ಕಳೆದ ಆರು ವರ್ಷಗಳಿಂದ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿರುವ ಟೋಲ್‌ಗೇಟ್ ತೆರವುಗೊಳಿಸಬೇಕೆಂದು ನಿರಂತರ ಹೋರಾಟವು ತೀವ್ರಗೊಂಡು ಸುರತ್ಕಲ್ ಟೋಲ್‌ಗೇಟ್ ತೆರವು ಹೋರಾಟ ಸಮಿತಿ ನೇತೃತ್ವದಲ್ಲಿ ಇಂದು(ಅಕ್ಟೋಬರ್ 18) ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾದ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಬಂಧನಕ್ಕೆ ಒಳಗಾದ ಪ್ರತಿಭಟನಾಕಾರರನ್ನು ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟೋಲ್‌ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಅವರು, ಪ್ರಕರಣವನ್ನು ದಾಖಲಿಸದೆ ಬಿಡುಗಡೆಗೊಳಿಸಿದ್ದಾರೆ. ಒಂದು ವೇಳೆ ಪ್ರಕರಣದ ದಾಖಲಿಸಿ ಜಾಮೀನು ಕೇಳದ್ದರೆ, ನಾವು ಅದನ್ನು ತಿರಸ್ಕರಿಸಿ ಜೈಲಿಗೆ ಹೋಗಲೂ ಸಹ ಸಿದ್ದರಿದ್ದೇವು ಎಂದು ತಿಳಿಸಿದ್ದಾರೆ.
ಪೊಲೀಸ್ ವಶದಲ್ಲಿಯೇ ಹೋರಾಟ ಸಮಿತಿಯು ಸಭೆ ನಡೆಸಲಾಯಿತು. ಇಂದಿನ ಪ್ರತಿಭಟನೆಯು ಖಂಡಿತವಾಗಿಯೂ ಬಿಜೆಪಿ ಮತ್ತದರ ಶಕ್ತಿ ನಮ್ಮ ಜನಗಳ ಇಚ್ಚಾಶಕ್ತಿಯ ಹೋರಾಟದ ಎದುರು ಸೋತಿದೆ. ಬಿಜೆಪಿ ಸರಕಾರದ ಪೊಲೀಸರ ಎಲ್ಲಾ ಬೆದರಿಕೆ, ದೌರ್ಜನ್ಯ, ಸರ್ಪಗಾವಲು, ಬಲಪ್ರಯೋಗಗಳನ್ನು ಹಿಮ್ಮೆಟ್ಟಿಸಿ ನಾವಿಂದು ಟೋಲ್‌ಗೇಟ್ ತಲುಪಿದ್ದೇವೆ. ಒಂದಿಷ್ಟು ಗಂಟೆಗಳ ಕಾಲ ಟೋಲ್ ಸಂಗ್ರಹ ಸ್ಥಗಿತಗೊಳಿಸಿದ್ದೇವೆ. ಆ ಮೂಲಕ ಬಿಜೆಪಿ ಶಾಸಕರುಗಳ ಸರ್ವಾಧಿಕಾರಕ್ಕೆ ಸವಾಲು ಒಡ್ಡಿದ್ದೇವೆ. ಇದು ತುಳುನಾಡು ಒಗ್ಗಟ್ಟಿನಿಂದ ನಿಂತದರ ಫಲ ಎಂದು ವಿವರಿಸಿದರು.
ಹೋರಾಟದ ಈ ಗೆಲುವು ಸರ್ವರಿಗೂ ಸಲ್ಲುತ್ತದೆ. ಮತ್ತೆ ನಾಳೆ ಹೋರಾಟ ಸಮಿತಿ ಸಭೆ ಸೇರುತ್ತೇವೆ. ಮುಂದಿನ ಹೋರಾಟದ ಸ್ವರೂಪದ ಬಗ್ಗೆ ಚರ್ಚಿಸಿ ತೀರ್ಮಾನ ಪ್ರಕಟಿಸುತ್ತೇವೆ. ಹೋರಾಟ ಮತ್ತಷ್ಟು ತೀವ್ರತೆಯಿಂದ ಮುಂದುವರಿಯಲಿದೆ. ಟೋಲ್ ಸ್ಥಗಿತಗೊಳ್ಳುವವರೆಗೂ ವಿರಾಮ ಇಲ್ಲ. ವಿರಮಿಸಲು ಬಿಡುವುದಿಲ್ಲ ಎಂದು ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.