ಸಜ್ಜಿಗೆ ಬಜಿಲ್ ಬದಲು ಒಳಹೊಕ್ಕಿದ್ದು ‘ಪದಂಗಿ ಬಜಿಲ್’, ಭಯಾನಕ ಸುದ್ದಿ

 ಬಿ.ಎಂ. ಹನೀಫ್‌, ಹಿರಿಯ ಪತ್ರಕರ್ತರು

ಹಿಂದೆ ಹೀಗಿರಲಿಲ್ಲ. ಬೆಳ್ಳಂ ಬೆಳಿಗ್ಗೆ ನಾಲ್ಕಕ್ಕೇ ಎಲ್ಲ ಹೋಟೆಲ್ ಭಟ್ರುಗಳು ಎದ್ದೇಳುತ್ತಿದ್ದರು. ಐದು ಗಂಟೆಗೆ ಕ್ಯಾನ್ ಗಳಲ್ಲಿ ಅದೇ ತಾನೇ ಕರೆದ ಹಸುವಿನ ಹಾಲು ಬರುತ್ತಿತ್ತು. ಸೂರ್ಯ ಹುಟ್ಟುವ ಮೊದಲೇ “ಜಯತು ಜಯ ವಿಠಲಾ..” ಎನ್ನುವ ಹಾಡು ಸಣ್ಣಗೆ ಮೊಳಗುತ್ತಿತ್ತು. ಕ್ಯಾಷ್ ಕೌಂಟರ್ ನಲ್ಲಿ ಊದುಬತ್ತಿಯ ಪರಿಮಳ.

ಬೆಳಿಗ್ಗೆ ಐದಕ್ಕೇ ಎದ್ದು ಕಾರು ಸ್ಟಾರ್ಟ್ ಮಾಡಿದೆ. ಮಂಗಳೂರಿನಿಂದ ಬೆಂಗಳೂರು ಅಷ್ಟೇನೂ ದೂರವಲ್ಲ. ಕಳೆದ ಏಳೆಂಟು ವರ್ಷಗಳಿಂದ ಈ ದಾರಿಯಲ್ಲಿ ಒಬ್ಬನೇ ಕಾರು ಓಡಿಸಿಕೊಂಡು ಬಂದು ಹೋದದ್ದಕ್ಕೆ ಲೆಕ್ಕವಿಲ್ಲ. ಆದರೆ ಈಗ ಚತುಷ್ಪಥ ಹೆದ್ದಾರಿ ಮಾಡುವವರು ಪ್ರಯಾಣದ ದಾರಿಯನ್ನು ನರಕವಾಗಿಸಿದ್ದಾರೆ. ಗುರುಪುರ- ಕೈಕಂಬದಿಂದ ಹೊರಟು, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ ದಾಟಿ ಬಿ.ಸಿ.ರೋಡ್ ಗೆ ಬರುವವರೆಗೆ ಪ್ರಕೃತಿಯ ಆಹ್ಲಾದಕರ ನೋಟ ಮನಸ್ಸನ್ನು ಮುದಗೊಳಿಸುತ್ತದೆ. ಅದರಲ್ಲೂ ಬೆಳ್ಳಂಬೆಳಿಗ್ಗೆ ಪೊಳಲಿಯಲ್ಲಿ ಇನ್ನೂ ಸೂರ್ಯ ಮೂಡದ ನಸುಕಿನಲ್ಲಿ ನದಿ ದಾಟುವಾಗ ಮಂಜು ಮೆತ್ತಿದ ನೀರ ಹರಿವಿನ ನೋಟ ನಿಜಕ್ಕೂ ಅನುಪಮ!

ಬಿಸಿ ರೋಡ್ ದಾಟಿ ಬೆಂಗಳೂರಿನ ಹೆದ್ದಾರಿ ಹಿಡಿದರೆ ಉದ್ದಕ್ಕೂ ಧಡಕ್ ಧಡಕ್ ಪಾಯಲ್ ಬಾಜೇ… ಪ್ರಯಾಣ. ಕಲ್ಲು ತೂರಾಟಕ್ಕೆ ಹೆಸರಾದ ಕಲ್ಲಡ್ಕ, ಬ್ರಾಹ್ಮಣರೇ ಕಾಣಿಸದ ಊರು ಮಾಣಿ ದಾಟಿದರೆ ಉಪ್ಪಿನಂಗಡಿ ಸಿಗುತ್ತದೆ. ಅಲ್ಲಿಂದ ಪೆರ್ನೆ, ನೆಲ್ಯಾಡಿ. ಸಣ್ಣ ಚಳಿ ಇನ್ನೂ ಇರುವಾಗಲೇ ಶಿರಾಡಿ ಘಾಟಿ ಏರಿದರೆ, ಆಮೇಲೆ ಬೆಂಗಳೂರು ತಲುಪುವುದು ಸುಲಭ.

