ಒಪ್ಪಿಗೆ ಇಲ್ಲದಿದ್ದರೂ ನನ್ನ ಪದ್ಯ ಸೇರ್ಪಡೆ-ಸರ್ಕಾರದ ಏಕಪಕ್ಷೀಯ ತೀರ್ಮಾನ ಖಡನೀಯ: ರೂಪ ಹಾಸನ

ಹಾಸನ: ರಾಜ್ಯ ಸರ್ಕಾರ ನೇಮಿಸಿದ ರಾಜ್ಯದಲ್ಲಿ ಪಠ್ಯಪುಸ್ತಕ ಪುನರ್‌ ಪರಿಶೀಲನಾ ಸಮಿತಿ ಮಾಡಿದ ಎಡವಟ್ಟು ಖಂಡಿಸಿ ರಾಜ್ಯದಲ್ಲಿ ಭಾರೀ ಪ್ರತಿರೋಧ ವ್ಯಕ್ತವಾಗಿ ಹಲವು ಸಾಹಿತಿಗಳು, ಬರಹಗಾರರು ತಮ್ಮ ಪಠ್ಯ ಅಥವಾ ಪದ್ಯವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಕೂಡದು ಎಂದು ವಾಪಸ್ಸು ಪಡೆದಿದ್ದರು. ಸರ್ಕಾರವು ತೀವ್ರವಿರೋಧಕ್ಕೆ ಮಣಿದು ತಪ್ಪುಗಳನ್ನು ಸರಿಪಡಿಸುವ ಬದಲು ವಿರೋಧ ವ್ಯಕ್ತಪಡಿಸಿದವರ ಪಠ್ಯ ಹಾಗೂ ಪದ್ಯವನ್ನು ಕೈಬಿಟ್ಟಿರುವುದಾಗಿ ತಿಳಿಸಿತು. ಆದರೆ, ಇದೀಗ ಅನುಮತಿ ನಿರಾಕರಣೆ ಬಳಿಕವೂ ಪದ್ಯವನ್ನು ಅಳವಡಿಸಿರುವುದಕ್ಕೆ ಹಿರಿಯ ಸಾಹಿತಿ ರೂಪ ಹಾಸನ ಅವರು ಸರ್ಕಾರದ ಏಕಪಕ್ಷೀಯ ನಿರ್ಧಾರವನ್ನು ಖಂಡಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ಬಿಡುಗಡೆಗೊಳಿಸಿರುವ ರೂಪ ಹಾಸನ ಅವರು, ಲೇಖಕರ ಆಗ್ರಹದಂತೆ ಕೈ ಬಿಟ್ಟಿದ್ದ ಪಠ್ಯಗಳನ್ನು, ನಮ್ಮ ಅನುಮತಿ ಇಲ್ಲದೇ ಮರು ಸೇರ್ಪಡೆ ಮಾಡಿಕೊಂಡಿರುವುದಾಗಿ ಸರ್ಕಾರ ಅಕ್ಟೋಬರ್‌ 28ರಂದು ಮತ್ತೆ ಆದೇಶ ಹೊರಡಿಸಿರುವುದು ಮಾಧ್ಯಮಗಳಿಂದ ತಿಳಿದು ಬಂದು ಆಘಾತವಾಯ್ತು. ನನ್ನ ಒಪ್ಪಿಗೆ ಇಲ್ಲದಿದ್ದರೂ, ಪದ್ಯವನ್ನು ಪಠ್ಯಕ್ಕೆ ಬಳಸಿಕೊಳ್ಳಲು ನಿರ್ಧರಿಸಿರುವ ಸರ್ಕಾರದ ಏಕಪಕ್ಷೀಯ ತೀರ್ಮಾನದ, ಈ ಆಗ್ರಹಪೂರ್ವಕ ನಡೆ, ತೀವ್ರ ಜುಗುಪ್ಸೆ ಹುಟ್ಟಿಸಿದೆ. ಇದು ಖಂಡನೀಯ ಎಂದಿದ್ದಾರೆ.

