ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶ: ಒಳ ಮೀಸಲಾತಿ ಜಾರಿ ಸೇರಿ 15 ನಿರ್ಣಯ

ಬೆಂಗಳೂರು : ಒಳ ಮೀಸಲಾತಿ ಜಾರಿಗೆ ಬರಬೇಕು, ಅರ್ಚಕ ಮತ್ತು ಪೌರಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸಬೇಕು. ಕೋಮುವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಸೇರಿದಂತೆ ಒಟ್ಟು 15 ನಿರ್ಣಯಗಳನ್ನು ರಾಜ್ಯದ ವಿವಿಧ ಹೋರಾಟಗಾರರು, ಚಿಂತಕರು ಹಾಗೂ ಮುಖಂಡರು ‘ದಲಿತರ ಸಾಂಸ್ಕೃತಿಕ ಪ್ರತಿರೋಧ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ’ದಲ್ಲಿ ಕೈಗೊಳ್ಳಲಾಯಿತು.

ಮಂಗಳವಾರ ಬಸವನಗುಡಿಯ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ದಲಿತರ ಸಾಂಸ್ಕೃತಿಕ ಪ್ರತಿರೋಧ ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗಳು ರಮಾಬಾಯಿ ಆನಂದ್ ತೇಲ್ತುಂಬ್ಡೆ ಅವರ ಸಮ್ಮುಖದಲ್ಲಿ ಒಮ್ಮತದಿಂದ ನಿರ್ಣಯ ಕೈಗೊಂಡರು.

15 ನಿರ್ಣಯಗಳು

1) ಭಾರತ ಸೌಹಾರ್ದಯುತ ಸಾಮರಸ್ಯ ಮತ್ತು ಬಹುತ್ವದ ಸಂಸೃತಿಯ ಮೇಲೆ ನಿಂತಿದೆ. ಆದರೆ. ವೈದಿಕಶಾಹಿಯ ಏಕ ಸಂಸೃತಿಯನ್ನು ಹೇರುವಂತಹ ದಬ್ಬಾಳಿಕೆಯ ನೀತಿಯನ್ನು ಈ ಸಾಂಸ್ಕೃತಿಕ ಪ್ರತಿರೋಧ ಸಮಾವೇಶವು ತೀವ್ರವಾಗಿ ಖಂಡಿಸುತ್ತದೆ.

2) ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಯ ಸಾಧನದಂತೆ ವರ್ತಿಸುತ್ತಿರುವ ಸರಕಾರದ ನಡೆಯನ್ನು ಖಡಾಖಂಡಿತವಾಗಿ ವಿರೋಧಿಸುತ್ತೇವೆ. ಇಂತಹ ಚಾತುರ್ವರ್ಣ ಮತ್ತು ಜಾತೀಯತೆ ತಾರತಮ್ಯಗಳನ್ನು ಎತ್ತಿ ಹಿಡಿಯುವ ಕೇಂದ್ರ ಹಾಗೂ ರಾಜ್ಯ ಸರಕಾರದ ನಡೆಯನ್ನು ಖಂಡಿಸುತ್ತೇವೆ.

3) ಹಿಂದುಳಿದ ವರ್ಗಗಳಲ್ಲಿ ಇರುವಂತೆ ಪರಿಶಿಷ್ಟ ಜಾತಿ, ವರ್ಗಗಳಲ್ಲೂ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಜಾರಿಗೆ ತರಬೇಕು. ನ್ಯಾ. ಸದಾಶಿವ ಆಯೋಗದ ವರದಿಯನ್ನು ಬಿಡುಗಡೆ ಮಾಡಿ ಸಾರ್ವಜನಿಕ ಚರ್ಚೆಗೆ ಅವಕಾಶ ಮಾಡಿಕೊಟ್ಟು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು.

4) ಎಸ್ಸಿ-ಎಸ್ಟಿ ಕಾಯ್ದೆಯ ಅನುಗುಣವಾಗಿ ರಾಜ್ಯ ಬಜೆಟ್‍ನ ಶೇ.24.10ರಷ್ಟು ಅನುದಾನವನ್ನು ಕಡ್ಡಾಯವಾಗಿ ಮೀಸಲಿಡಬೇಕು. ಈ ಅನುದಾನವನ್ನು ಸಂಪೂರ್ಣವಾಗಿ ‘ಏಕಗವಾಕ್ಷಿ ಯೋಜನೆ’ಯಲ್ಲಿ ಅನುಷ್ಠಾನಗೊಳಿಸಬೇಕು. ದಲಿತರ ಅವಶ್ಯಕತೆಗೆ ತಕ್ಕಂತೆ ಯೋಜನೆ ರೂಪಿಸುವುದರ ಮೂಲಕ ಅನುದಾನ ದುರ್ಬಳಕೆಯನ್ನು ಕೂಡಲೇ ನಿಲ್ಲಿಸಬೇಕು. ಇತರೆ ವೆಚ್ಚಕ್ಕಾಗಿ ಹಣ ಬಳಸಲು ಅವಕಾಶವಿರುವ ‘7ಡಿ ಸೆಕ್ಷನ್’ ಅನ್ನು ಕಾಯ್ದೆಯಿಂದ ತೆಗೆದುಹಾಕಬೇಕು. ಕೇಂದ್ರ ಸರಕಾರವೂ ಇದೇ ಮಾದರಿಯ ಕಾಯ್ದೆ ರೂಪಿಸಬೇಕು.

5) ಕೇವಲ ಆರ್ಥಿಕ ಮಾನದಂಡದಲ್ಲಿ ಎಸ್ಸಿ, ಎಸ್ಟಿ, ಒಬಿಸಿ ಅವರನ್ನು ಹೊರತುಪಡಿಸಿ ವಾರ್ಷಿಕ 8 ಲಕ್ಷ ವರಮಾನ ಇರುವ ಮೇಲ್ಜಾತಿಯವರಿಗೆ ನೀಡಿರುವ ಶೇ.10ರಷ್ಟು ಮೀಸಲಾತಿಯನ್ನು ಖಂಡಿಸುತ್ತೇವೆ. ಈ ಅಸಂವಿಧಾನಿಕ ತಿದ್ದುಪಡಿಯನ್ನು ರದ್ದುಗೊಳಿಸಬೇಕು. ಖಾಸಗಿಯಲ್ಲಿಯೂ ಸಾಮಾಜಿಕ ನ್ಯಾಯದ ಹಿನ್ನೆಲೆಯ ಮೀಸಲಾತಿಯನ್ನು ಜಾರಿಗೊಳಿಸಬೇಕು.

6) ಕೇಂದ್ರ ಹಾಗೂ ರಾಜ್ಯ ಸರಕಾರಗಳಲ್ಲಿ ಬಹುಕಾಲದಿಂದ ಖಾಲಿಯಾಗಿಯೇ ಉಳಿದಿರುವ ಲಕ್ಷಾಂತರ ಎಸ್ಸಿ, ಎಸ್ಟಿ ಬ್ಯಾಕ್‍ಲಾಗ್ ಹುದ್ದೆಗಳನ್ನು ಈ ಕೂಡಲೇ ಭರ್ತಿ ಮಾಡಿಕೊಳ್ಳಬೇಕು. ಹೊರಗುತ್ತಿಗೆ ನೇಮಕಾತಿಯನ್ನು ರದ್ದುಗೊಳಿಸಬೇಕು. ಖಾಲಿ ಹುದ್ದೆಗಳನ್ನು ಕೂಡಲೇ ತುಂಬಬೇಕು.

7) ‘ಪಿಟಿಸಿಎಲ್ ಕಾಯ್ದೆ’ ಅನ್ನು ಬಲಪಡಿಸಬೇಕು. ದಲಿತರ ಭೂಮಿಯು ದಲಿತರಲ್ಲಿಯೇ ಉಳಿಯುವಂತೆ ಮಾಡಬೇಕು. ಈ ಕಾಯ್ದೆಯ ಮೂಲ ಉದ್ದೇಶವಾದ ‘ದಲಿತರು ಭೂಮಿ ಹೊಂದುವ’ ಗುರಿಯನ್ನು ಸಮರ್ಥವಾಗಿ ಅನುಷ್ಠಾನಕ್ಕೆ ತರಬೇಕು.

8) ರಾಜ್ಯ ಸರಕಾರ ಜಾರಿಗೆ ತಂದಿರುವ ‘ಗೋಹತ್ಯಾ ನಿಷೇಧ ಕಾಯ್ದೆ’ ಮತ್ತು ‘ಮತಾಂತರ ನಿಷೇಧ ಕಾಯ್ದೆ’ ಗಳನ್ನು ಈ ಕೂಡಲೇ ರದ್ದುಗೊಳಿಸಬೇಕು.

9) ಎಸ್ಸಿ,ಎಸ್ಟಿ ಅಲೆಮಾರಿ, ಅರೆ-ಅಲೆಮಾರಿ, ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಸಮುದಾಯಗಳ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು. ಪ್ರತ್ಯೇಕ ಆಯೋಗವನ್ನು ರಚಿಸಿ ಕಾಲಕಾಲಕ್ಕೆ ಸಮೀಕ್ಷೆ ಮಾಡಿ ಸೌಲಭ್ಯ ಒದಗಿಸಬೇಕು. ಡಿಎನ್‍ಟಿ (ಡಿನೋಟಿಫೈ ಟ್ರೆಬ್ಸ್) ಸಮುದಾಯಗಳಿಗೆ ವಿಶೇಷ ಸೌಲಭ್ಯ ಒದಗಿಸಬೇಕು.

10) ರಾಜ್ಯ ಸರಕಾರ ಜಾರಿಗೊಳಿಸಿರುವ ರೈತಾಪಿ ಜನರ ವಿರೋಧಿ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಎಪಿಎಎಂಸಿ ತಿದ್ದುಪಡಿ ಕಾಯ್ದೆ ಹಾಗೂ ವಿದ್ಯುತ್ ಖಾಸಗೀಕರಣ ಮಸೂದೆಯನ್ನು ಮತ್ತು ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಈ ಕೂಡಲೇ ರದ್ದುಗೊಳಿಸಬೇಕು.

11) ಒಕ್ಕೂಟ ಸರಕಾರ ಹಾಗೂ ರಾಜ್ಯ ಸರಕಾರ ನುಷ್ಠಾನಕ್ಕೆ ತಂದಿರುವ, ಅಸಮಾನತೆಯನ್ನು ಹಾಗೂ ಚಾತುರ್ವರ್ಣ ಪದ್ಧತಿಯನ್ನು ಎತ್ತಿ ಹಿಡಿಯುವ ರಾಷ್ಟ್ರೀಯ ಶಿಕ್ಷಣ ನೀತಿ-2020 ಅನ್ನು ಈ ಕೂಡಲೇ ರದ್ದುಗೊಳಿಸಬೇಕು.

12) ಪ್ರಾಥಮಿಕ ಶಿಕ್ಷಣ ಪಡೆಯುತ್ತಿರುವ ದಲಿತ ಮಕ್ಕಳಿಗೆ ಸ್ಕಾಲರ್‍ಶಿಪ್ ನಿಲ್ಲಿಸುವ ಯೋಚನೆಯನ್ನು ಕೂಡಲೇ ಕೈ ಬಿಡಬೇಕು. ಎಸ್ಸಿ,ಎಸ್ಟಿ ಮೀಸಲಾತಿಗೆ ನಿಗದಿಪಡಿಸುರುವ ವಾರ್ಷಿಕ ಆದಾಯ ಮಿತಿಯನ್ನು 10 ಲಕ್ಷಕ್ಕೆ ಏರಿಸಬೇಕೆಂಕು ಒತ್ತಾಯಿಸಲಾಯಿತು.

13) ಪ್ರತಿ 10 ನಿಮಿಷಕ್ಕೊಂದು ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದೆ. ನ್ಯಾಯಾಲಯಗಳಲ್ಲಿ ಶೇ.96 ರಷ್ಟು ಅಟ್ರಾಸಿಟಿ ಕಾಯ್ದೆಯಡಿಯ ಪ್ರಕರಣಗಳು ಬಾಕಿ ಉಳಿದಿವೆ. ಈ ಕಾಯ್ದೆಯಡಿ ಶಿಕ್ಷೆ ನೀಡುವ ಪ್ರಮಾಣ ತೀರ ಕಡಿಮೆ ಇದೆ. ಒಕ್ಕೂಟ ಹಾಗೂ ರಾಜ್ಯ ಸರ್ಕಾರಗಳ ಈ ಉದ್ದೇಶಪೂರ್ವಕ ನಿರ್ಲಕ್ಯವನ್ನು ಖಂಡಿಸುತ್ತೇವೆ. ಈ ಕೂಡಲೇ ದಲಿತರಿಗೆ ಭದ್ರತೆ ಹಾಗೂ ರಕ್ಷಣೆ ಒದಗಿಸಬೇಕು.

14) ಅರ್ಚಕ ಮತ್ತು ಪೌರಕಾರ್ಮಿಕ ವೃತ್ತಿಯನ್ನು ಸಾರ್ವತ್ರಿಕಗೊಳಿಸಬೇಕು. ಈ ಎರಡೂ ವೃತ್ತಿಗಳಲ್ಲಿ ಮೀಸಲಾತಿ ನೀತಿಯನ್ನು ಅನುಷ್ಠಾನಕ್ಕೆ ತರಬೇಕು. ಮಲ ಹೊರುವ ಪದ್ಧತಿ ನಿಧಗೊಂಡಿದ್ದರೂ ಸಹ ನೂರಾರು ಸಾವುಗಳು ಇದರಿಂದ ಸಂಭವಿಸಿದೆ. ಇಡೀ ದೇಶವೇ ತಲೆತಗ್ಗಿಸುವಂತೆ ಮಾಡಿದೆ. ಮಲ ಹೊರುವ ಪದ್ಧತಿ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಬೇಕು.

15) ಧಾರ್ಮಿಕ ಅಲ್ಪಸಂಖ್ಯಾತರನ್ನು ಗುರಿಯಾಗಿಸಿಕೊಂಡು ನಡೆದಿರುವ ಕೋಮುವಾದಿ ದೌರ್ಜನ್ಯಗಳನ್ನು ಖಂಡಿಸುತ್ತೇವೆ. ಸರ್ವ ಜನಾಂಗದ ಶಾಂತಿಯ ತೋಟವಾಗಿರುವ ಕನ್ನಡ ನಾಡಿನ ಬಹುತ್ವವನ್ನು ಹಾಳುಗೆಡುವುತ್ತಿರುವ ಕೋಮುವಾದಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ನಿರ್ಣಯ ಪ್ರಕಟಿಸಲಾಯಿತು.

 

Donate Janashakthi Media

Leave a Reply

Your email address will not be published. Required fields are marked *