ಮಂಡ್ಯ: ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ನೇತೃತ್ವದ ತಂಡ ಅಕ್ಕಿ ಗಿರಣಿಗಳ ಮೇಲೆ ದಾಳಿ ನಡೆಸಿದ್ದು, 120 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ, 140 ಕ್ವಿಂಟಲ್ ರಾಗಿ ಹಾಗೂ 3 ಕ್ಯಾಂಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಲಾಗಿದೆ ಎಂಬ ಖಚಿತ ಮಾಹಿತಿಯೊಂದಿಗೆ ಮಂಡ್ಯ ನಗರದ ಕಲ್ಲಹಳ್ಳಿಯಲ್ಲಿನ ಕಾಳೇಗೌಡ ಅವರಿಗೆ ಸೇರಿದ ಗಿರಣಿ ಮೇಲೆ ನೆನ್ನೆ ರಾತ್ರಿ ದಾಳಿ ನಡೆದಿದೆ. ಈ ವೇಳೆ ಮೂರು ವಾಹನಗಳಲ್ಲಿದ್ದ ಅಕ್ಕಿ, ರಾಗಿಯನ್ನು ಸ್ಥಳದಲ್ಲಿ ಇಳಿಸಲಾಗುತ್ತಿತ್ತು. ಇದಕ್ಕೂ ಮೊದಲು ಇನ್ನೊಂದು ವಾಹನ ಅಕ್ಕಿ ಇಳಿಸಿ ಬೆಂಗಳೂರಿನತ್ತ ಹೊರಟಿತ್ತು. ವಾಹನದ ಬೆನ್ನು ಹತ್ತಿದ ಪೊಲೀಸರು ಮದ್ದೂರು ಬಳಿ ವಶಕ್ಕೆ ಪಡೆದಿದ್ದಾರೆ.
ಮೂರು ವಾಹನಗಳಲ್ಲಿ ಒಂದು ಆಹಾರ ಇಲಾಖೆಯ ವಾಹನವಾಗಿದ್ದು ಬೆಂಗಳೂರು ಬನಶಂಕರಿ ಟಿಎಪಿಸಿಎಂಎಸ್ ಗೆ ಅನ್ನಭಾಗ್ಯ ಅಕ್ಕಿ ಕೊಂಡೊಯ್ಯಬೇಕಾಗಿತ್ತು. ಆದರೆ, ಅಕ್ಕಿಯ ಸ್ವಚ್ಛತೆ ಕೊರತೆ, ತೂಕದಲ್ಲಿ ವ್ಯತ್ಯಾಸ ಇದ್ದ ಕಾರಣ ತಿರಸ್ಕೃತಗೊಂಡಿತ್ತು. ಆ ಅಕ್ಕಿಯನ್ನು ಕಾಳೇಗೌಡ ಅವರಿಗೆ ಸೇರಿದ ಗಿರಣಿಗೆ ಇಳಿಸಲಾಗುತ್ತಿತ್ತು.
ಬೆಂಗಳೂರು– ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಕಾಳೇಗೌಡ ಅಕ್ಕಿ ಗಿರಣಿ ಮೇಲೆ ಈ ಮೊದಲು ಒಮ್ಮೆ ದಾಳಿ ನಡೆಸಿ ಅನ್ನಭಾಗ್ಯ ಅಕ್ಕಿ ವಶಕ್ಕೆ ಪಡೆಯಲಾಗಿತ್ತು. ಮಜುಂ ಪಾಷಾ ಎನ್ನುವವರು 2021ರಲ್ಲಿ ಅಕ್ಕಿ ಗಿರಣಿಯನ್ನು ಬಾಡಿಗೆ ಪಡೆದು ನಡೆಸುತ್ತಿದ್ದರು.
‘ಪರೀಕ್ಷೆಯ ನಂತರ ಅನ್ನಭಾಗ್ಯ, ರಾಗಿ ಎಂಬುದು ಖಾತ್ರಿಯಾಗಿದೆ. ಬಿಹಾರ ಮೂಲಕ ಕಾರ್ಮಿಕರು ಅಕ್ಕಿ, ರಾಗಿ ಇಳಿಸುತ್ತಿದ್ದರು. ಗುತ್ತಿಗೆ ಪಡೆದ ಮಾಲೀಕ ಪತ್ತೆಯಾಗಿಲ್ಲ. ಆರೋಪಿಗಳ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು’ ಎಂದು ಆಹಾರ ಇಲಾಖೆ ಜಂಟಿ ನಿರ್ದೇಶಕ ಎಂ.ಪಿ.ಕೃಷ್ಣ ಕುಮಾರ್ ತಿಳಿಸಿದ್ದಾರೆ.