ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸುತೇಶ್ ಯುವ ವಕೀಲ ಕುಲದೀಪ್ ಶೆಟ್ಟಿ ಅವರನ್ನು ಕಾನೂನು ಬಾಹಿರವಾಗಿ ಬಂಧಿಸಿ ಕರ್ತವ್ಯ ಲೋಪ ಎಸಗಿದ್ದು, ಈ ಕೂಡಲೇ ಅವರನ್ನು ಅಮಾನತು ಮಾಡಿ ನ್ಯಾಯಾಂಗ ವಿಚಾರಣೆಗೆ ಒಳಪಡಿಸಬೇಕೆಂದು ಅಖಿಲ ಭಾರತ ವಕೀಲರ ಒಕ್ಕೂಟ(ಎಐಎಲ್ಯು), ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸಿದೆ.
ನಾಗರೀಕರ ರಕ್ಷಣೆ ಮಾಡಬೇಕಾದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಸುತೇಶ್ ವಕೀಲ ಕುಲದೀಪ್ ಶೆಟ್ಟಿ ಮೇಲೆ ಕಳ್ಳತನದಂತಹ ಸುಳ್ಳು ಆರೋಪ ಹೊರಿಸಿ ರಾತೋರಾತ್ರಿ ಅವರ ಮನೆಗೆ ನುಗ್ಗಿ ಅವರನ್ನು ಅರೆಬೆತ್ತಲೆಗೊಳಿಸಿ ಕಾನೂನು ಬಾಹಿರವಾಗಿ ಬಂಧಿಸಿರುವ ಘಟನೆ ಡಿಸೆಂಬರ್ 03ರಂದು ನಡೆದಿದೆ. ಪಿಎಸ್ಐ ಅವರ ಇಂತಹ ದೌರ್ಜನ್ಯ ರಾಜ್ಯಾದ್ಯಂತ ವಕೀಲರು ಮತ್ತು ಸಾರ್ವಜನಿಕರನ್ನು ಸಿಟ್ಟಿಗೇಳುವಂತೆ ಮಾಡಿದೆ.
ಸಿವಿಲ್ ಸ್ವರೂಪದ ವ್ಯಾಜ್ಯಗಳಲ್ಲಿ ಪೋಲೀಸರು ಮಧ್ಯ ಪ್ರವೇಶ ಮಾಡಬಾರದು ಎಂದು ನ್ಯಾಯಾಲಯಗಳು ಮತ್ತು ಪೊಲೀಸ್ ಹಿರಿಯ ಅಧಿಕಾರಿಗಳ ಸ್ಪಷ್ಟ ಆದೇಶವಿದ್ದರೂ ಸಹ ಅದನ್ನು ಸಾರಾಸಗಟಾಗಿ ಧಿಕ್ಕರಿಸಿ ಪುಂಜಾಲಕಟ್ಟೆ ಪೊಲೀಸ್ ಠಾಣೆ ಪಿಎಸ್ಐ ಸುತೇಶ್ ಮತ್ತು ಅವರ ಸಿಬ್ಬಂದಿ ಕುಲದೀಪ್ ಶೆಟ್ಟಿ ಯವರ ಪ್ರಕರಣದಲ್ಲಿ ಕಾನೂನು ಉಲ್ಲಂಘಿಸಿರುವುದು ಅತ್ಯಂತ ಖಂಡನೀಯ ಎಂದು ಎಐಎಲ್ಯು ತಿಳಿಸಿದೆ.
ಘಟನೆಯನ್ನು ಖಂಡಿಸಿ ನೂರಾರು ವಕೀಲರು ಕೋರ್ಟ್ ಮುಂಭಾಗ ಪ್ರತಿಭಟನೆಯನ್ನು ಮಾಡಿದ್ದಾರೆ.
ಸದ್ಯ ಪಿಎಸ್ಐ ಸುತೇಶ್ ಜಿಲ್ಲಾ ಎಸ್ ಪಿ ಕಚೇರಿಗೆ ಆಡಳಿತಾತ್ಮಕ ದೃಷ್ಟಿಯಿಂದ ಎಂಬ ಕಾರಣ ಕೊಟ್ಟು ವರ್ಗಾವಣೆ ಮಾಡಲಾಗಿದೆ. ಇದೀಗ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ಬೆಳ್ತಂಗಡಿ ಪಿ.ಎಸ್.ಐ ನಂದಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ.