ಎನ್.ಸಿ.ಇ.ಆರ್.ಟಿ ಪಠ್ಯಗಳು: ಮೊಗಲರಷ್ಟೇ ಅಲ್ಲ, ಡಾರ್ವಿನ್‍ ಮತ್ತು ಪೈಥಾಗೊರಸ್‍ಗೂ ಖೊಕ್!

 

ವೇದರಾಜ್‌ ಎನ್‌.ಕೆ

ಎನ್.ಸಿ.ಇ.ಆರ್.ಟಿ ಶಾಲಾ ಪಠ್ಯಪುಸ್ತಕಗಳಲ್ಲಿ ಕೊವಿಡ್ ಮಹಾಸೋಂಕಿನಿಂದಾಗಿ ಉಂಟಾದ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳ ಕಲಿಕೆಯ ಭಾರವನ್ನು ಇಳಿಸುವ ನೆಪದಲ್ಲಿ ಇತಿಹಾಸ, ರಾಜಕೀಯ ಶಾಸ್ತ್ರ ಮತ್ತು ಸಮಾಜಶಾಸ್ತ್ರದ ಮಾತ್ರವಲ್ಲ ವಿಜ್ಞಾನದ ಪಠ್ಯಗಳಲ್ಲಿಯೂ ಕೆಲವು ಪ್ರಮುಖ ಅಧ್ಯಾಯಗಳನ್ನು/ವಿಭಾಗಗಳನ್ನು ಕೈಬಿಟ್ಟಿರುವುದೂ ಈಗ ಗಮನಕ್ಕೆ ಬಂದಿದೆ. ಇದರಲ್ಲಿ ಮುಖ್ಯವಾದದ್ದು ಡಾರ್ವಿನನ ವಿಕಾಸವಾದ ಮತ್ತು ಪೈಥಾಗೊರಸ್‍ ಪ್ರಮೇಯ.

9ನೇ ಮತ್ತು 10ನೇ ತರಗತಿಯ ವಿಜ್ಞಾನ ಪಠ್ಯದಲ್ಲಿ ವಿಕಾಸವಾದದ ಕುರಿತಾಗಿ ಇದ್ದ ಅಧ್ಯಾಯ/ವಿಭಾಗವನ್ನು ಕೈಬಿಡಲಾಗಿದೆ, ಮತ್ತು ತರಗತಿ 11 ಮತ್ತು 12ರ ಪಠ್ಯದಲ್ಲಿದ್ದ ವಿಕಾಸವಾದ ಮತ್ತು ಆನುವಂಶಿಕತೆ ಕುರಿತಾದ ಅಧ್ಯಾಯವನ್ನು ಬದಲಿಸಿ ಕೇವಲ ಆನುವಂಶಿಕತೆಯ ಅಧ್ಯಾಯವಾಗಿ ಮಾಡಲಾಗಿದೆ. ಡಾರ್ವಿನ್‍ ಕುರಿತಾದ ಒಂದು ಬಾಕ್ಸನ್ನು ಕೂಡ ತೆಗೆಯಲಾಗಿದೆಯಂತೆ.

ತರಗತಿ 10ರ ವಿಜ್ಞಾನ ಪಠ್ಯ ಮತ್ತು ತರಗತಿ 11 ಮತ್ತು 12ರ ಜೀವಶಾಸ್ತ್ರ ಪಠ್ಯಗಳಲ್ಲಿ ‘ಜೀವಿಗಳಲ್ಲಿ ಪುನರುತ್ಪತ್ತಿ ಕುರಿತ ಅಧ್ಯಾಯಗಳನ್ನು ಅಥವ ವಿಭಾಗಗಳನ್ನು ಕೈಬಿಡಲಾಗಿದೆ. ‘ಜೀವಿಗಳಲ್ಲಿ ಪುನರುತ್ಪತ್ತಿ ಮತ್ತು ಆಹಾರ ಉತ್ಪಾದನೆಯಲ್ಲಿ ಹೆಚ್ಚಳ’ ಅಧ್ಯಾಯವನ್ನು ತೆಗೆದು ಹಾಕಲಾಗಿದೆ. ಹಿಮನದಿಗಳು ಕರಗುತ್ತಿರುವ ಬಗ್ಗೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಇಡೀ ಜಗತ್ತು ಕಳವಳ ಪಡುತ್ತಿರುವಾಗ ಪರಿಸರ ಪ್ರಶ್ನೆಗಳ ಮೇಲಿನ ಅಧ್ಯಾಯಗಳನ್ನು ಕೈಬಿಡಲಾಗಿದೆ!

ತರಗತಿ 10ರ ವಿಜ್ಞಾನ ಪಠ್ಯ ಮತ್ತು ತರಗತಿ 11 ಮತ್ತು 12ರ ಜೀವಶಾಸ್ತ್ರ ಪಠ್ಯಗಳಲ್ಲಿ ‘ಜೀವಿಗಳಲ್ಲಿ ಪುನರುತ್ಪತ್ತಿ ಕುರಿತ ಅಧ್ಯಾಯಗಳನ್ನು ಅಥವ ವಿಭಾಗಗಳನ್ನು ಕೈಬಿಡಲಾಗಿದೆ. ‘ಜೀವಿಗಳಲ್ಲಿ ಪುನರುತ್ಪತ್ತಿ ಮತ್ತು ಆಹಾರ ಉತ್ಪಾದನೆಯಲ್ಲಿ ಹೆಚ್ಚಳ’ ಅಧ್ಯಾಯವನ್ನು ತೆಗೆದು ಹಾಕಲಾಗಿದೆ. ಹಿಮನದಿಗಳು ಕರಗುತ್ತಿರುವ ಬಗ್ಗೆ ಮತ್ತು ಜಾಗತಿಕ ತಾಪಮಾನ ಏರಿಕೆಯ ಬಗ್ಗೆ ಇಡೀ ಜಗತ್ತು ಕಳವಳ ಪಡುತ್ತಿರುವಾಗ ಪರಿಸರ ಪ್ರಶ್ನೆಗಳ ಮೇಲಿನ ಅಧ್ಯಾಯಗಳನ್ನು ಕೈಬಿಡಲಾಗಿದೆ!

ಗಣಿತಶಾಸ್ತ್ರದ ಪಠ್ಯದಲ್ಲಿ ಪೈಥಾಗೊರಸ್ ಪ್ರಮೇಯದ ಪ್ರಮಾಣವನ್ನು ತೆಗೆದು ಹಾಕಲಾಗಿದೆ. ಇಷ್ಟೇ ಅಲ್ಲ, ಉನ್ನತ ತರಗತಿಗಳ ಗಣಿತದ ಪಠ್ಯಗಳಲ್ಲಿ, ಗಣಿತ ಒಂದು ವಿಶೇಷ ಆಯ್ಕೆಯ ವಿಷಯವಾಗಿರುವಲ್ಲಿಯೂ ಪ್ರೌಢ ಬೀಜಗಣಿತವನ್ನು ತೆಗೆದು ಹಾಕಲಾಗಿದೆ ಎಂದೂ ವಿಷಯ ತಜ್ಞರು ಹೇಳುತ್ತಿದ್ದಾರೆ.

ಮೂಲಧಾತುಗಳ ಆವರ್ತಕ ಪಟ್ಟಿ( ಪೀರಿಯೋಡಿಕ್‍ ಟೇಬಲ್ ಆಫ್ ಎಲೆಮೆಂಟ್ಸ್) ಕೂಡ 10ನೇ ತರಗತಿಯ ವಿಜ್ಞಾನ ಪಠ್ಯಪುಸ್ತಕದಲ್ಲಿ ಕಾಣೆಯಾಗಿದೆ ಎಂದು ಹೇಳಲಾಗಿದೆ.

ಇವನ್ನೆಲ್ಲ ನೋಡಿದರೆ ಕೊವಿಡ್‍ ಪರಿಸ್ಥಿತಿ ಮತ್ತು ಪಠ್ಯವನ್ನು ಹಗುರಗೊಳಿಸುವುದು ಈ ಎಲ್ಲ ಬದಲಾವಣೆಗಳಿಗೆ ಕೇವಲ ಒಂದು ನೆಪ, ಅದರಲ್ಲೂ ಕೊರೊನ ವೈರಸ್‍ನಿಂದಾಗಿ ಹರಡಿದ ಕೊವಿಡ್‍ ಮಹಾಸೋಂಕು ಮತ್ತು ಆ ವೈರಸ್‍ನ ವಿವಿಧ ರೂಪಾಂತರಗಳು ಉಂಟುಮಾಡಿದ ಪರಿಸ್ಥಿತಿಯ ಹೆಸರು ಹೇಳಿಕೊಂಡು ತಂದ ಬದಲಾವಣೆಗಳಲ್ಲಿ ವಿಕಾಸವಾದವನ್ನು ಕೈಬಿಟ್ಟಿರುವುದಂತೂ ಇದನ್ನು ಪುಷ್ಟಿಗೊಳಿಸಿದೆ ಎಂದು ಪರಿಣಿತರು ಹೇಳುತ್ತಾರೆ.

