ಬಿಜೆಪಿಗೆ ಆಯನೂರು ಮಂಜುನಾಥ್ ರಾಜೀನಾಮೆ

ಶಿವಮೊಗ್ಗ : ವಿಧಾನಪರಿಷತ್ ಸದಸ್ಯತ್ವ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಎರಡಕ್ಕೂ ರಾಜೀನಾಮೆ ಕೊಡುವೆ ಎಂದು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್, ಶಿವಮೊಗ್ಗ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಲು ಗುರುವಾರ ಬೆಳಿಗ್ಗೆ ನಾಮಪತ್ರ ಸಲ್ಲಿಸುವುದಾಗಿ ತಿಳಿಸಿದರು.

ಶ್ರಮಿಕವರ್ಗ, ತುಳಿತಕ್ಕೆ ಒಳಗಾದವರ ಪರವಾಗಿ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವೆ ಎಂದು ಹೇಳಿದ ಅವರು, ವಿಧಾನಪರಿಷತ್ ನಲ್ಲಿ ನಾನು ಪ್ರತಿನಿಧಿಸುತ್ತಿದ್ದ ಪದವಿಧರ ಕ್ಷೇತ್ರದ ಎಲ್ಲರ ಅನುಮತಿ ಪಡೆದು ಈ ನಿರ್ಧಾರ ಕೈಗೊಂಡಿದ್ದೇನೆ. ಆ ಸಮೂಹ ಕೂಡ ನನ್ನ ಮೇಲೆ ಭರವಸೆ, ವಿಶ್ವಾಸವಿಟ್ಟು ನನ್ನನ್ನು ಬೆಂಬಲಿಸಲಿದೆ ಎಂದರು.

ಶಿವಮೊಗ್ಗ ತನ್ನ ಶಾಂತಿಯ ಪರಂಪರೆ ಕಳೆದುಕೊಳ್ಳುತ್ತಿರುವ ಆತಂಕವಿದೆ. ಇಂಥ ಸ್ಥಿತಿ ನಿರ್ಮಿಸುವವರ ವಿರುದ್ಧ ಈ ಸ್ಪರ್ಧೆ. ಶಾಂತಿ ಪ್ರಿಯರಾದ ಜನ ನನ್ನ ಜೊತೆ ಇದ್ದಾರೆ. ನನ್ನ ಸೌಹಾರ್ದದ ನಿಲುವಿಗೆ ಬೆಂಬಲಿಸಬೇಕೆಂದು ಎಲ್ಲರಿಗೂ ವಿನಂತಿಸುವೆ ಎಂದರು. ಶಿವಮೊಗ್ಗದಲ್ಲಿ ಭಯಭೀತ ಸ್ಥಿತಿ. ಘನತೆ, ಗೌರವಕ್ಕೆ ಧಕ್ಕೆ, ಅಪಖ್ಯಾತಿ ಬಂದಿದೆ ಇಲ್ಲಿ ಗಲಭೆ ನಿಯಂತ್ರಣ ಮುಖ್ಯ ಎಂದ ಅವರು, ಕುಬೇರರ ಮುಂದೆ ಜನರ ಆಶೋತ್ತರಗಳಿಗೆ ಸ್ಪಂದಿಸುವ ಜವಾಬ್ದಾರಿಯೊಂದಿಗೆ ಸ್ಪರ್ಧೆ ಮಾಡುತ್ತಿರುವೆ. ಜಾತಿ, ಹಣದ ಸಹಾಯ ಇಲ್ಲದೇ ಸ್ಪರ್ಧೆ ಮಾಡುವೆ. ಸ್ವಲ್ಪ ಹೊತ್ತಿನಲ್ಲೇ ಹುಬ್ಬಳ್ಳಿಗೆ ತೆರಳಿ ವಿಧಾನಪರಿಷತ್ ಸ್ಥಾನಕ್ಜೆ ರಾಜೀನಾಮೆ ನೀಡುವೆ ಎಂದರು.

ಇದನ್ನೂ ಓದಿಬಿಜೆಪಿ ಸದಸ್ಯತ್ವಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ರಾಜೀನಾಮೆ

ಜೆಡಿಎಸ್‌ ನಿಂದ ಸ್ಪರ್ಧೆ? : ಸ್ಪರ್ಧೆಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷವೊಂದರ ನಾಯಕರ ಜೊತೆ ಮಧ್ಯಾಹ್ನ ಅಂತಿಮ ಸುತ್ತಿನ ಮಾತುಕತೆ ನಡೆಸುವೆ. ಅವರೇ ನನ್ನ ಹೆಸರು ಘೋಷಿಸಲಿದ್ದಾರೆ ಎಂದು ಹೇಳಿದ ಆಯನೂರು, ಯಾವ ಪಕ್ಷದಿಂದ ಸ್ಪರ್ಧಿಸುವೆ ಎಂಬ ಗುಟ್ಟು ಬಿಟ್ಟುಕೊಡಲಿಲ್ಲ. ಬಿಜೆಪಿ ಆಕಾಂಕ್ಷಿ ಆಗಿದ್ದೆ.ಅಲ್ಲಿ ಟಿಕೆಟ್ ಘೋಷಣೆ ಆಗ್ತಿಲ್ಲ. ಶೆಟ್ಟರ್ ನಾನು ಗೆಳೆಯರು.1994 ರಿಂದಲೂ ಪಕ್ಷ ಕಟ್ಟಿದವರು. ಅವರ ನಿಲುವು ಅವರದ್ದು. ನನ್ನ ನಿಲುವು ನನ್ನದು. ಈಶ್ವರಪ್ಪ ಸ್ಪರ್ಧೆಗಿಳಿದರೆ ಲೆಕ್ಕ ಕೊಡುವುದು ಬಹಳ ಇದೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

Donate Janashakthi Media

Leave a Reply

Your email address will not be published. Required fields are marked *