ಬೆಂಗಳೂರು: ಕರ್ನಾಟಕದಲ್ಲಿ ಮಳೆಯ ಆರ್ಭಟ ತೀವ್ರಗೊಂಡಿದೆ. ಈಗಾಗಲೇ ಭಾರೀ ಮಳೆಯಿಂದಾಗಿ ರಾಜ್ಯದ ಹಲವು ಕಡೆಗಳಲ್ಲಿ ಆತಂಕದ ವಾತಾವರಣ ಸೃಷ್ಠಿಯಾಗಿದೆ. ಬೆಂಗಳೂರು ನಗರದಲ್ಲಿಯೂ ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಮನೆಗಳಿಗೆ ನೀರು ನುಗ್ಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಬೆಂಗಳೂರು ನಗರದಲ್ಲಿ ಕಳೆದೆರೆಡು ದಿನಗಳಿಂದ ಸಂಜೆ ವೇಳೆ ಮಳೆ ಸುರಿಯುತ್ತಿದ್ದು, ರಾತ್ರಿ ವೇಳೆ ಧಾರಾಕಾರವಾಗಿ ಸುರಿಯುತ್ತಿದೆ. ರಾತ್ರಿ ಇಡೀ ಮಳೆಗೆ ಜಲಾವೃತಗೊಂಡ ಪ್ರದೇಶದ ಜನರ ಸ್ಥಿತಿ ಸಂಕಷ್ಟಕ್ಕೆ ಈಡಾಗಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನೆಲೆ ಇನ್ನೂ ಮುಂದಿನ 4 ದಿನಗಳ ಕಾಲ ಬೆಂಗಳೂರಿನಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮುಂದಿನ 24 ಗಂಟೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದ್ದು ಗುಡುಗು ಮಿಂಚು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಶುಕ್ರವಾರ ಬೆಳಗ್ಗೆಯಿಂದ ಸಂಜೆವರೆಗೆ ಎಂದಿನಂತೆಯೇ ನಗರದಲ್ಲಿ ಸಾಮಾನ್ಯ ವಾತಾವರಣ ಕಂಡು ಬಂತು. ಮಧ್ಯಾಹ್ನದ ನಂತರ ಜಿಟಿ ಜಿಟಿ ಮಳೆ ಆರಂಭವಾಯಿತು. ಕೆಲ ಕಾಲ ಮಳೆ ವಿರಾಮ ಪಡೆಯಿತಾದರೂ ರಾತ್ರಿ 7ಗಂಟೆ ನಂತರ ಒಂದು ಗಂಟೆಗೂ ಹೆಚ್ಚು ಕಾಲ ಒಂದೇ ಸಮನೆ ಬೆಂಗಳೂರು ನಗರ ಪ್ರದೇಶ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುರಿಯತೊಡಗಿದೆ.
ನಿನ್ನೆ ಒಂದೇ ದಿನಕ್ಕೆ ಬೆಂಗಳೂರಿನ 8 ವಲಯಗಳಲ್ಲಿ ವರುಣನ ಆರ್ಭಟ ಅತಿ ಹೆಚ್ಚಿದ್ದು, ಯಲಹಂಕ 75.5 ಮಿ.ಮೀ, ಅಟ್ಟೂರು 70 ಮಿ.ಮೀ, ಚೌಡೇಶ್ವರಿ ವಾರ್ಡ್ 67.5 ಮಿ.ಮೀ, ಆರ್.ಆರ್.ನಗರ 66.5 ಮಿ.ಮೀ, ಸಂಪಗಿರಾಮನಗರದಲ್ಲಿ 66 ಮಿ.ಮೀ, ನಂದಿನಿ ಬಡಾವಣೆಯಲ್ಲಿ 42 ಮಿ.ಮೀ.ಗೂ ಅಧಿಕ ಮಳೆ ದಾಖಲಾಗಿದೆ. ಮಳೆಯಿಂದಾಗಿ ಹೆಬ್ಬಾಳದ ಎನ್ಇಟಿ ಬಸ್ ನಿಲ್ದಾಣ, ಸಂಜಯನಗರ, ವಿಜಯನಗರ ಸೇರಿದಂತೆ ವಿವಿಧ ಕಡೆ ಮರ ಬಿದ್ದಿದ್ದು, ವಾಹನ ಸಂಚಾರಕ್ಕೆ ತಡೆಯುಂಟಾಗಿತ್ತು. ಅಲ್ಲದೆ, ಹಲವು ಕಡೆಗಳಲ್ಲಿ ಮರದ ರೆಂಬೆಗಳು ಬಿದ್ದಿರುವ ವರದಿಯಾಗಿದೆ.
4 ದಿನ ಹಳದಿ ಅಲರ್ಟ್
ಕರ್ನಾಟಕ ರಾಜ್ಯದ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿಗೆ ಮುಂದಿನ 4 ದಿನ ಹಳದಿ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಭಾಗಕ್ಕೆ ಅಕ್ಟೋಬರ್ 18ರಂದು ಹಳದಿ ಅಲರ್ಟ್ ನೀಡಲಾಗಿದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕರ್ನಾಟಕದ ದಕ್ಷಿಣ ಒಳನಾಡಿನ ಬಳ್ಳಾರಿ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಕೊಡಗು, ಮಂಡ್ಯ ಶಿವಮೊಗ್ಗ, ತುಮಕೂರು ಜಿಲ್ಲೆಗಳಲ್ಲಿ ಮುಂದಿನ 4 ದಿನ ಮಳೆ ಹೆಚ್ಚಾಗುವ ಸಾಧ್ಯತೆಯಿದೆ.
ಅಣಜಿ ಕೆರೆ ಸಮೀಪದ ರಾಜ್ಯ ಹೆದ್ದಾರಿ ಜಲಾವೃತ
ದಾವಣಗೆರೆ ತಾಲೂಕಿನ ಅಣಜಿ ಕೆರೆಗೆ ನೀರು ಹೆಚ್ಚಾಗಿ ರಾಜ್ಯ ಹೆದ್ದಾರಿ ಸಂಚಾರಕ್ಕೆ ತೊಂದರೆ ಎದುರಾಗಿರುವುದರಿಂದ ಸಂಚಾರ ನಿಷೇಧಿಸಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ ಆದೇಶ ಹೊರಡಿಸಿದ್ದಾರೆ. ಅಣಜಿ ಮಾರ್ಗವಾಗಿ ಜಗಳೂರಿಗೆ ಹೋಗುವ ಮಾರ್ಗವನ್ನು ನಿಷೇಧಿಸಲಾಗಿದೆ. ಬದಲಾಗಿ ಜಗಳೂರಿಗೆ ಹೋಗುವರು ಅಣಜಿ ಕ್ರಾಸ್ ನಿಂದ ಅರಸೀಕೆರೆ ಬಸವಕೋಟೆ ಮಾರ್ಗವಾಗಿ ಜಗಳೂರಿಗೆ ಅಥವಾ ರಾಷ್ಟ್ರೀಯ ಹೆದ್ದಾರಿ 48 ರ ಮೂಲಕ ಭರಮಸಾಗರ ಹೋಗಿ ಜಗಳೂರಿಗೆ ಹೋಗಲು ಸೂಚನೆ ನೀಡಲಾಗಿದೆ.