ಪಠ್ಯಪುಸ್ತಕ ಪರಿಷ್ಕರಣೆ ಹಾಗೂ ಪುನರ್ ರಚನಾ ಸಮಿತಿ 2017-18ರ ಅಪೇಕ್ಷೆಯಂತೆ, ಪಠ್ಯಪುಸ್ತಕಕ್ಕೆ ನನ್ನ ಪದ್ಯವನ್ನು ಅಳವಡಿಸಿಕೊಳ್ಳಲು ಈ ಹಿಂದೆ ಅನುಮತಿಯನ್ನು ನೀಡಿದ್ದೆ. ಆದರೆ ಇದೇ 2022-23ನೇ ಸಾಲಿನಲ್ಲಿ ಪಠ್ಯ ಪುಸ್ತಕಗಳ “ಪುನರ್ ಪರಿಶೀಲನೆ”ಗೆ ಸರ್ಕಾರದಿಂದ ಅನುಮತಿ ಪಡೆದ ಸಮಿತಿಯು, ನಮ್ಮ “ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005″ರ ನೀತಿ ನಿಯಮಗಳನ್ನು ಗಾಳಿಗೆ ತೂರಿ, ಮನಬಂದಂತೆ ಹಲವು ತಿದ್ದುಪಡಿ, ಗೊಂದಲ ಪೂರಿತ/ಅನವಶ್ಯಕ ಮಾರ್ಪಾಡುಗಳನ್ನು ಮಾಡಿರುವುದಕ್ಕೆ ನನ್ನ ವಿರೋಧವನ್ನು ವ್ಯಕ್ಯಪಡಿಸಿದೆ.

ಪ್ರತಿರೋಧದ ಉದ್ದೇಶದಿಂದ ನನ್ನ ಪದ್ಯ ಬೋಧನೆಗೆ ಹಿಂದಿನ ಸಮಿತಿಗೆ ನೀಡಿದ್ದ ಅನುಮತಿಯನ್ನು ಹಿಂಪಡೆದು, ಈ ಕುರಿತು ವಿವರವಾದ ಪತ್ರವನ್ನು 2022ರ ಮೇ 31ರಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದೆ.

ಅಂದಿನ ಸಂದರ್ಭದಲ್ಲಿ ಸಾರ್ವಜನಿಕರಿಂದ ನಡೆದ ಅನೇಕ ಬಗೆಯ ತೀವ್ರ ಪ್ರತಿರೋಧಗಳನ್ನು ನಿರ್ಲಕ್ಷಿಸಿದ ಸರ್ಕಾರ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದಲಾದರೂ ದೋಷಪೂರಿತ ಪಠ್ಯಪುಸ್ತಕಗಳನ್ನು ಹಿಂಪಡೆಯದೇ ಸಮರ್ಥನೆ ಮಾಡಿಕೊಂಡಿತು. ಅಲ್ಲದೆ, ನನ್ನ ಪದ್ಯ ಬಳಕೆಗೆ ಅನುಮತಿಯನ್ನು ಬಯಸಿ 2022ರ ಆಗಸ್ಟ್‌ 16ರಂದು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರಿಂದ ಪತ್ರ ಬಂದಾಗಲೂ ಅನುಮತಿಯನ್ನು ಖಡಾಖಂಡಿತವಾಗಿ ನಿರಾಕರಿಸಿ 2022ರ ಆಗಸ್ಟ್‌ 26ರಂದು ಮರುಪತ್ರ ಬರೆದಿದ್ದೆ.

ನನ್ನಂತೆಯೇ ಹಲವು ಲೇಖಕರು “ಪುನರ್ ಪರಿಶೀಲನಾ ಸಮಿತಿ”ಯ ನಡೆಯನ್ನು ಪ್ರತಿರೋಧಿಸಿ ಪಠ್ಯವನ್ನು ಹಿಂಪಡೆದಿದ್ದನ್ನು, ಮತ್ತೊಮ್ಮೆ ಖಚಿತ ಪಡಿಸಿಕೊಂಡ ಸರ್ಕಾರವು ಅದನ್ನು ಮನ್ನಿಸಿ ಪಠ್ಯಪುಸ್ತಕದಿಂದ ನಮ್ಮ ಪಠ್ಯವನ್ನು ಕೈಬಿಟ್ಟು 2022ರ ಸೆಪ್ಟಂಬರ್‌ 23ರಂದು ಆದೇಶ ಹೊರಡಿಸಿದ್ದು ಮಾಧ್ಯಮಗಳಿಂದ ತಿಳಿದು ಕೊಂಚ ಸಮಾಧಾನವಾಗಿತ್ತು. ಆದರೆ, ಈಗ ಏಕಾಏಕೀಯಾಗಿ ಪದ್ಯವನ್ನು ಅಳವಡಿಸಿಕೊಂಡಿರುವ ಬಗ್ಗೆ ಸರ್ಕಾರ ನಿರ್ಧರಿಸಿರುವುದು ಬೇಸರ ತಂದಿದೆ ಎಂದು ರೂಪ ಹಾಸನ ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *