ಚಿಕ್ಕಮಗಳೂರು: ತಾಲ್ಲೂಕಿನ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿರುವ ಬಾಬಾಬುಡನ್ಗಿರಿಯ ಇನಾಂ ದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾಕ್ಕೆ ಅರ್ಚಕರನ್ನು ನೇಮಕ ಮಾಡುವ ವಿಚಾರಕ್ಕೆ ರಾಜ್ಯ ಸರ್ಕಾರ ಆಡಳಿತ ಮಂಡಳಿಯನ್ನು ರಚನೆ ಮಾಡಿದೆ.
ಸರ್ಕಾರ ಆಡಳಿತ ಮಂಡಳಿ ನೇಮಕದ ಬಗ್ಗೆ ಅಪಸ್ವರ ಎದ್ದಿದ್ದು, ಸರ್ಕಾರದ ಕ್ರಮವನ್ನು ಕೋಮು ಸೌಹಾರ್ದ ವೇದಿಕೆ ವಿರೋಧ ವ್ಯಕ್ತಪಡಿಸಿದೆ.
ರಾಜ್ಯ ಸರ್ಕಾರದ ಆಡಳಿತ ಮಂಡಳಿ ರಚನೆ ಆದೇಶದಲ್ಲಿ ಒಂದು ಸಮುದಾಯವನ್ನು ಕಡೆಗಣಿಸಲಾಗಿದೆ ಎನ್ನಲಾಗಿದ್ದು, ಆಡಳಿತ ಮಂಡಳಿಯಲ್ಲಿ ಎರಡು ಸಮುದಾಯಕ್ಕೂ ಸಮಾನ ಅವಕಾಶ ನೀಡಬೇಕಾಗಿತ್ತು. ಆದರೆ, ಒಂದೇ ಸಮುದಾಯದ ಏಳು ಮಂದಿಯನ್ನು ನೇಮಿಸಿರುವ ಕ್ರಮ ಸರಿಯಾದುದ್ದಲ್ಲ ಎನ್ನಲಾಗಿದೆ. ಈ ಆಡಳಿತ ಮಂಡಳಿ ಮೇಲೆ ನಮಗೆ ನಂಬಿಕೆ ಇಲ್ಲ ಎಂದು ಕೋಮು ಸೌಹಾರ್ದ ವೇದಿಕೆ ರಾಜ್ಯ ಕಾರ್ಯದರ್ಶಿ ಗೌಸ್ ಮೊಹಿನುದ್ದಿನ್ ವಿರೋಧ ವ್ಯಕ್ತಪಡಿಸಿದ್ದಾರೆ.
ಅಲ್ಲದೆ, ಕೋಮು ಸೌಹಾರ್ದ ವೇದಿಕೆಯು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದು, ಆಡಳಿತ ಮಂಡಳಿಯನ್ನು ವಿಸರ್ಜಿಸಬೇಕೆಂದು ಮನವಿ ಮಾಡಿದೆ.
ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾಕ್ಕೆ ಹಿಂದೂ ಮತ್ತು ಮುಸ್ಲಿಮರು ನೂರಾರು ವರ್ಷಗಳಿಂದ ಭಾಗವಹಿಸುತ್ತಾ ಬರುತ್ತಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಮರ ಪ್ರಭಾವ ಹೆಚ್ಚಾಗುತ್ತಿದೆ ಎಂದು ಆರೋಪಿಸಿ ಬಿಜೆಪಿ 1998ರಲ್ಲಿ ದತ್ತ ಮಾಲಾ ಅಭಿಯಾನ ಆರಂಭಿಸಿದ ನಂತರ ಈ ಕ್ಷೇತ್ರವು ವಿವಾದಕ್ಕೆ ಕಾರಣವಾಯಿತು. ಸಂಘ ಪರಿವಾರದ ಪ್ರಯತ್ನಗಳಿಗೆ ಪ್ರತಿಯಾಗಿ ಕೋಮು ಸೌಹಾರ್ದ ವೇದಿಕೆಯೂ ಚಿಕ್ಕಮಗಳೂರಿನಲ್ಲಿ ಸಮಾವೇಶಗಳನ್ನು ಆಯೋಜಿಸುವ ಮೂಲಕ ಗಮನ ಸೆಳೆಯುತ್ತಿತ್ತು. ಕ್ಷೇತ್ರದಲ್ಲಿದ್ದ ಮುಜಾವವರು ಎರಡೂ ಪದ್ಧತಿಗಳ ಪ್ರಕಾರ ಪೂಜೆ ಮಾಡಿಕೊಡುತ್ತಿದ್ದರು.
