ಹಾವೇರಿ: ತಾಲ್ಲೂಕಿನ ಗಾಂಧಿಪುರದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ವಿದ್ಯಾರ್ಥಿಗಳ ಬಸ್ಪಾಸ್ ಅನ್ನು ಹಾವೇರಿ ನಗರದವರೆಗೂ ವಿಸ್ತರಿಸುವಂತೆ ಒತ್ತಾಯಿಸಿ ಹಾಗೂ ಗ್ರಾಮೀಣ ಭಾಗದ ಬಸ್ ಸಮಸ್ಯೆಗಳ ಪರಿಹಾರಕ್ಕಾಗಿ ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಶನ್(ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಇಂದು(ಡಿಸೆಂಬರ್ 03) ಗಾಂಧಿಪುರ ಕಾಲೇಜು ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯ ಮೂಲಕ ಆರ್ಟಿಓ ಕಛೇರಿ ಹತ್ತಿರವಿರುವ ಕೆಎಸ್ಆರ್ಟಿಸಿ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ಎಮ್. ವಿ. ಜಗದೀಶ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಸಹಕಾರ್ಯದರ್ಶಿ ಬಸವರಾಜ ಭೋವಿ ಮಾತನಾಡಿ, ಹಾವೇರಿ ಜಿಲ್ಲಾ ಕೇಂದ್ರದಿಂದ ದೂರವಿರುವ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉನ್ನತ ಅಭ್ಯಾಸಕ್ಕಾಗಿ ಗ್ರಾಮೀಣ ಭಾಗದ 2890 ಜನ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡಿದ್ದಾರೆ. 2021-22 ಸಾಲಿನವರೆಗೂ ವಿದ್ಯಾರ್ಥಿಯ ತನ್ನ ಹಳ್ಳಿಯಿಂದ ಹಾವೇರಿ ವರೆಗೆ ಮಾರ್ಗ ಬದಲಾವಣೆ ಕಾಲೇಜಿನ ಹೆಸರು ಹಾಕಿ ಬಸ್ ಪಾಸ್ ವಿತರಣೆ ಮಾಡುವ ಪದ್ದತಿ ಇತ್ತು. ಆದರೆ 2022-23ನೇ ಸಾಲಿನ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಈ ವರ್ಷದಿಂದ ಸರ್ಕಾರಿ ಸಾರಿಗೆ ಇಲಾಖೆ ವಿದ್ಯಾರ್ಥಿ ವಿರೋಧಿ ನಿಯಮ ಜಾರಿ ಮಾಡಿ ಕೇವಲ ವಿದ್ಯಾರ್ಥಿಯ ಹಳ್ಳಿಯಿಂದ ಕಾಲೇಜಿನ ವರೆಗೆ ಮಾತ್ರ ಬಸ್ ಪಾಸ್ ವಿತರಣೆ ಮಾಡಿದ್ದು ನಗರಕ್ಕೆ ಹೋಗಲು ಟಿಕೆಟ್ ತೆಗೆದುಕೊಂಡೆ ಹೋಗಬೇಕು ಎಂದು ಹೇಳುತ್ತಾರೆ. ನಗರ ಅಂದಮೇಲೆ ಪ್ರತಿ ಕೆಲಸಗಳಿಗೂ ಹೋಗುವ ಅವಶ್ಯಕತೆ ಇರುತ್ತೆ ಕೇವಲ ಬಸ್ ಪಾಸ್ ಪಡೆಯಲು ಕೂಡ ನಗರದಲ್ಲಿರುವ ಕಂಪ್ಯೂಟರ್ ಕೇಂದ್ರಕ್ಕೆ ಹೋಗಲೇಬೇಕು. ಇನ್ನೂ ಹಾಸ್ಟೆಲ್, ಸ್ಕಾಲರ್ಶೀಪ್, ಪುಸ್ತಕ ಖರೀದಿ, ಟ್ಯೂಶನ್ ಕ್ಲಾಸ್, ಕಂಪ್ಯೂಟರ್ ಕ್ಲಾಸ್, ಸೇರಿದಂತೆ ಇನ್ನಿತರ ಕೆಲಸಗಳಿಗೆ ಹೋಗುವ ಅನಿವಾರ್ಯತೆ ಇದ್ದೆ ಇರುತ್ತದೆ. ಆದ್ದರಿಂದ ಈ ನೀತಿ ಸಂಪೂರ್ಣ ಅವೈಜ್ಞಾನಿಕವಾಗಿದ್ದು ಇದನ್ನು ಹಿಂಪಡೆದು ಹಾವೇರಿ ನಗರದ ವರೆಗೂ ಬಸ್ ಪಾಸ್ ವಿತರಣೆ ಮಾಡಬೇಕು, ಒಂದು ವೇಳೆ ಈ ಬೇಡಿಕೆ ಈಡೇರಿಸದಿದ್ದರೆ ಕೆಎಸ್ಆರ್ಟಿಸಿ ಡಿಪೋ ಮುತ್ತಿಗೆ ಹಾಕಿ ಬೃಹತ್ ಹೋರಾಟ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ವಿದ್ಯಾರ್ಥಿ ಮುಖಂಡ ವಿವೇಕ್ ಫನಾಸೆ ಮಾತನಾಡಿ, ನಮ್ಮ ಹಳ್ಳಿಯಿಂದ ಗಾಂಧಿಪುರದವರಿಗೆ ಮಾತ್ರ ಬಸ್ ಪಾಸ್ ಕೊಟ್ಟಿದ್ದಾರೆ. ಯಾವುದೇ ಒಂದು ಸಣ್ಣ ವಸ್ತು ತೆಗೆದುಕೊಳ್ಳಬೇಕಾದರು, ಅರ್ಜಿಗಳನ್ನು ಸಲ್ಲಿಸಬೇಕೆಂದರೆ, ಯಾವುದೇ ಮೇಲಾಧಿಕಾರಿಗಳನ್ನು ಭೇಟಿ ಮಾಡಬೇಕೆಂದರು, ಹಾವೇರಿಗೆ ಹೋಗಲು 13 ರೂಪಾಯಿ ಪ್ರಯಾಣದ ದರ ಕೊಡಬೇಕು. ಹಾಗಾಗಿ ನಮ್ಮ ಬಸ್ ಪಾಸ್ ಅನ್ನು ಹಾವೇರಿವರೆಗೆ ವಿಸ್ತರಣೆ ಮಾಡಲೇಬೇಕು. ಹಳ್ಳಿಗಳಿಗೆ ಹೋಗಲು ಸರಿಯಾಗಿ ಬಸ್ ವ್ಯವಸ್ಥೆ ಇಲ್ಲ ಸರಿಯಾದ ಸಮಯಕ್ಕೆ ಬಸ್ ಬರುವುದಿಲ್ಲ ಆದ್ದರಿಂದ ಸರಿಯಾಗಿ ತರಗತಿಗಳನ್ನು ಕೇಳಲಾಗುತ್ತಿಲ್ಲ, ಎಷ್ಟೋ ಬಸ್ಸುಗಳು ಗಾಂಧಿಪುರದಲ್ಲಿ ವಿದ್ಯಾರ್ಥಿಗಳನ್ನು ನೋಡಿ ನಿಲ್ಲಿಸಿದೆ ಹೋಗುತ್ತವೆ. ಈ ವ್ಯವಸ್ಥೆಯಿಂದ ಹೆಣ್ಣು ಮಕ್ಕಳಿಗೂ ಕೂಡ ತುಂಬಾ ತೊಂದರೆಯಾಗುತ್ತಿದೆ. ಈಗಿರುವ ಬಸ್ ಪಾಸ್ ಅನ್ನು ನಗರದ ವರೆಗೂ ವಿಸ್ತರಿಸಬೇಕು ಇಲ್ಲವಾದಲ್ಲಿ ಇಲ್ಲಿರುವ ಕಾಲೇಜನ್ನು ಹಾವೇರಿಗೆ ವರ್ಗಾಯಿಸಬೇಕು ಎಂದು ಆಗ್ರಹಿಸಿದರು.
