ಟೀಮ್ ಇಂಡಿಯಾ Vs ಟೀಮ್ ಎನ್‌ಡಿಎ | 2024 ಲೋಕಸಭಾ ಚುನಾವಣೆಗೆ ವಿಪಕ್ಷಗಳ ಮೈತ್ರಿಕೂಟ ಸಜ್ಜು

2024ರಲ್ಲಿ ಟೀಮ್ ಇಂಡಿಯಾ Vs ಟೀಮ್ ಎನ್‌ಡಿಎ ಆಗಿರುತ್ತದೆ ಎಂದು ವಿಪಕ್ಷಗಳು ಹೇಳಿವೆ

ಬೆಂಗಳೂರು: ನಗರದಲ್ಲಿ ನಡೆದ ಪ್ರತಿಪಕ್ಷಗಳ ಎರಡನೇ ದಿನದ ಸಭೆಯು ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು, ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವನ್ನು (ಎನ್‌ಡಿಎ) ಎದುರಿಸಲು ವಿರೋಧ ಪಕ್ಷಗಳು ತಮ್ಮ ಮೈತ್ರಿಕೂಟಕ್ಕೆ “ಇಂಡಿಯನ್ ನ್ಯಾಷನಲ್ ಡೆವಲಪ್‌ಮೆಂಟ್ ಇನ್‌ಕ್ಲೂಸಿವ್ ಅಲೈಯನ್ಸ್(ಇಂಡಿಯಾ)” INDIA (Indian National Developmental Inclusive Alliance) ಎಂದು ನಾಮಕರಣ ಮಾಡಿದೆ. ಮಂಗಳವಾರದ ಔಪಚಾರಿಕ ಆಂತರಿಕ ಸಭೆಗೆ ಮುನ್ನ 26 ಪಕ್ಷಗಳು ಬೆಂಗಳೂರಿನಲ್ಲಿ ರಾತ್ರಿಯ ಭೋಜನಕ್ಕೆ ಭೇಟಿಯಾಗಿದ್ದವು. 2024ರ ಸಾರ್ವತ್ರಿಕ ಚುನಾವಣೆಗೆ ಮುನ್ನ ಆಡಳಿತಾರೂಢ ಬಿಜೆಪಿ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವ ಸಲುವಾಗಿ ವಿರೋಧ ಪಕ್ಷಗಳು ನಡೆಸಿದ ಎರಡನೇ ಸಭೆ ಇದಾಗಿದೆ.

ಸಭೆಯ ನಂತರ ವಿರೋಧ ಪಕ್ಷಗಳ ನಾಯಕರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ದೇಶದ ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಉಳಿಸಲು, ಜನರ ಹಿತ ಕಾಪಾಡಲು ಇದೊಂದು ಮಹತ್ವದ ಸಭೆಯಾಗಿತ್ತು. ಈ ಸಭೆಯಲ್ಲಿ 26 ಪಕ್ಷಗಳ ನಾಯಕರು ಭಾಗವಹಿಸಿ ಒಮ್ಮತದಿಂದ ಅನೇಕ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಈ ಹಿಂದೆ ನಾವು ಯುಪಿಎ ಎಂದು ಮೈತ್ರಿ ಮಾಡಿಕೊಳ್ಳಲಾಗಿತ್ತು. ಈಗ ಈ ಮೈತ್ರಿಗೆ INDIA (Indian National Developmental Inclusive Alliance) ಎಂದು ಹೆಸರಿಡಲಾಗಿದೆ” ಎಂದು ಹೇಳಿದರು.

ಇದನ್ನೂ ಓದಿ: ಕರ್ನಾಟಕದಿಂದಲೇ ಬಿಜೆಪಿ ಅವನತಿ ಆರಂಭ : ಸಿಎಂ ಸಿದ್ದರಾಮಯ್ಯ ಭವಿಷ್ಯ

“11 ಸದಸ್ಯರ ಸಮನ್ವಯ ಸಮಿತಿ ರಚಿಸಲಾಗುವುದು. ಈ ಸಮಿತಿಯನ್ನು ಶೀಘ್ರದಲ್ಲೇ ಮಹರಾಷ್ಟ್ರದ ಮುಂಬೈನಲ್ಲಿ ಭೇಟಿ ಮಾಡಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗುವುದು. ಈ ಸಭೆಯ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು. ಪ್ರಚಾರ ನಿರ್ವಹಣೆ ಹಾಗೂ ಇತರೆ ಸಮಿತಿಗಳ ನಿರ್ವಹಣೆಗೆ ಕಾರ್ಯದರ್ಶಿ ನೇಮಕ ಮಾಡಲಾಗುವುದು. ಇದನ್ನು ದೆಹಲಿಯಲ್ಲಿ ಸ್ಥಾಪಿಸಲಾಗುವುದು” ಎಂದು ಹೇಳಿದರು.