ಡಾರ್ವಿನನ ವಿಕಾಸವಾದದ ಸಿದ್ಧಾಂತವನ್ನು ಪಠ್ಯಪುಸ್ತಕದಿಂದ ತೆಗೆದಿರುವುದು ಏಕೆ? ಎಲ್ಲರೂ ವಿಕಾಸಗೊಂಡಿಲ್ಲ ಎಂದು ನಿಮಗೆ ಮನವರಿಕೆಯಾಗಿದೆಯೇ? ವ್ಯಂಗ್ಯಚಿತ್ರ: ಸಜಿತ್‍ ಕುಮಾರ್, ಡೆಕ್ಕನ್‍ ಹೆರಾಲ್ಡ್

 

ವಿಕಾಸವಾದ ಮತ್ತು ಹಿಂದುತ್ವ 

ಡಾರ್ವಿನನ ವಿಕಾಸವಾದದ ಬಗ್ಗೆ ಧಾರ್ಮಿಕರು ಎಂದೆನಿಸಿಕೊಳ್ಳುವವರ ವಿರೋಧ ಎಲ್ಲ ಮತ-ಧರ್ಮಗಳಲ್ಲಿ ಸಾಮಾನ್ಯ, ಏಕೆಂದರೆ ಇದು ಮಾನವ ಜೀವಿಗಳು ಸೇರಿದಂತೆ ಇಡೀ ಜಗತ್ತು ದೇವರ ಸೃಷ್ಟಿ ಎಂಬ ಸಾಮಾನ್ಯ ನಂಬಿಕೆಯನ್ನು ಪ್ರಶ್ನಿಸಿದೆ. ಆದ್ದರಿಂದ ಅದಕ್ಕೆ ಸಾಮಾಜಿಕ-ವಿರೋಧ ಅಮೆರಿಕ ಸೇರಿದಂತೆ ಎಲ್ಲ ದೇಶಗಳಲ್ಲೂ ಸಾಮಾನ್ಯವಾಗಿ ಇದೆ. ಆದರೆ ಅದು ಹೆಚ್ಚಿನ ದೇಶಗಳಲ್ಲಿ ಶಾಲಾ ಪಠ್ಯಗಳಲ್ಲಿ ತಿರಸ್ಕಾರಕ್ಕೆ ಅಥವ ನಿಷೇಧಕ್ಕೆ ಒಳಗಾಗುವಷ್ಟು ತೀವ್ರವಾಗಿ ವ್ಯಕ್ತಗೊಂಡಿಲ್ಲ. ಹಾಗೆ ನೋಡಿದರೆ ನಮ್ಮಲ್ಲಿಯೂ, ಇದು ನಮ್ಮ ನೆರೆಯ ಮಧ್ಯಪೂರ್ವ ಏಷ್ಯಾದ ದೇಶಗಳಲ್ಲಿ ವ್ತಕ್ತಗೊಂಡಿದ್ದರೂ, ಹಿಂದುತ್ವದ ಪ್ರಭಾವ ಬೆಳೆಯುವ ವರೆಗೆ ಇರಲಿಲ್ಲ. ಆದರೆ ನೆರೆಯ ಪಾಕಿಸ್ತಾನದಲ್ಲಿ ಅಧ್ಯಾಪಕರು ಅದನ್ನು ಬಹಳ ಸಮಯದಿಂದ ತಿರಸ್ಕಾರದಿಂದ ಉಲ್ಲೇಖಿಸಬೇಕೆಂದು ನಿರೀಕ್ಷಿಸಲಾಗುತ್ತಿದೆ. ಸೌದಿ ಅರೇಬಿಯ, ಒಮನ್, ಅಲ್ಜೀರಿಯ ಮತ್ತು ಮೊರೊಕ್ಕೊದಲ್ಲಿ ಇದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. (ದಿನೇಶ್ ಸಿ ಶರ್ಮ, ದಿ ವೈರ್, ಎಪ್ರಿಲ್‍23). ಅಂದರೆ ನಮ್ಮ ಈಗಿನ ಆಳುವ ಮಂದಿ ಈಗ ಪಾಕಿಸ್ತಾನವನ್ನೂ ಮೀರಿಸಿ ಸೌದಿ ಅರೇಬಿಯಾವನ್ನು ಅನುಕರಿಸುತ್ತಿದ್ದಾರೆ!