ದಾವಣಗೆರೆ ಜಿಲ್ಲೆಯಲ್ಲಿ ಕೆಲ ಗ್ರಾಮಗಳಲ್ಲಿ ನಿರಂತರ ಮಳೆಗೆ ಮನೆಗಳಿಗೆ ನೀರು ನುಗ್ಗಿದೆ. ನೀರು ಹರಿದು ಹೋಗುವ ಬಹುತೇಕ ಚರಂಡಿ ಕಾಲುವೆಗಳು ಭರ್ತಿಯಾಗಿ ಸಮಸ್ಯೆ ಎದುರಾಗಿದೆ. ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿ ಗ್ರಾಮದ ದಲ್ಲಿ ಆಕ್ರೋಶಗೊಂಡ ಗ್ರಾಮಸ್ಥರು ಗ್ರಾಮ ಪಂಚಾಯ್ತಿಗೆ ಮುತ್ತಿಗೆ ಹಾಕಿದ ಜನತೆ ತಕ್ಷಣಕ್ಕೆ ಚರಂಡಿ ಹಾಗೂ ಕಾಲುವೆಗಳನ್ನ ಸರಿಪಡಿಸಿ ಎಂದು ಆಗ್ರಹಿಸಿದ್ದಾರೆ.
ಮತ್ತೊಂದೆಡೆ ನಿರಂತರ ಮಳೆಗೆ 75 ವರ್ಷದ ಬಳಿಕ ದಾವಣಗೆರೆ ತಾಲೂಕಿನ ಆಲೂರು ಗ್ರಾಮದ ಪುರಾತನ ಬಾವಿ ಭರ್ತಿಯಾಗಿದೆ. ಹಿರೇಬಾವಿ ತುಂಬಿದ ಹಿನ್ನೆಲೆ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.
ಮಳೆಯಿಂದಾಗಿ ಕುಸಿದ ಮಣ್ಣಿನ ಮನೆಗಳು
ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದ ಕಾಟಕರ ಓಣಿ, ಸುಳಿಬಾವಿ ಓಣಿ, ದೇಸಾಯಿ ಗಲ್ಲಿಯಲ್ಲಿ ಮಳೆಯಿಂದ 10 ಮನೆಗಳಿಗೆ ಹಾನಿಯಾಗಿದೆ. ಮಣ್ಣಿನ ಮನೆಗಳು ಕುಸಿದಿವೆ. ಹಾಗೂ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ದೇಶನೂರು ಗ್ರಾಮದಲ್ಲಿ ಭಾರಿ ಮಳೆಯಿಂದ ಮನೆಗೆ ನೀರು ನುಗ್ಗಿ ಜನರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ.
ಸೇತುವೆ ದಾಟುವಾಗ ಕೊಚ್ಚಿಹೋದ ಬೈಕ್ ಸವಾರರು
ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲೂಕಿನ ಜಾಲಹಳ್ಳಿ-ಇಡಗೂರು ಗ್ರಾಮದ ಮಧ್ಯೆ ಬೈಕ್ನಲ್ಲಿ ಸೇತುವೆ ದಾಟುವಾಗ ಸವಾರರು ಕೊಚ್ಚಿಹೋದ ಘಟನೆ ನಡೆದಿದೆ. ಸ್ಥಳೀಯರ ಸಹಾಯದಿಂದ ಓರ್ವನ ರಕ್ಷಣೆ ಮಾಡಲಾಗಿದ್ದು ಮತ್ತೋರ್ವ ಮೃತಪಟ್ಟಿದ್ದಾನೆ. ಕುಡಿದ ಮತ್ತಿನಲ್ಲಿ ಸೇತುವೆ ದಾಟುವಾಗ ಸವಾರರು ಕೊಚ್ಚಿಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಉಪಾಹಾರಕ್ಕೆ ಪರಿತಪಿಸುತ್ತಿರುವ ಗ್ರಾಮಸ್ಥರು
ಮಂಡ್ಯ ಜಿಲ್ಲೆಯಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಠಿಯಾಗಿದೆ. ಪಾಂಡವಪುರ ತಾಲೂಕಿನ ಲಿಂಗಾಪುರ ಗ್ರಾಮಕ್ಕೆ ನೀರು ನುಗ್ಗಿದ್ದು ಹಲವು ಮನೆಗಳಲ್ಲಿ ಗೃಹೋಪಯೋಗಿ ವಸ್ತುಗಳು ಹಾನಿಯಾಗಿವೆ. ಮಕ್ಕಳ ಪಠ್ಯ ಪುಸ್ತಕ, ದಾಖಲೆ ಪತ್ರಗಳು, ದಿನಸಿ ಸೇರಿದಂತೆ ಮನೆಯಲ್ಲಿದ್ದ ಎಲ್ಲಾ ವಸ್ತುಗಳು ನೀರಿನಲ್ಲಿ ಮುಳುಗಿವೆ. ಬೆಳಗ್ಗಿನ ಉಪಾಹಾರಕ್ಕೂ ಗ್ರಾಮಸ್ಥರು ಪರಿತಪಿಸುತ್ತಿರುವ ವಾತಾವರಣ ಸೃಷ್ಟಿಯಾಗಿದೆ.
