ರ‍್ಯಾಪಿಡೋ ಬೈಕ್ ಟ್ಯಾಕ್ಸಿ ನಿಷೇಧಿಸುವಂತೆ ಆಗ್ರಹಿಸಿ ಮಾ.20ರಂದು ಆಟೋ ಚಾಲಕರಿಂದ ಮುಖ್ಯಮಂತ್ರಿ ಮನೆ ಮುತ್ತಿಗೆ

ಬೆಂಗಳೂರು: ಅನುಮತಿಯಿಲ್ಲದೆ, ಸಾರಿಗೆ ನಿಯಮಗಳಿಲ್ಲದೆ ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ ನಗರದಲ್ಲಿ ಸಂಚರಿಸುತ್ತಿದ್ದು, ಈ ಸಾರಿಗೆ ವ್ಯವಸ್ಥೆಯನ್ನು ನಿಷೇಧಿಸಬೇಕೆಂದು ಗಡುವು ನೀಡಿರುವ ಬೆಂಗಳೂರು ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟ ನಾಳೆಯಿಂದ(ಮಾರ್ಚ್‌ 16) ಮೂರು ದಿನಗಳ ಕಪ್ಪು ಪಟ್ಟಿ ಧರಿಸಿ, ಕಪ್ಪು ಬಾವುಟ ಪ್ರದರ್ಶನಕ್ಕೆ ಮುಂದಾಗಿದೆ ಮತ್ತು ಮಾರ್ಚ್‌ 20ರಂದು ಆಟೋ ಸಂಚಾರ ಸ್ತಬ್ದಗೊಳಿಸಿ ಮುಖ್ಯಮಂತ್ರಿ ಮನೆ ಮುತ್ತಿಗೆ ಕಾರ್ಯಕ್ರಮ ಹಮ್ಮಿಕೊಂಡಿದೆ.

ಇಂದು(ಮಾರ್ಚ್‌ 15) ಪತ್ರಿಕಾಗೋಷ್ಠಿ ಹಮ್ಮಿಕೊಂಡಿದ್ದ ಒಕ್ಕೂಟವು ತಮ್ಮ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷ್ಯಸಿದೆ ಎಂದು ಆಕ್ರೋಶ ವ್ಯಕ್ತಡಿಸಿದ್ದಾರೆ. ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಆದರ್ಶ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್‌ ಯೂನಿಯನ್‌ ಅಧ್ಯಕ್ಷ ಎಂ. ಮಂಜುನಾಥ್‌, ನಗರ ಪ್ರಯಾಣಿಕರ ಅನುಕೂಲಕ್ಕಾಗಿ ಸರಿಸುಮಾರು 60 ವರ್ಷಗಳಿಂದ ಆಟೋರಿಕ್ಷಾ ಸೇವೆ ನೀಡಲಾಗುತ್ತಿದೆ. ಇದರಲ್ಲಿ ಬಿಎಂಟಿಸಿ ನಂತರ ಸ್ಥಾನ ಆಟೋ ಚಾಲಕರ ಮೇಲಿದೆ. ಬೆಂಗಳೂರು ನಗರದಲ್ಲಿ 1.3 ಲಕ್ಷ ಆಟೋಗಳು ಸಂಚಾರ ಮಾಡುತ್ತಿವೆ. ಇದರಿಂದ ಸುಮಾರು 2 ಲಕ್ಷಕ್ಕೂ ಹೆಚ್ಚಿನ ಚಾಲಕರು ಮತ್ತು ಸುಮಾರು 10 ಲಕ್ಷದಷ್ಟು ಜನರು ಅವಲಂಬಿತರು ಒಳಗೊಂಡಿದ್ದಾರೆ. ಹೀಗಿರುವಾಗ ಸದ್ಯದ ಪರಿಸ್ಥಿತಿಯಲ್ಲಿ ಚಾಲಕರ ಜೀವನ ನಡೆಸುವುದೇ ಕಷ್ಟವಾಗುತ್ತಿದೆ. ಈಗ ಆಪ್‌ ಆಧಾರಿತ ಸಾರಿಗೆ ವ್ಯವಸ್ಥೆಯಿಂದ ಚಾಲಕರಿಗೆ ಉತ್ತಮ ಸಂಪಾದನೆ ಇಲ್ಲವಾಗಿದೆ. ರ‍್ಯಾಪಿಡೋ ಬೈಕ್‌ ಟ್ಯಾಕ್ಸಿ ಸಂಚಾರ ನಿಷೇಧಿಸಬೇಕೆಂದು ಈಗಾಗಲೇ ಹಲವು ಬಾರಿ ಕೇಳಿದಾಗಲೂ ಸರ್ಕಾರ ಗಮನ ಹರಿಸುತ್ತಿಲ್ಲ ಹಾಗಾಗಿ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ಹೇಳಿದರು.