‘ಅಚ್ಛೇ ದಿನ್’ ಸರಕಾರದಲ್ಲಿ, ಶಿಕ್ಷಣ ಮಂತ್ರಿ(ಮಾನವ ಸಂಪನ್ಮೂಲ ಮಂತ್ರಿ)ಯಾಗಿದ್ದ ಸತ್ಪಾಲ್‍ ಸಿಂಗ್ 2018ರಲ್ಲಿ ಡಾರ್ವಿನ್ ಸಿದ್ಧಾಂತ ವೈಜ್ಞಾನಿಕವಾಗಿ ತಪ್ಪು ಏಕೆಂದರೆ “ಒಂದು ಮಂಗ ಮಾನವನಾದದ್ದನ್ನು ಯಾರೂ ಇದುವರೆಗೆ ನೋಡಿಲ್ಲ” ಎಂದು ಹೇಳಿದ್ದನ್ನು ಮತ್ತು ಆಂಧ್ರ ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಜಿ. ನಾಗೇಶ್ವರ ರಾವ್ 2019ರಲ್ಲಿ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ಇದಕ್ಕೆ ಪರ್ಯಾಯವಾಗಿ ‘ದಶಾವತಾರ’ ಸಿದ್ಧಾಂತವನ್ನು ಪ್ರತಿಪಾದಿಸಿದರು ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. (ಆ ಸಮಯದ ಈ ವ್ಯಂಗ್ಯಚಿತ್ರವನ್ನು ನೋಡಿ)

 

“ ಆದರೆ ಮನುಷ್ಯರು ಪ್ರಾಣಿಗಳಾಗಿರುವುದಕ್ಕೆ ಸಾಕಷ್ಟು ಪುರಾವೆಗಳಿವೆ”
“ ಹರ್ಯಾಣಾದಲ್ಲಿ ಏಳುದಿನಗಳಲ್ಲಿ ಒಂಬತ್ತು ಅತ್ಯಾಚಾರಗಳು”

ವ್ಯಂಗ್ಯಚಿತ್ರ: ಗೋಕುಲ್, ಡೆಕ್ಕನ್ ಕ್ರಾನಿಕಲ್

ಗಮನಾರ್ಹ ಸಂಗತಿಯೆಂದರೆ ಹಿಂದುತ್ವವಾದಿಗಳಿಗೆ ಆನುವಂಶಿಕತೆಯ ಬಗ್ಗೆ ಆಕ್ಷೇಪವೇನೂ ಇಲ್ಲ. ಏಕೆಂದರೆ ಅದರಿಂದ ಕೆಲವು ಭಾರತೀಯರ ‘ಜನಾಂಗೀಯ ಶುದ್ಧತೆ’ ಮತ್ತು ಕೆಲವು ಜಾತಿಗಳ ಮೇಲರಿಮೆಯನ್ನು, ಈಗಂತೂ ದೇಸೀ ಹಸುಗಳ ತಳಿಗಳ ಮೇಲ್ಮೆಯನ್ನು ಕೂಡ ತೋರಿಸಲು ಸಾಧ್ಯವಾಗಿದೆ ಎಂದು ಅವರು ನಂಬಿದ್ದಾರೆ(ರಘು, ಪೀಪಲ್ಸ್‍ ಡೆಮಾಕ್ರಸಿ, ಎಪ್ರಿಲ್‍23).

