ಸುರತ್ಕಲ್:ನಗರದ ಎನ್ಐಟಿಕೆ ಟೋಲ್ ಗೇಟ್ ತೆರವು ಮಾಡಬೇಕೆಂದು ಟೋಲ್ ಗೇಟ್ ಸಮೀಪದ ಸರ್ವಿಸ್ ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಪ್ರತಿಭಟನಕಾರರು ಏಕಾಏಕಿ ಟೋಲ್ ಗೇಟ್ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಈ ವೇಳೆ 200 ಕ್ಕೂ ಹೆಚ್ಚು ಪ್ರತಿಭಟನೆಕಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಟೋಲ್ ಗೇಟ್ ಮುತ್ತಿಗೆ ಸಂದರ್ಭ ಪೋಲಿಸ್ ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ-ತಳ್ಳಾಟ ನಡೆದಿದ್ದು, ಈ ವೇಳೆ ಪೊಲೀಸರು ಪ್ರತಿಭಟನಾಕಾರರಿಗೆ ಲಾಠಿ ಪ್ರಯೋಗ ಮಾಡಿರುವುದಾಗಿ ಎಂದು ತಿಳಿದು ಬಂದಿದೆ. ಪ್ರತಿಭಟನಾಕಾರರನ್ನು ನಿಯಂತ್ರಿಸುವ ಸಂದರ್ಭದಲ್ಲಿ ಪ್ರತಿಭಟನಾಕಾರ ಅಬ್ದುಲ್ ಖಾದರ್ ಎಂಬವರ ಕಣ್ಣಿಗೆ ಲಾಠಿ ತಾಗಿ ಗಾಯಗೊಂಡಿದ್ದು, ಅವರನ್ನು ಸುರತ್ಕಲ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ತೀವ್ರ ಸ್ವರೂಪ ಪಡೆದುಕೊಂಡಿದ್ದು, ಈ ವೇಳೆ ಪ್ರತಿಭಟನಾಕಾರರು ಟೋಲ್ ಗೇಟ್ ಗೆ ಮುತ್ತಿಗೆ ಹಾಕಲು ಯತ್ನಿಸಿದ್ದು, ಪೊಲೀಸರು ಹಲವು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಟೋಲ್ ಸಂಗ್ರಹ ಇಂದಿನಿಂದಲೇ ಸ್ಥಗಿತಗೊಳ್ಳದಿದ್ದರೆ ನಾಳೆಯೂ ಪ್ರತಿಭಟನೆ ನಡೆಸಲಾಗುವುದು ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ. ಟೋಲ್ ಗೇಟ್ ಮುಚ್ಚುವ ಭರವಸೆ ನೀಡಿದರೂ ಅದು ಈಡೇರದ ಕಾರಣ ಈ ಪ್ರತಿಭಟನೆ ನಡೆದಿದೆ. ಪ್ರತಿಭಟನೆಯಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಶೋಭಾ ಕರಂದ್ಲಾಜೆ, ಶಾಸಕರಾದ ಭರತ್ ಶೆಟ್ಟಿ, ಉಮನಾಥ ಕೋಟ್ಯಾನ್ ವಿರುದ್ದ ಘೋಷಣೆ ಕೂಗಿ ಅಕ್ರಮ ಟೋಲ್ ಗೇಟ್ ತೊಲಗಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕರಾದ ಮೊಯ್ದಿನ್‌ಬಾವ, ಜೆ.ಆರ್ ಲೋಬೋ, ಐವನ್ ಡಿಸೋಜ, ಶಕುಂತಲಾ ಶೆಟ್ಟಿ, ಟೋಲ್ ತೆರವು ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ, ಡಿವೈಎಫ್ಐ ಮುಖಂಡರಾದ ಬಿ.ಕೆ ಇಮ್ತಿಯಾಝ್, ಸಂತೋಷ್ ಬಜಾಲ್, ಸಿಪಿಎಂ ಮುಖಂಡರಾದ ಯಾದವ್ ಶೆಟ್ಟಿ, ವಸಂತಾಚಾರಿ, ಸುನಿಲ್ ಕುಮಾರ್ ಬಜಾಲ್, ಕಾಂಗ್ರೆಸ್ ಮುಖಂಡರಾದ ಮಿಥುನ್ ರೈ, ಪ್ರತಿಭಾ ಕುಳಾಯಿ ಮೊದಲಾದವರು ನೇತೃತ್ವ ವಹಿಸಿದ್ದರು.
