ಒಕ್ಕೂಟ ಸರಕಾರದ ಅಕ್ಕಿ ನಿರಾಕರಣೆ ಖಂಡಿಸಿ ಪ್ರತಿಭಟನೆಗೆ ಸಿಪಿಐಎಂ ಕರೆ.

ಬೆಂಗಳೂರು: ಒಕ್ಕೂಟ ಸರಕಾರದ ಅಕ್ಕಿ ನಿರಾಕರಣೆ ಖಂಡಿಸಿ ಜೂನ್‌ 20 ರಂದು ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲು ಸಿಪಿಐಎಂ ಕರೆ ನೀಡಿದೆ ಎಂದು ರಾಜ್ಯ ಕಾರ್ಯದರ್ಶಿ ಯು. ಬಸವರಾಜ್‌ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕರ್ನಾಟಕ ಸರಕಾರ ಜುಲೈ ಒಂದರಿಂದ ಎಲ್ಲ ಬಿಪಿಎಲ್, ಅಂತ್ಯೋದಯ ಕಾರ್ಡದಾರರಿಗೆ ಈಗ ನೀಡಲಾಗುತ್ತಿದ್ದ 5 ಕೆಜಿ ಅಕ್ಕಿಯನ್ನು ಹೆಚ್ಚಿಸಿ ತಲಾ 10 ಕೆಜಿ ಅಕ್ಕಿ ಅಥವಾ ಆಹಾರಧಾನ್ಯ ನೀಡಲು ನಿರ್ಧರಿಸಿ ಪ್ರಕಟಿಸಿದ್ದು ಸ್ವಾಗತಾರ್ಹವಾಗಿದೆ. ಆದರೇ, ಒಕ್ಕೂಟ ಸರಕಾರವು ರಾಜ್ಯಕ್ಕೆ ಹೆಚ್ಚುವರಿ ಆಹಾರಧಾನ್ಯ ನೀಡುವಲ್ಲಿ ಸಂಕುಚಿತ ರಾಜಕೀಯ ಮಾಡುತ್ತಿರುವುದು ತೀವ್ರ ಖಂಡನೀಯವಾಗಿದೆ ಎಂದು ತಿಳಿಸಿದ್ದಾರೆ.

ರಾಜ್ಯ ಸರಕಾರದ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಹೆಚ್ಚುವರಿ ಆಹಾರಧಾನ್ಯ ನೀಡಲು ಭಾರತ ಆಹಾರ ನಿಗಮದ ಅಧಿಕಾರಿಗಳು ಒಪ್ಪಿದ್ದರೂ ಕೂಡಾ, ಒಕ್ಕೂಟ ಸರಕಾರ ಬಡವರ ವಿರೋಧಿಯಾಗಿ ನಿಂತಿರುವುದು ಅಕ್ಷಮ್ಯವಾಗಿದೆ. ಬಿಜೆಪಿ ಮತ್ತು ಒಕ್ಕೂಟ ಸರಕಾರ ತಮ್ಮ ಸಂಕುಚಿತ ಜನ ವಿರೋದಿ ರಾಜಕಾರಣವನ್ನು ಈ ಕೂಡಲೇ ಕೈ ಬಿಟ್ಟು ಒಪ್ಪಂದದಂತೆ ಭಾರತ ಆಹಾರ ನಿಗಮದ ಮೂಲಕ ಆಹಾರ ಧಾನ್ಯಗಳನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸಿಪಿಐಎಂ ಪಕ್ಷವು ಒಕ್ಕೂಟ ಸರಕಾರ ಹಾಗೂ ಪ್ರಧಾನ ಮಂತ್ರಿಗಳನ್ನು ಬಲವಾಗಿ ಒತ್ತಾಯಿಸುತ್ತದೆ ಎಂದು ಬಸವರಾಜ್‌ ಹೇಳಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಕಾಳಸಂತೆಗೆ ಸಾಗಣಿಕೆ

ರಾಜ್ಯ ಸರಕಾರದ ಈ ಯೋಜನೆಯು ಬಡವರ ಹಸಿವು ನೀಗಿಸಲು ನೆರವಾಗುವ ಯೋಜನೆಯಾಗಿದ್ದು ಇದು ಹಸಿವಿನ ಸೂಚ್ಯಂಕದಲ್ಲಿ ಅತ್ಯಂತ ತಳ ಮಟ್ಟದಲ್ಲಿರುವ ನಮ್ಮ ದೇಶವನ್ನು ಸ್ವಲ್ಪವಾದರೂ ಮೇಲೆತ್ತುವ ಯೋಜನೆಯೆಂಬುದನ್ನು ಒಕ್ಕೂಟ ಸರಕಾರ ಅರಿಯಬೇಕು. ಒಕ್ಕೂಟ ಸರಕಾರ ರಾಜ್ಯ ಹಿತದ ವಿರುದ್ದ ನಗ್ನವಾಗಿ ನಿಂತಿರುವಾಗ ನಮ್ಮ ರಾಜ್ಯ ಬಹುತೇಕರು ಬಿಜೆಪಿ ಎಂಪಿ ಗಳಿರುವಾಗ ಅವರು ಬಾಯಿ ಹೊಲೆದುಕೊಂಡಿರುವುದು ಅವರ ವಿರೋದಿ ನೀತಿಯನ್ನು ಬಯಲುಗೊಳಿಸುತ್ತದೆ ಎಂದು ಕಟುವಾಗಿ ಠೀಕಿಸಿದ್ದಾರೆ.

ಜನರಿಗೆ ಆಹಾರಧಾನ್ಯದ ಬದಲು ನಗದು ವರ್ಗಾವಣೆ ಮಾಡುವಂತೆ ಸೂಚಿಸುವ ಬಿಜೆಪಿ ಧೋರಣೆಯು ಬಡವರಪರವಾಗಿರದೇ ಲೂಟಿಕೋರ ಕಾರ್ಪೊರೇಟ್ ಕಂಪನಿಗಳ ಪರವಾದ ನೀತಿಯಾಗಿದೆ. ಒಕ್ಕೂಟ ಸರಕಾರದ ಈ ಜನ ವಿರೋಧಿ ನೀತಿಯನ್ನು ಖಂಡಿಸಿ ರಾಜ್ಯದಾದ್ಯಂತ 20.06.2022 ರಂದು “ಒಕ್ಕೂಟ ಸರಕಾರದ ಬಡವರ ವಿರೋಧಿ ನೀತಿಯ ಭೂತ ದಹನ” ಮಾಡುವ‌ ಮೂಲಕ ತೀವ್ರ ಪ್ರತಿಭಟನಾ ಪ್ರದರ್ಶನ ನಡೆಸಲು ಸಿಪಿಐಎಂ ರಾಜ್ಯ ಸಮಿತಿ ತನ್ನೆಲ್ಲಾ ಘಟಕಗಳಿಗೆ ಮತ್ತು ರಾಜ್ಯದ ಜನತೆಗೆ ಕರೆ ನೀಡಿದೆ.

Donate Janashakthi Media

Leave a Reply

Your email address will not be published. Required fields are marked *