ಕಾನೂನು ಪಾಲಿಸದ ಚುನಾವಣಾ ಅಭ್ಯರ್ಥಿಗಳು

ಕೆ.ಶಶಿಕುಮಾರ್ ಮೈಸೂರು.

ಅಭ್ಯರ್ಥಿಗಳಿಗೆ ನೂರೆಂಟು ಬಗೆಯ ನಿರ್ಬಂಧಗಳನ್ನು ವಿಧಿಸುವ ಚುನಾವಣಾ ಆಯೋಗ ಇಂತಹ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ತಡೆಯುವ ದಿಸೆಯಲ್ಲಿ ಪೊಲೀಸ್ ಇಲಾಖೆಗೆ ಯಾವ ನಿರ್ದೇಶನಗಳನ್ನೂ ನೀಡಿಲ್ಲವೇಕೆ?

‘ಚುನಾವಣೆಯಲ್ಲಿ ಗೆದ್ದು ಶಾಸಕರು, ಮಂತ್ರಿಗಳು ಆದವರು ಕಾನೂನುಗಳನ್ನು ಮೀರುತ್ತಾರೆ’ ಎಂಬ ಅಭಿಪ್ರಾಯವಿದೆ. ಆದರೆ ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಗೆಲ್ಲುವ ಮುನ್ನವೇ ಕಾನೂನುಗಳು ತಮಗೆ ಲೆಕ್ಕವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.

ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಶಕ್ತಿ ಪ್ರದರ್ಶನ ಮಾಡುವುದು ಸಾಮಾನ್ಯ. ಅದಕ್ಕಾಗಿ ನೂರಾರು, ಸಾವಿರಾರು ಜನರನ್ನು ಸೇರಿಸಿ ಅವರೆಲ್ಲಾ ತಮ್ಮ ಅಭಿಮಾನಿಗಳು, ತಾವು ಪ್ರತಿನಿಧಿಸುವ ಪಕ್ಷಗಳ ಕಾರ್ಯಕರ್ತರು ಹಾಗೂ ಅವರೆಲ್ಲರೂ ತಮಗೆ ಒಠು ಹಾಕಿ ಗೆಲ್ಲಿಸಲು ತುದಿಗಾಲಲ್ಲಿ ನಿಂತಿರುವ ಮತದಾರರು ಎಂದು ಇತರ ಜನರಿಗೆ ತೋರಿಸಲು ಅಭ್ಯರ್ಥಿಗಳು ರೋಡ್ ಶೋಗಳನ್ನು ನಡೆಸುತ್ತಿದ್ದಾರೆ.

ಆದರೆ ಈಗಿರುವ ಬಿರುಬಿಸಿಲಿನಲ್ಲಿ ಪಾದಯಾತ್ರೆಗಳನ್ನು ನಡೆಸಿದರೆ ಜನರು ಬರುವುದಿಲ್ಲ, ಮೈಲುಗಟ್ಟಲೆ ನಡೆಯಲು ಕಾರ್ಯಕರ್ತರು ಒಪ್ಪುವುದಿಲ್ಲ ಎಂಬ ಕಾರಣಕ್ಕೆ ಬೈಕ್ ರ್ಯಾಲಿಗಳನ್ನು ಆಯೋಜಿಸಲಾಗುತ್ತಿದೆ. ಪ್ರತಿಯೊಂದು ಬೈಕ್ ಗಳಿಗೂ ಪೆಟ್ರೋಲ್ ಹಾಕಿಸಿ, ಎಲ್ಲರುಗೂ ತಿಂಡಿ ತಿನ್ನಿಸಿ, ತಲೆಗಿಷ್ಟು ಎಂದು ಕಾಸು ಎಣಿಸಿ ಜನರನ್ನು ಸೇರಿಸಿ ಮೆರವಣಿಗೆಗಳನ್ನು ಆಯೋಜಿಸುತ್ತಿದ್ದಾರೆ.

ಆದರೆ ಬೈಕ್ ರ್ಯಾಲಿಗಳಲ್ಲಿ ಬೈಕ್ ಓಡಿಸಿಕೊಂಡು ಬರುವವರ ತಲೆಗೆ ಹೆಲ್ಮೆಟ್ ಮಾತ್ರ ಇಲ್ಲ! ಅಭ್ಯರ್ಥಿಗಳ ಹಿಂದೆ, ಮುಂದೆ ಬೈಕ್ ಓಡಿಸಿಕೊಂಡು ಬರುವವರಲ್ಲಿ ಒಬ್ಬರಾದರೂ ಹೆಲ್ಮೆಟ್ ಧರಿಸುತ್ತಿಲ್ಲ.

