ನವದೆಹಲಿ: ಅಬಕಾರಿ ನೀತಿ ಹಗರಣ ಪ್ರಕರಣದಲ್ಲಿ ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಇತರರ ವಿರುದ್ಧ ಸಿಬಿಐ ಮಂಗಳವಾರ ಪೂರಕ ಚಾರ್ಜ್ ಶೀಟ್ ಸಲ್ಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 26 ರಂದು ಸಿಬಿಐ ಸಿಸೋಡಿಯಾ ಅವರನ್ನು ಬಂಧಿಸಿತ್ತು ಮತ್ತು ಅದು 58 ನೇ ದಿನದಂದು ಚಾರ್ಜ್ ಶೀಟ್ ಸಲ್ಲಿಸಿದೆ. ಹೈದರಾಬಾದ್ ಮೂಲದ ಸಿಎ ಬುಚ್ಚಿ ಬಾಬು ಗೋರಂಟ್ಲಾ, ಮದ್ಯದ ವ್ಯಾಪಾರಿ ಅಮನದೀಪ್ ಸಿಂಗ್ ಧಲ್ ಮತ್ತು ಖಾಸಗಿ ವ್ಯಕ್ತಿ ಅರ್ಜುನ್ ಪಾಂಡೆ ಅವರನ್ನೂ ಚಾರ್ಜ್ ಶೀಟ್ನಲ್ಲಿ ಹೆಸರಿಸಿದೆ.ಭ್ರಷ್ಟಾಚಾರ ತಡೆ ಕಾಯ್ದೆಯ ನಿಬಂಧನೆಗಳ ಜೊತೆಗೆ ಐಪಿಸಿ ಸೆಕ್ಷನ್ 120-ಬಿ (ಅಪರಾಧದ ಪಿತೂರಿ) 201 ಮತ್ತು 420 ನ್ನು ಸಿಬಿಐ ಉಲ್ಲೇಖಿಸಿದೆ. ಪ್ರಕರಣದಲ್ಲಿ ದೊಡ್ಡ ಪಿತೂರಿ ಮತ್ತು ಇತರ ಆರೋಪಿಗಳ ಪಾತ್ರವನ್ನು ತನಿಖೆಯಲ್ಲಿ ತೆರೆದಿಡಲಾಗಿದೆ ಎಂದು ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್ ಶೀಟ್ನಲ್ಲಿ ತನಿಖಾ ಸಂಸ್ಥೆ ತಿಳಿಸಿದೆ.
ಇದನ್ನೂ ಓದಿ : ಅಬಕಾರಿ ನೀತಿ ಹಗರಣ: ಸಿಬಿಐ ವಿಚಾರಣೆಗೆ ಹಾಜರಾದ ಮನೀಶ್ ಸಿಸೋಡಿಯಾ
ನವೆಂಬರ್ 25, 2022 ರಂದು ಸಿಬಿಐ ಕೊನೆಯ ಚಾರ್ಜ್ ಶೀಟ್ ಸಲ್ಲಿಸಿತ್ತು. ಮದ್ಯದ ವ್ಯಾಪಾರಿಗಳಿಗೆ ಪರವಾನಗಿ ನೀಡಲು ದೆಹಲಿ ಸರ್ಕಾರದ 2021-22 ರ ಅಬಕಾರಿ ನೀತಿಯು ಕೆಲವು ಡೀಲರ್ಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಆರೋಪಿಸಲಾಗಿದೆ. “ಅಬಕಾರಿ ನೀತಿಯಲ್ಲಿ ಮಾರ್ಪಾಡುಗಳು, ಪರವಾನಗಿದಾರರಿಗೆ ಅನಪೇಕ್ಷಿತ ಅನುಕೂಲಗಳನ್ನು ವಿಸ್ತರಿಸುವುದು, ಪರವಾನಗಿ ಶುಲ್ಕದಲ್ಲಿ ಮನ್ನಾ, ಅನುಮೋದನೆಯಿಲ್ಲದೆ ಎಲ್ -1 ಪರವಾನಗಿ ವಿಸ್ತರಣೆ ಇತ್ಯಾದಿ ಸೇರಿದಂತೆ ಅಕ್ರಮಗಳನ್ನು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.