ಆದರೀಗ ಹೆದ್ದಾರಿಯುದ್ದಕ್ಕೂ ಕಾರು ಕುಲುಕುಲುಕಿ ದೇಹ ಕುಲು ಮನಾಲಿಯಂತಾಗುತ್ತದೆ. ದಾರಿಯುದ್ದಕ್ಕೂ ಅರ್ಧಂಬರ್ಧ ಒಡೆದ ಮನೆಗಳ ಸಾಲು ಸಾಲು. ಕುಸಿದು ಬಿದ್ದ ಗುಡ್ಡಗಳು, ಪುಡಿಪುಡಿಯಾದ ಬಂಡೆಕಲ್ಲುಗಳು. ಕೆಲವು ಊರುಗಳಲ್ಲಿ ದೂರದಿಂದ ಕಾಣಿಸುತ್ತಿದ್ದ ದರ್ಗಾ, ಮಸೀದಿ, ಇಗರ್ಜಿಗಳು ಅನಾಮತ್ತಾಗಿ ಹೆದ್ದಾರಿ ಬದಿಗೇ ಬಂದು ನಿಂತಿವೆ. ಶಿರಾಡಿ ಘಾಟಿಯ ಬುಡ ತಲುಪುವವರೆಗೂ ಈ ರಸ್ತೆಯಲ್ಲಿ ಪಯಣಿಸುವವರ ಗಾಡಿ ಮತ್ತು ಬಾಡಿಯ ನಟ್ಟು ಬೋಲ್ಟ್ ಗಳೆಲ್ಲ ಲೂಸು ಲೂಸು.

ಸಾಮಾನ್ಯವಾಗಿ ಕಲ್ಲಡ್ಕದ ಕೆ.ಟಿ.ಹೋಟೆಲ್ ನಲ್ಲಿ ಒಂದು ಕಷಾಯ ಕುಡಿಯುವುದು ನನ್ನ ರೂಢಿ. ಆದರೆ ಬೆಳಿಗ್ಗೆಯೇ ಮನೆ ಬಿಟ್ಟದ್ದರಿಂದ ಕೆಟಿ ಹೋಟೆಲ್ ಇನ್ನೂ ಬಾಗಿಲು ತೆರೆದಿರಲಿಲ್ಲ.

ಊರಿಗೆ ಬಂದಾಗಲೆಲ್ಲ ಒಂದು ದಿನವಾದರೂ ಬೆಳಿಗ್ಗೆಯ ನಾಷ್ಟಾಕ್ಕೆ ತುಳುನಾಡಿನ ವಿಶ್ವ ವಿಖ್ಯಾತ ಸಜ್ಜಿಗೆ ಬಜಿಲ್ ತಿನ್ನುವುದು ನನ್ನ ಜಿಹ್ವಾ ಪ್ರಪಂಚದ ಪರಮೋಚ್ಛ ಟೇಸ್ಟು. ಬಜಿಲ್ ಅಂದರೆ ಪೇಪರ್ ಅವಲಕ್ಕಿ. ಒಗ್ಗರಣೆ ಹಾಕಿದ ಉಪ್ಪು ಕಾರದ ತೆಂಗು ತುರಿದು ಹುರಿದ ಅವಲಕ್ಕಿ, ಅದರ ಒಳಗೆ ಹದಬಿಸಿಯ ಸಾಸಿವೆ ಘಮದ ಬಿಳಿ ಉಪ್ಪಿಟ್ಟಿನ ಮಿಕ್ಸರ್. ಕೆಲವೊಮ್ಮೆ ಇದಕ್ಕೆ ಬೇಯಿಸಿದ ಕಾಬೂಲಿ ಕಡ್ಲೆಯೂ ಸೇರುವುದುಂಟು. ಆಹಾ… ರುಚಿ ಬಣ್ಣಿಸಲು ಪ್ರಕಾಶ್ ರೈ ಇನ್ನೊಂದು ‘ಒಗ್ಗರಣೆ’ ಸಿನಿಮಾ ಮಾಡಬಹುದು.