ಮುಂದುವರಿದ ಮಳೆ ಅಬ್ಬರ
ತುಮಕೂರು ಜಿಲ್ಲೆಯಲ್ಲಿನ ಹಲವು ಭಾಗಗಳಲ್ಲಿ ಮಳೆ ಅಬ್ಬರ ತೀವ್ರಗೊಂಡಿದೆ. ಗುಬ್ಬಿ, ತುಮಕೂರು, ಕೊರಟಗೆರೆ, ತಿಪಟೂರು, ಮಧುಗಿರಿ, ಚಿಕ್ಕನಾಯನಹಳ್ಳಿ, ತುರುವೆಕೆರೆ, ಕುಣಿಗಲ್, ಮಧುಗಿರಿ, ಪಾವಗಡ, ಶಿರಾ ಸೇರಿದಂತೆ ಹಲವೆಡೆ ಭಾರಿ ಮಳೆಯಾಗಿದ್ದು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಎಂ.ಹೆಚ್ ಪಟ್ಟಣ ಬಳಿ ಹಲವು ತೋಟಗಳು ಜಲಾವೃತಗೊಂಡಿವೆ. ಬಹುತೇಕ ಅಡಕೆ ತೋಟಗಳಿಗೂ ನೀರು ನುಗ್ಗಿದೆ. ಮಳೆಯ ನೀರಿನ ರಭಸಕ್ಕೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಿಟ್ಟೂರು ಶಿರಾ ರಸ್ತೆ ಕೊಚ್ಚಿ ಹೋಗಿದೆ. ನಿಟ್ಟೂರು ಹಾಗೂ ಶಿರಾ ರಸ್ತೆ ಸಂಪರ್ಕ ಕಡಿತಗೊಂಡಿದೆ.
ನೆರೆ ರಾಜ್ಯಗಳಲ್ಲೂ ಭಾರೀ ಮಳೆ ಸಾಧ್ಯತೆ
ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿನಲ್ಲೂ ತೀವ್ರ ಮಳೆಯಾಗಲಿದ್ದು, ಚೆನ್ನೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ 4 ದಿನಗಳವರೆಗೆ ಹಳದಿ ಅಲರ್ಟ್ ಘೋಷಿಸಲಾಗಿದೆ. ತೆಲಂಗಾಣ, ಗೋವಾ, ಕೇರಳದಲ್ಲಿ ವ್ಯಾಪಕ ಮಳೆಯಾಗುವ ಸಾಧ್ಯತೆಯಿವೆ. ಆಂಧ್ರಪ್ರದೇಶ, ತಮಿಳುನಾಡು, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ಅರುಣಾಚಲ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಛತ್ತೀಸ್ಗಢ, ಒಡಿಶಾ, ಮಹಾರಾಷ್ಟ್ರ ಮತ್ತು ಲಕ್ಷದ್ವೀಪಗಳಲ್ಲಿ ಚದುರಿದ ಮಳೆ ಮತ್ತು ಗುಡುಗು ಸಹಿತ ಮಳೆಯಾಗಲಿದೆ. ಉತ್ತರಾಖಂಡ, ಅಸ್ಸಾಂ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಮತ್ತು ಮಧ್ಯಪ್ರದೇಶದಲ್ಲಿ ಕೂಡ ಭಾರೀ ಮಳೆಯಾಗುವ ಮುನ್ಸೂಚನೆ ನೀಡಿದೆ.