ಕೆರೆ ಭರ್ತಿಯಾಗಿದ್ದಕ್ಕೆ ಕೋಣ ಬಲಿ-ದಲಿತ ವ್ಯಕ್ತಿಯ ತಲೆ ಮೇಲೆ ರುಂಡವನ್ನಿಟ್ಟು ಮೆರವಣಿಗೆ

ತುಮಕೂರು: ಜಿಲ್ಲೆಯ ಶಿರಾ ತಾಲ್ಲೂಕಿನ ಮದಲೂರಿನಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಇಲ್ಲಿನ ಗ್ರಾಮಸ್ಥಹರು ದಶಕಗಳಿಂದಲೂ ಬರಿದಾಗಿದ್ದ ಕೆರೆಯೊಂದು ಮಳೆಯಿಂದಾಗಿ ತುಂಬಿದ್ದರಿಂದ ಹರ್ಷಗೊಂಡು, ಕೋಣ ಬಲಿ ನೀಡಿ, ಅದರ ತಲೆಯನ್ನು ದಲಿತ ವ್ಯಕ್ತಿಯ ತಲೆಯ ಮೇಲಿಟ್ಟು ಊರಿನ ತುಂಬ ಮೆರವಣಿಗೆ ಮಾಡಿರುವುದಾಗಿ ಸ್ಥಳೀಯ ಪತ್ರಿಕೆಯೊಂದು ವರದಿ ಮಾಡಿದೆ.

ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಲವು ಕಡೆಗಳಲ್ಲಿ ಕೆರೆಗಳು ಭರ್ತಿಯಾಗಿವೆ. ಅಲ್ಲದೆ, ಹಲವು ಊರುಗಳಲ್ಲಿ ದಶಕಗಳಿಗೂ ಹೆಚ್ಚು ಕಾಲ ತುಂಬದಿರುವ ಕೆರೆಗಳು ಸಹ ಭರ್ತಿಯಾಗಿರುವುದು ಜನರಲ್ಲಿ ನೆಮ್ಮದಿಯ ಭಾವ ಮೂಡಿದೆ. ಇದರೊಂದಿಗೆ ಗ್ರಾಮಸ್ಥರು ಹೊಸ ಹೊಸ ಆಚರಣೆಗಳ ಮೊರೆ ಹೋಗಿದ್ದಾರೆ.

ಶಿರಾ ಬಿಜೆಪಿ ಶಾಸಕ ಡಾ.ರಾಜೇಶ್ ಗೌಡ ಬೆಂಬಲಿಗರಿಂದ ಮೌಢ್ಯಾಚರಣೆ ನಡೆದಿದೆ ಎನ್ನಲಾಗಿದ್ದು, ಡಾ. ರಾಜೇಶ್ ಗೌಡ ಕೆರೆಗೆ ಬಾಗಿನ ಅರ್ಪಿಸಿದ ಬಳಿಕ ಕೋಣವನ್ನು ಬಲಿಕೊಡಲಾಗಿದೆ. ಸೆಪ್ಟೆಂಬರ್ 01ರಂದೇ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಳೆಯಿಂದಾಗಿ ಅಪರೂಪಕ್ಕೆ ತುಂಬಿರುವ ಕೆರೆಯ ಕೋಡಿಯಿಂದ ಊರಿಗೆ ಯಾವುದೇ ಹಾನಿಯುಂಟಾಗಬಾರದು ಎಂದು ಕೆರೆ ಕೋಡಿ ಬಳಿಯಲ್ಲಿರುವ ದುರ್ಗಮ್ಮ ದೇವಿಗೆ ಆರು ವರ್ಷದ ಕೋಣವನ್ನು ಬಲಿಕೊಡಲಾಗಿದೆ. ಬಳಿಕ ದಲಿತ ವ್ಯಕ್ತಿಯು ಕೋಣದ ತಲೆಯನ್ನು ತನ್ನ ತಲೆ ಮೇಲಿಟ್ಟುಕೊಂಡು ಕೋಡಿ ಬೀಳುವ ಜಾಗದಲ್ಲಿ ನೀರಿನಲ್ಲಿ ತೇಲಿಬಿಟ್ಟಿದ್ದಾನೆ ಎಂದು ವರದಿಯಾಗಿದೆ.