ಅವತ್ತೂ ಬೆಳಿಗ್ಗೆ ಹೊರಟಾಗ ಯಾವ ಹೋಟೆಲಲ್ಲಿ ಸಜ್ಜಿಗೆ ಬಜಿಲ್ ತಿನ್ನಬಹುದು ಎಂದು ಕಣ್ಣಾಡಿಸುತ್ತಲೇ ಹೊರಟೆ. ಬಿಸಿ ರೋಡಿನಿಂದ ಕಲ್ಲಡ್ಕ, ಮಾಣಿ, ಗಡಿಯಾರ, ಬೋಳಂಗಡಿ, ನೀರಕಟ್ಟೆ, ಪೆರ್ನೆ ಹೀಗೆ ಮುದ ನೀಡುವ ಊರ ಬೋರ್ಡುಗಳನ್ನು ಓದುತ್ತಾ ಗಾಡಿ ಓಡಿಸುತ್ತಿದ್ದರೆ ಒಂದು ಹೋಟೆಲ್ಲೂ ಬಾಗಿಲು ತೆರೆದಿಲ್ಲ! ಗಂಟೆ ಐದೂವರೆ, ಆರು, ಆರೂ ಕಾಲು, ಆರೂವರೆ, ಆರೂ ಮುಕ್ಕಾಲು…! ಉಹುಂ… ಯಾವ ಹೋಟೆಲ್ಲೂ ಬಾಗಿಲು ತೆರೆದಿಲ್ಲ! ಅರೆ, ಕರಾವಳಿಯ ಟೈಮ್ ಟೇಬಲ್ಲೇ ಚೇಂಜಾಗಿದೆಯಲ್ಲ!

ಹಿಂದೆ ಹೀಗಿರಲಿಲ್ಲ. ಬೆಳ್ಳಂ ಬೆಳಿಗ್ಗೆ ನಾಲ್ಕಕ್ಕೇ ಎಲ್ಲ ಹೋಟೆಲ್ ಭಟ್ರುಗಳು ಎದ್ದೇಳುತ್ತಿದ್ದರು. ಐದು ಗಂಟೆಗೆ ಕ್ಯಾನ್ ಗಳಲ್ಲಿ ಅದೇ ತಾನೇ ಕರೆದ ಹಸುವಿನ ಹಾಲು ಬರುತ್ತಿತ್ತು. ಸೂರ್ಯ ಹುಟ್ಟುವ ಮೊದಲೇ “ಜಯತು ಜಯ ವಿಠಲಾ..” ಎನ್ನುವ ಹಾಡು ಸಣ್ಣಗೆ ಮೊಳಗುತ್ತಿತ್ತು. ಕ್ಯಾಷ್ ಕೌಂಟರ್ ನಲ್ಲಿ ಊದುಬತ್ತಿಯ ಪರಿಮಳ.

ನಮ್ಮೂರು ಪಡುಪಣಂಬೂರಿನ ಲಕ್ಷ್ಮೀನಾರಾಯಣ ಭಟ್ಟರ ಹೋಟೆಲ್ ನೆನಪಾಯಿತು.. ಬಾಲ್ಯದಿಂದಲೂ ಅಲ್ಲಿಯ ಸಜ್ಜಿಗೆ ಬಜಿಲ್ ಊರ ಜನರ ಪರಮಪ್ರಿಯ ತಿಂಡಿ.
ಐದೂವರೆಗೇ ಅಡುಗೆ ಮನೆಯಲ್ಲಿ ಉರಿಯುತ್ತಿದ್ದ ಒಲೆ, ಲಟ ಪಟ ಎನ್ನುತ್ತಿದ್ದ ಸೌಟು, ಪಾತ್ರೆಗಳ ಸದ್ದು. ಹೇಳಿ ಕೇಳಿ ನಮ್ಮ ಜಿಲ್ಲೆಯ ಹೆಸರೇ – ಸೌಟು ಕೆನರಾ!