ಇಂದು ಮೈಸೂರಿನಲ್ಲಿ ಅಭ್ಯರ್ಥಿಯೊಬ್ಬರ ಬೆಂಬಲಿಗರು ಹಾಗೂ ಅವರ ಪಕ್ಷದ ಕಾರ್ಯಕರ್ತರು ಸಾವಿರಕ್ಕೂ ಹೆಚ್ಚು ಮೋಟಾರ್ ಬೈಕ್ ಗಳಲ್ಲಿ ಮೆರವಣಿಗೆ ನಡೆಸಿದರು. ಆದರೆ ಯಾರೂ ಹೆಲ್ಮೆಟ್ ಧರಿಸಿರಲಿಲ್ಲ. ಇನ್ನೂ ಸ್ವಾರಸ್ಯದ ಸಂಗತಿಯೆಂದರೆ ಹೆಲ್ಮೆಟ್ ಧರಿಸದ ಆ ಕಾರ್ಯಕರ್ತರ ದಂಡು ಒಂಟಿಕೊಪ್ಪಲು ಸರ್ಕಲ್ಲಿನಲ್ಲಿರುವ ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆಯ ಮುಂಭಾಗದಲ್ಲೇ ಜೈಕಾರ ಕೂಗುತ್ತಾ, ಎಲ್ಲರೂ ಒಟ್ಟಾಗಿ ಹಾರ್ನ್ ಮಾಡುತ್ತಾ ಸಾಗಿಹೋದರು!

ಇನ್ನೊಂದು ತಮಾಷೆಯ ವಿಷಯವೆಂದರೆ ಆ ಮೆರವಣಿಗೆ ಹಾದು ಹೋದ ರಸ್ತೆಯಿಂದ ಎರಡು ರಸ್ತೆಯಾಚೆ ಸಂಚಾರ ಪೊಲೀಸರು ‘ಅಡ್ಡಾ’ ಹಾಕಿಕೊಂಡು ಹೆಲ್ಮೆಟ್ ಹಾಕದೆ ದ್ವಿಚಕ್ರ ವಾಹನಗಳನ್ನು ಓಡಿಸುತ್ತಿದ್ದವರನ್ನು ಅಟ್ಟಾಡಿಸಿ ಹಿಡಿದು ಫೈನ್ ಹಾಕುತ್ತಿದ್ದರು. ವಿ.ವಿ.ಪುರಂ ಸಂಚಾರ ಪೊಲೀಸ್ ಠಾಣೆಯ ಪಕ್ಕದಲ್ಲೇ ಒಂಟಿಕೊಪ್ಪಲು ಪೊಲೀಸ್ ಠಾಣೆಯೂ ಇದೆ. ಹೆಲ್ಮೆಟ್ ಹಾಕದ ಕಾರ್ಯಕರ್ತರ ಬೈಕ್ ಮೆರವಣಿಗೆ ತಮ್ಮ ಸ್ಟೇಷನ್ ಮುಂದೆ ಹಾದುಹೋಗುವಾಗ ಆ ಮೆರವಣಿಗೆಯ ಅಬ್ಬರವನ್ನು ಕಂಡು ಎಂಜಾಯ್ ಮಾಡುತ್ತಿದ್ದರು!!

ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸುವವರು ನೀತಿ, ನಿಯಮ, ಕಾನೂನುಗಳನ್ನು ರೂಪಿಸುವ ಅಧಿಕಾರ ಹೊಂದಿರುತ್ತಾರೆ. ಅದಕ್ಕೆಂದೇ ವಿಧಾನಸಭೆಯನ್ನು ಶಾಸನಸಭೆ ಎಂದು ಸಹ ಕರೆಯಲಾಗುತ್ತದೆ. ಅಂತಹ ಮಹಾ ಶಕ್ತಿಕೇಂದ್ರವಾದ ವಿಧಾನಸಭೆಗೆ ಸದಸ್ಯರಾಗಿ ಚುನಾಯಿತರಾಗಲು ಚುನಾವಣೆಗೆ ನಿಂತವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಸ್ವತಃ ಕಾನೂನು ಉಲ್ಲಂಘಿಸಿದರೆ, ತಮ್ಮ ಬೆಂಬಲಿಗ ಕಾರ್ಯಕರ್ತರು ಸಂಚಾರ ನಿಯಮಗಳನ್ನು ಮೀರಿದರೂ ಅವರಿಗೆ ತಿಳಿಹೇಳದೆ ಅವರ ಸ್ವೇಚ್ಛಾ ಪ್ರವೃತ್ತಿಗೆ ಪ್ರೋತ್ಸಾಹ ನೀಡಿದರೆ ಅದಕ್ಕೆ ಏನರ್ಥ? ಸ್ವತಃ ಕಾನೂನು ಉಲ್ಲಂಘಿಸುವ ಇವರು ಜನರಿಗೆ ಎಂತಹ ಕೆಟ್ಟ ಸಂದೇಶ ರವಾನಿಸುತ್ತಿದ್ದಾರೆ ಎಂಬ ಅರಿವು ಅವರಿಗಿದೆಯೇ? ಈ ನೆಲದ ಕಾನೂನುಗಳನ್ನು ಗೌರವಿಸುವ ಕನಿಷ್ಟ ಸೌಜನ್ಯವೂ ಇಲ್ಲದ ಇಂತಹ ಜನಪ್ರತಿನಿಧಿಗಳು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವಾಗಿರುವ ನಮ್ಮ ದೇಶದ ಸಂವಿಧಾನಕ್ಕೆ ಯಾವ ಗೌರವ ನೀಡಬಲ್ಲರು? ಇಂತಹವರಿಂದ ನಾವು ಯಾವ ಬಗೆಯ ಸ್ಚಚ್ಛ ಆಡಳಿತವನ್ನು ನಿರೀಕ್ಷಿಸಬಹುದು?