“ಇಂದಿನ ಸಭೆಯಲ್ಲಿ ಅತ್ಯುತ್ತಮ ಸಲಹೆ ನೀಡಲಾಗಿದೆ. ಬಿಜೆಪಿ ಸರ್ಕಾರ ಪ್ರಜಾಪ್ರಭುತ್ವ ನಾಶ ಮಾಡಲು ಮುಂದಾಗಿದ್ದು, ಸಂವಿಧಾನದ ಮೇಲೆ ದಾಳಿ ನಡೆಸುತ್ತಿದೆ. ಸ್ವಾಯತ್ತ ಸಂಸ್ಥೆಗಳಾದ ಸಿಬಿಐ, ಇಡಿ ಸೇರಿದಂತೆ ಇತರೆ ಸಂಸ್ಥೆಗಳನ್ನು ವಿರೋಧ ಪಕ್ಷಗಳ ನಾಯಕರು ಹಾಗೂ ಕಾರ್ಯಕರ್ತರ ವಿರುದ್ಧ ಅಸ್ತ್ರವಾಗಿ ಬಳಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ದೇಶವನ್ನು ರಕ್ಷಿಸಲು ನಾವು ಒಟ್ಟಾಗಿ ಸೇರಿದ್ದೇವೆ” ಎಂದು ಖರ್ಗೆ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, “ನಮ್ಮ ಹೋರಾಟ ಬಿಜೆಪಿ ವಿಚಾರಧಾರೆ, ಅವರ ಚಿಂತನೆ ವಿರುದ್ಧ. ಅವರು ದೇಶದ ಮೇಲೆ ಆಕ್ರಮಣ ಮಾಡಿ, ನಿರುದ್ಯೋಗ ಹರಡುತ್ತಿದ್ದು, ದೇಶದ ಸಂಪೂರ್ಣ ಸಂಪತ್ತು ಕೆಲವು ಉದ್ಯಮಿಗಳ ವಶಕ್ಕೆ ಸೇರುತ್ತಿದೆ. ಈ ಕಾರಣಕ್ಕೆ ನಾವು ನಮಗೆ ಪ್ರಶ್ನೆ ಕೇಳಿಕೊಂಡು ಈ ಹೋರಾಟ ಯಾರ ನಡುವೆ? ಇದು ಬಿಜೆಪಿ ಹಾಗೂ ವಿರೋಧ ಪಕ್ಷಗಳ ನಡುವಣ ಹೋರಾಟವಲ್ಲ. ಇದು ದೇಶದ ಧ್ವನಿಯ ಪರವಾದ ಹೋರಾಟ. ಈ ಕಾರಣಕ್ಕೆ ಈ ಮೈತ್ರಿಯನ್ನು ಇಂಡಿಯಾ ಎಂದು ಹೆಸರಿಡಲಾಗಿದೆ. ಈ ಹೋರಾಟ ಎನ್‌ಡಿಎ ಹಾಗೂ ಇಂಡಿಯಾ ವಿರುದ್ಧ, ಇದು ಇಂಡಿಯಾ ಹಾಗೂ ಮೋದಿ ವಿರುದ್ಧದ ಹೋರಾಟ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ಕಾಂಗ್ರೆಸ್ ಕಣ್ಣಿಟ್ಟಿಲ್ಲ: ವಿಪಕ್ಷಗಳ ಮಹಾಸಭೆಯಲ್ಲಿ ಮಲ್ಲಿಕಾರ್ಜುನ ಖರ್ಗೆ

