ಬೆಳಗಾವಿ: ಬಿಜೆಪಿ ಪಕ್ಷಕ್ಕೆ ಪಕ್ಷಾಂತರ ಮಾಡಿ ವಲಸೆ ಬಂದವರನ್ನು ಆರಂಭದಲ್ಲಿ ಸ್ಥಾನಮಾನ ಕಲ್ಪಿಸಿ, ನಂತರದಲ್ಲಿ ಅವರನ್ನು ಪ್ರಮುಖ ಸ್ಥಾನಮಾನ ನೀಡಲು ಮುಂದಾಗುವುದಿಲ್ಲ. ಈ ಬಗ್ಗೆ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿರುವ ಘಟನೆಗಳು ನಡೆದಿದೆ. ಇದೀಗ ಮತ್ತದೇ ಮುಜುಗರಕ್ಕೆ ಒಳಗಾಗಬಾರದೆಂದು ಅಧಿಕಾರವೊಂದೇ ಮುಖ್ಯ. ಅಧಿಕಾರಕ್ಕಾಗಿ ಯಾವ ಪಕ್ಷದಲ್ಲಿ ಬೇಕಾದರೂ ಇರುವೆ ಎಂದು ಘೋಷಿಸಿಕೊಂಡು ಜೆಡಿಎಸ್ ಪಕ್ಷದ ತೊರೆದು ಬಿಜೆಪಿ ಸೇರಿದ ಬಸವರಾಜ ಹೊರಟ್ಟಿ ಅಸಮಾಧಾನಗೊಳ್ಳದಿರಲೆಂದು ಮತ್ತೊಮ್ಮೆ ಪರಿಷತ್ತಿನ ಸಭಾಪತಿ ಸ್ಥಾನಕ್ಕೆ ಸ್ಪರ್ಧೆ ಮಾಡಲು ಬಿಜೆಪಿ ಅನುವು ಮಾಡಿಕೊಟ್ಟಿದೆ.
ಇದನ್ನು ಓದಿ: ಮಾದಕ ದ್ರವ್ಯದ ವ್ಯಸನದ ಹಾಗೆ ಇಂದು ರಾಜಕೀಯವಿದೆ: ಬಸವರಾಜ ಹೊರಟ್ಟಿ
ರಾಜ್ಯದ ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ನಾಳೆ(ಡಿಸೆಂಬರ್ 21) ಚುನಾವಣೆ ನಡೆಯಲಿದ್ದು, ಬಿಜೆಪಿ ಸದಸ್ಯ ಬಸವರಾಜ ಹೊರಟ್ಟಿ ಇಂದು ನಾಮಪತ್ರ ಸಲ್ಲಿಕೆ ಮಾಡಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಾಮಪತ್ರ ಸಲ್ಲಿಕೆ ವೇಳೆ ಹಾಜರಿದ್ದರು.
ಜೆಡಿಎಸ್ ತೊರೆದು ಬಿಜೆಪಿ ಸೇರ್ಪಡೆಯಾದ ಬಸವರಾಜ ಹೊರಟ್ಟಿ ವಿಧಾನ ಪರಿಷತ್ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದರು. ಬಿಜೆಪಿ ಸೇರಲು ಸಭಾಪತಿ ನೀಡುವ ಭರವಸೆಯನ್ನು ಬಿಜೆಪಿ ನಾಯಕರು ಕೊಟ್ಟಿದ್ದರು. ಅದರಂತೆ ಸಭಾಪತಿ ಸ್ಥಾನ ಕಲ್ಪಿಸಲು ಮುಂದಾಗಿದೆ. ಬಿಜೆಪಿಗೆ ಬಹುಮತ ಇರುವ ಕಾರಣ ನಾಳೆ ನಡೆಯುವ ಚುನಾವಣೆಯಲ್ಲಿ ಹೊರಟ್ಟಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ.
ವಿಧಾನ ಪರಿಷತ್ ಕಾರ್ಯದರ್ಶಿ ಮಹಾಲಕ್ಷ್ಮೀ ಅವರಿಗೆ ಬಸವರಾಜ ಹೊರಟ್ಟಿ ಅವರು ನಾಮಪತ್ರ ಸಲ್ಲಿಕೆ ಮಾಡಿದರು. ಈ ಹಿಂದೆ ಜೆಡಿಎಸ್ ಪಕ್ಷದಿಂದ ಹಲವು ವರ್ಷಗಳು ಆಯ್ಕೆಯಾಗಿದ್ದ ಬಸವರಾಜ ಹೊರಟ್ಟಿ ಇತ್ತೀಚೆಗೆ ಜೆಡಿಎಸ್ ಬಿಟ್ಟು ಬಿಜೆಪಿಗೆ ಸೇರ್ಪಡೆಗೊಂಡು ಪರಿಷತ್ ಸದಸ್ಯರಾಗಿ ಆಯ್ಕೆ ಆಗಿದ್ದರು.
ಇದನ್ನು ಓದಿ: ರಾಜಕೀಯ ಹಂಬಲ: ಬಿಜೆಪಿ ಸೇರುವ ಕಾಲ ಬಂದಿದೆ-ಬಸವರಾಜ ಹೊರಟ್ಟಿ
ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಬಸವರಾಜ್ ಹೊರಟ್ಟಿ, ನನ್ನ ಜೀವನದಲ್ಲಿ ಅವಿಸ್ಮರಣೀಯ ದಿನ. ಪಕ್ಷದ ನಾಯಕರು ಪ್ರೀತಿ ವಿಶ್ವಾಸ ಇಟ್ಟು ಸ್ಥಾನ ಕೊಟ್ಟಿದ್ದಾರೆ. ನನಗೆ ಕೊಟ್ಟ ಜವಾಬ್ದಾರಿ, ನಂಬಿಕೆ, ವಿಶ್ವಾಸ ಉಳಿಸಿಕೊಳ್ಳುತ್ತೇನೆ. ಬಿಜೆಪಿ ಪಕ್ಷ ಮತ್ತು ಸಭಾಪತಿ ಸ್ಥಾನಕ್ಕೆ ನ್ಯಾಯ ಕೊಡುವ ಕೆಲಸ ಮಾಡುತ್ತೇನೆ. ಕೊಟ್ಟ ಮಾತಿನಂತೆ ನನಗೆ ಸ್ಥಾನ ನೀಡಿದೆ. ಕೆಲ ತಾಂತ್ರಿಕ ಕಾರಣದಿಂದ ತಡ ಆಗಿರಬಹುದು. ನನಗೆ ಯಾವತ್ತೂ ಅತೃಪ್ತಿ ಆಗಿಲ್ಲ. ಎಲ್ಲಾ ಸಮಸ್ಯೆ ಪರಿಹಾರವಾಗಿದೆ. ನನ್ನ ಸ್ಥಾನಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.
ಈವರೆಗೆ ಹಂಗಾಮಿ ಪರಿಷತ್ ಸಭಾಪತಿಯಾಗಿ ರಘುನಾಥರಾವ್ ಮಲ್ಕಾಪುರೆ ನಿಯೋಜನೆ ಮಾಡಲಾಗಿತ್ತು. ನಾಳೆ ಪರಿಷತ್‌ನ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇನ್ನು ಸ್ಪಷ್ಟ ಬಹುಮತ ಇರುವ ಹಿನ್ನೆಲೆಯಲ್ಲಿ ಬಸವರಾಜ ಹೊರಟ್ಟಿ ಪರಿಷತ್ ಸಭಾಪತಿ ಆಗುವುದು ಖಚಿತ ಎಂಬುದು ನಿಚ್ಚಳವಾಗಿದೆ.