ಇದನ್ನೂ ಓದಿ : ಚುನಾವಣಾ ಆಯುಕ್ತರುಗಳ ನೇಮಕಕ್ಕೆ ಸಮಿತಿ-ಸುಪ್ರಿಂ ಕೋರ್ಟ್‍ನ ಮಹತ್ವದ ಆದೇಶ

ಇಂತಹ ಅಂದಾದುಂದಿ ವರ್ತನೆ ಕೇವಲ ಒಂದು ಕ್ಷೇತ್ರಕ್ಕೆ ಅಥವಾ ಒಂದು ರಾಜಕೀಯ ಪಕ್ಷಕ್ಕೆ ಸೀಮಿತವಾಗಿಲ್ಲ. ಎಲ್ಲೆಡೆ ಈ ದುಂಡಾವರ್ತನೆ ಕಾಣಸಿಗುತ್ತಿದೆ.

ಅಭ್ಯರ್ಥಿಗಳಿಗೆ ನೂರೆಂಟು ಬಗೆಯ ನಿರ್ಬಂಧಗಳನ್ನು ವಿಧಿಸುವ ಚುನಾವಣಾ ಆಯೋಗ ಇಂತಹ ಕಾನೂನು ಉಲ್ಲಂಘನೆ ಪ್ರಕರಣಗಳನ್ನು ತಡೆಯುವ ದಿಸೆಯಲ್ಲಿ ಪೊಲೀಸ್ ಇಲಾಖೆಗೆ ಯಾವ ನಿರ್ದೇಶನಗಳನ್ನೂ ನೀಡಿಲ್ಲವೇಕೆ? ಚುನಾವಣಾ ಅಭ್ಯರ್ಥಿಗಳ ಮೆರವಣಿಗೆಗೆ ಮಾರ್ಗ ನಿಗದಿಪಡಿಸುವ ಪೊಲೀಸ್ ಅಧಿಕಾರಿಗಳು ಬೈಕ್ ರ್ಯಾಲಿ ನಡೆಸುವಾಗ ಸವಾರರು ಕಡ್ಡಾಯವಾಗಿ ಹೆಲ್ಮೆಟ್ಧ ರಿಸಲೇಬೇಕು ಎಂಬ ನಿಬಂಧನೆಯನ್ನು ಅನುಮತಿ ಪತ್ರದಲ್ಲಿ ಸೇರಿಸುವ ಮೂಲಕ ಈ ಉದ್ಧಟತನಕ್ಕೆ ಕಡಿವಾಣ ಹಾಕಬಾರದೇಕೆ? ಎಂಬುದು ಜನರ ಪ್ರಶ್ನೆಯಾಗಿದೆ.

ಸ್ವತಃ ಅಭ್ಯರ್ಥಿಗಳೇ ತಮ್ಮ ಹಿಂಬಾಲಕರಿಗೆ ತಿಳಿ ಹೇಳಿದರೆ ಅವರು ಎಲ್ಲರಿಗೂ ಮಾದರಿಯಾಗಬಲ್ಲರು. ಅಷ್ಟೇ ಅಲ್ಲದೆ ಕಾನೂನು ಗೌರವಿಸುವ ಮತದಾರರ ಓಟುಗಳೂ ಸಹ ಅವರಿಗೆ ಬೀಳಬಹುದು!

Donate Janashakthi Media

Leave a Reply

Your email address will not be published. Required fields are marked *