ಲಕ್ಷಮೀನಾರಾಯಣ ಭಟ್ಟರ ದುರ್ಗಾಪರಮೇಶ್ವರಿ ಕಾರ್ನರ್ ಹೋಟೆಲ್ಲಿಗೆ ನಾಲ್ಕು ಬಾಗಿಲು. ಹಾಗೆಯೇ ಅವರಿಗೆ ನಾಲ್ಕು ಮಕ್ಕಳು. ಭಟ್ರ ಮನೆ ಅಲ್ಲೇ ಕೂಗಳತೆಯ ಎತ್ತರದ ಗುಡ್ಡದಲ್ಲಿ. ಪೂರ್ವದ ಬಾಗಿಲಿಗೆ ಬಂದು ನಿಂತು ಭಟ್ಟರು, ಇನ್ನೂ ಮನೆಯಿಂದ ಹೋಟೆಲ್ಲಿಗೆ ಹೊರಡದ ತಮ್ಮ ಮಕ್ಕಳನ್ನು ಜೋರಾಗಿ ಕೂಗಿ ಕರೆಯುವುದನ್ನು ಕೇಳುವುದೇ ಒಂದು ಸೊಗಸು. ಅವರ ಮಕ್ಕಳ ಹೆಸರುಗಳೂ ಹಾಗೆಯೇ. ಓ ರಾಜಾ, ಓ ಕರ್ಣಾ, ಓ ವ್ಯಾಸಾ, ಓ ಪ್ರಭಾಕರಾ…. ಎಂದು ಅವರು ಊರಿಗೆಲ್ಲ ಕೇಳುವಂತೆ ಕೂಗುತ್ತಿದ್ದರೆ ಮನೆಯಿಂದ ಮಕ್ಕಳು ಮಹಾಭಾರತದ ಯುದ್ಧಕ್ಕೆ ಸಿದ್ದರಾದಂತೆ ದಡದಡನೆ ನಡೆದು ಬರುತ್ತಿದ್ದರು. ಇನ್ನೂ ಚುಮುಚುಮು ಬೆಳಗಿನ ಅಷ್ಟು ಹೊತ್ತಿಗೆ ಎರಡು ಕಿಮೀ ದೂರದ ಹಳೆಯಂಗಡಿಯಿಂದ ವಾಕಿಂಗ್ ಹೊರಟು ಬಂದ ಮಧ್ಯವಯಸ್ಸಿನವರ ತಂಡವೊಂದು ಹೋಟೆಲ್ಲಿನ ಒಳಗೆ ಇಣುಕಿ ಚಹಾದ ಪರಿಮಳಕ್ಕೆ ಮೂಗರಳಿಸುತ್ತಾ, ” ಭಟ್ರೇ.. ಎಂಥ ಉಂಟೂ” ಎಂದು ರಾಗ ಎಳೆದರೆ, “ಬತ್ತೆ ಬತ್ತೆ ಮಾರ್ರೆ… ಈ ನರಕಂತಾಯನ ಜೋಕುಲು ಬೇಗ ಲಕ್ಕುವೆರಾ…? ವ್ಯಾಸಾ ಚಾಕ್ ನೀರ್ ದೀಲ… ರಾಜಾ ಪಿರಾವುದ ಬಾಕಿಲ್ ಡಿತ್ತಿ ಕರ್ಮಾರ್ ಸೋಂಟೆ ಕನಾ..” ಎಂದು ಮಕ್ಕಳಿಗೆ ಆವಾಜ್ ಹಾಕುತ್ತಿದ್ದರು.

ಬಿಳಿ ಲುಂಗಿ ಎತ್ತಿಕಟ್ಟಿದ ಲಕ್ಷ್ಮೀನಾರಾಯಣ ಭಟ್ಟರ ಬರಿಮೈಯಲ್ಲಿ ತೂಗಾಡುತ್ತಿದ್ದ ಜನಿವಾರ ಮತ್ತು ಶಿವಳ್ಳಿ ಬ್ರಾಹ್ಮಣ ತುಳುವಿನ ಸೊಗಡನ್ನು ನೆನಪಿಸಿಕೊಳ್ಳುತ್ತಾ ಕಾರು ಓಡಿಸುತ್ತಾ ರಸ್ತೆಬದಿಯ ಹೋಟೆಲ್ ಗಳತ್ತ ಕಣ್ಣಾಡಿಸುತ್ತಿದ್ದರೆ ಎಲ್ಲವೂ ಮುಚ್ಚಿದ ಬಾಗಿಲು! ಅರೆ… ಉಪ್ಪಿನಂಗಡಿ ದಾಟಿದರೆ ಇನ್ನು ಸಜ್ಜಿಗೆ ಬಜಿಲು ಸಿಗುವ ಚಾನ್ಸೇ ಇಲ್ಲ. ಬೆಳಿಗ್ಗೆ ಆರೂವರೆಯಾದರೂ ಒಂದು ಹೋಟೆಲ್ಲೂ ತೆರೆದಿಲ್ಲವೇ.. ಎಂದು ಆಶ್ಚರ್ಯ ಪಡುತ್ತಿದ್ದಂತೆ ಉಪ್ಪಿನಂಗಡಿಯ ಕುಮಾರಧಾರಾ ಬ್ರಿಜ್ಜು ಕೂಡಾ ದಾಟಿಯಾಯಿತು.