ಡಾರ್ವಿನ್‍ ಇಲ್ಲದ ಜೀವಶಾಸ್ತ್ರ! ನ್ಯೂಟನ್, ಐನ್‍ಸ್ಟೈನ್‍ ಇಲ್ಲದ ಭೌತಶಾಸ್ತ್ರ!
ವಿಕಾಸವಾದದ ಅಧ್ಯಾಯವನ್ನು ತೆಗೆದು ಹಾಕಿರುವುದು ಹಲವು ರೀತಿಗಳಲ್ಲಿ ಒಂದು ದೊಡ್ಡ ನಷ್ಟ ಎನ್ನುತ್ತಾರೆ.  ಪರಿಣಿತರು(ರಘು, ಪೀಪಲ್ಸ್ ಡೆಮಾಕ್ರಸಿ, ಎಪ್ರಿಲ್‍ 23). ಏಕೆಂದರೆ ಇದು ವೈಜ್ಞಾನಿಕ ಪರಿಕಲ್ಪನೆಯ ಒಂದು ಗಟ್ಟಿ ತಳಪಾಯ, ಹಲವು ಪರಿಕಲ್ಪನೆಗಳನ್ನು ಒಂದು ವಿಶಾಲ ದೃಷ್ಟಿಯಲ್ಲಿ ಅರ್ಥೈಸಿಕೊಳ್ಳಲು ವಿದ್ಯಾರ್ಥಿಗಳಿಗೆ ನೆರವಾಗುತ್ತದೆ. ಇದು “ಅರಿವಿನ ಒಂದು ದಾರಿ”ಯಾಗಿ ನಂಬಿಕೆ ಮತ್ತು ವಿಜ್ಞಾನದ ನಡುವಿನ ವ್ಯತ್ಯಾಸವನ್ನು ತಿಳಿಯುವ ಒಂದು ಮಹತ್ವದ ವಿಷಯ ಕೂಡ ಎನ್ನುತ್ತಾರೆ ಅವರು. ಬಹುಶಃ ಅದಕ್ಕಾಗಿಯೇ ಕೈಬಿಟ್ಟಿರಬಹುದು!

ಸತ್ಪಾಲ್‍ ಸಿಂಗ್ ಹೇಳಿಕೆ ಬಂದಾಗ ಭಾರತದ ಮೂರೂ ಪ್ರಮುಖ ವಿಜ್ಞಾನ ಅಕಾಡೆಮಿಗಳು ಅದನ್ನು ಖಂಡಿಸಿ ಜಂಟಿ ಹೇಳಿಕೆ ನೀಡಿದ್ದವು. ವಿಕಾಸವಾದದ ಸಿದ್ಧಾಂತ ಹಲವಾರು ಪ್ರಯೋಗಗಳು ಮತ್ತು ವೀಕ್ಷಣೆಗಳಿಂದ ಮತ್ತೆ- ಮತ್ತೆ ಪ್ರಮಾಣಿತವಾದ ಸಿದ್ಧಾಂತ, ಇದರ ಬೋಧನೆಯನ್ನು ಶಾಲಾ ಮತ್ತು ಕಾಲೇಜು ಪಠ್ಯದಿಂದ ತೆಗೆಯುವುದು ಒಂದು ಪ್ರತಿಗಾಮಿ ಕ್ರಮವಾಗುತ್ತದೆ ಎಂದು ಎಚ್ಚರಿಸಿದ್ದವು. ಈಗ ಭಾರತದ ಪ್ರಮುಖ ವಿಜ್ಞಾನಿಗಳ ಆ ಎಚ್ಚರಿಕೆಯನ್ನು ಉಪೇಕ್ಷಿಸಲಾಗಿದೆ.

ಇನ್ನು, ಪೈಥಾಗೊರಸ್‍ ಪ್ರಮೇಯವನ್ನು ಕೈಬಿಡಲು ಕಾರಣ, ಇದು ನಮ್ಮ ಪೂರ್ವಜರಿಗೆ ಮೊದಲೇ ತಿಳಿದಿತ್ತು ಎಂಬ ಹಿಂದುತ್ವವಾದಿಗಳ ಪ್ರತಿಪಾದನೆಯೇ ಎನ್ನಲಾಗುತ್ತದೆ.

