ಕೊಡಗು : ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಅಮ್ಮತ್ತಿ ಗ್ರಾಮದ ಕರ್ಕ ಎಂಬ 65 ವರ್ಷದ ವ್ಯಕ್ತಿ ಕೂಲಿ ಕೆಲಸ ಮಾಡಿಕೊಂಡು ಒಂಟಿ ಜೀವನ ಸಾಗಿಸುತ್ತಿದ್ದರು.
ಇವರಿಗೆ ಪಾರ್ಶ್ವವಾಯು ತಗುಲಿದ ಹಿನ್ನಲೆ ಸ್ವಾದೀನ ಕಳೆದುಕೊಂಡು ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ನರಳುತ್ತಾ ಹಾಸಿಗೆ ಹಿಡಿದಿದ್ದರು.
ದಿನ ಕಳೆದಂತೆ ಆಸ್ಪತ್ರೆಯಿಂದ ಸೂಕ್ತವಾದ ಚಿಕಿತ್ಸೆ ಇವರಿಗೆ ಲಭ್ಯವಾಗದ ಕಾರಣ ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆಗೆ ಕರೆದೊಯ್ಯುವಂತೆ ಆಸ್ಪತ್ರೆಯ ಸಿಬ್ಬಂದಿಗಳೇ ಅಲ್ಲಿನ ಕರವೇ ಅಧ್ಯಕ್ಷರಾದ ಫ್ರಾನ್ಸಿಸ್ ಡಿಸೋಜ ರವರಿಗೆ ಕರೆ ಮಾಡಿ ಕರೆದೊಯ್ಯುವಂತೆ ಸೂಚಿಸುತ್ತಾರೆ. ಕರೆಗೆ ಸ್ಪಂದಿಸಿದ ಡಿಸೋಜ ಅವರು ಕರ್ಕ ಅವರನ್ನು ಬೆಂಗಳೂರಿನ ಆಟೋರಾಜ ಸಂಸ್ಥೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ. ಕರ್ಕ ಅವರು 2 ತಿಂಗಳ ವರೆವಿಗೂ ಆಸ್ಪತ್ರೆಯಲ್ಲಿದ್ದರೂ ಕೂಡ ಅವರಿಗೆ ಸೂಕ್ತವಾದ ಚಕಿತ್ಸೆ ದೊರಕಿಸಿಕೊಡುವಲ್ಲಿ ಆಸ್ಪತ್ರೆಯ ಆಡಳಿತ ನಿರ್ಲಕ್ಷ್ಯ ತೋರಿದೆ.
ಮತ್ತಿಬ್ಬರು ಅನಾಥ ವ್ಯಕ್ತಿಗಳು ಅನಾಥಾಶ್ರಮಕ್ಕೆ ಸೇರ್ಪಡೆ :
ಕರ್ಕ ಅವರಂತೆ ಯಾರಿಲ್ಲದೆ ಒಂಟಿಯಾಗಿ ಬೀದಿ ಸುತ್ತುತ್ತಿದ್ದ ಮತ್ತಿಬ್ಬರು ಅನಾಥ ವ್ಯಕ್ತಿಗಳನ್ನು ಫ್ರಾನ್ಸಿಸ್ ಡಿಸೋಜ ಅವರು ಅನಾಥಾಶ್ರಮಕ್ಕೆ ಸೇರಿಸುವ ಮೂಲಕ ಪುಟ್ಟದೊಂದು ಬದುಕು ಕಟ್ಟಿಕೊಳ್ಳುವತ್ತ ಅವರಿಗೆ ನೆರವಾಗಿದ್ದಾರೆ.
ಇದನ್ನೂ ಓದಿ : ಒಂದೊತ್ತಿನ ಊಟ ತಿಂಡಿಗೂ ಪರದಾಡುತ್ತಿರುವ ಕೊಡಗಿನ ಹಾಡಿ ಜನ
ಆಸ್ಪತ್ರೆಯಲ್ಲಿ ಸಿಗದ ಸೂಕ್ತ ಚಿಕಿತ್ಸೆ:
ಕೈಲಾಗದ ಬಡ ನಿರ್ಗತಿಕರಿಗೆ ಮುಖ್ಯವಾಗಿ ಸರ್ಕಾರಿ ಆಸ್ಪತ್ರೆಗಳು ನೆರವಾಗಬೇಕು ಆದರೆ ಪಾರ್ಶ್ವವಾಯು ಪೀಡಿತರಾಗಿ ಕಳೆದ 2 ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದು ಗುಣಮುಖರಾಗಿಲ್ಲವೆಂದರೆ ಇದು ಆಸ್ಪತ್ರೆಯ ಬೇಜವಾಬ್ದಾರಿ ತನಕ್ಕೆ ಹಿಡಿದ ಕೈಗನ್ನಡಿ ಎನ್ನಬಹುದು.