ಶಾರ್ಜಾ: ಏಷ್ಯಾ ಕಪ್ 2022 ಬುಧವಾರ ರಾತ್ರಿ ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಕಿಸ್ತಾನವು ಅಫ್ಘಾನಿಸ್ತಾನವನ್ನು 1 ವಿಕೆಟ್’ನಿಂದ ರೋಚಕವಾಗಿ ಸೋಲಿಸಿದ ಪಾಕಿಸ್ತಾನ ಏಷ್ಯಾ ಕಪ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದು, ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಟೂರ್ನಿಯಿಂದ ಹೊರ ಬಿದ್ದಿವೆ. ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನ ದಾಂಡಿಗ ಆಸಿಫ್ ಅಲಿ, ಆಫ್ಘನ್ ಬೌಲರ್ ಫರೀದ್ ಅಹ್ಮದ್’ಗೆ ಬ್ಯಾಟ್’ನಿಂದ ಹಲ್ಲೆ ನಡೆಸಲು ಮುಂದಾದ ಘಟನೆ ನಡೆದಿದೆ.
ಗೆಲ್ಲಲು ಅಫ್ಘಾನಿಸ್ತಾನ ಒಡ್ಡಿದ 130 ರನ್’ಗಳ ಗುರಿ ಬೆನ್ನಟ್ಟಿದ ಪಾಕಿಸ್ತಾನ ಒಂದು ಹಂತದಲ್ಲಿ 110 ರನ್ನಿಗೆ 8 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಈ ವೇಳೆ ಕ್ರೀಸ್’ನಲ್ಲಿದ್ದ ಪಾಕ್ ದಾಂಡಿಗ ಆಸಿಫ್ ಅಲಿ 2 ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವಿನ ಆಸೆ ಚಿಗುರಿಸಿದರು. ಅಫ್ಘಾನಿಸ್ತಾನದ ಎಡಗೈ ಮಧ್ಯಮ ವೇಗಿ ಫರೀದ್ ಅಹ್ಮದ್ ಎಸೆದ 19ನೇ ಓವರ್ನ 4ನೇ ಎಸೆತವನ್ನು ಸಿಕ್ಸರ್’ಗಟ್ಟಿದ ಆಸಿಫ್ ಅಲಿ, 5ನೇ ಎಸೆತದಲ್ಲೂ ಸಿಕ್ಸರ್ ಬಾರಿಸುವ ಪ್ರಯತ್ನದಲ್ಲಿ ಔಟಾದರು. ಈ ವೇಳೆ ಆಸಿಫ್ ಅಲಿಗೆ ಫರೀದ್ ಅಹ್ಮದ್ ಪೆವಿಲಿಯನ್’ನತ್ತ ಕೈ ತೋರಿಸಿ ಸೆಂಡ್ ಆಫ್ ಹೇಳಿದರು. ಇದರಿಂದ ಸಿಟ್ಟಿಗೆದ್ದ ಆಸಿಫ್ ಅಲಿ, ಆಫ್ಘನ್ ಆಟಗಾರನ ಜೊತೆ ವಾಗ್ವಾದಕ್ಕಿಳಿದರು. ಫರೀದ್ ಅಹ್ಮದ್ ಅವರನ್ನು ತಳ್ಳಿದ ಆಸಿಫ್ ಅಲಿ, ಬ್ಯಾಟ್’ನಿಂದ ಹಲ್ಲೆ ನಡೆಸಲು ಮುಂದಾದರು. ಈ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಸಿಫ್ ಅಲಿಯ ಈ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೊಮ್ಮೆ ಪಾಕಿಸ್ತಾನ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಔಟಾದಾಗ ಆಸೀಸ್ ವೇಗಿ ಡೆನಿಸ್ ಲಿಲ್ಲೀ ಅವರಿಗೆ ಇದೇ ರೀತಿ ಬ್ಯಾಟ್’ನಿಂದ ಹಲ್ಲೆ ನಡೆಸಲು ಮುಂದಾಗಿದ್ದರು. ಈಗ ಆಸಿಫ್ ಅಲಿ ಸರದಿ.
118 ರನ್ನಿಗೆ 9 ವಿಕೆಟ್ ಕಳೆದುಕೊಂಡು ಸೋಲಿನಂಚಿನಲ್ಲಿದ್ದ ಪಾಕಿಸ್ತಾನಕ್ಕೆ ಕೊನೆಯ ಓವರ್’ನಲ್ಲಿ ಗೆಲುವಿಗೆ 11 ರನ್’ಗಳು ಬೇಕಿದ್ದವು. ಕೈಯಲ್ಲಿದ್ದ ವಿಕೆಟ್ ಕೇವಲ ಒಂದು. ಅಫ್ಘಾನಿಸ್ತಾನದ ಎಡಗೈ ಮಧ್ಯಮ ವೇಗಿ ಫಜಲ್ಲಾಖ್ ಫರೂಕಿ ಎಸೆತ 20ನೇ ಓವರ್’ನ ಮೊದಲ ಎರಡೂ ಎಸೆತಗಳನ್ನು ಸಿಕ್ಸರ್’ಗಟ್ಟಿದ ಪಾಕ್ ವೇಗಿ ನಸೀಮ್ ಶಾ ಪಾಕಿಸ್ತಾನಕ್ಕೆ 1 ವಿಕೆಟ್ ಅಂತರದ ರೋಚಕ ಗೆಲುವು ತಂದುಕೊಟ್ಟರು. ಭಾನುವಾರ ದುಬೈನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿಪಾಕಿಸ್ತಾನ ತಂಡ ಶ್ರೀಲಂಕಾ ತಂಡವನ್ನು ಎದುರಿಸಲಿದೆ.