“ಯಾರೇ ಇಂಡಿಯಾ ವಿರುದ್ಧ ನಿಂತರು ಗೆಲವು ಯಾರಿಗೆ ಸಿಗುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಮುಂದಿನ ಸಭೆ ಮಹಾರಾಷ್ಟ್ರದಲ್ಲಿ ನಡೆಯಲಿದ್ದು, ಕಾರ್ಯ ಯೋಜನೆ ಸಿದ್ಧಪಡಿಸಿ ನಾವು ಒಂದಾಗಿ ನಮ್ಮ ವಿಚಾರಧಾರೆಗಳನ್ನು ಜನರಿಗೆ ತಿಳಿಸಬೇಕಿದೆ. ಇದು ರಾಜಕೀಯ ಪಕ್ಷಗಳ ಹೋರಾಟವಲ್ಲ. ಇದು ಇಂಡಿಯಾದ ಪರಿಕಲ್ಪನೆ ರಕ್ಷಣೆಯ ಹೋರಾಟವಾಗಿದ್ದು, ನಾವು ಪ್ರಜಾಪ್ರಭುತ್ವ, ಸಂವಿಧಾನ, ಜನರ ಧ್ವನಿಯ ರಕ್ಷಣೆಗೆ ಹೋರಾಟ ಮಾಡುತ್ತಿದ್ದು, ಈ ಕಾರಣಕ್ಕೆ ನಾವು ನಮ್ಮ ಮೈತ್ರಿಯನ್ನು ಇಂಡಿಯಾ ಎಂದು ತೀರ್ಮಾನಿಸಿದ್ದೇವೆ” ಎಂದು ರಾಹುಲ್ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್, ಜೆಎಂಎಂ ಮುಖ್ಯಸ್ಥ ಹೆಮಂತ್ ಸೊರೇನ್, ಮುಖ್ಯಮಂತ್ರಿ ಸಿದ್ದರಾಮಯ್ಯ, ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಶಿವಸೇನಾ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಸೇರಿದಂತೆ ಹಲವಾರು ನಾಯಕರಿದ್ದರು.

ಶಿವಸೇನಾ (ಯುಬಿಟಿ) ನಾಯಕಿ ಪ್ರಿಯಾಂಕಾ ಚತುರ್ವೇದಿ ಅವರು ಟ್ವಿಟರ್‌ನಲ್ಲಿ ಹೊಸ ಮೈತ್ರಿ ಕೂಟದ ಹೆಸರನ್ನು ಉಲ್ಲೇಖಿಸಿ ಲೋಕಸಭೆ 2024 ರ ಸ್ಪರ್ಧೆಯು ”ಟೀಮ್ ಇಂಡಿಯಾ ಮತ್ತು ಟೀಮ್ ಎನ್‌ಡಿಎ” ನಡುವೆ ನಡೆಯಲಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ಆದ್ದರಿಂದ 2024 ಟೀಮ್ ಇಂಡಿಯಾ Vs ಟೀಮ್ ಎನ್‌ಡಿಎ ಆಗಿರುತ್ತದೆ. ಚಕ್ ದೇ, ಇಂಡಿಯಾ!” ಎಂದು ಹೇಳಿದ್ದಾರೆ.

ಇದನ್ನೂ ಓದಿ: ವಿಪಕ್ಷಗಳ ಒಕ್ಕೂಟದ ಮಹಾಮೈತ್ರಿ ಸಭೆ ಆರಂಭ : ಆರು ಅಂಶಗಳ ಬಗ್ಗೆ ಚರ್ಚೆ 

ಮಂಗಳವಾರದ ಆಂತರಿಕ ಮಾತುಕತೆಯ ಕಾರ್ಯಸೂಚಿಯನ್ನು ಔಪಚಾರಿಕಗೊಳಿಸಲು ವಿರೋಧ ಪಕ್ಷದ ಉನ್ನತ ನಾಯಕರು ಸೋಮವಾರ ಭೋಜನ ಸಭೆ ನಡೆಸಿದ್ದರು. ಔಪಚಾರಿಕ ಮಾತುಕತೆ ಬೆಳಗ್ಗೆ 11ರಿಂದ ಸಂಜೆ 4ರವರೆಗೆ ನಡೆಯಿತು.

ಮಂಗಳವಾರ ಮಧ್ಯಾಹ್ನ ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಬೆಂಗಳೂರಿನಲ್ಲಿ 26 ಪಕ್ಷಗಳು ಒಗ್ಗಟ್ಟಿನಿಂದ ಕೆಲಸ ಮಾಡಲು ಮುಂದಾಗಿರುವುದು ಸಂತಸ ತಂದಿದೆ. ಒಟ್ಟಾಗಿ ನಾವು ಇಂದು 11 ರಾಜ್ಯಗಳಲ್ಲಿ ಸರ್ಕಾರದಲ್ಲಿದ್ದೇವೆ. ಬಿಜೆಪಿ ತಾನಾಗಿಯೆ 303 ಸ್ಥಾನಗಳನ್ನು ಪಡೆದಿಲ್ಲ. ಬದಲಾಗಿ ಅದು ತನ್ನ ಮಿತ್ರಪಕ್ಷಗಳ ಮತಗಳನ್ನು ಬಳಸಿಕೊಂಡಿತು, ಆದರೆ ಅಧಿಕಾರಕ್ಕೆ ಬಂದ ನಂತರ ಅವುಗಳನ್ನು ತಿರಸ್ಕರಿಸಿತು” ಎಂದು ಹೇಳಿದ್ದಾರೆ.

