ಬೆಳಗಾವಿ: ಪ್ರತಿ ಟನ್ ಕಬ್ಬಿಗೆ ರೂ.5500 ಬೆಲೆ ನಿಗದಿಪಡಿಸಬೇಕೆಂದು ಆಗ್ರಹಿಸಿ ಇಂದು(ಅಕ್ಟೋಬರ್ 21) ಬೆಳಗಾವಿ ಜಿಲ್ಲೆಯ ತಾಲೂಕಿನ ಹಲಗಾ ಬಳಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ರೈತರು ಮುಂದಾದರು. ರೈತರ ಪ್ರತಿಭಟನೆಯನ್ನು ತಡೆದ ಪೊಲೀಸರು 100 ಅಧಿಕ ಹೋರಾಟಗಾರರನ್ನು ವಶಕ್ಕೆ ಪಡೆದು ಬಂಧಿಸಿದರು.
ಈಗಾಗಲೇ ಹಲವು ಬಾರಿ ಪ್ರತಿಭಟನೆ ಮತ್ತು ಹಕ್ಕೊತ್ತಾಯಗಳನ್ನು ಮಂಡಿಸಿ ಆಗ್ರಹಿಸುತ್ತಿರುವ ರೈತ ಪ್ರತಿಭಟನಾಕಾರರು, ಇಂದು ಸಹ ಪ್ರತಿಭಟನೆಗೆ ಕರೆ ಕೊಟ್ಟಿದ್ದರು. ಹೋರಾಟಕ್ಕೆ ಆಗಮಿಸುತ್ತಿದ್ದ ರೈತರನ್ನು ಪೊಲೀಸರು ರಸ್ತೆ ಮಧ್ಯದಲ್ಲಿಯೇ ತಡೆದು, ಹೋರಾಟವನ್ನು ರಾಜ್ಯ ಸರ್ಕಾರ ಪೊಲೀಸರ ಮೂಲಕ ಹತ್ತಿಕ್ಕುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮೀಣ ಪ್ರದೇಶದಿಂದ ಬೆಳಗಾವಿ ನಗರಕ್ಕೆ ಪ್ರತಿಭಟನಾ ಹೋರಾಟಕ್ಕೆ ಬರುತ್ತಿದ್ದ ರೈತರನ್ನು ಬೆಳಗಾವಿ ನಗರ ಪ್ರವೇಶಿಸದಂತೆ ಹುಕ್ಕೇರಿ ತಾಲೂಕಿನ ಹತ್ತರಗಿ ಹಾಗೂ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ನಲ್ಲಿ ಪೊಲೀಸರು ತಡೆದಿರುವ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ರೈತ ಮುಖಂಡರಾದ ಚೂನಪ್ಪ ಪೂಜಾರಿ, ರಾಘವೇಂದ್ರ ನಾಯಕ, ಪ್ರಕಾಶ ನಾಯಕ, ರವಿ ಸಿದ್ದನ್ನವರ ನೇತೃತ್ವದಲ್ಲಿ ಯಮಕನಮರಡಿ ಬಳಿಯ ಹತ್ತರಗಿ ಟೋಲ್ ನಾಕಾ ಹಾಗೂ ರೈತ ಮುಖಂಡರಾದ ಗಣಪತಿ ಇಳಿಗೆರ, ಶಿವಾನಂದ ಮುಗಳಿಹಾಳ ನೇತೃತ್ವದಲ್ಲಿ ಸುವರ್ಣ ಸೌಧದ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದರು.
ಈ ವೇಳೆ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ 10ಕ್ಕೂ ಅಧಿಕ ರೈತರನ್ನು ಪೊಲೀಸರ ವಶಕ್ಕೆ ಪಡೆದುಕೊಂಡಿದ್ದಾರೆ. ಇದಲ್ಲದೇ ನೇಸರಗಿ ಬಳಿಯೂ 50ಕ್ಕೂ ಅಧಿಕ ಹಾಗೂ ಯಮಕನಮರಡಿ ಬಳಿಯ 100ಕ್ಕೂ ಅಧಿಕ ರೈತರನ್ನು ವಶಕ್ಕೆ ಪಡೆದ ಪೊಲೀಸರು ಹೋರಾಟವನ್ನು ಹತ್ತಿಕ್ಕುವ ಕ್ರಮಕ್ಕೆ ಮುಂದಾಗಿರುವ ಘಟನೆ ನಡೆದಿದೆ.
ಇತ್ತೀಚಿಗೆ ಕೆಲವು ದಿನಗಳ ಹಿಂದೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ರೈತರು ಪ್ರತಿ ಟನ್ ಕಬ್ಬಿಗೆ 5,500 ರೂ. ದರ ನಿಗದಿ ಮಾಡುವಂತೆ ಅಹೋರಾತ್ರಿ ಪ್ರತಿಭಟನೆ ನಡೆಸಿದ್ದರು. ರೈತರ ಪ್ರತಿಭಟನೆಗೆ ಮಣಿದಿದ್ದ ಸರ್ಕಾರ ಮುಖ್ಯಮಂತ್ರಿ ನೇತೃತ್ವದಲ್ಲಿ ಸಭೆ ನಡೆಸುವುದಾಗಿ ಹೇಳಿತ್ತು. ಆದರೆ, ಬೆಂಗಳೂರಿನಲ್ಲಿ ಸಕ್ಕರೆ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ನೇತೃತ್ವದಲ್ಲಿ ಸಭೆ ಜರುಗಿತು. ಆದರೆ, ಸಭೆಯಲ್ಲಿ ಸಚಿವರ ಭರವಸೆ ತೃಪ್ತಿ ತರದ ಹಿನ್ನೆಲೆಯಲ್ಲಿ ಇಂದು ರೈತರು ಪ್ರತಿಭಟನೆಗೆ ಮುಂದಾಗಿದ್ದರು.