ಉಪ್ಪಿನಂಗಡಿಯ ಬಸ್ಟಾಂಡ್ ಒಳಗೆ ಹೋದರೆ ಖಂಡಿತಾ ಹೋಟೆಲ್ ತೆರೆದಿರುತ್ತದೆ ಎಂದು ಮನವ ಸಂತೈಸುತ್ತಾ ಕಾರನ್ನು ಊರೊಳಗೆ ತಿರುಗಿಸಿದೆ. ನೋಡಿದರೆ ಅಲ್ಲೂ ಹೋಟೆಲ್ ಗಳು ತೆರೆದಿಲ್ಲ! ಮರಳಿ ಹೆದ್ದಾರಿಗೆ ಬಂದು ಕಾರು ನಾಲ್ಕನೇ ಗೇರೇರಿಸಿದಾಗ ಊರ ಹೊರಗಿನ ಆದಿತ್ಯ ಹೋಟೆಲ್ಲಿನ ನೆನಪಾಗಿ ಅಕ್ಸಿಲೇಟರ್ ಒತ್ತಿದೆ. ಮೊದಲೆಲ್ಲ ಈ ಹೋಟೆಲ್ಲಿನ ಮುಂದೆ ಇದ್ದ ಅಶ್ವತ್ಥಮರ ಮತ್ತು ಕಟ್ಟೆಯ ಲ್ಯಾಂಡ್ ಮಾರ್ಕ್ ಹೆದ್ದಾರಿ ಅಗಲೀಕರಣಕ್ಕೆ ಬಲಿಯಾಗಿ ಕಣ್ಮರೆಯಾಗಿದೆ. ಸಜ್ಜಿಗೆ ಬಜಿಲನ್ನೇ ಧ್ಯಾನಿಸುತ್ತಾ ಕಾರು ನಿಲ್ಲಿಸಿದರೆ ಹೋಟೆಲ್ಲಿನ ಅರ್ಧ ಶಟರ್ ಮಾತ್ರ ಮೇಲೆದ್ದಿತ್ತು. ನಮ್ಮಂತೆಯೇ ಕಾರು ನಿಲ್ಲಿಸಿ ಇಳಿದಿದ್ದ ಇನ್ನೊಬ್ಬರು ನಿರಾಶೆಯಿಂದ “ಇನ್ನೂ ತೆಗೆದಿಲ್ಕ ಮಾರ್ರೆ… ಏಳು ಗಂಟೆಗೆ ಓಪನ್ ಅಂತೆ” ಎಂದರು.

ಮತ್ತೆ ಕಾರು ಹತ್ತಿದೆ. ” ನೋಡೋಣ… ಇನ್ನರ್ಧ ಗಂಟೆಯಲ್ಲಿ ನೆಲ್ಯಾಡಿ ಬರುತ್ತದೆ. ಅಲ್ಲಿ ಸಜ್ಜಿಗೆ ಬಜಿಲ್ ಖಂಡಿತಾ ಸಿಗುತ್ತದೆ..” ಎಂದು ಮನವ ಮರಳಿ ಸಂತೈಸುತ್ತಾ ವೇಗ ಹೆಚ್ಚಿಸಿದೆ. ದಾರಿಯುದ್ದಕ್ಕೂ ಚತುಷ್ಪಥ ಹೆದ್ದಾರಿಯ ಅಗಲೀಕರಣಕ್ಕೆ ಗರಗಸ ಹಾಕಿದಂತೆ ಅಡ್ಡಡ್ಡಲಾಗಿ ಕುಯ್ದುಕೊಂಡಿದ್ದ ಗುಡ್ಡಗಳ ಸಾಲು. ಅಲ್ಲಲ್ಲಿ ಅರ್ದಂಬರ್ಧ ಡಾಂಬರು ಆಗಿದ್ದ ಹೊಸ ರಸ್ತೆಗಳು. ಬಹುತೇಕ ಊರುಗಳ ಲ್ಯಾಂಡ್ ಸ್ಕೇಪ್ ಬದಲಾಗಿ ಯಾವುದೋ ಹೊಸ ಊರುಗಳಂತೆ ಕಾಣುತ್ತಿದ್ದವು.