“ಬಿಜೆಪಿ ಅಧ್ಯಕ್ಷರು ಮತ್ತು ಅವರ ನಾಯಕರು ತಮ್ಮ ಹಳೆಯ ಮಿತ್ರರನ್ನು ಪಡೆಯಲು ರಾಜ್ಯದಿಂದ ರಾಜ್ಯಕ್ಕೆ ಓಡುತ್ತಿದ್ದಾರೆ. ಇಲ್ಲಿ ಕಾಣುವ ಒಗ್ಗಟ್ಟು ಮುಂದಿನ ವರ್ಷ ತಮ್ಮ ಸೋಲಿಗೆ ಕಾರಣವಾಗಬಹುದೆಂಬ ಭಯದಲ್ಲಿದ್ದಾರೆ. ಪ್ರತಿಯೊಂದು ಸಂಸ್ಥೆಯನ್ನೂ ಪ್ರತಿಪಕ್ಷಗಳ ವಿರುದ್ಧ ಅಸ್ತ್ರವಾಗಿ ಬದಲಾಗುತ್ತಿದೆ. ಈ ಸಭೆಯಲ್ಲಿ ನಮ್ಮ ಉದ್ದೇಶ ನಮಗಾಗಿ ಅಧಿಕಾರ ಗಳಿಸುವುದಲ್ಲ. ಇದು ಪ್ರಜಾಪ್ರಭುತ್ವ, ಜಾತ್ಯತೀತತೆ ಮತ್ತು ಸಾಮಾಜಿಕ ನ್ಯಾಯವನ್ನು ರಕ್ಷಿಸುವುದು. ಭಾರತವನ್ನು ಪ್ರಗತಿ, ಕಲ್ಯಾಣ ಮತ್ತು ನಿಜವಾದ ಪ್ರಜಾಪ್ರಭುತ್ವದ ಹಾದಿಗೆ ಹಿಂತಿರುಗಿಸಲು ನಾವು ಸಂಕಲ್ಪ ಮಾಡೋಣ” ಎಂದು ಹೇಳಿದ್ದಾರೆ.

ಬಿಜೆಪಿ ನೇತೃತ್ವದ ಎನ್‌ಡಿಎ ಸಭೆ

ಪ್ರತಿಪಕ್ಷಗಳ ಸಭೆ ಬೆಂಗಳೂರಿನಲ್ಲಿ ನಡೆಯುತ್ತಿರುವ ವೇಳೆ “ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ” (ಎನ್‌ಡಿಎ) ಕೂಡ ದೆಹಲಿಯಲ್ಲಿ ಸಭೆ ನಡೆಸುತ್ತಿದ್ದು, ಅಲ್ಲಿ ಕೆಲವು ಹೊಸ ಮಿತ್ರಪಕ್ಷಗಳನ್ನು ಆಡಳಿತಾರೂಢ ಬಿಜೆಪಿ ನೇತೃತ್ವದ ಒಕ್ಕೂಟಕ್ಕೆ ಸೇರುವ ನಿರೀಕ್ಷೆಯಿದೆ. ಒಟ್ಟು 38 ಪಕ್ಷಗಳು ದೆಹಲಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದು, ಬಿಜೆಪಿ ಒಗ್ಗಟ್ಟಿನ ಪ್ರಬಲ ಪ್ರದರ್ಶನವನ್ನು ಪ್ರದರ್ಶಿಸಲು ಉತ್ಸುಕವಾಗಿದೆ.

ಇದನ್ನೂ ಓದಿ: ಏಕರೂಪ ನಾಗರಿಕ ಸಂಹಿತೆ (ಯುಸಿಸಿ) ವಿರೋಧಿ ರಾಷ್ಟ್ರೀಯ ವಿಚಾರ ಸಂಕಿರಣ | 12 ಸಾವಿರ ಜನರ ಭಾಗಿ!

 

Donate Janashakthi Media

Leave a Reply

Your email address will not be published. Required fields are marked *