ಏನಿದು ವಿವಾದ..?
ರಾಷ್ಟ್ರೀಯ ಹೆದ್ದಾರಿ 66ರ ಸುರತ್ಕಲ್ ಬಳಿ ಕಾರ್ಯಾಚರಣೆ ನಡೆಸುತ್ತಿರುವ ಟೋಲ್‌ಗೇಟ್, ಹೆಜಮಾಡಿ ಟೋಲ್‌ಗೇಟ್ ಆರಂಭವಾದ ಬಳಿಕ ಮುಚ್ಚುವ ಒಪ್ಪಂದದೊಂದಿಗೆ 6 ವರ್ಷದ ಹಿಂದೆ ತಾತ್ಕಾಲಿಕ ನೆಲೆಯಲ್ಲಿ ಆರಂಭಗೊಂಡಿತ್ತು. 2016ರಲ್ಲಿ ಹೆಜಮಾಡಿ ಟೋಲ್ ಕೇಂದ್ರ ಆರಂಭವಾದರೂ ಸುರತ್ಕಲ್ ಟೋಲ್ ಬಂದ್ ಮಾಡಲಿಲ್ಲ. 6 ವರ್ಷಗಳಲ್ಲಿ ₹ 400 ಕೋಟಿ ಟೋಲ್ ಸಂಗ್ರಹಿಸಲಾಗಿದೆ. ತಾತ್ಕಾಲಿಕ ಟೋಲ್‌ಗೇಟ್ ಇನ್ನೂ ಕೂಡಾ ಕಾರ್ಯಾಚರಿಸುತ್ತಿರುವುದು ಸುರತ್ಕಲ್ ಟೋಲ್ ವಿರೋಧಿ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ.
ಅರುವತ್ತು ಕಿಲೋ ಮೀಟರ್ ಅಂತರದಲ್ಲಿ ಒಂದಕ್ಕಿಂತ ಹೆಚ್ಚು ಟೋಲ್ ಇರಬಾರದು ಎಂಬುದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿಯಮ. ಆದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 48 ಕಿಲೋ ಮೀಟರ್ ಅಂತರದಲ್ಲಿ 4 ಟೋಲ್‌ಗೇಟ್‌ಗಳಿದ್ದು, ಅದರಲ್ಲೂ ಸುರತ್ಕಲ್ ಟೋಲ್‌ಗೇಟ್ ಅಕ್ರಮ ಎಂಬುದು ದೃಢಪಟ್ಟಿದೆ. ಹೀಗಾಗಿ ಹೋರಾಟಗಾರರೇ ನೇರ ಕಾರ್ಯಾಚರಣೆ ನಡೆಸಿ ಟೋಲ್ ಗೇಟ್ ಅನ್ನು ಕಿತ್ತೆಸೆಯಲು ಮುಂದಾಗಿದ್ದಾರೆ.
ಈ ಹಿಂದೆ ಸ್ಥಳೀಯ ಸಂಸದರು ಹಾಗೂ ಶಾಸಕರು ಸುರತ್ಕಲ್ ಟೋಲ್‌ಗೇಟ್ ತೆರವು ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಈ ಭರವಸೆಯ ಗಡುವು ಜೂನ್ 22ಕ್ಕೆ ಮುಕ್ತಾಯಗೊಂಡಿದ್ದು, ಟೋಲ್ ತೆರವಿಗೆ ಯಾವುದೇ ಕ್ರಮವಾಗಿಲ್ಲ. ಈ ನಡುವೆ ಜಿಲ್ಲಾಧಿಕಾರಿ ಈಗಾಗಲೇ ಸಭೆ ನಡೆಸಿ ಈ ತಿಂಗಳ ಅಂತ್ಯಕ್ಕೆ ಈ ಟೋಲ್‌ಗೇಟ್ ಅನ್ನು ತೆರವುಗೊಳಿಸಲು ಸೂಚನೆ ನೀಡಿದ್ದಾರೆ. ಆದರೆ ಅಧಿಕಾರಿಗಳಿಂದ ಹಾಗೂ ಜನಪ್ರತಿನಿಧಿಗಳಿಂದ ಟೋಲ್ ತೆರವಿಗೆ ಯಾವುದೇ ಕೆಲಸಗಳು ನಡೆಯದ ಕಾರಣ, ಹೋರಾಟಗಾರರೇ ಟೋಲ್ ತೆರವಿಗೆ ಮುಂದಾಗಿದ್ದಾರೆ.