ಬೆಂಗಳೂರು: ಕನ್ನಡ ಚಲನಚಿತ್ರ ನಿರ್ದೇಶಕ ಮತ್ತು ದಿವಂಗತ ಡಾ ರಾಜ್ ಕುಮಾರ್ ಕುಟುಂಬದೊಂದಿಗೆ ಆಪ್ತರಾಗಿದ್ದ ಎಸ್ ಕೆ ಭಗವಾನ್ ನಿಧನ ಹೊಂದಿದ್ದಾರೆ. ಅವರಿಗೆ 90 ವರ್ಷ ವಯಸ್ಸಾಗಿತ್ತು. ಬಿ ದೊರೈರಾಜ್ ಮತ್ತು ಭಗವಾನ್ ಜೋಡಿ ಹಲವಾರು ಜನಪ್ರಿಯ ಚಲನಚಿತ್ರಗಳನ್ನು ನೀಡಿದ್ದಾರೆ.
ಹೃದಯ ಸಂಬಂಧಿ ಕಾಯಿಲೆಯಿಂದ ಅನಾರೋಗ್ಯಕ್ಕೆ ಈಡಾಗಿದ್ದ ಅವರು, ಸುಮಾರು 20 ವರ್ಷಗಳಿಂದ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು(ಫೆಬ್ರವರಿ 20) ಬೆಳಗ್ಗೆ 6.10ರಲ್ಲಿ ಅವರು ನಿಧನರಾಗಿದ್ದಾರೆ.
ಇದನ್ನು ಓದಿ: ದಕ್ಷಿಣ ಭಾರತದ ಖ್ಯಾತ ಗಾಯಕಿ ವಾಣಿ ಜಯರಾಮ್ ನಿಧನ
ಶ್ರೀನಿವಾಸ್ ಕೃಷ್ಣ ಅಯ್ಯಂಗಾರ್ ಭಗವಾನ್ ಇವರು ಪೂರ್ಣ ಹೆಸರು. ಮೈಸೂರಿನಲ್ಲಿ ಜನಿಸಿದ್ದ ಎಸ್.ಕೆ.ಭಗವಾನ್ ಬೆಂಗಳೂರಿನಲ್ಲಿ ಶಿಕ್ಷಣ ಪಡೆದರು. ಕನ್ನಡದಲ್ಲಿ ಮೊಟ್ಟ ಮೊದಲ ಬಾಂಡ್ ಶೈಲಿಯ ಸಿನಿಮಾ (ಜೇಡರ ಬಲೆ–1968) ತಯಾರಿಸಿದ ಶ್ರೇಯಸ್ಸು ದೊರೆ-ಭಗವಾನ್ ಜೋಡಿಗೆ ಸಲ್ಲುತ್ತದೆ. ರಂಗಭೂಮಿ ಹಿನ್ನೆಲೆಯುಳ್ಳ ಅವರು ಕಾಲೇಜು ದಿನಗಳಲ್ಲಿ ರಂಗಭೂಮಿಯಲ್ಲಿ ತೊಡಗಿಕೊಂಡಿದ್ದರು. 1956ರಲ್ಲಿ ಕಣಗಾಲ್ ಪ್ರಭಾಕರ ಶಾಸ್ತ್ರಿಗಳಿಗೆ ಸಹಾಯಕ ನಿರ್ದೇಶಕರಾಗಿ ಸಿನಿಮಾ ರಂಗಕ್ಕೆ ಪ್ರವೇಶಿಸಿದರು.
ದೊರೈ-ಭಗವಾನ್ ಅವರ ಜೋಡಿ ಬಹುತೇಕ ಚಿತ್ರಗಳು ಕಾದಂಬರಿ ಆಧಾರಿತವಾಗಿದ್ದವು. ತರಾಸು ಅವರ ಸಾಕಷ್ಟು ಕಾದಂಬರಿಗಳನ್ನು ಬೆಳ್ಳಿಪರದೆಗೆ ತಂದಿದ್ದಾರೆ. ಎರಡು ಕನಸು, ಗಿರಿ ಕನ್ಯೆ, ವಸಂತ ಗೀತ, ಗಾಳಿ ಮಾತು, ಬೆಂಕಿಯ ಬಲೆ ಮೊದಲಾದ ಸಿನಿಮಾಗಳು ಅವರ ನಿರ್ದೇಶನದಲ್ಲಿ ಮೂಡಿ ಬಂದವು. 1995ರಲ್ಲಿ ಬಂದ ‘ಬಾಳೊಂದು ಚದುರಂಗ’ ಸಿನಿಮಾ ದೊರೈ-ಭಗವಾನ್ ಜೋಡಿಯ ಕೊನೆಯ ಚಿತ್ರ.