ಚಿಕ್ಕಮಗಳೂರು ತಾಲ್ಲೂಕಿನ ಚಂದ್ರದ್ರೋಣ ಪರ್ವತಶ್ರೇಣಿಯಲ್ಲಿರುವ ಬಾಬಾಬುಡನ್ಗಿರಿಯ ಈ ಸ್ಥಳ ಈಗ ವಿವಾದ ಕೇಂದ್ರವಾಗಿದೆ. ಹಿಂದೂ-ಮುಸ್ಲಿಂ ಭಾವೈಕ್ಯತೆಗೆ ಸಾಕ್ಷಿಯಾಗಿದ್ದ ಈ ಧಾರ್ಮಿಕ ಕೇಂದ್ರ ನಮ್ಮದು ಎಂದು ಎರಡು ಧರ್ಮದವರು ನ್ಯಾಯಾಲಯದಲ್ಲಿ ವಾದ-ಪ್ರತಿವಾದ ಮಂಡಿಸುತ್ತಿದ್ದಾರೆ.
ಆಡಳಿತ ಮಂಡಳಿ
ಬಾಬಾ ಬುಡನ್ ಸ್ವಾಮಿ ದರ್ಗಾದ ಪೂಜಾ ವಿಧಾನದಲ್ಲಿ ಯಾವುದೇ ಬದಲಾವಣೆ ಮಾಡಬಾರದು. ಯಥಾಸ್ಥಿತಿ ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ಆದೇಶ ಹೊರಡಿಸಿತ್ತು. ಎರಡೂ ಧರ್ಮದ ಸಂಪ್ರದಾಯಗಳ ಪ್ರಕಾರ ಪೂಜಾವಿಧಿ ನಡೆಸಲು ಮುಜಾವರ್ ಹಾಗೂ ಅರ್ಚಕರಿಗೆ ಅವಕಾಶ ನೀಡಲಾಗಿದೆ ಎಂದು ರಾಜ್ಯ ಸರ್ಕಾರ ನಿರ್ಧರಿಸಿತು.
ಇನಾಂ ದತ್ತಾತ್ರೇಯ ಬಾಬಾಬುಡನ್ಸ್ವಾಮಿ ದರ್ಗಾಕ್ಕೆ ಅರ್ಚಕರನ್ನು ನೇಮಕ ಮಾಡುವ ವಿಚಾರಕ್ಕೆ ರಾಜ್ಯ ಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿದೆ. ಅರ್ಚಕರ ನೇಮಿಸುವ ಅಧಿಕಾರ ಆಡಳಿತ ಮಂಡಳಿಗೆ ಇದೆ ಎಂದು ರಾಜ್ಯ ಸರ್ಕಾರ ಸುತ್ತೋಲೆಯಲ್ಲಿ ತಿಳಿಸಿದೆ.
ಓರ್ವ ಮುಸ್ಲಿಂ ಸದಸ್ಯ ಸೇರಿ 8 ಮಂದಿ ಸದಸ್ಯರು ಈ ಆಡಳಿತ ಮಂಡಳಿಯಲ್ಲಿರಲಿದ್ದು, ಇವರು ದತ್ತಪೀಠದಲ್ಲಿ ಹಿಂದೂ ಅರ್ಚಕರ ನೇಮಕ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ.
ಸದಸ್ಯರ ವಿವರ: 1) ಸತೀಶ್ ಕ, ಅತಿಗುಂಡಿ, ಚಿಕ್ಕಮಗಳೂರು ತಾಲ್ಲೂಕು. 2) ಲೀಲಾ ಸಿ.ಜಿ. ಬಾಗಡೇಹಳ್ಳಿ, ಕ್ರಮರ, ಚಿಕ್ಕಮಗಳೂರು. 3) ಶ್ರೀಲಾ ಕೋಲ, ಆರೇಹಳ್ಳಿ, ಯರೇಹಳ್ಳಿ, ಚಿಕ್ಕಮಗಳೂರು. 4) ಸುಮಂತ್ ಎನ್.ಎಸ್. ಲಕ್ಪಾರ್ಕ್ ರಸ್ತೆ, ವಿಜಯಪುರ, ಚಿಕ್ಕಮಗಳೂರು. 5) ಕೆ.ಎಸ್, ಗುರುವೇಶ್, ಹನುಮಂತನಗರ, ರಾಮನಹಳ್ಳಿ, ಚಿಕ್ಕಮಗಳೂರು. 6) ಜಿ.ಹೆಚ್ ಹೇಮಂತ್ ಕುಮಾರ್, ರತ್ನಗಿರಿ ಬಡಾವಣೆ. 7) ಎಸ್.ಎಂ. ಬಾಷಾ, ಮದೀನ ಮಸೀದಿ ರಸ್ತೆ, ಕೂ.ರಿಂಗ್ ಮಾರ್ಕೆಟ್ ರಸ್ತೆ, ಚಿಕ್ಕಮಗಳೂರು. 8) ಸಿ.ಎಸ್. ಚೇತನ, ನರಿಗುಡೇನಹಳ್ಳಿ, ಜೋತಿನಗರ.