ಶಿವಮೊಗ್ಗ: ಕೆಲವು ಯುವಕರು ಮತ್ತೆ ಕೋಮು ದ್ವೇಷ ಹರಡುವ ಯತ್ನ ನಡೆಸಲು ಪ್ರಯತ್ನಿಸುತ್ತಿದ್ದು, ಶಿವಮೊಗ್ಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಜನತೆಯಲ್ಲಿ ಆತಂಕ ಮನೆ ಮಾಡಿದೆ. ಫೆಬ್ರವರಿ 20ರಂದು ಹರ್ಷ ಕೊಲೆಯಾಗಿದ್ದು, ಈ ಸಂಬಂಧ ಎರಡು ಗುಂಪುಗಳು ಪ್ರತ್ಯೇಕವಾದ ಗಲಭೆ ಸೃಷ್ಠಿಸುವ ವಾತಾವರಣ ನಿರ್ಮಾಣವಾಗಿದೆ.
ಭರ್ಮಪ್ಪ ನಗರದಲ್ಲಿ ಸ್ನೇಹಿತರನ್ನು ಭೇಟಿಯಾಗಿ ಮನೆಯ ಕಡೆಗೆ ಹೊರಟಿದ ಪ್ರಕಾಶ್(25 ವರ್ಷ) ಎಂಬ ಯುವಕನ ಮೇಲೆ ಬೈಕ್ನಲ್ಲಿ ಆಗಮಿಸಿದ ಮೂರು ಮಂದಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಅಲ್ಲದೆ, ಸೀಗೆಹಟ್ಟಿಯ ನಿವಾಸ, ರವಿ ವರ್ಮ ಬೀದಿ, ಕೆ.ಆರ್ ಪುರಂ ರಸ್ತೆ ಮುಂತಾದೆಡೆ 2 ಬೈಕ್ಗಳಲ್ಲಿ ಬಂದ 6 ಮಂದಿ ಮಚ್ಚು-ಲಾಂಗ್ ಹಿಡಿದು ಭಯದ ವಾತಾವರಣ ನಿರ್ಮಿಸಲು ಮುಸ್ಲಿಂ ಪರ ಘೋಷಣೆ ಕೂಗಿದ್ದಾರೆ ಎಂದು ವರದಿಯಾಗಿದೆ.
ಈ ಘಟನೆಗೂ ಮುನ್ನ, ಕಲ್ಲಪ್ಪನಕೇರಿಯಿಂದ ಅಜಾನ್ ನಗರಕ್ಕೆ ಬೈಕ್ನಲ್ಲಿ ಜನರ ಗುಂಪೊಂದು ಕಾರು ಜಖಂಗೊಳಿಸಿರುವ ಘಟನೆ ನಡೆದಿದೆ. ಈ ಸಂಬಂಧ ಹತ್ಯೆಗೀಡಾದ ಹರ್ಷ ಸಹೋದರಿ ಅಶ್ವಿನಿ ಸೇರಿದಂತೆ 10 ರಿಂದ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆ ಒಂದು
ಅಕ್ಟೋಬರ್ 22ರಂದು ಆಜಾದ್ ನಗರದಲ್ಲಿ ಕಾರು ಜಖಂಗೊಂಡ ಪ್ರಕರಣಕ್ಕೆ ಸಂಬಂಧಿಸಿ ಸಯ್ಯದ್ ಫರ್ವೀಜ್ ಎಂಬವರಿಗೆ ಸೇರಿದ್ದ ಇನ್ನೋವಾ ಕಾರನ್ನು ಮನೆ ಮುಂದೆ ನಿಲ್ಲಿಸಿದ್ದಾಗ ಹಾನಿ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಕಾರಿನ ಬಹುತೇಕ ಭಾಗಗಳು ಹಾನಿಯಾಗಿವೆ ಎಂದು ವರದಿಯಾದೆ. ಕಾರಿಗೆ ದಿವಂಗತ ಹರ್ಷ ಸಹೋದರಿ ಅಶ್ವಿನಿ ಸೇರಿದಂತೆ ಸುಮಾರು 15 ಮಂದಿ ಹಾನಿ ಮಾಡಿದ್ದಾರೆ ಎಂದು ಆರೋಪಿಸಿ ಸಯ್ಯದ್ ಫರ್ವೀಜ್ ಅವರು ದೂರು ನೀಡಿದ್ದರು. ಕಾರಿನ ಮೇಲೆ ದಾಳಿ ಮಾಡಿದ ಗುಂಪು ಜೈ ಶ್ರೀರಾಮ್ ಎಂದು ಕೂಗುತ್ತಾ ಕೇಸರಿ ಬಾವುಟ ಹಿಡಿದು ಅರಚಾಡಿದರು ಎಂದು ಹೇಳಲಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಘಟನೆ ಎರಡು