ಇದನ್ನು ಓದಿ: ಆಟೋ ಚಾಲಕರ ಸುಲಿಗೆಗೆ ಬ್ರೇಕ್ : 30 ಪ್ರಿಪೇಯ್ಡ್‌ ಆಟೋ ಸ್ಟ್ಯಾಂಡ್’ಗಳು ಆರಂಭ!

ಆಟೋರಿಕ್ಷಾ ಡ್ರೈವರ‍್ಸ್‌ ಯೂನಿಯನ್‌(ಸಿಐಟಿಯು) ಅಧ್ಯಕ್ಷ ಸಿ.ಎನ್.‌ ಶ್ರೀನಿವಾಸ್‌ ಮಾತನಾಡಿ, ಸಾರಿಗೆ ರಂಗ ಪ್ರವೇಶಿಸಿರುವ ಅಗ್ರಿಗೇಟರ್‌ ಕಂಪನಿಗಳು ಆರಂಭದಲ್ಲಿ ಪ್ರಯಾಣಿಕರಿಗೆ ಆಮಿಷಗಳನ್ನು ಒಡ್ಡಿ ತಮ್ಮತ್ತ ಸೆಳೆದುಕೊಂಡಿರುವ ಕಂಪನಿಗಳು ಈಗ ಪ್ರಯಾಣಿಕರನ್ನು ಸುಲಿಗೆ ಮಾಡಲು ಮುಂದಾಗಿದೆ. ಈಗಾಗಲೇ ನಾವು ಕಳೆದ ಐದು ವರ್ಷಗಳಿಂದ ಆಪ್‌ ಆಧಾರಿತ ಸಂಚಾರಿ ವ್ಯವಸ್ಥೆಯನ್ನು ನಿಷೇಧಿಸಬೇಕೆಂದು ಸರ್ಕಾರವನ್ನು ಆಗ್ರಹಿಸಲಾಗುತ್ತಿದೆ. ಆದರೆ, ಸರ್ಕಾರ ಇದರ ಬಗ್ಗೆ ಗಮನ ನೀಡುತ್ತಿಲ್ಲ. ಈ ಬಗ್ಗೆ ಇತ್ತೀಚಿಗೆ ಸಾರಿಗೆ ಸಚಿವ ಶ್ರೀರಾಮುಲು ಅವರು ರ‍್ಯಾಪಿಡೋ ಬೈಕ್‌ ಸೇವೆ ಹಾಗೂ ಆಪ್‌ ಆಧಾರಿತ ಸಾರಿಗೆ ವ್ಯವಸ್ಥೆ ಬಗ್ಗೆ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಆದರೆ ಇದನ್ನು ಜಾರಿಗೊಳಿಸುವ ಬಗ್ಗೆ ಯಾವುದೇ ಕ್ರಮಜರುಗಿಸಿಲ್ಲ. ಒಂದೆಡೆ ಕಂಪನಿಗಳು ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ ಸೇವೆಗಳನ್ನು ಮುಂದುವರೆಸುತ್ತಿವೆ. ಸರ್ಕಾರ ಮಾತ್ರ ಸಾರಿಗೆ ಕ್ಷೇತ್ರದಲ್ಲಿ ಚಾಲಕರ ಸ್ನೇಹಿಯಾದ ಯಾವ ಕಾನೂನನ್ನೂ ಜಾರಿಗೆ ತಂದಿಲ್ಲ. ಹಾಗಾಗಿ ನಮ್ಮ ಎಲ್ಲಾ ಆಟೋರಿಕ್ಷಾ ಚಾಲಕರ ಸಂಘಟನೆಗಳ ಒಕ್ಕೂಟದ ಮೂಲಕ ಮೂರು ದಿನಗಳ ಗಡುವನ್ನು ಸರ್ಕಾರ ನೀಡುತ್ತಿದ್ದೇವೆ. ಅಷ್ಟರಲ್ಲಿ ಸರ್ಕಾರ ಸೂಕ್ತ ಕ್ರಮ ಜರುಗಿಸಬೇಕು ಇಲ್ಲವಾದಲ್ಲಿ ಸೋಮವಾರ(ಮಾರ್ಚ್‌ 20) ನಗರದಲ್ಲಿ ಆಟೋ ರಿಕ್ಷಾಗಳು ಸ್ಥಬ್ಧಗೊಂಡು ಮುಖ್ಯಮಂತ್ರಿ ಮನೆ ಮುತ್ತಿಗೆ ಹಾಕಲಾಗುತ್ತಿದೆ ಎಂದು ಎಚ್ಚರಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ ಆಟೋ ಘಟಕ ಅಧ್ಯಕ್ಷ ಜಿ.ಎಸ್‌. ಕುಮಾರ್‌ ಮಾತನಾಡಿ, ಕಳೆದ ಎರಡು ವರ್ಷಗಳಿಂದ ಆಪ್‌ ಆಧಾರಿತ ವೈಟ್‌ಬೋರ್ಡ್‌ ಬೈಕ್‌ ಟ್ಯಾಕ್ಸಿಗಳ ಸಂಚಾರ ನಡೆಯುತ್ತಿದೆ. ಸರ್ಕಾರವೂ ಇದಕ್ಕೆ ಅನುಮತಿ ನೀಡಿಲ್ಲ ಎನ್ನುತ್ತಿವೆ. ಆದರೆ ಸಾರಿಗೆ ಇಲಾಖೆ ಬಿಗಿ ಕಾನೂನು ಕ್ರಮಗಳನ್ನು ಅನುಸರಿಸದೆ ಇದ್ದು, ಅಕ್ರಮಗಳು ಮಾತ್ರ ನಡೆಯುತ್ತಿವೆ. ಇದರಿಂದ ಸಾರಿಗೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರುವ ಚಾಲಕರ ಸಂಪಾದನೆ ಕುಂಟಿತವಾಗುತ್ತಿದೆ, ಜೀವನವೇ ದುಸ್ತರವಾಗಿದೆ. ನಿಯಮಾನುಸಾರ ಕಾರ್ಯನಿರ್ವಹಿಸುವ ಒಂದು ಸಂಘಟಿತ ಸಾರಿಗೆ ಸಂಚಾರ ವ್ಯವಸ್ಥೆಯನ್ನು ನಿರ್ನಾಮ ಮಾಡಲು ಸರ್ಕಾರ ಹೊರಟಿದೆ. ಈ ಮೂಲಕ ಆಟೋರಿಕ್ಷಾ ಹಾಗೂ ಅದರೊಂದಿಗೆ ಅವಲಂಬಿತ ಇತರೆ ಉದ್ಯೋಗಧಾರಿತ ಆರ್ಥಿಕ ಚಟುವಟಿಕೆಗಳಿಗೆ ಪೆಟ್ಟು ಬೀಳಲಿದೆ. ಚುನಾವಣೆ ಹತ್ತಿರವಾಗುತ್ತಿದ್ದು, ಸಾರಿಗೆ ಸಚಿವ ಶ್ರೀರಾಮುಲು ಶೀಘ್ರದಲ್ಲಿ ಸಿಹಿಸುದ್ದಿ ನೀಡಲಾಗುವುದು ಎಂದಿದ್ದಾರೆ ಅದು ಎಂತಹ ಸುದ್ದಿ ಇನ್ನೂ ತಿಳಿದು ಬಂದಿಲ್ಲ. ಒಟ್ಟಿನಲ್ಲಿ ಯಾವುದೇ ವಿಚಾರವಿದ್ದರೂ ಅದು ಚಾಲಕರ ಸ್ನೇಹಿಯಾಗಿರಬೇಕೆಂದು ಹೇಳಿದರು.