ಇದೇ ರೀತಿಯಲ್ಲಿ ಕೈಗಾರಿಕಾ ಕ್ರಾಂತಿಯ ಅಧ್ಯಾಯವನ್ನು ಕೈಬಿಡಲು ಕೂಡ ಆಧುನಿಕ ವಿಜ್ಞಾನಕ್ಕೆ ತಿಳಿದಿರುವ  ಎಲ್ಲವೂ ನಮ್ಮ ಪ್ರಾಚೀನ ಪೂರ್ವಜರಿಗೆ ತಿಳಿದಿತ್ತು ಎಂಬ ಈ ಪ್ರತಿಪಾದನೆಯೇ ಕಾರಣವಿರಬಹುದೇನೋ ಎಂದು ಇನ್ನೊಬ್ಬ ಪರಿಣಿತರು ಹೇಳಿದ್ದಾರೆ. ಇಂಗ್ಲೆಂಡಿನಲ್ಲಿ ನಡೆದ ಕೈಗಾರಿಕಾ ಕ್ರಾಂತಿಯ ನಂತರವೇ ಜಗತ್ತಿನಲ್ಲಿ ಆಧುನಿಕತೆಯತ್ತ ಎಲ್ಲ ಬದಲಾವಣೆಗಳು ಸಂಭವಿಸಲು ಪ್ರಾರಂಭಿಸಿದವು ಎನ್ನುವುದಾದರೆ, ರಾಮಾಯಣದ ಪುಷ್ಪಕ ವಿಮಾನಗಳು, ಗಣೇಶನ ಪ್ಲಾಸ್ಟಿಕ್‍ ಸರ್ಜರಿ, ಮಹಾಭಾರತದ ಸಂಜಯನ ಇಂಟರ್ನೆಟ್ ಬಗ್ಗೆ ಹೇಳಿಕೊಳ್ಳಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.

‘ದಶಾವತಾರ’ ಸಿದ್ಧಾಂತ ವಿಕಾಸವಾದಕ್ಕೆ ಪರ್ಯಾಯ ಎಂದು ಹೇಳುವ ಪ್ರಬಂಧ ಮಂಡಿಸಲ್ಪಟ್ಟ 2019ರ ಭಾರತೀಯ ವಿಜ್ಞಾನ ಸಮ್ಮೇಳನದಲ್ಲಿ ನ್ಯೂಟನ್‍ ಮತ್ತು ಐನ್‍ಸ್ಟೈನ್ ಸಿದ್ಧಾಂತಗಳು ಕೂಡ ಹುಸಿ ಎನ್ನುವ ಪ್ರಬಂಧಗಳನ್ನೂ ಮಂಡಿಸಲಾಯಿತಂತೆ. ಅಂದರೆ ಈಗ ಡಾರ್ವಿನ್‍ ಇಲ್ಲದ ಜೀವಶಾಸ್ತ್ರದ ಬೋಧನೆಯಂತೆ, ಮುಂದೆ ಎನ್‍,ಸಿ.ಇ.ಆರ್‍.ಟಿ. ಕೃಪೆಯಿಂದ ನ್ಯೂಟನ್ಮತ್ತು ಐನ್‍ಸ್ಟೈನ್‍ ಇಲ್ಲದ ಭೌತಶಾಸ್ತ್ರದ ಬೋಧನೆ ಬರಬಹುದೇ ಎಂದು ಶಿಕ್ಷಣವೇತ್ತರು ಕೇಳುವಂತಾಗಿದೆ(ದಿನೇಶ್ ಸಿ ಶರ್ಮ, ದಿ ವೈರ್, ಎಪ್ರಿಲ್‍23).

ವೈಜ್ಞಾನಿಕ ಪರಿಕಲ್ಪನೆಗಳ ಜ್ಞಾನದಿಂದ ವಿದ್ಯಾರ್ಥಿಗಳನ್ನು ದೂರವಿಡುವುದು ಶಿಕ್ಷಣ ಎಂಬುದರ ಅಣಕವಾಗುತ್ತದಷ್ಟೇ ಎಂದು ವಿಜ್ಞಾನಿಗಳು ಮತ್ತು ಶಿಕ್ಷಣವೇತ್ತರ ಒಂದು ಸ್ವತಂತ್ರ ಸಮೂಹ ‘ಬ್ರೇಕ್‍ಥ್ರೂ ಸೈನ್ಸ್ ಸೊಸೈಟಿ’ ಎನ್‍.ಸಿ.ಇ.ಆರ್‍.ಟಿ.ಯ ನಿಲುವನ್ನು ವಿಮರ್ಶಿಸುವ ಬಹಿರಂಗ ಪತ್ರದಲ್ಲಿ ಹೇಳಿದೆ.

(2018ರ ಈ ವ್ಯಂಗ್ಯಚಿತ್ರವನ್ನು ನೋಡಿ- ನಾಲ್ಕರಲ್ಲಿ ಯಾವುದು ಸರಿಯುತ್ತರ?)

ವ್ಯಂಗ್ಯಚಿತ್ರ: ಸಂದೀಪ ಅಧ್ವರ್ಯು, ಟೈಂಸ್‍ ಆಫ್‍ ಇಂಡಿಯ
Donate Janashakthi Media

Leave a Reply

Your email address will not be published. Required fields are marked *