ಅರೇಬಿಕ್ ಶಾಲೆಗಳಲ್ಲಿ ಶಿಕ್ಷಣ ಇಲಾಖೆ ನಿಯಮ ಉಲ್ಲಂಘನೆ, ಸಮೀಕ್ಷೆ ನಡೆಸಲು ನಿರ್ಧಾರ: ಸಚಿವ ಬಿ.ಸಿ.ನಾಗೇಶ್

ಬೆಂಗಳೂರು: ಕರ್ನಾಟಕದಲ್ಲಿ ಸುಮಾರು 200 ಅರೇಬಿಕ್ ಶಾಲೆಗಳಲ್ಲಿನ ಸ್ಥಿತಿಗತಿ ಹಾಗೂ ಕಾರ್ಯನಿರ್ವಹಣೆ ಕುರಿತು ಶೀಘ್ರ ವರದಿ ಸಲ್ಲಿಸುವಂತೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸೂಚನೆ ನೀಡಲಾಗಿದೆ. ಶಿಕ್ಷಣ ಇಲಾಖೆಯ ನಿಯಮವನ್ನು ಪಾಲಿಸದೆ ಇರುವುದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ಆ ಶಾಲೆಗಳ ವಿರುದ್ದ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಮಡಿಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಅರೇಬಿಕ್ ಶಾಲೆಗಳಲ್ಲಿ ನಿಯಮಗಳನ್ನು ಅನುಸರಿಸುತ್ತಿಲ್ಲ ಎಂಬುದು ಕಂಡು ಬಂದಿದೆ. ರಾಜ್ಯದಲ್ಲಿ 106 ಅನುದಾನಿತ ಹಾಗೂ 80 ಅನುದಾನರಹಿತ ಅರೇಬಿಕ್ ಶಾಲೆಗಳಿವೆ. ಅಲ್ಲಿ ಶಿಕ್ಷಣ ಇಲಾಖೆಯ ಪಠ್ಯಕ್ರಮದಂತೆ ಬೋಧನೆ ನಡೆಯುತ್ತಿಲ್ಲ ಎಂಬ ಆರೋಪಗಳಿವೆ. ಭಾಷೆ ಮತ್ತು ವಿಜ್ಞಾನದ ಕಲಿಸುವ ವಿಧಾನದಲ್ಲಿಯೂ ನ್ಯೂನ್ಯತೆಗಳಾಗಿವೆ. ಈಗಾಗಲೇ ಹಲವರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಗ್ರವಾಗಿ ಪರಿಶೀಲಿಸುವಂತೆ ಆಯುಕ್ತರಿಗೆ ಸೂಚಿಸಲಾಗಿದೆ’ ಎಂದು ಹೇಳಿದರು.

‘ಮದರಸಾದಂತಹ ಶಾಲೆಗಳಲ್ಲಿ ಕೆಲವೊಂದು ಶಿಕ್ಷಣ ಇಲಾಖೆಗಳ ಸೂಚನೆಗಳನ್ನು ಅನುಸರಿಸುತ್ತಿವೆ. ಆದರೆ ಬಹುತೇಕ ಶಾಲೆಗಳು ಸೂಚನೆಗಳನ್ನು ಉಲ್ಲಂಘಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಸಮಗ್ರ ಪರಿಶೀಲನೆಯ ನಂತರ ವಾಸ್ತವ ಚಿತ್ರಣ ಏನೆಂದು ಸ್ಪಷ್ಟವಾಗುತ್ತದೆ’ ಎಂದು ತಿಳಿಸಿದರು.

‘ಕರ್ನಾಟಕದ ಹಲವು ಅರೇಬಿಕ್‌ ಶಾಲೆಗಳಲ್ಲಿ ಕನ್ನಡ, ಇಂಗ್ಲಿಷ್​ ಭಾಷೆಗಳು ಹಾಗೂ ಗಣಿತ-ವಿಜ್ಞಾನದ ಬೋಧನೆ-ಕಲಿಕೆ ಸಮರ್ಪಕ ರೀತಿಯಲ್ಲಿ ಅನುಸರಿಸಲಾಗುತ್ತಿಲ್ಲ. ಅರೇಬಿಕ್‌ ಶಾಲೆಗಳಲ್ಲಿ ಪ್ರತಿವರ್ಷ ಸುಮಾರು 27 ಸಾವಿರ ಮಕ್ಕಳು ದಾಖಲಾಗುತ್ತಾರೆ. ಎಸ್ಸೆಸ್ಸೆಲ್ಸಿ ವೇಳೆಗೆ 2 ಸಾವಿರ ವಿದ್ಯಾರ್ಥಿಗಳಷ್ಟೇ ಇರುತ್ತಾರೆ. ದಾಖಲೆಗಳಲ್ಲಿ ಕಾಣಿಸುವ ಈ ದಾಖಲಾತಿ ಸಂಖ್ಯೆಗೂ, ವಾಸ್ತವವಾಗಿ ಶಾಲೆಗಳಿಗೆ ಹಾಜರಾಗುವ ಮಕ್ಕಳ ಸಂಖ್ಯೆಗೂ ಭಾರೀ ವ್ಯತ್ಯಾಸವಿದೆ. ಶಿಕ್ಷಣವು ಎಲ್ಲ ಮಕ್ಕಳ ಹಕ್ಕಾಗಿದೆ. ಧರ್ಮದ ಕಾರಣಕ್ಕೆ ಯಾವುದೇ ಮಗು ಉತ್ತಮ ಶಿಕ್ಷಣದಿಂದ ವಂಚಿತವಾಗಬಾರದು’ ಎಂದು ಸ್ಪಷ್ಟಪಡಿಸಿದರು.

Donate Janashakthi Media

Leave a Reply

Your email address will not be published. Required fields are marked *