ರಾಯಚೂರು: ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಆಡಳಿತರೂಢ ಬಿಜೆಪಿ ಶಾಸಕರೇ ಲಘುವಾಗಿ ಮಾತನಾಡಿರುವ ಆಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ.
ರಾಯಚೂರು ನಗರ ಬಿಜೆಪಿ ಶಾಸಕ ಡಾ. ಶಿವರಾಜ್ ಪಾಟೀಲ್ ಆಡಿಯೋ ಈಗ ಎಲ್ಲೆಡೆ ವೈರಲ್ ಆಗಿದೆ. ಈ ಹಿಂದೆ ರಾಯಚೂರನ್ನು ತೆಲಂಗಾಣಕ್ಕೆ ಸೇರಿಸಿ ಎಂದು ಹೇಳಿ ವಿವಾದ ಸೃಷ್ಟಿಸಿದ್ದ ಶಾಸಕರು ಮತ್ತೊಮ್ಮೆ ವಿವಾದಾತ್ಮಕ ಮಾತುಗಳ ಮೂಲಕ ಸುದ್ದಿಯಲ್ಲಿದ್ದಾರೆ.
ಕಾರ್ಯಕ್ರಮವೊಂದರ ಸಂಬಂಧ ಮಾತನಾಡಿದ್ದು ಎನ್ನಲಾದ ಒಟ್ಟು 3 ನಿಮಿಷ 19 ಸೆಕೆಂಡ್ ಗಳ ಫೋನ್ ಸಂಭಾಷಣೆಯ ಆಡಿಯೋ ಇದಾಗಿದೆ. ಶಾಸಕ ಸೋಮಶೇಖರ್ ರೆಡ್ಡಿ ಹಾಗೂ ಶ್ರೀರಾಮುಲು ಬಗ್ಗೆಯೂ ಉಡಾಫೆ ಮಾತುಗಳನ್ನಾಡಿದ್ದಾರೆ. ಇದೀಗ ಚುನಾವಣೆ ಹೊತ್ತಲ್ಲೇ ಸ್ಫೋಟಗೊಂಡಿದ್ದು, ಭಾರೀ ಸಂಚಲನ ಮೂಡಿಸಿದೆ.
ಆಡಿಯೋನಲ್ಲೇನಿದೆ?
ನಾನೇ ಮೋದಿ ನಾನೇ ದೇವರು. ಯಾವ ಮೋದಿ ಇಲ್ಲಾ ಪಾದಿ ಇಲ್ಲ. ನಾನು ಯಾರನ್ನೂ ಕೇರ್ ಮಾಡಲ್ಲ. ಸಿಂಗಲ್ ಮ್ಯಾನ್ ಆರ್ಮಿ ನಾನು. ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನೂ ಕೂಡ ನಾನು ಕೇರ್ ಮಾಡಲ್ಲ ಎಂದಿರುವ ಶಿವರಾಜ್ ಪಾಟೀಲ್ ಸಂಭಾಷಣೆ ಆಡಿಯೋ ವೈರಲ್ ಆಗಿದೆ. ಏಮ್ಸ್ ಹೋರಾಟಗಾರ ಅಶೋಕ್ ಕುಮಾರ್ ಜೈನ್ ಜೊತೆ ಮಾತನಾಡಿದ್ದ 3 ನಿಮಿಷ 19 ಸೆಕೆಂಡುಗಳ ಆಡಿಯೋ ನಾಲ್ಕೂವರೆ ವರ್ಷದ ಬಳಿಕ ಈಗ ವೈರಲ್ ಆಗಿದೆ.
ಸೋತರೂ ಚಿಂತೆಯಿಲ್ಲಾ, ಗೆದ್ದರೂ ಚಿಂತೆಯಿಲ್ಲಾ, ಎದ್ದರೂ ಚಿಂತೆಯಿಲ್ಲಾ, ಮಲ್ಕೊಂಡರೂ ಚಿಂತೆಯಿಲ್ಲಾ ನನಗೆ. ಚಿಂತೆಯಿಲ್ಲದಿರುವ ಮನುಷ್ಯ ನಾನು. ನಾನೇ ದೇವರು ಎಲ್ಲರೂ ನನ್ನ ಕಾಲಿಗೆ ನಮಸ್ಕಾರ ಮಾಡಬೇಕು. ನಾನು ಯಾರನ್ನೂ ಕೇರ್ ಮಾಡಲ್ಲ ಎಂದಿದ್ದಾರೆ.
ನನಗೆ ಯಾವ ರೈಟ್ ಇಲ್ಲಾ ಲೆಫ್ಟ್ ಇಲ್ಲಾ. ಸಿಂಗಲ್ ಮ್ಯಾನ್ ಆರ್ಮಿ ನಾನು. ನನ್ನ ಕೈ, ನನ್ನ ಕಾಲು, ಯಾವ ಮೋದಿ ಇಲ್ಲಾ, ಅವನ್ಯಾರು ಟ್ರಂಪ್ ಇಲ್ಲಾ. ಯಾವ ಬದನೆಕಾಯಿ ಸಹ ಕೇಳಂಗಿಲ್ಲ. ನಾನೇ ದೇವರು. ನಾನೇ ಎಲ್ಲಾ. ನಾನಿದ್ರೆ ಜಗತ್ತು. ಸೋಮಶೇಖರ್ ರೆಡ್ಡಿ, ಶ್ರೀರಾಮುಲು ಬಗ್ಗೆ ನನ್ನ ಮುಂದೆ ಹೇಳಿದ್ರೆ ಹೇಗೆ ಎಂದು ಮಾತನಾಡಿದ್ದಾರೆ.
ಇದನ್ನೂ ಓದಿ : ‘ಮೋದಿ’ ಉಪನಾಮಕ್ಕೆ ಅಪಮಾನ ಪ್ರಕರಣ: ರಾಹುಲ್ ಗಾಂಧಿ ತಪ್ಪಿತಸ್ಥ
ಆಡಿಯೋ ವೈರಲ್ ಆಗಿರುವುದು ಬಿಜೆಪಿ ಪಾಳಯದಲ್ಲಿ ಇರುಸುಮುರುಸಿಗೆ ಕಾರಣವಾಗಿದ್ದರೆ, ಸಾರ್ವಜನಿಕ ವಲಯದಲ್ಲಿ ಶಾಸಕ ಶಿವರಾಜ್ ಪಾಟೀಲ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ.