಲಿ ಪರಿಷ್ಕರಣೆ ಮಾಡಿ ಪ್ರಕಟಿಸಿತ್ತು. ಇದರ ಪ್ರಕಾರ ವಾಡಿಕೆಗಿಂತ ಶೇ. 60 ರಷ್ಟು ಮಳೆ ಕೊರತೆಯಾಗಿರಬೇಕು ಮತ್ತು ಕನಿಷ್ಠ ಮೂರು ವಾರಗಳ ಕಾಲ ಮಳೆಯಾಗದಿದ್ದರೆ ಎಂಬ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಕೃಷ್ಣ ಬೈರೇಗೌಡ ಅವರು ವಿವರಿಸಿದರು.
ಕೇಂದ್ರದ ಮಾನದಂಡಗಳ ಪ್ರಕಾರ, ರಾಜ್ಯದಲ್ಲಿ ಮಧ್ಯಮ ಬರಗಾಲವಿದ್ದರೆ ಪರಿಹಾರ ನೀಡಬೇಕು ಮತ್ತು ಜೂನ್-ಜುಲೈನಲ್ಲಿ ಮಳೆಯಾಗುವವರೆಗೆ ಬರ ಘೋಷಣೆ ಮಾಡಲು ಸಾಧ್ಯವಿಲ್ಲ. ಆಗಷ್ಟ್ ಮೊದಲ ವಾರದಲ್ಲೂ ಬರಗಾಲ ಘೋಷಣೆಗೆ ಅವಕಾಶ ಇಲ್ಲ. ಆದರೆ ಪರಿಸ್ಥಿತಿ ತೀವ್ರ ವಿಕೋಪಕ್ಕೆ ತಲುಪಿದರೆ ಮಾತ್ರ ಅಕ್ಟೋಬರ್ ನಲ್ಲಿ ಬರಗಾಲ ಪರಿಸ್ಥಿತಿ ಎಂದು ಘೋಷಣೆ ಮಾಡಬಹುದು ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚಿಸಿದೆ.
ಆದರೆ ಮುಂದಿನ ವಾರದಲ್ಲಿ ಸಂಪುಟ ಉಪಸಮಿತಿಯು ಕೇಂದ್ರದ ಮಾನದಂಡ ಆಧರಿಸಿ ತಾಲೂಕುಗಳಲ್ಲಿ ಬರ ಘೋಷಣೆ ಮಾಡುವ ಕುರಿತು ತೀರ್ಮಾನಿಸಲಿದೆ ಎಂದರು. ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಗಿಂತ ಶೇ.56 ರಷ್ಟು ಮಳೆ ಕೊರತೆಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ಮಳೆಯ ಕೊರತೆ ಇದೀಗ ಶೇ. 29ಕ್ಕೆ ಇಳಿದಿದೆ. ಹೀಗಾಗಿ ಕುಡಿಯುವ ನೀರಿನ ಪೂರೈಕೆಗೆ ಯಾವುದೇ ರೀತಿಯ ಸಮಸ್ಯೆ ಇಲ್ಲ” ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಹವಾಮಾನ ಇಲಾಖೆಯ ಪ್ರಕಾರ, ರಾಜ್ಯದ ಬಹುತೇಕ ಭಾಗಗಳಲ್ಲಿ ಆಗಸ್ಟ್ 3 ರವರೆಗೆ ಮುಂಗಾರು ಮಳೆ ಸಕ್ರಿಯವಾಗಿರುತ್ತದೆ. ಈ ಬಾರಿ ‘ಎಲ್ ನಿನೋ’ ಪರಿಣಾಮದ ಹೊರತಾಗಿಯೂ, ರಾಜ್ಯದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಬಿತ್ತಿದ ಬೆಳೆ ಹಾನಿ, ಕುಡಿಯುವ ನೀರು, ಮೇವಿನ ಬಗ್ಗೆ ಶಾಸಕರು ಪ್ರಸ್ತಾಪಿಸಿದ್ದನ್ನು ಗಮನಿಸಿದ ಸಚಿವರು, ಸರ್ಕಾರ ಈ ಎಲ್ಲದರ ಬಗ್ಗೆ ನಿರಂತರವಾಗಿ ನಿಗಾ ವಹಿಸಿದೆ ಮತ್ತು ಕಳೆದ ತಿಂಗಳು ಅತಿ ಕಡಿಮೆ ಮಳೆಯಾದ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಸಿಎಂ ಸಭೆ ನಡೆಸಿದ್ದರು ಮತ್ತು ಕುಡಿಯುವ ನೀರಿನ ಸಮಸ್ಯೆಗಳನ್ನು ಪರಿಹರಿಸಲು ಪ್ರತಿ ಜಿಲ್ಲೆಗೆ ತಲಾ ಒಂದು ಕೋಟಿ ರೂ. ನೀಡಿಲಾಗಿದೆ.
ಸುಮಾರು 110 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಸರಕಾರವೇ ವೆಚ್ಚ ಭರಿಸುತ್ತಿದೆ. ನೀರಿನ ಕೊರತೆಯಿರುವ 330 ಗ್ರಾಮಗಳಲ್ಲಿ 404 ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಮಾಹಿತಿ ನೀಡಿದರು.