ವಿಜಯಪುರ : ಪಿಎಸ್ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿಯೊಬ್ಬರ ಕೈವಾಡವಿದೆ ಹಾಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಒತ್ತಾಯಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡೀ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಪುತ್ರನ ಕೈವಾಡವಿದೆ. ಇದನ್ನೇ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ. ಇದನ್ನು ಸಿಬಿಐ ತನಿಖೆಗೆ ವಹಿಸಿದರೆ ಯಾರು ಕಳ್ಳರು ಇದ್ದಾರೆ ಎಂಬುದು ಗೊತ್ತಾಗುತ್ತದೆ ಎಂದ ಯತ್ನಾಳ ಹೇಳಿದರು. ಮಾಜಿ ಸಿಎಂ ಸಿದ್ದರಾಮಯ್ಯ ಈ ವಿಚಾರದ ಕುರಿತು, ಯಾರು ಅವರು? ಮಾಜಿ ಸಿಎಂ ಮಗ ಯಾರು ? ಎಂದು 10 ಬಾರಿ ಕೇಳಿದ್ದಾರೆ. ಸಿಬಿಐ ತನಿಖೆಗೆ ಒತ್ತಾಯಿಸಿ ಎಂದು ಅವರಿಗೂ ಹೇಳಿದ್ದೇನೆ ಎಂದರು.
ಎಡಿಜಿಪಿ ಒಬ್ಬರನ್ನೇ ಬಂಧಿಸಿ ಎಫ್ಐಆರ್ ಮಾಡಿದ್ದೀರಾ? ಕೇವಲ ಎಡಿಜಿಪಿ ಮಾತ್ರ ಇದರಲ್ಲಿ ಶಾಮೀಲಾಗಿಲ್ಲ, ಇದರ ಹಿಂದೆ ದೊಡ್ಡ ಕಳ್ಳರಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಪಿಎಸ್ಐ ಹುದ್ದೆಗಾಗಿ ₹70 ಲಕ್ಷದಿಂದ ₹80 ಲಕ್ಷ ಹಣ ಕೊಟ್ಟಿದ್ದಾರೆ. ಅವರ ಕುಟುಂಬವೇ ಹಾಳಾಗಿ ಹೋಗುತ್ತವೆ. ಹಣವನ್ನು ವಾಪಸ್ ಕೊಡಿಸಬೇಕು ಎಂದು ಒತ್ತಾಯಿಸಿದರು. ಇಡೀ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಕೊಡಬೇಕು ಎಂದು ಗೃಹ ಸಚಿವರಿಗೆ ಆಗ್ರಹಿಸಿದ ಯತ್ನಾಳ, ಇಂಥ ಘಟನೆಗಳಿಂದಲೇ ಭ್ರಷ್ಟಾಚಾರ ಬೆಳೆದಿದೆ. ಪೊಲೀಸ್ ಆಧಿಕಾರಿಗಳ ವರ್ಗಾವಣೆಗೂ ಹಣ ತಿಂದರೆ ಪ್ರಾಮಾಣಿಕತೆ ಬೆಳೆಸಲು ಸಾಧ್ಯವಿಲ್ಲ ಎಂದು ಹೇಳಿದರು.