ಮೃತ ಹರ್ಷ ನ ಕುಟುಂಬಸ್ಥರಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ನೆನ್ನೆ ರಾತ್ರಿ 11.15 ರ ಸಮಯಕ್ಕೆ 3-4 ಬೈಕ್ ನಲ್ಲಿ ಯುವಕರು ಬಂದಿದ್ದರು. ಮಾರಕಾಸ್ತ್ರ ಹಿಡಿದುಕೊಂಡು ಹರ್ಷನ ಮನೆ ಮುಂಭಾಗ ಓಡಾಡುತ್ತದ್ದರು. ಅಲ್ಲದೆ, ಹರ್ಷನ ತೆಗೆದಿದ್ದು ಸಾಲದಾ, ನಿಮ್ಮನ್ನೂ ತೆಗೆಯಬೇಕಾ. ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಯುವಕರ ಗುಂಪು ಕಿರಿಚಾಡಿದರು ಎನ್ನಲಾಗಿದೆ.
ದುಷ್ಕರ್ಮಿಗಳಿಂದ ಭಯ ಹುಟ್ಟಿಸುವ ಪ್ರಕರಣದ ಹಿನ್ನೆಲೆಯಲ್ಲಿ ನಮಗೆ ಸೂಕ್ತ ರಕ್ಷಣೆ ಬೇಕು ಎಂದು ದಿವಂಗತ ಹರ್ಷ ಸಹೋದರಿ ಅಶ್ವಿನಿ ಆಗ್ರಹಿಸಿದ್ದಾರೆ.
ಘಟನೆ ಮೂರು
ಹಲ್ಲೆಗೊಳಗಾದ ಪ್ರಕಾಶ್ ಅವರು ಭರ್ಮಪ್ಪ ನಗರದ ನಿವಾಸಿಯಾಗಿದ್ದು, ತನ್ನ ಸ್ನೇಹಿತರನ್ನು ಭೇಟಿಯಾದ ಬಳಿಕ ಮನೆಗೆ ವಾಪಸ್ಸು ಆಗುವ ವೇಳೆಗೆ ಬೈಕ್ನಲ್ಲಿ ಬಂದ ಮೂವರು ಏಕಾಏಕಿ ಪ್ರಕಾಶ್ ಮೇಲೆ ಕಲ್ಲಿನಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಇದರಿಂದ ಆತನ ತಲೆ, ಮುಖ ಹಾಗೂ ದೇಹದ ಇತರ ಭಾಗಗಳಿಗೆ ತೀವ್ರ ಗಾಯವಾಗಿದೆ. ಇದೇ ವೇಳೆ, ತಕ್ಷಣ ಕೆಳಗೆ ಬಿದ್ದ ಪ್ರಕಾಶ್ನನ್ನು ಮೂವರು ಕಾಲಿನಲ್ಲಿ ತುಳಿದು ಹಲ್ಲೆ ಮಾಡಿದ್ದಾರೆ. ಅವರಿಂದ ತಪ್ಪಿಸಿಕೊಂಡ ಮನೆಯ ಕಡೆಗೆ ಪ್ರಕಾಶ್ ಓಡಿದ್ದಾನೆ.
ಹಲ್ಲೆಗೊಳದಾದ ಯುವಕ ಪ್ರಕಾಶ್ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಎಸ್ಪಿ ಮಿಥುನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.