ಇದನ್ನು ಓದಿ: ಕನ್ನಡ ಚಿತ್ರರಂಗದ ಹಿರಿಯ ನಟ ಮನದೀಪ್ ರಾಯ್ ನಿಧನ
‘ಗೋವಾದಲ್ಲಿ ಸಿ.ಐ.ಡಿ 99’, ‘ಆಪರೇಷನ್ ಡೈಮಂಡ್ ರಾಕೆಟ್’,‘ಆಪರೇಷನ್ ಜಾಕ್ ಪಾಟ್ ನಲ್ಲಿ ಸಿ.ಐ.ಡಿ 999’, ‘ಕಸ್ತೂರಿ ನಿವಾಸ’, ʻಹೊಸ ಬೆಳಕುʼ ‘ನಾನೊಬ್ಬ ಕಳ್ಳ’ ಹೀಗೆ ರಾಜ್ಕುಮಾರ್ ಅವರ 32 ಚಿತ್ರಗಳಿಗೆ ನಿರ್ದೇಶಕರಾಗಿ ಭಗವಾನ್ ಕಾರ್ಯನಿರ್ವಹಿಸಿದ್ದರು. ‘ಚಂದನದ ಗೊಂಬೆ’, ‘ಮುನಿಯನ ಮಾದರಿ’, ‘ಗಾಳಿ ಮಾತು’, ಮುಂತಾದ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕಣ್ಣುಗಳನ್ನು ದಾನ ಮಾಡಿದ ನಿರ್ದೇಶಕ ಎಸ್ಕೆ ಭಗವಾನ್
ನಟ ಡಾ. ರಾಜ್ ಕುಮಾರ್ ಅವರು ನೇತ್ರದಾನ ಮಾಡಲು ನೋಂದಣಿ ಮಾಡುವ ವೇಲೆ ಎಸ್.ಕೆ ಭಗವಾನ್ ಕೂಡ ತಮ್ಮ ಹೆಸರನ್ನು ನೋಂದಾಯಿಸಿದ್ದರು. ಇಂದು ಅವರ ಮರಣಾ ನಂತರ ಕಣ್ಣಿನ ಕಾರ್ನಿಯಾವನ್ನು ತೆಗೆಯಲಾಗಿದೆ. 90 ವರ್ಷವಾಗಿದ್ದರೂ ಅವರ ಕಣ್ಣುಗಳಿಗೆ ಯಾವುದೇ ಸಮಸ್ಯೆ ಆಗಿಲ್ಲ. ಇದರಿಂದಾಗಿ ಅವರಿಂದ ನಾಲ್ಕೈದು ಜನರಿಗೆ ದೃಷ್ಟಿ ಸಿಗಲಿದೆ.
‘ಆಸ್ಪತ್ರೆಗೆ ಭೇಟಿ ಮಾಡಿದ್ದ ಸಂದರ್ಭದಲ್ಲಿ ನೇತ್ರದಾನ ಮಾಡೋದಾಗಿ ಭಗವಾನ್ ಹೇಳಿದ್ದರು. 90 ವರ್ಷ ವಯಸ್ಸಾದರೂ ಅವರ ಕಾರ್ನಿಯ ಆರೋಗ್ಯವಾಗಿದೆ. ಅವರ ಕಣ್ಣು ಯಾರಿಗೆ ಸೂಕ್ತವಾಗುತ್ತದೆ ಎಂಬುದನ್ನು ನೋಡಿ ಹಾಕುತ್ತೇವೆ ಎಂದು’ ನಾರಾಯಣ ನೇತ್ರಾಲಯದ ಐ ಬ್ಯಾಂಕ್ ವ್ಯವಸ್ಥಾಪಕ ವೀರೇಶ್ ಹೇಳಿಕೆ ನೀಡಿದ್ದಾರೆ.
ಇದನ್ನು ಓದಿ: ಹಿರಿಯ ಸಾಹಿತಿ ಸಾರಾ ಅಬೂಬಕ್ಕರ್ ನಿಧನ
ಭಗವಾನ್ ಅವರ ಪಾರ್ಥಿವ ಶರೀರವನ್ನು ಸಹಕಾರನಗರದಲ್ಲಿರುವ ಅವರ ನಿವಾಸದಲ್ಲಿ ಮಧ್ಯಾಹ್ನ 12ರವರೆಗೆ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದ್ದು, ಮಧ್ಯಾಹ್ನ 12.30ರ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.
ದೊರೈ-ಭಗವಾನ್ ಖ್ಯಾತಿಯ ದೊರೈರಾಜ್ 2000ರಲ್ಲಿ ನಿಧನರಾಗಿದ್ದರು.