ತಿರುವನಂತಪುರ: ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ತೆಗೆದುಹಾಕಲು ಸುಗ್ರೀವಾಜ್ಞೆ ತರಲು ಕೇರಳ ಆಡಳಿತರೂಢ ಎಡರಂಗ ಸರ್ಕಾರ ಸಚಿವ ಸಂಪುಟ ನಿರ್ಧರಿಸಿದೆ. ಕುಲಪತಿಗಳ ಬದಲಿಗೆ ತಜ್ಞರನ್ನು ನೇಮಕ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಕೇರಳದಲ್ಲಿ ಆಡಳಿತರೂಢ ಎಡರಂಗ ಸರ್ಕಾರ ಹಾಗೂ ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ನಡುವೆ ಹಲವು ದಿನಗಳಿಂದ ಸಂಘರ್ಷ ಏರ್ಪಟ್ಟಿದೆ. ರಾಜ್ಯಪಾಲರು ಸರ್ಕಾರದ ವಿವಿಧ ಮಟ್ಟದಲ್ಲಿ ಸಾಕಷ್ಟು ಹಸ್ತಕ್ಷೇಪ ಮಾಡುವ ಮೂಲಕ ಕೇಂದ್ರದ ಬಿಜೆಪಿ ಸರ್ಕಾರದ ಅಣತಿಯಂತೆ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯಪಾಲರ ಕಾರ್ಯವೈಖರಿ ಬಗ್ಗೆಯೇ ಪ್ರಶ್ನೆ ಎದ್ದಿದೆ.
ಕಾನೂನು ಇಲಾಖೆ ಸಿದ್ಧಪಡಿಸಿದ ಕರಡು ಸುಗ್ರೀವಾಜ್ಞೆಯನ್ನು ಇಂದು(ನವೆಂಬರ್ 09) ನಡೆದ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತೆಗೆದುಕೊಳ್ಳಲಾಯಿತು. ವಿಶ್ವವಿದ್ಯಾಲಯಗಳ ಕುಲಪತಿಯಾಗಿ ಆರೀಫ್ ಮುಹಮ್ಮದ್ ಖಾನ್ ಅವರು ರಾಜ್ಯದ 11 ವಿಶ್ವವಿದ್ಯಾಲಯಗಳ ಕುಲಪತಿಗಳ ರಾಜೀನಾಮೆಗೆ ಪತ್ರ ನೀಡಿದ್ದರು, ಇದರ ವಿರುದ್ಧ ವಿಸಿಗಳು ರಾಜ್ಯಪಾಲರ ನಿರ್ಧಾರ ಕಾನೂನುಬಾಹಿರ ಮತ್ತು ಅನೂರ್ಜಿತ ಎಂದು ನ್ಯಾಯಾಲಯದ ಮೊರೆ ಹೋಗಿದ್ದರು.
ಕುಲಪತಿಗಳ ನೇಮಕ ಸೇರಿದಂತೆ ವಿಶ್ವವಿದ್ಯಾಲಯಗಳ ಕಾರ್ಯವೈಖರಿ ಕುರಿತು ರಾಜ್ಯಪಾಲ ಆರೀಫ್ ಮುಹಮ್ಮದ್ ಖಾನ್ ಅವರೊಂದಿಗಿನ ಸಂಘರ್ಷದ ಹಿನ್ನೆಲೆಯಲ್ಲಿ ಎಡರಂಗ ಸರ್ಕಾರದ ಈ ಕ್ರಮವು ಇತ್ತೀಚಿನದು. ಅವ್ಯವಸ್ಥೆಯ ಕಾರಣದಿಂದ ಕುಲಪತಿಯಾಗಿ ಉಳಿಯಲು ಬಯಸುವುದಿಲ್ಲ ಎಂದು ರಾಜ್ಯಪಾಲರು ಇತ್ತೀಚಿನ ಮೂರು ಸಂದರ್ಭಗಳಲ್ಲಿ ಹೇಳಿಕೆ ನೀಡಿದ್ದರು. ಒಂದು ಸಮಾರಂಭದಲ್ಲಿ ಮುಖ್ಯಮಂತ್ರಿಗಳೇ ಅವರನ್ನು ಮುಂದುವರಿಸುವಂತೆ ಮನವಿ ಮಾಡಿದ್ದರು. ರಾಜ್ಯ ಕಾನೂನು ಸಚಿವ ಪಿ ರಾಜೀವ್ ಅವರು ಸರ್ಕಾರವು ಖಾನ್ ಅವರನ್ನು ನಿಂದಿಸಲು ಪ್ರಯತ್ನಿಸುತ್ತಿದೆ ಎಂದು ನಿರಾಕರಿಸಿದರು. ಕುಲಪತಿ ನೇಮಕ ಶಾಸನಬದ್ಧ ಸ್ಥಾನವಾಗಿದ್ದು, ಕಾನೂನಿಗೆ ತಿದ್ದುಪಡಿ ತಂದು ಕುಲಪತಿ ನೇಮಕ ಮಾಡಿಕೊಳ್ಳಬಹುದು ಎಂದು ಸಚಿವರು ಹೇಳಿದರು.
ಇದೀಗ, ಪಿಣರಾಯಿ ವಿಜಯನ್ ನೇತೃತ್ವದ ಕೇರಳ ಸರ್ಕಾರ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಅವರನ್ನು ವಿಶ್ವವಿದ್ಯಾಲಯಗಳ ಕುಲಪತಿ ಹುದ್ದೆಯಿಂದ ವಜಾಗೊಳಿಸಲು ನಿರ್ಧರಿಸಿದೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಸಂಪುಟವು ರಾಜ್ಯಪಾಲರನ್ನು ಕುಲಪತಿ ಹುದ್ದೆಯಿಂದ ತೆಗೆದು ಹಾಕಲು ಸುಗ್ರೀವಾಜ್ಞೆ ಅಥವಾ ವಿಶೇಷ ಆದೇಶವನ್ನು ತರಲು ನಿರ್ಧರಿಸಿದೆ. ಇತ್ತೀಚಿಗೆ ರಾಜ್ಯದ ಎಲ್ಲಾ ಒಂಬತ್ತು ವಿಶ್ವವಿದ್ಯಾನಿಲಯಗಳ ಉಪಕುಲಪತಿಗಳಿಗೆ ರಾಜೀನಾಮೆ ನೀಡುವಂತೆ ಮುಹಮ್ಮದ್ ಖಾನ್ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಕೇರಳ ಸರಕಾರ ಈ ಹೆಜ್ಜೆ ಇಟ್ಟಿದೆ. ಕುಲಪತಿ ಸ್ಥಾನಕ್ಕೆ ತಜ್ಞರೊಬ್ಬರನ್ನು ತರಲು ರಾಜ್ಯ ಸಚಿವ ಸಂಪುಟ ಮುಂದಾಗಿದೆ.