ಇದನ್ನು ಓದಿ: ಸಾರಿಗೆ ನೀತಿ ವಿರುದ್ಧ ಆಟೋ ಚಾಲಕರ ಬೃಹತ್‌ ಪ್ರತಿಭಟನಾ ಪ್ರದರ್ಶನ

ಬೆಂಗಳೂರು ಆಟೋ ಸೇನೆ ಅಧ್ಯಕ್ಷ ಎಂ.ಆರ್‌ ಚೇತನ್‌ ಮಾತನಾಡಿ, ರಾಜ್ಯ ಬಿಜೆಪಿ ಸರ್ಕಾರ ಚಾಲಕರ ಪರವಾಗಿಲ್ಲ. ಕಂಪನಿಗಳಿಗೆ ಅನುಕೂಲಗಳನ್ನು ಮಾಡುತ್ತಿವೆ. ಈಗಾಗಲೇ ಬೈಕ್ಸ್‌ ಟ್ಯಾಕ್ಸಿ ಸಂಚಾರ ವ್ಯವಸ್ಥೆಯನ್ನು 4 ರಾಜ್ಯಗಳ್ಳಲಿ ನಿಷೇಧಗೊಳಿಸಲಾಗಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ನಿಷೇಧ ಮಾಡಿಲ್ಲ. ಸಾರಿಗೆ ನೀತಿ ಬಗ್ಗೆ ನಾವೆಲ್ಲಾ ಸಂಘಟನೆಗಳು ಸರ್ಕಾರಕ್ಕೆ ವರದಿ ಸಲ್ಲಿಸಿದರೂ ಯಾವುದೇ ಕ್ರಮಕೈಗೊಂಡಿಲ್ಲ ಎಂದರು.