ವಿದ್ಯಾರ್ಥಿನಿ ರಂಜಿತಾ ಮಾತನಾಡಿ, ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಜಂಗಮನಕೊಪ್ಪ ಕ್ರಾಸ್ ವರೆಗೂ ಮಾತ್ರ ಬಸ್ ಪಾಸ್ ನೀಡಲಾಗಿದೆ, ಸುಮಾರು ಎರಡು ಕಿ.ಮೀ ನಡೆಯಬೇಕು ಆದ್ದರಿಂದ ಬಸ್ ಪಾಸನ್ನು ಹಾವೇರಿಯವರಿಗೆ ವಿಸ್ತರಿಸಬೇಕೆಂದು ಅಧಿಕಾರಿಗಳಲ್ಲಿ ಮನವಿ ಮಾಡುತ್ತೇವೆ. ಕೆಲವೊಮ್ಮೆ ಬಸ್ಸಿನಲ್ಲಿ ಹತ್ತಲು ಜಾಗವೇ ಇರುವುದಿಲ್ಲ ಇನ್ನು ಕೆಲವು ಬಸ್ಸುಗಳು ಗಾಂಧಿಪುರ ಬಸ್ ನಿಲ್ದಾಣದಲ್ಲಿ ನಿಲ್ಲಿಸುವುದೇ ಇಲ್ಲ. ಒಮ್ಮೊಮ್ಮೆ ಬಸ್ಸನ್ನು ಹತ್ತಲು ಹೋಗಿ ವಿದ್ಯಾರ್ಥಿನಿಯರು ಸಣ್ಣಪುಟ್ಟ ಗಾಯಗಳನ್ನು ಮಾಡಿಕೊಂಡಿರುವ ಘಟನೆಗಳು ನಡೆಯುತ್ತಿರುತ್ತವೆ. ಆದ್ದರಿಂದ ಈ ರೀತಿ ಆಗಬಾರದೆಂದರೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗುವಂತೆ ಬಸ್ಸಿನ ಸಂಖ್ಯೆಗಳನ್ನು ಹೆಚ್ಚಿಸಬೇಕು ಹಾಗೂ ಬಸ್ ಪಾಸ್ ಅನ್ನು ಹಾವೇರಿವರಿಗೆ ವಿಸ್ತರಿಸಲೇಬೇಕು ಎಂದರು.
ಮನವಿ ಪತ್ರ ಸ್ವೀಕರಿಸಿದ ವಿಭಾಗೀಯ ನಿಯಂತ್ರಣಾಧಿಕಾರಿ ಎಂ.ವಿ.ಜಗದೀಶ್ ಮಾತನಾಡಿ, ನಮ್ಮ ಹಂತದಲ್ಲಿ ಬದಲಾವಣೆ ಮಾಡುವುದಕ್ಕೆ ಬರುವುದಿಲ್ಲ. ನೀವು ನೀಡಿದ ಮನವಿಯನ್ನು ಮೇಲಾಧಿಕಾರಿಗಳಿಗೆ ಪತ್ರ ಬರೆಯಲಾಗುವುದು. ಬದಲಾವಣೆ ಅವಕಾಶ ಸಿಕ್ಕರೆ ಖಂಡಿತ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾ ಮುಖಂಡರಾದ ಗುಡ್ಡಪ್ಪ ಮಡಿವಾಳರ, ಯುವರಾಜ ಹಂಚಿನಮನಿ, ಅರುಣ್ ಆರೇರ್, ಶ್ರೇಯಸ್ ಕೊರವರ, ಸುದೀಪ್ ಭಜಂತ್ರಿ, ಪಲ್ವೆಜ್ ಖಾನ್, ಕೇಶವ್ ಬಡಿಗೇರ್, ಅಭಿಶೇಕ್ ಎಮ್, ಕಿರಣ್ ಹಿರೇಮಠ, ರಂಜಿತ್ ಎಚ್, ಶೃತಿ ಕಳಸದ, ತೇಜು ಬ್ಯಾಡಗಿ, ಅಕ್ಷತಾ, ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.