ಕೊನೆಗೂ ನೆಲ್ಯಾಡಿ ಬಂತು. ಬಲಬದಿಯಲ್ಲಿ ತೆರೆದ ಹೋಟೆಲೊಂದು ಕಾಣಿಸಿತು. ಕಾರು ನಿಲ್ಲಿಸಿ ಒಳ ನುಗ್ಗಿದೆ. ಹೋಟೆಲ್ಲಿನ ಹೊರಗೆ ಪೇಪರ್ ಗಳನ್ನು ಸಾಲಾಗಿ ಜೋಡಿಸಿಟ್ಟಿದ್ದರು. ಒಂದು ಎಡ, ಇನ್ನೊಂದು ಬಲ- ಎರಡೂ ಇರಲಿ ಎಂದುಕೊಂಡು ಪ್ರಜಾವಾಣಿ ಮತ್ತು ವಿಜಯ ಕರ್ನಾಟಕಗಳನ್ನು ಕಂಕುಳಲ್ಲಿ ಇರಿಸುತ್ತಾ ಕುರ್ಚಿಯಲ್ಲಿ ಕುಳಿತು, ಬಳಿಗೆ ಬಂದ ಮಾಣಿಗೆ, “ತಿಂಡಿ ಏನಿದೆ…? ಎಂದು ಕೇಳುವ ಬದಲಾಗಿ “ಸಜ್ಜಿಗೆ ಬಜಿಲ್ ಇದೆಯಾ?” ಎಂದು ನೇರ ಪ್ರಶ್ನೆ ಒಗೆದೆ. “ಅದಿಲ್ಲ, ಪದಂಗಿ ಬಜಿಲ್ ಇದೆ” ಎಂದನಾತ.

ಪರವಾಗಿಲ್ಲ, ಬಜಿಲ್ ಅಂತೂ ಇದೆಯಲ್ಲ… ಎಂದು ಸಮಾಧಾನದ ನಿಟ್ಟುಸಿರು ಬಿಟ್ಟೆ. ಇದು ನಮ್ಮ ಕರಾವಳಿಯ ಇನ್ನೊಂದು ಕಾಂಬಿನೇಷನ್ಬು. ಬೇಯಿಸಿದ ಹೆಸರು ಕಾಳಿಗೆ ಒಗ್ಗರಣೆ ಹಾಕಿ ಅದರ ಮೇಲೆ ಕಾರ, ಉಪ್ಪಿನ ರುಚಿಯ ಪೇಪರ್ ಅವಲಕ್ಕಿಯ ಮಿಶ್ರಣದ ಸವಿರುಚಿ. ಬಜಿಲ್ ನಿಂದ ಹೊಟ್ಟೆ ಗಟ್ಟಿ, ಪದಂಗಿಯಿಂದ ಹೊಟ್ಟೆ ತಂಪು! ಪತ್ರಿಕೆಯ ಸುದ್ದಿಗಳನ್ನು ಒಂದೊಂದಾಗಿ ಓದುತ್ತಾ, ನಿಧಾನಕ್ಜೆ ಪದಂಗಿ ಬಜಿಲ್ ಗೆ ಕೈ ಹಾಕಿದೆ.

ರಾಹುಲ ಗಾಂಧಿ ನಡೆಯುತ್ತಲೇ ಇದ್ದಾನೆ. ಮೋದೀಜಿಯ ಮನ್ ಕೀ ಬಾತ್, ದಸರಾ ಹಬ್ಬಕ್ಕೆ ಮೈಸೂರು ಕಳೆಗಟ್ಟಿದೆ, 40% ಕಮಿಷನ್ ಗದ್ದಲ, ರಿಷಬ್ ಪಂತ್ ಮೊದಲ ಓವರ್ ನಲ್ಲೇ ಔಟಾದನಂತೆ…! ಸುದ್ದಿಯ ರುಚಿಗೆ ತಕ್ಕಂತೆ ಪದಂಗಿ ಬಜಿಲ್ ಹೊಟ್ಟೆ ಸೇರತೊಡಗಿತು.

Donate Janashakthi Media

Leave a Reply

Your email address will not be published. Required fields are marked *