ನಗರದಲ್ಲಿ ಸಂಚರಿಸುತ್ತಿರುವ ಬೈಕ್‌ ಟ್ಯಾಕ್ಸಿ ಸೇವೆ ನೀಡುತ್ತಿರುವ ಬಹುತೇಕರು ತಮ್ಮ ವೃತ್ತಿಯನ್ನು ಮಾಡಿಕೊಂಡು ದಿನದ ಉಳಿದ ಸಮಯದಲ್ಲಿ ಈ ಸೇವೆ ಮಾಡುತ್ತಿದ್ದಾರೆ. ನಿಯಮಗಳಿಲ್ಲದಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಲ್ಲಿ ಹೆಚ್ಚಾಗಿ ಕಾಲೇಜು ವಿದ್ಯಾರ್ಥಿಗಳು, ಯುವಜನತೆ ತೊಡಗಿಸಿಕೊಂಡಿದ್ದಾರೆ. ಈಗಾಗಲೇ ಇದೇ ಸಾರಿಗೆ ವ್ಯವಸ್ಥೆಯಿಂದ ಅಕ್ರಮಗಳು ನಡೆದಿರುವುದು ಬೆಳಕಿಗೆ ಬಂದಿದೆ. ಇದರಿಂದ ಇಡೀ ಸಾರಿಗೆ ವ್ಯವಸ್ಥೆಯಲ್ಲಿರುವ ಎಲ್ಲರಿಗೂ ಕೆಟ್ಟ ಹೆಸರು ಬಂದಿದೆ. ಸರಿಯಾದ ಕಾನೂನು ನಿಯಮಗಳನ್ನು ಜಾರಿಗೆ ತರಬೇಕೆಂದು ಹೇಳಿದರು.

ಪೀಸ್‌ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್‌ ಅಸೋಸಿಯೇಷನ್‌ ಅಧ್ಯಕ್ಷ ರಘು ನಾರಾಯಣ ಗೌಡ ಮಾತನಾಡಿ, ಸದ್ಯ 17ರಷ್ಟು ಆಪ್‌ ಆಧಾರಿತ ಸಾರಿಗೆ ಸಂಚಾರ ವ್ಯವಸ್ಥೆ. ನಮ್ಮಂಥ ಚಾಲಕರು ಎಲ್ಲಾ ಕಾನೂನು ನಿಯಮಗಳನ್ನು ಅನುಸರಿಸಿ ಪಾಲನೆ ಮಾಡುತ್ತಿದ್ದೇವೆ. ಕೇವಲ ಡಿಸ್‌ ಪ್ಲೇ ಬೋರ್ಡ್‌ ಇಲ್ಲದಿದ್ದರೆ 3 ಸಾವಿರ ದಂಡ ವಿಧಿಸುವ ಸಾರಿಗೆ ಇಲಾಖೆ, ವೈಟ್‌ ಬೋರ್ಡ್‌ ಸೇವೆ ನೀಡುತ್ತಿರುವ ಆಪ್‌ ಆಧಾರಿತ ಸಾರಿಗೆ ಸೇವೆ ನಿಷೇಧಿಸಲು ಮುಂದಾಗುತ್ತಿಲ್ಲ. ಅವರ ಮೇಲೆ ಕ್ರಮಜರುಗಿಸಲು ಚಾಲಕ ಸಂಘಟನೆಗಳು ಸಹಾಯ ಮಾಡಬೇಕೆಂದು ಹೇಳುತ್ತದೆ. ಆದರೆ, ಬೇರೆ ಬೇರೆ ಕಾರಣಗಳಡಿ ನಮ್ಮ ಸಂಘಟನಾ ಮುಖಂಡರು ಕಾರ್ಯಕರ್ತರ ಮೇಲೆಯೇ ಮೊಕದ್ದಮೆಗಳನ್ನು ಹೂಡುವ ಮೂಲಕ ಪ್ರಕರಣ ದಾಖಲಿಸಲಾಗುತ್ತಿದೆ ಎಂದರು.

ಇದನ್ನು ಓದಿ: ಓಲಾ, ಊಬರ್, ರ‍್ಯಾಪಿಡೋ ಸೇವೆ ರದ್ದುಗೊಳಿಸಲು ಆಟೋ ಚಾಲಕರ ಆಗ್ರಹ

ಐದು ವರ್ಷಗಳಿಂದ ಹೋರಾಟ ಮಾಡುತ್ತಿದ್ದೇವೆ. ಆಪ್‌ ಆಧಾರಿತ ಸಂಸ್ಥೆಗಳು ತಮ್ಮ ಸಾರಿಗೆ ಸಂಚಾರಿ ವ್ಯವಸ್ಥೆಯನ್ನು ಮುಂದುವರೆಸುತ್ತಿವೆ. ಇದರ ಬಗ್ಗೆ ಪ್ರಶ್ನಿಸಿದರೆ ನ್ಯಾಯಾಲಯದಲ್ಲಿ ಇನ್ನೂ ವಿಚಾರಣೆ ಹಂತದಲ್ಲಿದೆ ಎಂದು ಆರೋಪಿಸುತ್ತಿದ್ದಾರೆ. ಸರ್ಕಾರ ಚುನಾವಣೆ ಘೋಷಣೆಗೂ ಮುನ್ನ ಬೈಕ್‌ ಟ್ಯಾಕ್ಸಿ ಸೇವೆ ನಿಷೇಧಿಸುವ ಆದೇಶ ನೀಡಬೇಕೆಂದು ಆಗ್ರಹಿಸಿದರು.

ಪೀಸ್‌ ಆಟೋ ಮತ್ತು ಟ್ಯಾಕ್ಸಿ ಡ್ರೈವರ್ಸ್‌ ಅಸೋಸಿಯೇಷನ್‌ ಮಹಿಳಾ ಘಟಕದ ಅಧ್ಯಕ್ಷೆ ಪ್ರಭಾವತಿ ಮಾತನಾಡಿ, ನಗರದಲ್ಲಿ 100 ರಿಂದ 150ರಷ್ಟು ಮಹಿಳಾ ಆಟೋ ಚಾಲಕರಿದ್ದಾರೆ. ಮಹಿಳೆಯರಿಗೆ ಯಾವ ರಕ್ಷಣೆಯೂ ಇಲ್ಲವಾಗಿದೆ. ತಮ್ಮ ಕುಟುಂಬಗಳ ನಿರ್ವಹಣೆಗಾಗಿ ಈ ವೃತ್ತಿಯನ್ನು ಅವಲಂಬಿಸಿದ್ದಾರೆ. ಅವರು ಸಹ ಈ ಹೋರಾಟಕ್ಕೆ ಬೆಂಬಲ ನೀಡಲಿದ್ದಾರೆ. ಸರ್ಕಾರ ಚಾಲಕರ ಬೇಡಿಕೆಗಳನ್ನು ಪರಿಗಣಿಸಬೇಕೆಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಆಟೋರಿಕ್ಷಾ ಡ್ರೈವರ‍್ಸ್‌ ಯೂನಿಯನ್‌(ಸಿಐಟಿಯು) ಮುಖಂಡರಾದ ಎನ್‌ ನವೀನ್‌ ಶೆಣೈ, ಜಾವೀದ್‌ ಅಹ್ಮದ್‌, ಎನ್‌ ನಾಗರಾಜ್‌, ಎಂ. ನರಸಿಂಹಮೂರ್ತಿ, ಸೂರ್ಯನಾರಾಯಣಮೂರ್ತಿ ಹಾಗೂ ಕರ್ನಾಟಕ ಜನಾಶ್ರಯ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷ ಎನ್‌. ಮಾಯಲಗು, ಭಾರತ್‌ ಟ್ರಾನ್ಸ್‌ಪೋರ್ಟ್‌ ಅಸೋಸಿಯೇಷನ್‌ ಅಧ್ಯಕ್ಷ ಜಯಣ್ಣ, ಜಯ ಕರ್ನಾಟಕ ಆಟೋ ಘಟಕ ಅಧ್ಯಕ್ಷ ಆನಂದ್‌ ಹೆಚ್‌, ಸ್ನೇಹಜೀವಿ ಚಾಲಕರ ಟ್ರೇಡ್‌ ಯೂನಿಯನ್‌ ಅಧ್ಯಕ್ಷ ಸಂತೋಷ್‌ ಎನ್‌.ಜಿ., ಕರುನಾಡ ವಿಜಯಸೇನೆ ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪಟೇಲ್‌, ವಿವಿಧ ಸಂಘಟನೆಯ ಮುಖಂಡರು ಭಾಗವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *