ಜೈಪುರ: ದೇಶದಲ್ಲಿ ದಲಿತರ ಮೇಲಿನ ದೌರ್ಜನ್ಯ ಹಲ್ಲೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಇದೀಗ ಮೇಲ್ಜಾತಿಯವರ ಆರ್ಭಟದಿಂದ ದಲಿತ ಸಮುದಾಯದ ಮಂದಿಯ ಕೊಲೆಯಿಂದ ನಾಡಿನಲ್ಲಿ ಆತಂಕದ ವಾತಾವರಣ ಉಂಟಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಇಬ್ಬರು ದಲಿತ ಸಹೋದರಿಯರ ಅಮಾನವೀಯವಾಗಿ ಕೊಲೆ ಮಾಡಿದ್ದು, ಒಂದು ನಡೆದಿದ್ದು, ಇದೀಗ ರಾಜಸ್ಥಾನ ರಾಜ್ಯದ ಜೈಸಲ್ಮೇರ್ ಜಿಲ್ಲೆಯಲ್ಲಿ ಮೇಲ್ಜಾತಿ ಜನರಿಗೆ ಪ್ರತ್ಯೇಕ ಮಡಿಕೆ ನೀರಿನ ವ್ಯವಸ್ಥೆ ಮಾಡಿದ್ದೂ ಅಲ್ಲದೆ, ನೀರು ಕುಡಿದ ಕಾರಣ ಜನರ ಗುಂಪೊಂದು ದಲಿತ ವ್ಯಕ್ತಿಯೊಬ್ಬನನ್ನು ಅಮಾನುಷವಾಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಇಲ್ಲೊಂದು ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ನಿಟ್ಟಿನಲ್ಲಿ ಮೇಲ್ವರ್ಗದ ಜನರಿಗೆ ಪ್ರತ್ಯೇಕವಾಗಿ ಮಡಿಕೆಯನ್ನು ಇರಿಸಲಾಗಿದ್ದು, ಅದರಲ್ಲಿನ ನೀರು ಕುಡಿದ ದಲಿತ ವ್ಯಕ್ತಿ ಮೇಲೆ ಜನರ ಗುಂಪುಗೂಡಿ ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಥಳಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಜೈಸಲ್ಮೇರ್ ಜಿಲ್ಲೆಯ ದಿಗ್ಗಾ ಗ್ರಾಮದಲ್ಲಿ ಹಲ್ಲೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತ ಚತುರ ರಾಮ್ ತನ್ನ ಪತ್ನಿಯೊಂದಿಗೆ ದಿಗ್ಗಾಕ್ಕೆ ಹೋಗುತ್ತಿದ್ದಾಗ ಕಿರಾಣಿ ಅಂಗಡಿಯೊಂದರ ಬಳಿ ಅಂಗಡಿಯ ಹೊರಗೆ ಇಟ್ಟಿದ್ದ ಪಾತ್ರೆಯಲ್ಲಿದ್ದ ನೀರು ಕುಡಿದಿದ್ದಾನೆ. ದಲಿತ ಚತುರ ರಾಮ್ ನೀರು ಕುಡಿಯುವುದನ್ನು ಜಿತೇಂದ್ರ ಸಿಂಗ್ ಎಂಬುವವರು ನೋಡಿದ್ದಾರೆ. ಬಳಿಕ ಆತ ನಾಲ್ಕೈದು ಜನರನ್ನು ಕರೆದು ವಿಷಯ ತಿಳಿಸಿದ್ದಾನೆ.
ಕೂಡಲೇ ಸ್ಥಳಕ್ಕೆ ಧಾವಿಸದ ಮೇಲ್ಜಾತಿಯ ಜನರು ನೀರು ಕುಡಿದಿದ್ದಕ್ಕೆ ಚತುರ ರಾಮ್ ನಿಂದಿಸಿದರು. ಬಳಿಕ ಕಬ್ಬಿಣದ ರಾಡ್ ಮತ್ತು ದೊಣ್ಣೆಗಳಿಂದ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಈ ಕುಡಿಯುವ ನೀರಿನ ಮಡಿಕೆ ಮೇಲ್ಜಾತಿಯ ಜನರಿಗೆ ಇಟ್ಟಿದ್ದರು ಎಂದು ಆರೋಪಿಗಳು ಹೇಳಿಕೊಂಡಿದ್ದಾರೆ ಎಂದು ಪೊಲೀಸರು ವರದಿ ಮಾಡಿದ್ದಾರೆ.
‘ನಾನು ನೀರು ಕುಡಿಯುವುದನ್ನು ಜಿತೇಂದ್ರ ಸಿಂಗ್ ಅವರು ನೋಡಿದರು, ಬಳಿಕ ನಾಲ್ವರು ಮದ್ಯಪಾನ ಮಾಡಿ ಥಳಿಸಲು ಪ್ರಾರಂಭಿಸಿದರು. ನಾನು ಓಡಿಹೋಗಲು ಪ್ರಯತ್ನಿಸಿದೆ ಆದರೆ ಅವರು ನನ್ನನ್ನು ಕಬ್ಬಿಣದ ರಾಡ್‌ನಿಂದ ಹೊಡೆದರು, ಇದರಿಂದಾಗಿ ನಾನು ಕೆಳಗೆ ಬಿದ್ದೆ. ನನ್ನ ಕೂಗು ಕೇಳಿದ ನನ್ನ ಹೆಂಡತಿ ನನ್ನನ್ನು ರಕ್ಷಿಸಲು ಬಂದರು. ನಂತರ, ನನ್ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ಚತುರ ರಾಮ್ ಹೇಳಿದ್ದಾರೆ.
ಸಂತ್ರಸ್ತರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಭನ್ವರ್ ಸಿಂಗ್ ನಥಾವತ್ ತಿಳಿಸಿದ್ದಾರೆ. ಉಪ ಪೊಲೀಸ್ ವರಿಷ್ಠಾಧಿಕಾರಿ ಮಟ್ಟದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಆರೋಪಗಳನ್ನು ನ್ಯಾಯಯುತವಾಗಿ ತನಿಖೆ ಮಾಡಲಾಗುತ್ತಿದೆ ಮತ್ತು ವಿಚಾರಣೆಗಾಗಿ ಇಬ್ಬರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದರು.
ಇದೇ ರೀತಿಯ ಘಟನೆಯೊಂದು ಕಳೆದ ಒಂದು ತಿಂಗಳ ಹಿಂದೆ ದಲಿತ ಬಾಲಕ ಮಡಿಕೆ ನೀರು ಕುಡಿದ ಎಂಬ ಕಾರಣಕ್ಕೆ ಶಿಕ್ಷಕನೊಬ್ಬ ಥಳಿಸಿದ ಘಟನೆ ನಡೆದಿತ್ತು ಮತ್ತು ಆತ ಸಾವನ್ನಪ್ಪಿರುವ ಘಟನೆ ನಡೆದಿತ್ತು. ಈಗೇ ಕೆಲ ದಿನಗಳ ಹಿಂದ ದಲಿತ ಬಾಲಕಿಯರು ಸಹಪಾಠಿಗಳಿಗೆ ಬಿಸಿಯೂಟ ಬಡಿಸಿದರೆಂದು, ಅಡುಗೆಯವ ವಿದ್ಯಾರ್ಥಿಗಳಿಗೆ ಊಟ ಬಿಸಾಡುವಂತೆ ಹೇಲಿರುವ ಘಟನೆಯೂ ನಡೆದಿತ್ತು. ಇದೀಗ ದಲಿತನ ಮೇಲಿನ ಅಮಾನುಷ ಹಲ್ಲೆ ಪ್ರಕರಣ ನಡೆದಿರುವುದು ಘಟಿಸಿದೆ.