ದಶಕಗಳಿಂದಲೂ ಬರಿದಾಗಿದ್ದ ಮದಲೂರು ಕೆರೆಯು ಇದೀಗ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಎರಡನೇ ಬಾರಿಗೆ ತುಂಬಿದೆ. ಕೆರೆ ತುಂಬಿದ ಹರ್ಷದಲ್ಲಿ ಗ್ರಾಮಸ್ಥರೆಲ್ಲ ಸೇರಿ ಕೋಣವನ್ನು ಬಲಿ ನೀಡಿದ್ದಾರೆ.

ತುಮಕೂರು ರಾಜಕಾರಣದಲ್ಲಿ ಮದಲೂರು ಕೆರೆ ಹಲವು ವಿವಾದಗಳಿಗೂ ಸಾಕಷ್ಟು ಸುದ್ದಿಯಾಗುತ್ತಲೇ ಇರುತ್ತದೆ. ಇದೀಗ ಮತ್ತೆ ಸುದ್ದಿಯಾಗಿದ್ದು, ಇಲ್ಲಿನ ಜನ ಮೌಢ್ಯಾಚರಣೆಗೆ ಬಲಿಯಾಗಿದ್ದಾರೆ. ಪ್ರತಿ ಚುನಾವಣೆಯಲ್ಲಿಯೂ ಮದಲೂರು ಕೆರೆಗೆ ನೀರು ತುಂಬಿಸುವುದೇ ರಾಜಕೀಯ ನಾಯಕರ ಪ್ರಮುಖ ಆಶ್ವಾಸನೆಯಾಗುತ್ತದೆ. ಪ್ರತಿ ಬಾರಿ ಚುನಾವಣೆಯ ಸಮಯದಲ್ಲಿ ಮುನ್ನೆಲೆಗೆ ಬರುತ್ತಿದ್ದ ಮದಲೂರು ಕೆರೆ ವಿಚಾರ ವಿವಾದಕ್ಕೆ ಕಾರಣವಾಗುತ್ತದೆ.

ಈ ಕೆರೆ ತುಂಬಿಸುವ ಸಂಬಂಧ ಸಚಿವ ಮಾಧುಸ್ವಾಮಿ ಹಾಗೂ ಬಿಜೆಪಿ ಶಾಸಕ ರಾಜೇಶ್ ಗೌಡ ನಡುವೆ ಈ ಹಿಂದೆ ಇಬ್ಬರ ನಡುವೆ ಭಾರೀ ವಾಗ್ವಾದಕ್ಕೂ ಕಾರಣವಾಗಿತ್ತು. ಮದಲೂರು ಕೆರೆಗೆ ನೀರು ಬಿಡೋಕೆ ಸಾಧ್ಯವೇ ಇಲ್ಲ, ಅದಕ್ಕೆ ಕಾನೂನಿನಲ್ಲಿ ಅವಕಾಶವೇ ಇಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದರೆ, ಶಿರಾ ಕ್ಷೇತ್ರದ ಶಾಸಕ ರಾಜೇಶ್ ಗೌಡ ಅಸಮಾಧಾನಗೊಂಡು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಮಾತು ಶಿರಾ ತಾಲೂಕಿನಲ್ಲಿ ರಾಜಕೀಯ ನಾಟಕೀಯ ಬೆಳವಣಿಗೆಗಳಿಗೆ ಕಾರಣವಾಗಿತ್ತು.‌

Donate Janashakthi Media

One thought on “ಕೆರೆ ಭರ್ತಿಯಾಗಿದ್ದಕ್ಕೆ ಕೋಣ ಬಲಿ-ದಲಿತ ವ್ಯಕ್ತಿಯ ತಲೆ ಮೇಲೆ ರುಂಡವನ್ನಿಟ್ಟು ಮೆರವಣಿಗೆ

Leave a Reply

Your email address will not be published. Required fields are marked *